ಸೆನ್ಸೆಕ್ಸ್ 942 ಅಂಕ ಕುಸಿದು 78782ಕ್ಕೆ, ನಿಫ್ಟಿ 309 ಅಂಕ ಕುಸಿದು 23995ಕ್ಕೆ ತಲುಪಿದೆ. ಇದರಿಂದ ಹೂಡಿಕೆದಾರರ ಸಂಪತ್ತು ₹5.99 ಲಕ್ಷ ಕೋಟಿ ಕರಗಿದೆ. ಅಮೆರಿಕ ಚುನಾವಣೆ, ವಿದೇಶಿ ಹೂಡಿಕೆದಾರರ ಮಾರಾಟ, ಚೀನಾ ಮಾರುಕಟ್ಟೆ ಸ್ಥಿತಿ ಪತನಕ್ಕೆ ಕಾರಣ.
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ವಾದ ಸೆನ್ಸೆಕ್ಸ್ ಸೋಮವಾರ 942 ಅಂಕಗಳ ಭಾರೀ ಕುಸಿತ ಕಂಡು 78782 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 309 ಅಂಕ ಕುಸಿದು, 24 ಸಾವಿರಕ್ಕಿಂತ ಕೆಳಗೆ, ಅರ್ಥಾತ್ 23995ರಲ್ಲಿ ಮುಕ್ತಾಯವಾಯಿತು. ಸೆನ್ಸೆಕ್ಸ್ ಅಂಕವು 3 ತಿಂಗಳ ಕನಿಷ್ಠವಾಗಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 5.99 ಲಕ್ಷ ಕೋಟಿ ರು.ನಷ್ಟು ಕರಗಿ ಹೋಯಿತು. ಮಧ್ಯಂತರದಲ್ಲಿ ಸೆನ್ಸೆಕ್ಸ್ 1491 ಅಂಕಗಳವರೆಗೆ ಕುಸಿತ ಕಂಡಿತ್ತಾದರೂ ಅಂತ್ಯದಲ್ಲಿ ಕೊಂಚ ಚೇತರಿಕೆ ಕಂಡಿತು. ಆದಾಗ್ಯೂ ಭಾರೀ ಕುಸಿತದ ಪರಿಣಾಮ ನೊಂದಾಯಿತ ಷೇರುಗಳ ಬೆಲೆ ಮುಗ್ಗರಿಸಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಆತಂಕ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಮುಂದಾಗಿದ್ದು, ಭಾರತಕ್ಕಿಂತ ಚೀನಾ ಮತ್ತು ಇತರೆ ದೇಶಗಳ ಷೇರು ಮೌಲ್ಯ ಅಗ್ಗವಾಗಿರುವ ಅಂಶ ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ಶೀಘ್ರವೇ ಚೀನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂಬ ಸುದ್ದಿಗಳು ಪತನಕ್ಕೆ ಕಾರಣವಾಗಿವೆ.
ಬಿಜೆಪಿ ನಾಯಕನ ಕಾಲಿಗೆ ಬೀಳಲು ಮುಂದಾದ ನಿತೀಶ್
ಪಟನಾ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು, ರಾಜಕೀಯ ನಾಯಕರ ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯ ಮುಂದುವರೆಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ (73), ಇದೀಗ ತಮಗಿಂತ ವಯಸ್ಸಿನಲ್ಲಿ ಕಿರಿಯರಾದ ಬಿಜೆಪಿ ನಾಯಕರ ಪಾದಸ್ಪರ್ಶಕ್ಕೆ ಮುಂದಾದ ಘಟನೆ ನಡೆದಿದೆ. ಚಿತ್ರಗುಪ್ತ ಪೂಜೆಯ ನಿಮಿತ್ತ ನಗರದ ನೌಜರ್‌ಘಾಟ್ ದೇಗುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿತೀಶ್ ಅವರು, ಮಾಜಿ ರಾಜ್ಯ ಸಭಾ ಸದಸ್ಯ, ಬಿಜೆಪಿ ನಾಯಕ ರಾಕೇಶ್ ಕುಮಾರ್ ಸಿನ್ಹಾ (60) ಅವರಿಗೆ ಮೊದಲು ನಮಸ್ಕರಿಸಿ ಬಳಿಕ ಪಾದ ಸ್ಪರ್ಶಿಸಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸ್ವತಃ ಸಿನ್ಹಾ ಮುಜುಗರಕ್ಕೆ ಒಳಗಾದರು.
ಮೋದಿ ನನ್ನ ಮನೆಗೆ ಮೋದಿ ಬಂದಿದ್ದರಲ್ಲಿ ತಪ್ಪಿಲ್ಲ: ಸಿಜೆಐ
ನವದೆಹಲಿ: ನಾನು ದೈವಭಕ್ತ ಆಗಿದ್ದು, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ| ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. 'ಅಯೋಧ್ಯೆ ವಿವಾದ ಬಗೆಹರಿಸಲು ದೇವರಲ್ಲಿ ಬೇಡಿಕೊಂಡಿದ್ದೆ ಎಂಬ ಹೇಳಿಕೆ ವಿವಾದಕ್ಕೀಡಾದ ಕಾರಣ ಸೋಮವಾರ ಸಭೆಯೊಂದರಲ್ಲಿ ಸ್ಪಷ್ಟನೆ ನೀಡಿದ ಅವರು, 'ನಾನು ದೇವರಲ್ಲಿ ನಂಬಿಕೆ ಉಳ್ಳವ. ಆದರೆ ಎಲ್ಲ ಧರ್ಮ ಗೌರವಿಸುವೆ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಗೆ ಗಣೇಶ ಹಬ್ಬಕ್ಕೆ ಬಂದಿದ್ದ ಬಗ್ಗೆ ಪುನಃ ಸ್ಪಷ್ಟನೆ ನೀಡಿದ ಅವರು, 'ಅದು ಗೌಪ್ಯ ಭೇಟಿ ಅಲ್ಲ. ಅಧಿಕೃತ ಭೇಟಿ. ಶಾಸಕಾಂಗ-ನ್ಯಾಯಾಂಗ ಬೇರೆ ಬೇರೆ ಎಂದರೆ ಭೇಟಿ ಮಾಡಬಾರದು ಎಂದೇನಿಲ್ಲ' ಎಂದರು.