
Business Desk: ದೀರ್ಘ ಸಮಯದಿಂದಲೂ ಬ್ಯಾಂಕ್ ಸ್ಥಿರ ಠೇವಣಿ (ಎಫ್ ಡಿ) ಹೂಡಿಕೆದಾರರ ಅತ್ಯುತ್ತಮ ಆಯ್ಕೆಯಾಗಿತ್ತು. ಅದರಲ್ಲೂ ತಮ್ಮ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂಬ ಮನಸ್ಥಿತಿ ಹೊಂದಿರೋರಿಗೆ ಇದು ನೆಚ್ಚಿನ ಆಯ್ಕೆಯಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಫ್ ಡಿಗಳು ಟರ್ಮ್ ಡೆಫಾಸಿಟ್ ಎಂದೇ ಗುರುತಿಸಿಕೊಂಡಿವೆ. ಏಕೆಂದರೆ ಎಫ್ ಡಿಗಳು 7 ದಿನಗಳಿಂದ ಹಿಡಿದು 10 ವರ್ಷಗಳ ತನಕದ ನಿಗದಿತ ಅವಧಿ ಹೊಂದಿವೆ. ಅವಧಿ ಹಾಗೂ ಮೊತ್ತವನ್ನು ಆಧರಿಸಿ ಎಫ್ ಡಿ ಬಡ್ಡಿದರದಲ್ಲಿ ವ್ಯತ್ಯಾಸವಾಗುತ್ತದೆ. ಇನ್ನು ಅವಧಿಗೂ ಮುನ್ನ ಎಫ್ ಡಿ ವಿತ್ ಡ್ರಾ ಮಾಡಿದ್ರೆ ಬ್ಯಾಂಕ್ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ. ಹೀಗಿರುವಾಗ ಒಂದು ವೇಳೆ ಅವಧಿಗೂ ಮುನ್ನ ಅಥವಾ ಅವಧಿ ಮುಗಿದ ಬಳಿಕ ಎಫ್ ಡಿಯನ್ನು ಕ್ಲೋಸ್ ಮಾಡೋದು ಹೇಗೆ? ಎಫ್ ಡಿ ಖಾತೆಯನ್ನು ಆನ್ ಲೈನ್ ನಲ್ಲಿ ಅಥವಾ ಬ್ಯಾಂಕಿಗೆ ಭೇಟಿ ನೀಡಿ ತೆರೆದಿದ್ರೂ ಮೆಚ್ಯೂರ್ ಆದ ಬಳಿಕ ಅದನ್ನು ಕ್ಲೋಸ್ ಮಾಡುವ ಪ್ರಕ್ರಿಯೆ ಒಂದೇ ರೀತಿ ಇರುತ್ತದಾ? ಈ ಕುರಿತ ಮಾಹಿತಿ ಇಲ್ಲಿದೆ.
FD ಅವಧಿ ಮುಗಿದಾಗ ಬ್ಯಾಂಕ್ ಏನ್ ಮಾಡುತ್ತೆ?
ಸಾಮಾನ್ಯವಾಗಿ ಮೆಚ್ಯೂರ್ ಆದ ಸ್ಥಿರ ಠೇವಣಿಗಳನ್ನು (ಎಫ್ ಡಿಗಳು) ಬ್ಯಾಂಕ್ ಗಳು ಎರಡು ವಿಧಾನಗಳಲ್ಲಿ ನಿಭಾಯಿಸುತ್ತವೆ. ಒಂದು ಹೂಡಿಕೆದಾರರು ಆಯ್ಕೆ ಮಾಡಿದ ಅವಧಿ ಆಧರಿಸಿ ಎಫ್ ಡಿಯನ್ನು ಒಂದು ವರ್ಷ ಅಥವಾ ಆರಂಭಿಕ ಅವಧಿಗೆ ನವೀಕರಿಸಲಾಗುತ್ತದೆ. ಎರಡನೆಯದು ಮೂಲ ಹಾಗೂ ಬಡ್ಡಿ ಮೊತ್ತ ಎರಡನ್ನೂ ನಗದೀಕರಿಸಿ ಹೂಡಿಕೆದಾರರ ಖಾತೆಗೆ ವರ್ಗಾಯಿಸಲಾಗುತ್ತದೆ.
ವಾರಸುದಾರರಿಲ್ಲದ 48000 ಕೋಟಿ ಹಣ ಶಿಕ್ಷಣ, ಜಾಗೃತಿ ನಿಧಿಗೆ ವರ್ಗ: ಕೇಂದ್ರ
ಅವಧಿ ಮುಗಿದ FD ಕ್ಲೋಸ್ ಮಾಡೋದು ಹೇಗೆ?
ನಿಮ್ಮ ಎಫ್ ಡಿ ಮೆಚ್ಯುರ್ ಆದ ಮೇಲೆ ಏನು ಮಾಡ್ಬೇಕು ಎಂಬ ಸೂಚನೆಗಳನ್ನು ನೀವು ಖಾತೆ ತೆರೆಯುವ ಸಮಯದಲ್ಲೇ ನೀಡಬಹುದು. ಎಲ್ಲ ಮೆಚ್ಯುರಿಟಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಾರಂಭಿಕ ಹೂಡಿಕೆ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ. ಆನ್ ಲೈನ್ ನಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ನೀವು ಎಫ್ ಡಿ ಖಾತೆ ತೆರೆದಿದ್ರೆ ಮೆಚ್ಯುರ್ ಆದ ಬಳಿಕ ಅದನ್ನು ಕ್ಲೋಸ್ ಮಾಡೋದು ನಿಮಗೆ
ಸುಲಭದ ಕೆಲಸ. ಇದಕ್ಕೆ ನೀವು ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಯ ಸ್ಥಿರ ಠೇವಣಿ ವಿಭಾಗಕ್ಕೆ ಭೇಟಿ ನೀಡಬೇಕು. ನಿಮ್ಮ ಹೂಡಿಕೆ ಸ್ಟೇಟಸ್ ಚೆಕ್ ಮಾಡಿ ಹಾಗೂ ಆ ಬಳಿಕ ಕ್ಲೋಸ್ ಮಾಡ್ಬೇಕಾ ಅಥವಾ ಅಲ್ಲೇ ನಗದೀಕರಿಸಬೇಕಾ ಎಂಬುದನ್ನು ಆಯ್ಕೆ ಮಾಡಿ.
ಪ್ರೀಮೆಚ್ಯುರ್ ಎಫ್ ಡಿ ಕ್ಲೋಸ್ ಮಾಡೋದು ಹೇಗೆ?
ನಿಗದಿತ ಮೆಚ್ಯುರಿಟಿ ದಿನಾಂಕದ ಮೊದಲು ಸ್ಥಿರ ಠೇವಣಿಗಳನ್ನು ಕ್ಲೋಸ್ ಮಾಡುವ ಆಯ್ಕೆಯನ್ನು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ನೀಡುತ್ತವೆ. ಅಲ್ಪಾವಧಿ ಎಫ್ ಡಿಗಳು ನಿಮ್ಮ ಹೂಡಿಕೆ ಮೇಲೆ ಪೂರ್ಣ ಪ್ರಮಾಣದ ಬಡ್ಡಿ ನೀಡುವುದಿಲ್ಲ ಹಾಗೂ ಇದಕ್ಕೆ ದಂಡ ಕೂಡ ವಿಧಿಸಲಾಗುತ್ತದೆ. ಇನ್ನು ಬ್ಯಾಂಕ್ ನಲ್ಲಿ ನಿಮ್ಮ ಠೇವಣಿ ಇರುವ ಸಮಯದ ತನಕ ಮಾತ್ರ ಅದಕ್ಕೆ ಬಡ್ಡಿ ನೀಡಲಾಗುತ್ತದೆ. ಇನ್ನು ನೀವು ಎಫ್ ಡಿ ಕ್ಲೋಸ್ ಮಾಡಿದ ಬಳಿಕ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.
ಗ್ರಾಹಕರ ಸೇವೆಗೆ ವೀಡಿಯೋ ಕರೆ: ಈ ಬ್ಯಾಂಕಲ್ಲಿ ಇನ್ಮುಂದೆ ದಿನದ 24 ಗಂಟೆ/ 365 ದಿನವೂ ಸೇವೆ
ಎಸ್ ಬಿಐ ಸ್ಥಿರ ಠೇವಣಿ ಕ್ಲೋಸ್ ಮಾಡೋದು ಹೇಗೆ?
ಹಂತ 1: ಎಸ್ ಬಿಐ ಅಧಿಕೃತ ವೆಬ್ ಸೈಟ್ www.sbi.co.in ಭೇಟಿ ನೀಡಿ.
ಹಂತ 2: ಸ್ಥಿರ ಠೇವಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಎಫ್ ಡಿ ಟ್ಯಾಬ್ ETDR/STDR (FD) ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 4: Close A/C Prematurely ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಎಫ್ ಡಿಯ ಒಂದು ಪಟ್ಟಿ ಕಾಣಿಸುತ್ತದೆ.
ಹಂತ 5: ನೀವು ನಿರ್ದಿಷ್ಟ ಎಸ್ ಬಿಐ ಎಫ್ ಡಿಯನ್ನು ಲಿಸ್ಟ್ ನಿಂದ ಅದನ್ನು ಆಯ್ಕೆ ಮಾಡುವ ಮೂಲಕ ಕ್ಲೋಸ್ ಮಾಡಬಹುದು. ಮೆಚ್ಯುರಿಟಿ ದಿನಾಂಕ, ಮೊತ್ತ ಠೇವಣಿ ಇಟ್ಟಿರೋದು ಮುಂತಾದ ಮಾಹಿತಿಗಳ ಮೂಲಕ ನೀವು ಎಫ್ ಡಿ ಖಾತೆ ಮಾಹಿತಿಗಳನ್ನು ಪರಿಶೀಲಿಸಬಹುದು.
ಹಂತ 6: ಖಾತೆ ಕ್ಲೋಸ್ ಮಾಡಲು ಕಾರಣವನ್ನು ನಮೂದಿಸುವ ಮೂಲಕ 'Confirm'ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ನಮೂದಿಸಿ ಹಾಗೂ ಅದನ್ನು ಅನುಮೋದಿಸಿ.
ಹಂತ 8: Confirm ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಎಸ್ ಬಿಐ ಎಫ್ ಡಿ ಖಾತೆಯನ್ನು ಕ್ಯಾನ್ಸಲ್ ಮಾಡಿರುವ ಬಗ್ಗೆ ನಿಮಗೆ ಇ-ಮೇಲ್ ಬರುತ್ತದೆ.
ಎಚ್ ಡಿಎಫ್ ಸಿ ಬ್ಯಾಂಕ್ ಎಫ್ ಡಿ ಕ್ಲೋಸ್ ಮಾಡೋದು ಹೇಗೆ?
ಹಂತ 1: ನಿಮ್ಮ ನೆಟ್ ಬ್ಯಾಂಕಿಂಗ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗಿ.
ಹಂತ 2: ಎಡ ಭಾಗದಲ್ಲಿರುವ ಎಫ್ ಡಿ ಮೆನ್ಯು ಅಡಿಯಲ್ಲಿ Liquidate Fixed Deposit ಆಯ್ಕೆ ಮಾಡಿ.
ಹಂತ 3: ಡ್ರಾಪ್ ಡೌನ್ ಲಿಸ್ಟ್ ನಿಂದ ಸ್ಥಿರ ಠೇವಣಿ ಖಾತೆ ಸಂಖ್ಯೆ ಆಯ್ಕೆ ಮಾಡಿ.
ಹಂತ 4: Continue ಬಟನ್ ಮೇಲೆ ಕ್ಲಿಕ್ ಮಾಡು ಹಾಗೂ ನಮೂದಿಸಿರುವ ಮಾಹಿತಿಗಳನ್ನು ದೃಢೀಕರಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.