ಎಸ್ ಬಿಐ ಬ್ಯಾಂಕ್ ನಲ್ಲಿಎಫ್ ಡಿ ಹೊಂದಿರೋರಿಗೆ ಶುಭಸುದ್ದಿ. ಎಫ್ ಡಿ ಮೇಲಿನ ಬಡ್ಡಿಯನ್ನು ಎಸ್ ಬಿಐ ಶೇ.0.65ರಷ್ಟು ಹೆಚ್ಚಳ ಮಾಡಿದೆ. 2 ಕೋಟಿ ರೂ. ತನಕದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ.
ನವದೆಹಲಿ (ಡಿ.14): ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬಡ್ಡಿದರ ಹೆಚ್ಚಳ ಮಾಡಿದೆ. ಹೀಗಾಗಿ ಬ್ಯಾಂಕ್ ಗಳು ಸಾಲ ಹಾಗೂ ಸ್ಥಿರ ಠೇವಣಿ ಎರಡ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಮುಂದಾಗಿವೆ. ದೇಶದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಎಸ್ ಬಿಐ ಕೂಡ ವಿವಿಧ ಅವಧಿಯ ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿ ಏರಿಕೆ ಮಾಡಿದೆ. 2022ರ ಡಿಸೆಂಬರ್ 13ರಿಂದ ಜಾರಿಗೆ ಬರುವಂತೆ ಎಫ್ ಡಿಗಳ ಮೇಲಿನ ಬಡ್ಡಿದರವನ್ನು ಶೇ.0.65ರಷ್ಟು ಹೆಚ್ಚಳ ಮಾಡಿದೆ. 2 ಕೋಟಿ ರೂ. ತನಕದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಎಸ್ ಬಿಐ ಏರಿಕೆ ಮಾಡಿದೆ. ಇನ್ನು ಹಿರಿಯ ನಾಗರಿಕರಿಗಾಗಿಯೇ ಇರುವ ವಿಶೇಷ ಸ್ಥಿರ ಠೇವಣಿ ಎಸ್ ಬಿಐ ವಿ ಕೇರ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಐದು ವರ್ಷಗಳ ಅಧಿಕ ಹಾಗೂ ಹತ್ತು ವರ್ಷಗಳಿಗಿಂತ ಕಡಿಮೆ ಅವಧಿಯ ವಿ ಕೇರ್ ಡೆಫಾಸಿಟ್ ಮೇಲಿನ ಬಡ್ಡಿದರವನ್ನು ಶೇ.7.25ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಸಾಮಾನ್ಯ ಸ್ಥಿರ ಠೇವಣಿಗಳಿಂತ ಈ ಠೇವಣಿಗಳ ಮೇಲೆ ಶೇ.0.50 ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.
211 ದಿನಗಳಿಂದ ಒಂದು ವರ್ಷದ ಅವಧಿಯ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ. 5.50 ರಿಂದ ಶೇ.5.75ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನು ಒಂದು ವರ್ಷದಿಂದ ಎರಡು ವರ್ಷಗಳೊಳಗಿನ ಎಫ್ ಡಿಗಳ ಮೇಲಿನ ಬಡ್ಡಿದರವನ್ನು ಶೇ.6.10ರಿಂದ ಶೇ.6.75 ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಎರಡರಿಂದ ಮೂರು ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.6.25 ರಿಂದ ಶೇ. 6.75ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು ಮೂರರಿಂದ ಐದು ವರ್ಷಗಳ ಅವಧಿಯ ಹಾಗೂ 5ರಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲಿನ ಬಡ್ಡಿದರವನ್ನು 0.15ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಈ ಎಫ್ ಡಿಗಳ ಮೇಲೆ ಈ ಹಿಂದೆ ಶೇ. 6.10ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಈಗ ಶೇ. 6.25ಕ್ಕೆ ಹೆಚ್ಚಳ ಮಾಡಲಾಗಿದೆ. ಇನ್ನೊಂದರ್ಥದಲ್ಲಿ ಹೇಳೋದಾದ್ರೆ ಬಡ್ಡಿದರ 15 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗಿದೆ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಂತಿಮ ಗಡುವು ಮುಗಿದಿದ್ರೂ 3 ದಿನಗಳ ಕಾಲ ದಂಡ ವಿಧಿಸುವಂತಿಲ್ಲ, ಏಕೆ ಗೊತ್ತಾ?
ಎಸ್ ಬಿಐ ವಿ ಕೇರ್ ಠೇವಣಿ ಬಡ್ಡಿ ಹೆಚ್ಚಳ
ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಲ್ಪಟ್ಟಿರುವ ಎಸ್ ಬಿಐ ವಿ ಕೇರ್ ಠೇವಣಿ ಮೇಲಿನ ಬಡ್ಡಿಯನ್ನು ಕೂಡ ಹೆಚ್ಚಳ ಮಾಡಲಾಗಿದೆ. ಶೇ.7.25ರಷ್ಟು ಹೆಚ್ಚಳ ಮಾಡಲಾಗಿದೆ. ಎಸ್ ಬಿಐ ವಿ ಕೇರ್ ಠೇವಣಿ 2023ರ ಮಾರ್ಚ್ 31ರ ತನಕ ಇರಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಈ ವರ್ಷ ಆರ್ ಬಿಐ ಒಟ್ಟು ಐದು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ಈ ತಿಂಗಳ ಮೊದಲ ವಾರದಲ್ಲಿ ಕೂಡ ರೆಪೋ ದರವನ್ನು ಶೇ.0.35ನಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ 10 ತಿಂಗಳಿನಲ್ಲಿ ರೆಪೋ ದರ ಶೇ.2.25ರಷ್ಟು ಏರಿಕೆಯಾಗಿದೆ. ಇದರಿಂದ ಗಿ ಗೃಹ, ವಾಹನ ಸಾಲಗಳೂ ಸೇರಿದಂತೆ ಬೇರೆ ಬೇರೆ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಕೂಡ ಏರಿಕೆಯಾಗಿವೆ.
ನಿಮ್ಮ ಎಸ್ ಬಿಐ ಉಳಿತಾಯ ಖಾತೆಯಿಂದ 147.5ರೂ. ಕಡಿತವಾಗಿದೆಯಾ? ಇದೇ ಕಾರಣಕ್ಕೆ ನೋಡಿ
ರೆಪೋ ದರ ಎಂದರೆ ಆರ್‌ಬಿಐ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಹೀಗಾಗಿ ಆರ್ ಬಿಐ ರೆಪೋ ದರ ಏರಿಕೆ ಮಾಡಿದಾಗ ಬ್ಯಾಂಕುಗಳು ಕೂಡ ಸಾಲ ಹಾಗೂ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತವೆ. ರೆಪೋ ದರ ಏರಿಕೆ ಸಾಲಗಾರರ ಜೇಬಿಗೆ ಹೊರೆಯಾದ್ರೆ, ಎಫ್ ಡಿ ಹೊಂದಿರೋರಿಗೆ ಹೆಚ್ಚುವರಿ ಆದಾಯ ನೀಡುತ್ತದೆ.