ಆರ್ ಬಿಐ ಕಳೆದ ಒಂದು ವರ್ಷದ ಅವಧಿಯಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಎಫ್ ಡಿಗಳ ಮೇಲೆ ಉತ್ತಮ ಬಡ್ಡಿ ನೀಡುತ್ತಿವೆ. ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಫ್ ಡಿ ಮೇಲೆ ಉತ್ತಮ ಬಡ್ಡಿ ನೀಡುತ್ತಿದೆ. ಇನ್ನು ಅಂಚೆ ಕಚೇರಿ ಎಫ್ ಡಿಗಳು ಕೂಡ ಉತ್ತಮ ರಿಟರ್ನ್ ನೀಡುತ್ತಿರುವ ಕಾರಣ ಇವೆರಡರಲ್ಲಿ ಯಾವುದರಲ್ಲಿ ಹೂಡಿಕೆ ಮಾಡೋದು ಉತ್ತಮ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.
Business Desk:ಹೂಡಿಕೆಯ ವಿಚಾರ ಬಂದಾಗ ನಾವೆಲ್ಲರೂ ಮೊದಲು ನೋಡುವುದೇ ಸುರಕ್ಷತೆಯನ್ನು. ಇದೇ ಕಾರಣಕ್ಕೆ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಹುತೇಕರು ಹಿಂದೆಮುಂದೆ ನೋಡುವುದಿಲ್ಲ. ಅಲ್ಲದೆ, ಅಂಚೆ ಕಚೇರಿ ಉಳಿತಾಯ ಯೋಜನೆಗಳು ಉತ್ತಮ ರಿಟರ್ನ್ಸ್ ಕೂಡ ನೀಡುತ್ತವೆ. ಇನ್ನು ಕಳೆದ ಒಂದು ವರ್ಷದಲ್ಲಿ ಆರ್ ಬಿಐ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದೆ. ಹೀಗಾಗಿ ಬ್ಯಾಂಕ್ ಗಳ ಟರ್ಮ್ ಡೆಫಾಸಿಟ್ ಗಳ ಮೇಲಿನ ಬಡ್ಡಿದರದಲ್ಲಿ ಕೂಡ ಏರಿಕೆಯಾಗಿದೆ. ಬಹುತೇಕ ಬ್ಯಾಂಕ್ ಗಳು ಎಫ್ ಡಿಗೆ ಶೇ.7ಕ್ಕಿಂತ ಹೆಚ್ಚಿನ ಬಡ್ಡಿದರ ನೀಡುತ್ತಿವೆ. ಅದರಲ್ಲೂ ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಗಳಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸ್ಥಿರ ಠೇವಣಿ (ಎಫ್ ಡಿ) ಮೇಲೆ ಶೇ.3ರಿಂದ ಶೇ.7.5ರ ತನಕ ಬಡ್ಡಿ ನೀಡುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಫ್ ಡಿ ಕೂಡ ಉತ್ತಮ ಬಡ್ಡಿ ನೀಡುತ್ತಿದೆ. ಹೀಗಾಗಿ ಹೂಡಿಕೆ ಮಾಡಲು ಯೋಚಿಸುತ್ತಿರೋರಿಗೆ ಅಂಚೆ ಕಚೇರಿ ಎಫ್ ಡಿ ಅಥವಾ ಎಸ್ ಬಿಐ ಎಫ್ ಡಿ, ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡೋದು ಎಂಬ ಗೊಂದಲ ಕಾಡುವುದು ಸಹಜ. ಹೀಗಿರುವಾಗ ಹೂಡಿಕೆ ಮಾಡುವ ಮುನ್ನ ಈ ಎರಡಕ್ಕೂ ಸಂಬಂಧಿಸಿ ಕೆಲವೊಂದು ಅಂಶಗಳನ್ನು ಪರಿಗಣಿಸೋದು ಅಗತ್ಯ.
ಅವಧಿ ಎಷ್ಟು?
ಅಂಚೆ ಕಚೇರಿ ಸ್ಥಿರ ಠೇವಣಿ (ಎಫ್ ಡಿ) ಅಥವಾ ಎಸ್ ಬಿಐ ಸ್ಥಿರ ಠೇವಣಿಯಲ್ಲಿ (ಎಫ್ ಡಿ) ಹೂಡಿಕೆ ಮಾಡುವ ಮುನ್ನ ಅವಧಿ ಪರಿಶೀಲಿಸೋದು ಅಗತ್ಯ. ಉದಾಹರಣೆಗೆ ಎಸ್ ಬಿಐ ನಲ್ಲಿ 7 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಯ ಟರ್ಮ್ ಡೆಫಾಸಿಟ್ ಇದೆ. ಅದೇ ಅಂಚೆ ಕಚೇರಿಯಲ್ಲಿ ಈ ಎಫ್ ಡಿ ಅವಧಿ 1,2,3, ಹಾಗೂ 5 ವರ್ಷಗಳ ಅವಧಿಯದ್ದಷ್ಟೇ ಆಗಿರುತ್ತದೆ.
SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡೋದು ಹೇಗೆ?
ರಿಟರ್ನ್ಸ್ ಎಷ್ಟು?
2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಚಿಲ್ಲರೆ ಠೇವಣಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಾಮಾನ್ಯ ಜನರಿಗೆ ಶೇ.3ರಿಂದ ಶೇ.7ರಷ್ಟು ಬಡ್ಡಿ ವಿಧಿಸುತ್ತದೆ. ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ. ಇತ್ತೀಚೆಗೆ ಎಸ್ ಬಿಐ ಅಮೃತ್ ಕಲಶ್ ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದ್ದು, ಇದು 400 ದಿನಗಳ ಅವಧಿಯ ಎಫ್ ಡಿಯಾಗಿದ್ದು, ಶೇ.7.6 ಬಡ್ಡಿದರ ಹೊಂದಿದೆ. ಇನ್ನು ಅಂಚೆ ಕಚೇರಿ ಟರ್ಮ್ ಡೆಫಾಸಿಟ್ ಗಳ ಮೇಲಿನ ಬಡ್ಡಿದರ ಶೇ.6.8 ಹಾಗೂ ಶೇ.7.5ರ ನಡುವೆ ಇದೆ. ಈ ಬಡ್ಡಿದರವನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ. ಹಿರಿಯ ನಾಗರಿಕರಿಗೆ ಯಾವುದೇ ಹೆಚ್ಚಿನ ದರದ ಪ್ರಯೋಜನವನ್ನು ಅಂಚೆ ಇಲಾಖೆ ನೀಡುವುದಿಲ್ಲ.
ತೆರಿಗೆ ಪ್ರಯೋಜನ
ಎಸ್ ಬಿಐ ಹಾಗೂ ಅಂಚೆ ಕಚೇರಿ ಎಫ್ ಡಿ ಎರಡಕ್ಕೂ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡಲಾಗುತ್ತದೆ.
ಅವಧಿಪೂರ್ವ ವಿತ್ ಡ್ರಾ
ಅಂಚೆ ಕಚೇರಿಯ ಯಾವುದೇ ಎಫ್ ಡಿಯನ್ನು ಪ್ರಾರಂಭದ ದಿನದಿಂದ ಹಿಡಿದು ಆರು ತಿಂಗಳಿಗೂ ಮುನ್ನ ವಿತ್ ಡ್ರಾ ಮಾಡುವಂತಿಲ್ಲ. ಒಂದು ವೇಳೆ ಎಫ್ ಡಿಯನ್ನು ಆರು ತಿಂಗಳ ಬಳಿಕ ಅಥವಾ ಒಂದು ವರ್ಷಕ್ಕೂ ಮುನ್ನ ಕ್ಲೋಸ್ ಮಾಡಿದರೆ ಅಂಚೆ ಕಚೇರಿ ಉಳಿತಾಯ ಖಾತೆಗೆ ನೀಡುವ ಬಡ್ಡಿದರವನ್ನು ಎಫ್ ಡಿಗೂ ನೀಡಲಾಗುತ್ತದೆ. ಇದು ಎಫ್ ಡಿಗಿಂತ ಕಡಿಮೆ ಇರುತ್ತದೆ. ಆದರೆ, ಎಸ್ ಬಿಐ ಎಫ್ ಡಿಯನ್ನು ಅವಧಿಗೂ ಮುನ್ನವೇ ವಿತ್ ಡ್ರಾ ಮಾಡಬಹುದು. ಆದರೆ, ದಂಡ ವಿಧಿಸಲಾಗುತ್ತದೆ.
ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ
ಎಸ್ ಬಿಐ Vs ಅಂಚೆ ಕಚೇರಿ ಎಫ್ ಡಿ, ಆಯ್ಕೆ ಯಾವುದು?
ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಿಮ್ಮ ಹಣಕಾಸಿನ ಗುರಿಗಳನ್ನು ಪರಿಗಣಿಸಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಂಚೆ ಕಚೇರಿ ಯೋಜನೆಗಳು ಸರ್ಕಾರದ ಬೆಂಬಲ ಹೊಂದಿರುವ ಕಾರಣ ಸ್ಥಿರವಾದ ರಿಟರ್ನ್ಸ್ ನೀಡುತ್ತವೆ. ಹೀಗಿರುವಾಗ ನೀವು ಕಿರು ಅವಧಿಯ ಟರ್ಮ್ ಡೆಫಾಸಿಟ್ ನಲ್ಲಿ ಹೂಡಿಕೆ ಮಾಡಲು ಬಯಸಿದರೆ ಎಸ್ ಬಿಐ ಉತ್ತಮ ಆಯ್ಕೆ. ಇನ್ನು ದೀರ್ಘಾವಧಿಯ ಎಫ್ ಡಿಯಲ್ಲಿ ಹೂಡಿಕೆ ಮಾಡುವಾಗ ರಿಟರ್ನ್ಸ್ ಎಷ್ಟು ಬರುತ್ತದೆ ಎಂಬುದನ್ನು ಹೋಲಿಸಿ ನೋಡಿ ಆ ಬಳಿಕ ನಿರ್ಧಾರ ಕೈಗೊಳ್ಳಿ.