ಹಸಿರು ರೂಪಾಯಿ ಅವಧಿ ಠೇವಣಿ ಪ್ರಾರಂಭಿಸಿದ ಎಸ್ ಬಿಐ; ಯಾರು ಹೂಡಿಕೆ ಮಾಡ್ಬಹುದು? ಬಡ್ಡಿ ಎಷ್ಟು?

Published : Jan 13, 2024, 05:05 PM IST
ಹಸಿರು ರೂಪಾಯಿ ಅವಧಿ ಠೇವಣಿ ಪ್ರಾರಂಭಿಸಿದ ಎಸ್ ಬಿಐ; ಯಾರು ಹೂಡಿಕೆ ಮಾಡ್ಬಹುದು? ಬಡ್ಡಿ ಎಷ್ಟು?

ಸಾರಾಂಶ

ಪರಿಸರಸ್ನೇಹಿ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಎಸ್ ಬಿಐ ಹಸಿರು ರೂಪಾಯಿ ಅವಧಿ ಠೇವಣಿಯನ್ನು ಪ್ರಾರಂಭಿಸಿದೆ. ಇದರಲ್ಲಿ ಯಾರು ಹೂಡಿಕೆ ಮಾಡ್ಬಹುದು? ಏನಿದರ ವಿಶೇಷತೆ? 

ನವದೆಹಲಿ (ಜ.13): ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಸಿರು ರೂಪಾಯಿ ಅವಧಿ (ಟರ್ಮ್) ಡೆಫಾಸಿಟ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪರಿಸರಸ್ನೇಹಿ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು ಬಿಡುಗಡೆಗೊಳಿಸುವ ಮೂಲಕ ಎಸ್ ಬಿಐ ಭಾರತದಲ್ಲಿ ಹಸಿರು ಹಣಕಾಸು ಪರಿಸರ ವ್ಯವಸ್ಥೆಯನ್ನು ಬೆಳೆಸುವ ಗುರಿ ಹೊಂದಿರೋದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಠೇವಣಿ ಯೋಜನೆ ಭಾರತೀಯ ನಾಗರಿಕರಿಗೆ ಹಾಗೂ ಎನ್ ಆರ್ ಐಗಳಿಗೆ ಲಭ್ಯವಿದೆ. ಈ ಹಸಿರು ರೂಪಾಯಿ ಟರ್ಮ್ ಠೇವಣಿ ಹೂಡಿಕೆದಾರರಿಗೆ ವಿವಿಧ ಅವಧಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಪ್ರಸ್ತುತ ಈ ಯೋಜನೆ ಎಸ್ ಬಿಐ ಶಾಖೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಇತರ ಡಿಜಿಟಲ್ ಚಾನೆಲ್ ಗಳಾದ ಯೋನೋ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳ ಮೂಲಕ ಇದು ಲಭ್ಯವಾಗಲಿದೆ ಎಂದು ಎಸ್ ಬಿಐ ಮಾಹಿತಿ ನೀಡಿದೆ.

'ಈ ವಿಶಿಷ್ಟ ಉತ್ಪನ್ನವನ್ನು ನೀಡುವ ಮೂಲಕ ನಾವು ದೇಶವನ್ನು 2070ರೊಳಗೆ ಶೂನ್ಯ ಇಂಗಾಲವನ್ನಾಗಿಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನೆರವು ನೀಡಲಿದ್ದೇವೆ. ಹಸಿರು ಹಾಗೂ ಪರಿಸರ ಜವಾಬ್ದಾರಿಯುತವಾದ ಹಣಕಾಸಿನ ಭವಿಷ್ಯವನ್ನು ಎಲ್ಲರಿಗೂ ಒದಗಿಸಲಿದ್ದೇವೆ' ಎಂದು ಎಸ್ ಬಿಐ ಮುಖ್ಯಸ್ಥ ದಿನೇಶ್ ಖಾರ ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಎಫ್‌ಡಿ ಇಡಲು ಬಯಸ್ತಿದ್ದೀರಾ? ಹಾಗಾದ್ರೆ ಪ್ರಮುಖ ಬ್ಯಾಂಕ್‌ಗಳು ಎಷ್ಟು ಬಡ್ಡಿ ದರ ನೀಡ್ತಿವೆ ನೋಡಿ..

ಹಸಿರು ಠೇವಣಿಗಳನ್ನು ಸ್ವೀಕರಿಸಲು ಬ್ಯಾಂಕುಗಳಿಗೆ ಆರ್ ಬಿಐ ಏಪ್ರಿಲ್ ನಲ್ಲಿ ನಿಯಮಗಳ ಚೌಕಟ್ಟನ್ನು ಒದಗಿಸಿದೆ. ಠೇವಣಿದಾರರ ಆಸಕ್ತಿಯನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ಹಾಗೂ ಗ್ರಾಹಕರಿಗೆ ಅವರ ಸುಸ್ಥಿರ ಅಜೆಂಡಾ ಸಾಧಿಸಲು ನೆರವು ನೀಡುವ ಉದ್ದೇಶದಿಂದ ಈ ಚೌಕಟ್ಟನ್ನು ರೂಪಿಸಲಾಗಿದೆ. ಇದು ಹಸಿರು ಚಟುವಟಿಕೆಗಳಿಗೆ ಅಂದರೆ ಪರಿಸರಸ್ನೇಹಿ ಕಾರ್ಯಗಳಿಗೆ ಹಣಕಾಸಿನ ಹರಿವನ್ನು ಉತ್ತೇಜಿಸಲಿದೆ.

ಹಸಿರು ರೂಪಾಯಿ ಟರ್ಮ್ ಡೆಫಾಸಿಟ್ ಅವಧಿ
ಎಸ್ ಬಿಐ ಹಸಿರು ರೂಪಾಯಿ ಟರ್ಮ್ ಡೆಫಾಸಿಟ್ (SGRTD) ಮೂರು ವಿವಿಧ ಅವಧಿಗಳಲ್ಲಿ ಲಭ್ಯವಿದೆ.  1111 ದಿನಗಳು, 1777 ದಿನಗಳು ಹಾಗೂ 2222 ದಿನಗಳ ಅವಧಿಯಲ್ಲಿ ಲಭ್ಯವಿವೆ. 

ಹೂಡಿಕೆ ಮಾಡೋದು ಹೇಗೆ?
ಪ್ರಸ್ತುತ ಈ ಯೋಜನೆ ಎಸ್ ಬಿಐ ಶಾಖೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಯೋನೋ, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಹಾಗೂ ಇತರ ಡಿಜಿಟಲ್ ಚಾನೆಲ್ ಗಳಲ್ಲಿ ಇದು ಲಭಿಸಲಿದೆ.

ಬಡ್ಡಿದರ ಎಷ್ಟು?
ಎಸ್ ಜಿಆರ್ ಟಿಡಿ ರಿಟೇಲ್ ಹಾಗೂ ದೊಡ್ಡ ಪ್ರಮಾಣದ ಠೇವಣಿಗಳಿಗೆ ಅವಧಿ ಆಧರಿಸಿ ವಿವಿಧ ಬಡ್ಡಿದರವನ್ನು ನೀಡುತ್ತದೆ ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. 
ರಿಟೇಲ್ ಠೇವಣಿಗಳಿಗೆ:
1111 ದಿನಗಳಿಗೆ -6.65 % 
1777 ದಿನಗಳಿಗೆ - 6.65 %
2222 ದಿನಗಳಿಗೆ- 6.40 %

ಎಸ್ ಜಿಆರ್ ಟಿಡಿ ದೊಡ್ಡ ಠೇವಣಿಗಳಿಗೆ:
1111 ದಿನಗಳಿಗೆ - 6.15 %
1777 ದಿನಗಳಿಗೆ-6.15 %
2222 ದಿನಗಳಿಗೆ-5.90 %

ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ
ಎಸ್ ಜಿಆರ್ ಟಿಡಿ ಹಿರಿಯ ನಾಗರಿಕರು/ ಸಿಬ್ಬಂದಿ/ ಸಿಬ್ಬಂದಿ ಹಿರಿಯ ನಾಗರಿಕರಿಗೆ ನಿಗದಿತ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. ಆದರೆ, ಎನ್ ಆರ್ ಐ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಅನ್ವಯಿಸೋದಿಲ್ಲ. 

ಸದ್ದಿಲ್ಲದೇ ಕಾರು, ವೈಯಕ್ತಿಕ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್‌ಗಳು : ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಇತರ ವಿಶೇಷತೆಗಳು:
*ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶ.
*ಎಸ್ ಬಿಐ ಹಸಿರು ರೂಪಾಯಿ ಟರ್ಮ್ ಡೆಫಾಸಿಟ್ ಗೆ ಸಾಲ, ಓವರ್ ಡ್ರಾಫ್ಟ್ ಸೌಲಭ್ಯ ಲಭ್ಯವಿದೆ.
*ಆದಾಯ ತೆರಿಗೆ ನಿಯಮಗಳ ಪ್ರಕಾರ ಟಿಡಿಎಸ್ ಅನ್ವಯಿಸುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!