
ತುಮಕೂರು [ಜೂ.27] : ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣಕ್ಕೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ರಾಜ್ಯದಲ್ಲೇ ಮೊದಲ ಬಾರಿಗೆ ಶೀಘ್ರ ಮಿನಿ ಎಟಿಎಂ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ. ಇದಕ್ಕಾಗಿ ನಗರದ 15 ಕಡೆ ಕೌಂಟರ್‌ಗಳನ್ನು ತೆರೆಯಲಾಗುತ್ತಿದ್ದು, ಗ್ರಾಹಕರು ಸ್ವೈಪಿಂಗ್ ಮೆಷಿನ್‌ನಲ್ಲಿ ತಮ್ಮ ಎಟಿಎಂ ಕಾರ್ಡ್ ಅನ್ನು ಸ್ವೈಪ್ ಮಾಡಿ ವಿವರ ದಾಖಲಿಸಿದೊಡನೆ ಕೌಂಟರ್‌ನೊಳಗಿರುವ ಬ್ಯಾಂಕ್ ಸಿಬ್ಬಂದಿ ಹಣವನ್ನು ನೀಡಲಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್, ದೇಶದ ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ ಬಳಸಿ ಗ್ರಾಹಕರು ಒಂದು ಬಾರಿಗೆ 10,000 ರು.ನಂತೆ 5 ಬಾರಿ ಸ್ವೈಪ್ ಮಾಡಿ 50,000 ರು. ಹಣವನ್ನು ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದರು.
ಹೇಗೆ ಕಾರ್ಯನಿರ್ವಹಣೆ?: ಮಿನಿ ಎಟಿಎಂ ನಿರ್ವಹಣೆಗೆ ವ್ಯಕ್ತಿಯೊಬ್ಬರನ್ನು ಕೂರಿಸಿದ್ದು, ಹಣ ಡ್ರಾ ಮಾಡಲು ಬಂದ ಗ್ರಾಹಕರು ತಮ್ಮ ಕಾರ್ಡನ್ನು ಮಿನಿ ಎಟಿಎಂನಲ್ಲಿ ಹಾಕಿದಾಗ ನಂತರ ಆ ವ್ಯಕ್ತಿ ಗ್ರಾಹಕರಿಗೆ ನಿಗದಿತ ಮೊತ್ತದ ಹಣವನ್ನು ನೀಡುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿಗದಿತ ಸ್ಥಳಗಳಲ್ಲಿ ಈ ಯಂತ್ರವನ್ನು ಅಳವಡಿಸಿ, ಗ್ರಾಹಕರಿಗೆ ಸೇವೆ ನೀಡಲಾಗುವುದು. ನಗರದ ನಮ್ಮ ಶಾಖೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ 15 ನಿಗದಿತ ಸ್ಥಳಗಳಲ್ಲಿ ಈ ರೀತಿಯ ಕೌಂಟರ್‌ಗಳನ್ನು ಅಳವಡಿಸುವುದಾಗಿ ತಿಳಿಸಿದರು.
ದೇಶದ ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ಗ್ರಾಹಕರು ಮಿನಿ ಎಟಿಎಂ ಯಂತ್ರದಲ್ಲಿ ಸದರಿ ಕಾರ್ಡನ್ನು ಸ್ವೈಪ್ ಮಾಡಿ ಹಣ ಪಡೆಯಬಹುದಾಗಿದೆ.
-ಎನ್.ಎಸ್.ಜಯಕುಮಾರ್, ಟಿಎಂಸಿಸಿ ಅಧ್ಯಕ್ಷ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.