Botswana variant: Sensexಗೂ ಹೊಸ ಸೋಂಕಿನ ಶಾಕ್‌ : ಜಗತ್ತಿನೆಲ್ಲೆಡೆ ಷೇರುಗಳ ಬೆಲೆ ಕುಸಿತ!

By Kannadaprabha News  |  First Published Nov 27, 2021, 6:58 AM IST

*ಸೆನ್ಸೆಕ್ಸ್‌ 1688 ಅಂಕ ಕುಸಿದು 57107 ಅಂಕಗಳಲ್ಲಿ ಮುಕ್ತಾಯ
*ಹೂಡಿಕೆದಾರರಿಗೆ ಒಂದೇ ದಿನ 7.35 ಲಕ್ಷ ಕೋಟಿ ರು.ನಷ್ಟ
*ಬಹುತೇಕ ಜಾಗತಿಕ ಷೇರುಪೇಟೆಗೂ ಬೋಟ್ಸ್‌ವಾನಾ ಸೋಂಕು


ಮುಂಬೈ(ನ.27): ಬೋಟ್ಸ್‌ವಾನಾ ತಳಿ (Botswana Variant) ಸೋಂಕು ಹರಡುವ ಭೀತಿಯಿಂದ ಬಾಂಬೆ ಷೇರುಪೇಟೆ ಸೂಚ್ಯಂಕ (ಸೆನ್ಸೆಕ್ಸ್‌) (Bombay Stock Exchange) ಶುಕ್ರವಾರ ಒಂದೇ ದಿನ 1688 ಅಂಕಗಳ ಭಾರೀ ಕುಸಿತ ಕಂಡಿದೆ. ಇದು 7 ತಿಂಗಳಲ್ಲೇ ಏಕದಿನದ ಗರಿಷ್ಠ ಕುಸಿತವಾಗಿದೆ. ಇನ್ನು, ಜಗತ್ತಿನಾದ್ಯಂತ ಬಹುತೇಕ ದೇಶಗಳಲ್ಲಿ ಈ ವೈರಸ್‌ನ (Virus) ಭೀತಿಯಿಂದ ಷೇರು ಮಾರುಕಟ್ಟೆಕುಸಿದಿದೆ. ಬೋಟ್ಸ್‌ವಾನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ನ ಹೊಸ ರೂಪಾಂತರಿ ತಳಿಯ ಅಬ್ಬರ ಶುಕ್ರವಾರ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಷೇರುಪೇಟೆಯ (Share Market) ಮೇಲೂ ದಾಳಿ ನಡೆಸಿದೆ. ಹೊಸ ರೂಪಾಂತರಿಯ ಸಂಭವನೀಯ ಅಪಾಯಕ್ಕೆ ಬೆಚ್ಚಿಬಿದ್ದ ಎಲ್ಲಾ ಷೇರುಪೇಟೆಗಳು ನೆಲಕಚ್ಚಿವೆ.

ಭಾರತದಲ್ಲಿ, ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ 1688 ಅಂಕಗಳ ಭಾರೀ ಕುಸಿತ ಕಂಡು 57107 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕಳೆದ 7 ತಿಂಗಳಲ್ಲೇ ಸೆನ್ಸೆಕ್ಸ್‌ನ ಗರಿಷ್ಠ ದೈನಂದಿನ ಕುಸಿತದ ಪ್ರಮಾಣ. ಇದರ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 7.35 ಲಕ್ಷ ಕೋಟಿ ರು.ನಷ್ಟುಕರಗಿ ಹೋಗಿದೆ. ಇನ್ನೊಂದೆಡೆ ನಿಫ್ಟಿಕೂಡಾ 509 ಅಂಕಗಳ ಕುಸಿತ ಕಂಡು 17026 ಅಂಕಗಳಲ್ಲಿ ಮುಕ್ತಾಯವಾಗಿದೆ. ಹೊಸ ರೂಪಾಂತರಿ ತಳಿಯ ಆತಂಕದ ಜೊತೆಗೆ ಹಣದುಬ್ಬರ ಅಂಕಿ ಅಂಶಗಳು, ಕೇಂದ್ರೀಯ ಬ್ಯಾಂಕ್‌ನ ನೀತಿಗಳು, ಜಾಗತಿಕ ಮಾರುಕಟ್ಟೆಯ (Global Market) ಪ್ರಭಾವ ಕೂಡಾ ಪರಿಣಾಮ ಬೀರಿತು. ಮತ್ತೊಂದೆಡೆ ಡಾಲರ್‌ (Dollar) ಎದುರು ರುಪಾಯಿ (Rupee) ಮೌಲ್ಯ ಕೂಡಾ 37 ಪೈಸೆಯಷ್ಟುಭಾರೀ ಕುಸಿತ ಕಂಡಿದೆ. ಶುಕ್ರವಾರ ಯುರೋಪ್‌ ಷೇರುಪೇಟೆ ಶೇ.3.51, ಶಾಂಘೈ, ಹಾಂಗ್‌ಕಾಂಗ್‌, ಸಿಯೋಲ್‌, ಟೋಕಿಯೋ ಷೇರುಪೇಟೆಗಳು ಶೇ.2.67ರಷ್ಟುಕುಸಿತ ಕಂಡಿವೆ.

Latest Videos

ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ ಕೋವಿಡ್‌ನ ಹೊಸ ರೂಪಾಂತರಿ ಪತ್ತೆ

ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಹೊಸ ರೂಪಾಂತರಿ ‘ಬೋಟ್ಸ್‌ವಾನಾ ತಳಿ’  ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇನ್ನೂ ಡೆಲ್ಟಾವೈರಸ್‌ನ (Delta Virus) ಆಘಾತದಿಂದಲೇ ಚೇತರಿಸಿಕೊಳ್ಳದ ಆಫ್ರಿಕಾ (Africa) ಮತ್ತು ಯುರೋಪ್‌  (Europe) ದೇಶಗಳಲ್ಲೇ ಈ ಹೊಸ ತಳಿ ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ. ಹೀಗಾಗಿ ವಿಶ್ವದ ಹಲವಾರು ದೇಶಗಳು ಸೋಂಕು ಪತ್ತೆಯಾದ ದೇಶಗಳಿಗೆ ತೆರಳುವ ಮತ್ತು ಆ ದೇಶಗಳಿಂದ ಆಗಮಿಸುವ ವಿಮಾನಗಳ ಸಂಚಾರ ನಿಷೇಧಿಸುವ ನಿರ್ಧಾರ ಕೈಗೊಂಡಿವೆ. ಜೊತೆಗೆ ಆ ದೇಶಗಳಿಂದ ಜನರ ಆಗಮನಕ್ಕೂ ನಿಷೇಧ ಹೇರಿವೆ. 

Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!

ಕೆಲ ದೇಶಗಳು ಆಫ್ರಿಕಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿವೆಯಾದರೂ 10 ದಿನಗಳ ಕ್ವಾರಂಟೈನ್‌ (Quarantine) ಸೇರಿದಂತೆ ತಾವು ವಿಧಿಸುವ ನಿಯಮಾವಳಿಗಳನ್ನು ಪಾಲಿಸುವಂತೆ ಕಠಿಣ ಸೂಚನೆ ನೀಡಿವೆ. ಮತ್ತೊಂದೆಡೆ ವೈರಸ್‌ನ ತೀವ್ರತೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲವಾದ ಕಾರಣ ಅನವಶ್ಯಕ ಆತಂಕ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆಯಾದರೂ, ಈ ಬಗ್ಗೆ ತುರ್ತು ಸಭೆ ಕರೆದಿದೆ. ಇನ್ನೊಂದೆಡೆ, ಹೊಸ ವೈರಸ್‌ನ ಆತಂಕದಿಂದ ಜಾಗತಿಕ ಷೇರುಪೇಟೆಗೆ ಭಾರೀ ಹೊಡೆತ ಬಿದ್ದಿದೆ. ಕಚ್ಚಾತೈಲದ ಬೆಲೆ ಕೂಡ ಶೇ.7ರಷ್ಟುಭಾರೀ ಪ್ರಮಾಣದಲ್ಲಿ ಕುಸಿದಿದೆ.

ರಾಜ್ಯದಲ್ಲಿ 1 ತಿಂಗಳ ನಂತರ 400+ ಕೇಸ್‌

ರಾಜ್ಯದಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳ ಬಳಿಕ 400ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಒಂದೇ ದಿನ ಪತ್ತೆಯಾಗಿದೆ. ಧಾರವಾಡ ಹಾಗೂ ಬೆಂಗಳೂರಿನ ಶಾಲೆ-ಕಾಲೇಜುಗಳಲ್ಲಿ ಕೋವಿಡ್‌ ಸ್ಫೋಟವಾದ ಪರಿಣಾಮ ಶುಕ್ರವಾರ 402 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 6 ಮಂದಿ ಮೃತರಾಗಿದ್ದಾರೆ.

Covid19: ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ಮನೆ ಬಾಗಿಲಿಗೇ ಬರಲಿದೆ 2ನೇ ಡೋಸ್‌

ಕರ್ನಾಟಕದಲ್ಲೂ ಬಿಗಿ ತಪಾಸಣೆಗೆ ನಿರ್ಧಾರ

ಬೆಂಗಳೂರು: ಬೋಟ್ಸ್‌ವಾನಾ ತಳಿಯ ಕೊರೋನಾ ರೂಪಾಂತರಿ ಪತ್ತೆಯಾಗಿರುವ ಬೋಟ್ಸ್‌ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಕಾಂಗ್‌ ದೇಶಗಳ ಮೂಲಕ ಆಗಮಿಸುವವರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂಬಂಧಪಟ್ಟವರಿಗೆ ಈ ಬಗ್ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

click me!