ಸತತ ಐದು ದಿನಗಳ ಕಾಲ ಏರಿಕೆ ಕಂಡ ಮುಂಬೈ ಷೇರುಪೇಟೆ: 16,600 ಅಂಶಗಳಿಗೆ ಜಿಗಿದ ನಿಫ್ಟಿ

By BK AshwinFirst Published Jul 21, 2022, 4:52 PM IST
Highlights

ವಿದೇಶಿ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳ ನಡುವೆಯೂ ಇಂದು ದೇಶದ ಷೇರು ಮಾರುಕಟ್ಟೆಗಳಾದ ಸೆನ್ಸೆಕ್ಸ್‌ ಹಾಗೂ ನಿಫ್ಟಿ 50 ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡಿದೆ. ಕೇಂದ್ರ ಸರ್ಕಾರದ ವಿಂಡ್‌ಫಾಲ್‌ ತೆರಿಗೆ ಕಡಿತ ಹಾಗೂ ಇತರೆ ಕೆಲ ಕಾರಣಗಳಿಂದ ಈ ಜಿಗಿತ ಕಂಡಿದೆ ಎಂದು ಹೇಳಲಾಗಿದೆ. 

ದೇಶ ಸೇರಿ ವಿಶ್ವದ ಬಹುತೇಕ ಷೇರು ಮಾರುಕಟ್ಟೆಗಳಿಗೆ ಇತ್ತೀಚಿನ ಕೆಲ ತಿಂಗಳುಗಳಿಂದ ವಕ್ರದೆಸೆ ನಡೆಯುತ್ತಿತ್ತು. ಏಕೆಂದರೆ, ಭಾರತದ ಷೇರು ಹೂಡಿಕೆದಾರರೇ ಇತ್ತೀಚೆಗೆ ಲಕ್ಷಾಂತರ ಕೋಟಿ ರೂ. ಗಳ ಹಣವನ್ನು ಕಳೆದುಕೊಂಡಿದ್ದಾರೆ. ಆದರೂ, ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಮತ್ತೆ ಗೂಳಿಯ ಪ್ರಭಾವ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಏಕೆಂದರೆ, ಸೆನ್ಸೆಕ್ಸ್‌ ಹಾಗೂ ನಿಫ್ಟಿ 50 ಸೂಚ್ಯಂಕಗಳು ಏರಿಕೆ ಕಾಣುತ್ತಿವೆ.

ಹೌದು, ಇಂದೂ ಸಹ ದೇಶದ ಪ್ರಮುಖ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಒಂದಲ್ಲ ಎರಡಲ್ಲ, 284 ಅಂಶಗಳಷ್ಟು ಜಿಗಿತ ಕಂಡಿದೆ. ಕಳೆದ 5 ದಿನಗಳಿಂದ ಸೆನ್ಸೆಕ್ಸ್‌ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿದ್ದು, ಈ ಹಿನ್ನೆಲೆ ಷೇರುಪೇಟೆಯಲ್ಲಿ ಗೂಳಿಯ ಅಬ್ಬರ ಹೆಚ್ಚಾಗುತ್ತಿದೆ ಎನ್ನಬಹುದು.

Rupee Vs Dollar; ಮೊದಲ ಬಾರಿ 80 ದಾಟಿದ ರು. ಮೌಲ್ಯ

ಇದೇ ರೀತಿ, ನಿಫ್ಟಿ ಸಹ ಇಂದು 89 ಅಂಶಗಳಷ್ಟು ಏರಿಕೆ ಕಂಡಿದ್ದು, 16,600ರ ಗಡಿ ದಾಟಿದೆ. ಒಟ್ಟಾರೆ, ಗುರುವಾರದ ಷೇರು ಮಾರುಕಟ್ಟೆಯ ಅಂತ್ಯದ ಬಳಿಕ ಸೆನ್ಸೆಕ್ಸ್ 55,682 ಕ್ಕೆ ಹೆಚ್ಚಾಗಿದ್ದರೆ, ನಿಫ್ಟಿ 16,610 ಅಂಶಗಳಿಗೆ ಜಿಗಿತ ಕಂಡಿದೆ.

ಒಟ್ಟಾರೆ ಇಂದಿನ ಸೆನ್ಸೆಕ್ಸ್‌ ಮೌಲ್ಯ ಶೇ. 0.5ರಷ್ಟು ಹೆಚ್ಚಾಗಿದ್ದರೆ, ನಿಫ್ಟಿ 50 ಮೌಲ್ಯ ಶೇ. 0.54 ರಷ್ಟು ಹೆಚ್ಚಾಗಿದೆ.

ಯಾವ್ಯಾವ ಕಂಪನಿಗಳಿಗೆ ಶುಕ್ರದೆಸೆ..?
ಇನ್ನು, ದೇಶದ ಷೇರು ಮಾರುಕಟ್ಟೆಗಳ ಮೌಲ್ಯ ಹೆಚ್ಚಾದಂತೆ ಹಲವು ಕಂಪನಿಗಳ ಮೌಲ್ಯವೂ ಏರಿಕೆಯಾಗಿದೆ. ಇಂದು, ಇಂಡಸ್‌ಇಂಡ್‌ ಬ್ಯಾಂಕ್‌, ಎಲ್‌ ಅಂಡ್‌ ಟಿ, ಬಜಾಜ್‌ ಫೈನಾನ್ಸ್‌, ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌, ಹಿಂಡಾಲ್ಕೋ ಹಾಗೂ ಬಿಪಿಸಿಎಲ್‌ನ ಷೇರುಗಳ ಮೌಲ್ಯ ಶೇ. 2 ರಿಂದ ಶೇ. 8 ರಷ್ಟು ಜಿಗಿತ ಕಂಡಿದ್ದು, ಈ ಕಂಪನಿಗಳಿಗೆ ಗುರುವಾರವೇ ಶುಕ್ರದೆಸೆ ಒದಗಿಬಂದಿದೆ.

ಅಲ್ಲದೆ, ಟೆಕ್‌ ಮಹೀಂದ್ರಾ, ಗ್ರೇಸಿಮ್‌, ಡಿವಿಸ್‌ ಲ್ಯಾಬ್ಸ್‌, ಆಕ್ಸಿಸ್‌ ಬ್ಯಾಂಕ್‌, ಅದಾನಿ ಪೋರ್ಟ್ಸ್‌, ಇನ್ಫೋಸಿಸ್‌, ಬಜಾಜ್‌ ಆಟೋ ಹಾಗೂ ಪವರ್‌ ಗ್ರಿಡ್‌ ಕಂಪನಿಗಳ ಷೇರು ಮೌಲ್ಯವೂ ಶೇ. 2 ರಷ್ಟು ಏರಿಕೆ ಕಂಡಿದೆ. 

ಇನ್ನೊಂದೆಡೆ, ಕೋಟಕ್‌ ಬ್ಯಾಂಕ್‌, ಡಾ. ರೆಡ್ಡೀಸ್‌ ಲ್ಯಾಬ್ಸ್‌, ಎಸ್‌ಬಿಐ ಲೈಫ್‌, ಸಿಪ್ಲಾ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಮೌಲ್ಯ ಶೇ. 2 ರಷ್ಟು ಕುಸಿತ ಕಂಡುಬಂದಿದೆ.

Sensex Rises:ಜಿಗಿದ ಷೇರುಪೇಟೆ, ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ

ವಿದೇಶಿ ಷೇರು ಮಾರುಕಟ್ಟೆಯ ಸ್ಥಿತಿ ಗತಿ ಹೇಗಿದೆ..?
 
ಯುರೋಪ್‌ ಸೆಂಟ್ರಲ್‌ ಬ್ಯಾಂಕ್‌ನ ನೂತನ ವಿತ್ತೀಯ ನೀತಿ ನಿರ್ಧಾರಕ್ಕಾಗಿ ಯುರೋಪಿನ ಸ್ಥಳೀಯ ಹೂಡಿಕೆದಾರರು ಕಾಯುತ್ತಿರುವ ಕಾರಣ ಯುರೋಪ್‌ ಷೇರು ಮಾರುಕಟ್ಟೆಗಳ ಮೌಲ್ಯ ಗುರುವಾರ ಕುಸಿತ ಕಂಡಿದೆ. ಅಮೆರಿಕದ ಪ್ರಖ್ಯಾತ ವಾಲ್‌ಸ್ಟ್ರೀಟ್‌ ಷೇರು ಮಾರುಕಟ್ಟೆ ಸಹ ಆರಂಭದಲ್ಲಿ ಇಂದು ಇಳಿಕೆ ಕಂಡಿದೆ.

ಏಷ್ಯಾ ಷೇರು ಮಾರುಕಟ್ಟೆಯ ಸ್ಥಿತಿ ಗತಿ ನೊಡೋದಾದ್ರೆ, ಜಪಾನ್‌ನ ನಿಕ್ಕಿ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡಿದ್ದರೂ, ಚೀನಾ ಹಾಗೂ ಹಾಂಗ್‌ಕಾಂಗ್‌ ಷೇರು ಮಾರುಕಟ್ಟೆಗಳ ಮೌಲ್ಯ ಇಳಿಕೆ ಕಂಡಿದೆ.

ಒಟ್ಟಾರೆ, ವಿದೇಶಿ ಷೇರು ಮಾರುಕಟ್ಟೆಯ ಪರಿಸ್ಥಿತಿ ಮಿಶ್ರವಾಗಿದ್ದರೂ, ಭಾರತದ ಷೇರು ಮಾರುಕಟ್ಟೆಗಳಲ್ಲಿ ಮಾತ್ರ ಕರಡಿಯ ಆಟ ಹೆಚ್ಚಾಗಿ ನಡೆಯಲಿಲ್ಲ. 

ಬ್ಯಾಂಕ್‌, ತಂತ್ರಜ್ಞಾನ ಕಂಪನಿಗಳ ಷೇರುಗಳ ಮೌಲ್ಯದ ಏರಿಕೆ ಇದಕ್ಕೆ ಕಾರಣವೆನ್ನಬಹುದು. ಇದರೊಂದಿಗೆ ಕಚ್ಚಾ ತೈಲ ಮತ್ತು ತೈಲ ರಫ್ತು ಕ್ಷೇತ್ರಕ್ಕೆ ವಿಧಿಸಿದ್ದ ವಿಂಡ್‌ಫಾಲ್ ತೆರಿಗೆಯನ್ನು ಮೋದಿ ಸರ್ಕಾರ ಇಳಿಸಿರುವುದು ಸಹ ಇಂದಿನ ಸೆನ್ಸೆಕ್ಸ್‌, ನಿಫ್ಟಿ ಷೇರು ಮೌಲ್ಯಗಳ ಏರಿಕೆಗೆ ಕಾರಣಗಳಲ್ಲೊಂದು ಎಂದು ಹೇಳಬಹುದು. 
ಜತೆಗೆ, ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ) ದೇಶದ ಷೇರು ಮಾರುಕಟ್ಟೆಯನ್ನು ಬಹುತೇಕವಾಗಿ ನಿಯಂತ್ರಿಸುವ 15 ಕ್ಷೇತ್ರಗಳ ಪೈಕಿ ಇಂದು 13 ಕ್ಷೇತ್ರಗಳ ಮೌಲ್ಯವು ಸಹ ಏರಿಕೆಯಾಗಿದೆ. 

click me!