
ಮುಂಬೈನ 72 ವರ್ಷ ಪ್ರಾಯದ ವೃದ್ದರೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ 4 ವರ್ಷದಲ್ಲಿ 35 ಕೋಟಿ ರೂಪಾಯಿ ವಂಚಿಸಿದ ಘಟನೆಯೊಂದು ನಡೆದಿದೆ. 4 ವರ್ಷಗಳವರೆಗೂ ಆ ವೃದ್ಧರಿಗೆ ತಾವು ಮೋಸ ಹೋದ ಬಗ್ಗೆ ಅರಿವೇ ಇರಲಿಲ್ಲ. ಹೌದು ಇತ್ತಿಚೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವಿಚಾರದಲ್ಲಿ ಹಲವು ಮೋಸಗಳು ನಡೆಯುತ್ತಿವೆ. ಇದರ ಜೊತೆಗೆ ಸೈಬರ್ ವಂಚಕರು ಕೂಡ ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಿರುವಾಗ 72 ವರ್ಷದ ಉದ್ಯಮಿಯೊಬ್ಬರು ಕೂಡ ಈ ಷೇರು ಮಾರುಕಟ್ಟೆ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 35 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಮುಂಬೈನ ಮಾಟುಂಗಾ ವೆಸ್ಟ್ ನಿವಾಸಿ ಭರತ್ ಹರಕ್‌ಚಂದ್ ಷಾ ಅವರೇ ಹೀಗೆ ಮೋಸ ಹೋದವರು. ಇವರಿಗೆ ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಎಂಬ ಬ್ರೋಕರೇಜ್ ಸಂಸ್ಥೆಯು ಮೋಸ ಮಾಡಿದೆ ಎಂದು ಅವರು ದೂರಿದ್ದಾರೆ. ತಮ್ಮ ಪತ್ನಿಯ ಖಾತೆಯನ್ನು ನಾಲ್ಕು ವರ್ಷಗಳಿಂದ ಅನಧಿಕೃತ ವ್ಯಾಪಾರಕ್ಕಾಗಿ ಈ ಸಂಸ್ಥೆ ಬಳಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಮುಂಬೈನ ಪರೇಲ್‌ನಲ್ಲಿ ತಮ್ಮ ಪತ್ನಿಯೊಂದಿಗೆ ಸೇರಿಕೊಂಡು ಕ್ಯಾನ್ಸರ್ ರೋಗಿಗಳಿಗಾಗಿ ಕಡಿಮೆ ವೆಚ್ಚದ ಬಾಡಿಗೆಯ ಅತಿಥಿ ಗೃಹವನ್ನು ಭರತ್ ಹರಕ್‌ಚಂದ್ ಷಾ ಅವರು ನಡೆಸುತ್ತಿದ್ದಾರೆ. 1984 ರಲ್ಲಿ ತಮ್ಮ ತಂದೆ ನಿಧನರಾದ ನಂತರ ಷೇರು ಬಂಡವಾಳವನ್ನು ಅವರು ಅನುವಂಶೀಯವಾಗಿ ಪಡೆದಿದ್ದರು. ಆದರೆ ಈ ದಂಪತಿಗೆ ಷೇರು ಮಾರುಕಟ್ಟೆಯ ಬಗ್ಗೆ ಯಾವುದೇ ಜ್ಞಾನವಿಲ್ಲರಲಿಲ್ಲ, ಹೀಗಾಗಿ ಅವರು ಎಂದಿಗೂ ಸಕ್ರಿಯವಾಗಿ ವ್ಯಾಪಾರ ಮಾಡಿರಲಿಲ್ಲ. ಈ ಮಧ್ಯೆ ಅವರು ಸ್ನೇಹಿತನ ಸಲಹೆಯ ಮೇರೆಗೆ 2020ರಲ್ಲಿ ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್‌ನಲ್ಲಿ ತಮ್ಮ ಮತ್ತು ತಮ್ಮ ಪತ್ನಿಯ ಹೆಸರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆದರು ಹಾಗೂ ತಮಗೆ ಅನುವಂಶಿಕವಾಗಿ ಬಂದ ಷೇರುಗಳನ್ನು ಆ ಕಂಪನಿಗೆ ವರ್ಗಾಯಿಸಿದರು.
ಆರಂಭದಲ್ಲಿ ಎಲ್ಲವೂ ಸರಿಯಾಗೇ ಇತ್ತು. ಕಂಪನಿಯ ಪ್ರತಿನಿಧಿಗಳು ನಿಯಮಿತವಾಗಿ ಷಾ ಅವರನ್ನು ಸಂಪರ್ಕಿಸುತ್ತಿದ್ದರು ಹಾಗೂ ಹಲವಾರು ಆಕರ್ಷಕ ಭರವಸೆಗಳನ್ನು ನೀಡುತ್ತಿದ್ದರು. ವ್ಯಾಪಾರಕ್ಕಾಗಿ ಯಾವುದೇ ಹೆಚ್ಚುವರಿ ಹೂಡಿಕೆಯ ಅಗತ್ಯವಿಲ್ಲ ಮತ್ತು ಷೇರುಗಳನ್ನು ಮೇಲಾಧಾರವಾಗಿ ಬಳಸಿಕೊಂಡು ಸುರಕ್ಷಿತವಾಗಿ ವ್ಯಾಪಾರ ಮಾಡಬಹುದು ಎಂದು ಅವರು ಷಾಗೆ ತಿಳಿಸಿದ್ದರು.
ಖಾತೆಯ ಸಂಪೂರ್ಣ ನಿಯಂತ್ರಣ ಪಡೆದಿದ್ದ ಸಂಸ್ಥೆ:
ಈ ನಡುವೆ ಕಂಪನಿಯು ಷಾ ಅವರಿಗೆ ವೈಯಕ್ತಿಕ ಮಾರ್ಗದರ್ಶಕರನ್ನು ನಿಯೋಜಿಸುತ್ತದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದರು. ಈ ನೆಪದಲ್ಲಿ, ಅಕ್ಷಯ್ ಬರಿಯಾ ಮತ್ತು ಕರಣ್ ಸಿರೋಯಾ ಎಂಬ ಇಬ್ಬರು ಉದ್ಯೋಗಿಗಳನ್ನು ನೇಮಿಸಿ ಅವರ ಪೋರ್ಟ್ಫೊಲಿಯೋವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಇದಾದ ನಂತರ ಈ ಇಬ್ಬರು ಷಾ ಮತ್ತು ಅವರ ಪತ್ನಿಯ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಪಡೆದಿದ್ದಾರೆ.
ಎಫ್ಐಆರ್‌ನಲ್ಲಿ ಇರುವಂತೆ ಆರಂಭದಲ್ಲಿ ಈ ಇಬ್ಬರು ಪ್ರತಿನಿಧಿಗಳು ಪ್ರತಿದಿನ ಕರೆ ಮಾಡಿ, ಯಾವ ಆರ್ಡರ್‌ಗಳನ್ನು ಪಡೆಯಬೇಕೆಂದು ಷಾಗೆ ಸೂಚಿಸುತ್ತಿದ್ದರು. ಇದಾದ ನಂತರ ಶೀಘ್ರದಲ್ಲೇ, ಉದ್ಯೋಗಿಗಳು ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು, ತಮ್ಮದೇ ಆದ ಲ್ಯಾಪ್‌ಟಾಪ್‌ಗಳಿಂದ ಇಮೇಲ್‌ಗಳನ್ನು ಕಳುಹಿಸುತ್ತಿದ್ದರು. ಇದಕ್ಕೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುವಂತೆ ಜಾಣ್ಮೆಯಿಂದ ಅವರನ್ನು ಬಳಸಿಕೊಂಡರು ಹೀಗಾಗಿ ಶಾ ಅಗತ್ಯವಾದ ಎಲ್ಲ ಒಟಿಪಿಗಳನ್ನು ಆರೋಪಿಗಳಿಗೆ ನೀಡಿದ್ದಾರೆ. ಅಲ್ಲದೇ ಅವರೇ ಪ್ರತಿ ಮೇಲ್‌ಗೂ ಉತ್ತರಿಸಿದಂತೆ ಪ್ರತಿ ಸಂದೇಶವನ್ನು ಕಳುಹಿಸಿದಂತೆ ಆರೋಪಿಗಳು ಮಾಡಿದ್ದಾರೆ. ನಂತರ ಕಂಪನಿ ಅವರ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದೆ.
ತಮ್ಮ ಖಾತೆಗಳಲ್ಲಿ ನಡೆಯುತ್ತಿದ್ದ ವ್ಯವಹಾರ ಚಟುವಟಿಕೆಯ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ:
ತಮ್ಮ ಈ ಖಾತೆಗಳ ಮೂಲಕ ವ್ಯಾಪಕ ವ್ಯಾಪಾರ ಚಟುವಟಿಕೆ ನಡೆಯುತ್ತದೆ ಎಂಬುದು ಷಾ ಅವರಿಗೂ ತಿಳಿದಿರಲಿಲ್ಲ, ಮಾರ್ಚ್ 2020 ರಿಂದ ಜೂನ್ 2024 ರ ನಡುವೆ, ಅವರು ಸ್ವೀಕರಿಸಿದ ವಾರ್ಷಿಕ ಹೇಳಿಕೆಗಳು ನಿರಂತರವಾಗಿ ಲಾಭವನ್ನೇ ತೋರಿಸಿದ್ದವು. ಪ್ರತಿ ವರ್ಷವೂ ಸ್ಪಷ್ಟ ಹೇಳಿಕೆ ಬರುತ್ತಿದ್ದರಿಂದ, ಷಾ ಅವರಿಗೆ ಯಾವುದೇ ದುಷ್ಕೃತ್ಯದ ಬಗ್ಗೆ ಅನುಮಾನಿಸಲು ಯಾವುದೇ ಕಾರಣವೂ ಇರಲಿಲ್ಲ,
ಈ ಮಧ್ಯೆ ಗ್ಲೋಬ್ ಕ್ಯಾಪಿಟಲ್‌ನ ಅಪಾಯ ನಿರ್ವಹಣಾ ವಿಭಾಗದಿಂದ ಶಾ ಅವರಿಗೆ ಹಠಾತ್ ಕರೆ ಬಂದಿದೆ. ನಿಮ್ಮ ಮತ್ತು ನಿಮ್ಮ ಪತ್ನಿಯ ಖಾತೆಗಳಲ್ಲಿ 35 ಕೋಟಿ ರೂ. ಡೆಬಿಟ್ ಬ್ಯಾಲೆನ್ಸ್ ಇದೆ. ನೀವು ಅದನ್ನು ತಕ್ಷಣ ಪಾವತಿಸಬೇಕು, ಇಲ್ಲದಿದ್ದರೆ ನಿಮ್ಮ ಷೇರುಗಳು ಮಾರಾಟವಾಗುತ್ತವೆ ಎಂದು ಹೇಳಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಅವರು ಕಂಪನಿಗೆ ಭೇಟಿ ನೀಡಿದಾಗ, ಬೃಹತ್ ಪ್ರಮಾಣದ, ಅನಧಿಕೃತ ವಹಿವಾಟು ನಡೆದಿದೆ ಎಂದು ಅವರಿಗೆ ತಿಳಿಸಲಾಗಿದೆ. ಕೋಟ್ಯಂತರ ಮೌಲ್ಯದ ಷೇರುಗಳು ಮಾರಾಟವಾಗಿವೆ ಮತ್ತು ಹಲವಾರು ಒಂದೇ ಕಂಪನಿ ಜೊತೆ ನಡೆಸಿದ ವಹಿವಾಟುಗಳು ಖಾತೆಯನ್ನು ತೀವ್ರ ನಷ್ಟಕ್ಕೆ ತಳ್ಳಿವೆ ಎಂದು ಅವರಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಹಾವನ್ನು ಉಳಿಸಲು ಹೋಗಿ ಪಲ್ಟಿಯಾದ ಶಾಲಾ ಆಟೋ: ಇಬ್ಬರು ಮಕ್ಕಳ ದುರಂತ ಅಂತ್ಯ
ಆ ಸಮಯದಲ್ಲಿ ತನ್ನ ಉಳಿದ ಆಸ್ತಿಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯವನ್ನು ಎದುರಿಸಿದ ಷಾ, ಇಷ್ಟವಿಲ್ಲದೆ ತಮ್ಮಉಳಿದ ಷೇರುಗಳನ್ನು ಮಾರಿ ₹35 ಕೋಟಿ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ್ದಾರೆ. ನಂತರ ಉಳಿದ ಷೇರುಗಳನ್ನು ಬೇರೆ ಕಂಪನಿಗೆ ವರ್ಗಾಯಿಸಿದ್ದಾರೆ. ಇದಾದ ನಂತರ ಅವರು ಗ್ಲೋಬ್‌ನ ವೆಬ್‌ಸೈಟ್‌ನಿಂದ ಮೂಲ, ಸಮಗ್ರ ವ್ಯಾಪಾರ ಹೇಳಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು, ಇಮೇಲ್ ಮೂಲಕ ಪಡೆದ ಲಾಭದ ಹೇಳಿಕೆಗಳೊಂದಿಗೆ ಹೋಲಿಸಿದಾಗ ವಂಚನೆಯ ಪೂರ್ಣ ಪ್ರಮಾಣ ಸ್ಪಷ್ಟವಾಗಿದೆ. ಎರಡು ದಾಖಲೆಗಳ ನಡುವೆ ಗಮನಾರ್ಹ ವ್ಯತ್ಯಾಸ ಅವರಿಗೆ ತಿಳಿದಿದೆ.
ಇದನ್ನೂ ಓದಿ: ತಾನೇ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಕಾಲೇಜು ಯುವತಿ ಬಲಿ
ಇದಲ್ಲದೆ, ಕಂಪನಿಯು ಎನ್‌ಎಸ್‌ಇ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಯಿಂದ ಹಲವಾರು ಸೂಚನೆಗಳನ್ನು ಸ್ವೀಕರಿಸಿದೆ. ಕಂಪನಿಯು ಈ ಸೂಚನೆಗಳಿಗೆ ಶಾ ಅವರ ಹೆಸರನ್ನು ಬಳಸಿ ಪ್ರತಿಕ್ರಿಯಿಸಿದೆ. ಆದರೆ ಅವುಗಳಲ್ಲಿ ಯಾವುದರ ಬಗ್ಗೆಯೂ ಷಾ ಅವರಿಗೆ ಮಾಹಿತಿ ತಿಳಿಸಿಲ್ಲ, ನಿಜವಾದ ವ್ಯಾಪಾರ ಇತಿಹಾಸವು ತೋರಿಸಿದ್ದಕ್ಕಿಂತ ಬಹಳ ಭಿನ್ನವಾಗಿತ್ತು. ನಾಲ್ಕು ವರ್ಷಗಳ ಕಾಲ, ಕಂಪನಿಯು ನಮಗೆ ಸುಳ್ಳು ಚಿತ್ರಣವನ್ನು ನೀಡಿತು, ಆದರೆ ನಷ್ಟಗಳು ಹೆಚ್ಚುತ್ತಲೇ ಇದ್ದವು ಎಂದು ಷಾ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅವರು ವನ್ರೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 420 (ವಂಚನೆ) ಸೇರಿದಂತೆ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಈಗ ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯೂ) ಹಸ್ತಾಂತರಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.