Post Office Scheme:ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 2000ರೂ. ಪಕ್ಕಾ

By Suvarna NewsFirst Published Nov 26, 2021, 6:42 PM IST
Highlights

ಹೂಡಿಕೆಯಿಂದ ಪ್ರತಿ ತಿಂಗಳು ಒಂದಿಷ್ಟು ಆದಾಯ ಬರಬೇಕೆಂದು ಬಯಸೋ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ (Monthly Income Scheme) ಉತ್ತಮ ಆಯ್ಕೆ. ಐದು ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿಯೂ ಸಿಗುತ್ತೆ.

ಭಾರತದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಳಿತಾಯ ಮಾಡಲು ಅಂಚೆ ಇಲಾಖೆಗಿಂತ (Post office) ಉತ್ತಮ ಆಯ್ಕೆ ಬೇರೇನಿದೆ ಹೇಳಿ? ಅನ್ಯ ಕ್ಷೇತ್ರಗಳಿಗೆ ಹೋಲಿಸಿದ್ರೆ ಅಂಚೆ ಇಲಾಖೆ ಉಳಿತಾಯ ಯೋಜನೆಗಳಲ್ಲಿ(Saving Schemes) ಹೂಡಿಕೆ(Invest) ಮಾಡಿದ್ರೆ ರಿಟರ್ನ್ಸ್(Returns) ಕಡಿಮೇನೆ. ಆದ್ರೆ, ಹೂಡಿಕೆ ಮಾಡಿದ ಹಣ ಸುಭದ್ರವಾಗಿರೋ ಜೊತೆ ಸರ್ಕಾರದ ಬೆಂಬಲವೂ ಇದಕ್ಕಿರೋ ಕಾರಣ ಹೂಡಿಕೆದಾರರು ನಿರಾಳವಾಗಿರಬಹುದು. ಇದೇ ಕಾರಣಕ್ಕೆ ಭಾರತದಲ್ಲಿ ಇಂದಿಗೂ ಬಹುತೇಕರು ಉಳಿತಾಯಕ್ಕೆ ಅಂಚೆ ಇಲಾಖೆಯನ್ನೇ ನೆಚ್ಚಿಕೊಂಡಿದ್ದಾರೆ. ಅಂಚೆ ಇಲಾಖೆಯಲ್ಲಿ ಅನೇಕ ಉಳಿತಾಯ ಯೋಜನೆಗಳಿದ್ದು, ಅವುಗಳಲ್ಲಿ ಮಾಸಿಕ ಆದಾಯ ಯೋಜನೆ (Monthly Income Scheme) ಅತ್ಯಂತ ಜನಪ್ರಿಯ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ. ನಿಮ್ಮ ಸಮೀಪದ ಅಂಚೆ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಮಾಸಿಕ ಆದಾಯ ಯೋಜನೆ (MIS)ಖಾತೆ ತೆರೆಯಬಹುದು.  

ಅವಧಿ ಎಷ್ಟು?
ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ ಐದು ವರ್ಷಗಳ ಅವಧಿಯದ್ದಾಗಿದೆ. ಐದು ವರ್ಷಗಳ ಬಳಿಕ ನೀವು ಖಾತೆಯಲ್ಲಿರೋ ಹಣವನ್ನು ಹಿಂಪಡೆಯಬಹುದು (Withdraw) ಅಥವಾ ಮರುಹೂಡಿಕೆ (Reinvest) ಮಾಡಬಹುದು. 

ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಎಷ್ಟು ಹೂಡಿಕೆ ಮಾಡಬಹುದು?
ಮಾಸಿಕ ಆದಾಯ ಯೋಜನೆಯಲ್ಲಿ ನೀವು ಕನಿಷ್ಠ 1000 ರೂ. ಹೂಡಿಕೆ ಮಾಡೋ ಮೂಲಕ ಕೂಡ ಖಾತೆ ತೆರೆಯಬಹುದು. ಇದೇ ಕಾರಣಕ್ಕೆ ಈ ಯೋಜನೆ ಬಡ ಹಾಗೂ ಮಧ್ಯಮ ವರ್ಗದ ಹೂಡಿಕೆದಾರರ ಮೆಚ್ಚಿನ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆ (Income Tax Act) 80ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಕೂಡ ಇದೆ. ಹೀಗಾಗಿ ಆದಾಯ ತೆರಿಗೆ ಉಳಿಸಲು ಬಯಸೋ ಉದ್ಯೋಗಿಗಳು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಒಂದೇ ಖಾತೆಯಾದ್ರೆ ಗರಿಷ್ಠ ಹೂಡಿಕೆ 4.5 ಲಕ್ಷ ರೂ. ಜಂಟಿ ಖಾತೆಯಾದ್ರೆ 9 ಲಕ್ಷ ರೂ. ಹೂಡಿಕೆ ಮಾಡಬಹುದು. ಮಾರುಕಟ್ಟೆ ಪರಿಸ್ಥಿತಿಗಳನ್ನು ಅವಲೋಕಿಸಿ ಸರ್ಕಾರ ಬಡ್ಡಿ ದರವನ್ನು ನಿಗದಿಪಡಿಸುತ್ತದೆ. 2021ರ ಸೆಪ್ಟೆಂಬರ್‌ 30ಕ್ಕೆ ಸರ್ಕಾರ ಈ ಯೋಜನೆಗೆ ನಿಗದಿಪಡಿಸಿದ್ದ ಬಡ್ಡಿದರ (Interest rate)  ಶೇ.6.6. ಹೂಡಿಕೆದಾರರು ಬಡ್ಡಿ ಹಣವನ್ನು ಅಂಚೆ ಇಲಾಖೆಯಿಂದ ನಗದೀಕರಿಸಬಹುದು ಇಲ್ಲವೇ ಉಳಿತಾಯ ಖಾತೆಗೆ ಜಮೆ ಮಾಡಬಹುದು. ಬಡ್ಡಿ ಹಣವನ್ನು ಆರ್‌ಡಿ ಖಾತೆಗೆ ವರ್ಗಾಯಿಸೋ ಅವಕಾಶವನ್ನು ಅಂಚೆ ಇಲಾಖೆ ಇತ್ತೀಚೆಗೆ ಗ್ರಾಹಕರಿಗೆ ಕಲ್ಪಿಸಿದೆ. ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಗೆ ಮಾಸಿಕ 2000ರೂ. ಆದಾಯ ಸಿಗುತ್ತದೆ. 

ಯಾರು ಈ ಖಾತೆ ತೆರೆಯಬಹುದು?
ವಯಸ್ಕ ಭಾರತೀಯ ಪ್ರಜೆ ಈ ಖಾತೆಯನ್ನು ತೆರೆಯಲು ಅರ್ಹನಾಗಿದ್ದಾನೆ. 10 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರ ಹೆಸರಿನಲ್ಲಿ ಕೂಡ ಎಂಐಎಸ್‌ ಖಾತೆ ತೆರೆಯಬಹುದು. ಆದ್ರೆ ಆ ಬಾಲಕ ಅಥವಾ ಬಾಲಕಿಗೆ 18 ವರ್ಷ ತುಂಬಿದ ಬಳಿಕವಷ್ಟೇ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅವರು ಅರ್ಹರಾಗುತ್ತಾರೆ.

ಹಾಲಿನ ಪ್ಯಾಕೆಟ್ ಮೇಲೆ ಮಿಲ್ಕ್ ಮ್ಯಾನ್ ಆಫ್ ಇಂಡಿಯಾಗೆ ನಂದಿನಿ ನಮನ

ಅವಧಿಗೂ ಮುನ್ನ ಹಿಂಪಡೆದ್ರೆ ದಂಡ
ಎಂಐಎಸ್‌ ನಲ್ಲಿ ಹೂಡಿಕೆ ಮಾಡಿರೋ ಹಣವನ್ನು ಅವಧಿಗೂ ಮುನ್ನ ಹಿಂಪಡೆಯಲು ಅವಕಾಶವಿದೆ. ಆದ್ರೆ ಇದಕ್ಕೆ ದಂಡ ವಿಧಿಸಲಾಗುತ್ತದೆ. ಮೊದಲ ಹಾಗೂ ಮೂರನೇ ವರ್ಷಗಳ ನಡುವೆ ವಿತ್‌ಡ್ರಾ ಮಾಡಿದ್ರೆ ಶೇ.2, ಮೂರು ಮತ್ತು ಐದು ವರ್ಷಗಳ ನಡುವೆ ವಿತ್‌ಡ್ರಾ ಮಾಡಿದ್ರೆ ಶೇ.1ರಷ್ಟು ದಂಡ ವಿಧಿಸಲಾಗುತ್ತದೆ. 

click me!