ಬ್ಯಾಂಕ್ ಖಾತೆ ಹೊಂದಿರೋರು ಕೆಲವೊಂದು ಮಾಹಿತಿಗಳನ್ನು ತಿಳಿದಿರೋದು ಅಗತ್ಯ.ಅದ್ರಲ್ಲೂ ಉಳಿತಾಯ ಖಾತೆಯಲ್ಲಿ ಎಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು ಎಂಬುದು ತಿಳಿದಿರಬೇಕು.ಇಲ್ಲವಾದ್ರೆ ಶುಲ್ಕದ ರೂಪದಲ್ಲಿ ಬ್ಯಾಂಕ್ ನಿಮ್ಮಿಂದ ಹಣ ವಸೂಲಿ ಮಾಡುತ್ತದೆ.
Business Desk:ಇಂದು ಬ್ಯಾಂಕ್ ಖಾತೆ ಪ್ರತಿಯೊಬ್ಬರಿಗೂ ಅಗತ್ಯ. ತಿಂಗಳ ವೇತನ ಕ್ರೆಡಿಟ್ ಆಗಲು ಮಾತ್ರವಲ್ಲ, ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಬ್ಯಾಂಕ್ ಖಾತೆ ಅಗತ್ಯ. ನಾವೆಲ್ಲ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರುತ್ತೇವೆ. ಇದರಲ್ಲಿನ ಹಣಕ್ಕೆ ನಮಗೆ ಬಡ್ಡಿ ಕೂಡ ಲಭಿಸುತ್ತದೆ. ಆದರೆ, ಉಳಿತಾಯ ಖಾತೆಗೆ ಸಂಬಂಧಿಸಿ ಬ್ಯಾಂಕ್ ಕೆಲವು ನಿಯಮಗಳು ಹಾಗೂ ಷರತ್ತುಗಳನ್ನು ವಿಧಿಸಿರುತ್ತದೆ. ಹೀಗಾಗಿ ಗ್ರಾಹಕರು ಅವುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಈ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಕಡ್ಡಾಯ. ಖಾತೆಯಲ್ಲಿ ಎಷ್ಟು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು ಎಂಬುದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಬಹುತೇಕ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ಒಂದೇ ಆಗಿದೆ. ಆದರೆ, ಕೆಲವು ಬ್ಯಾಂಕುಗಳಲ್ಲಿ ಇದು ಬೇರೆಯಾಗಿದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ನಿಗದಿಪಡಿಸಿರುವ ಕನಿಷ್ಠ ಬ್ಯಾಲೆನ್ಸ್ ಗಿಂತ ಕಡಿಮೆ ಹಣದವಿದ್ರೆ ಆಗ ಬ್ಯಾಂಕ್ ನಿಮಗೆ ದಂಡ ವಿಧಿಸುತ್ತದೆ. ದಂಡದ ಮೊತ್ತದ ಕೂಡ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಹಾಗಾದ್ರೆ ದೇಶದ ಪ್ರಮುಖ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕುಗಳಲ್ಲಿನ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಎಷ್ಟು ಬ್ಯಾಲೆನ್ಸ್ ಇರಬೇಕು? ಇಲ್ಲಿದೆ ಮಾಹಿತಿ.
ಎಸ್ ಬಿಐ
ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಸ್ ಬಿಐಯಲ್ಲಿ (SBI) ನೀವು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ಹೊಂದಿದ್ರೆ ಯಾವುದೇ ಕನಿಷ್ಠ ಠೇವಣಿ ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ. ಎಸ್ ಬಿಐ 2020ರ ಮಾರ್ಚ್ ನಿಂದ ಉಳಿತಾಯ ಖಾತೆಗಳಲ್ಲಿ ಸರಾಸರಿ ಮಾಸಿಕ ಠೇವಣಿ ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದೆ. ಈ ಹಿಂದೆ ಎಸ್ ಬಿಐ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಬೇರೆ ಬೇರೆಯಾಗಿತ್ತು. ಬ್ಯಾಂಕ್ ಖಾತೆಯಿರುವ ಪ್ರದೇಶವನ್ನು ಆಧರಿಸಿ ಎಸ್ ಬಿಐ 5ರೂ.ನಿಂದ 15ರೂ. ತನಕ ಶುಲ್ಕ ವಿಧಿಸುತ್ತಿತ್ತು. ಗ್ರಾಹಕರು ಮೆಟ್ರೋ, ಅರೆನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಶಾಖೆಗಳಲ್ಲಿ ಕ್ರಮವಾಗಿ 3000ರೂ., 2000ರೂ. ಹಾಗೂ 1000 ರೂ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಿತ್ತು. ಇನ್ನು ಎಸ್ ಬಿಐ ಉಳಿತಾಯ ಖಾತೆಗಳಲ್ಲಿ ಹೆಚಚಿನ ಹಣ ನಿರ್ವಹಣೆ ಮಾಡುವ ಗ್ರಾಹಕರಿಗೆ ಎಟಿಎಂ ವಹಿವಾಟಿನ ಉಚಿತ ಮಿತಿಯನ್ನು ಹೆಚ್ಚು ನೀಡುತ್ತಿದೆ. ಉದಾಹರಣೆಗೆ ಗ್ರಾಹಕ ತನ್ನ ಉಳಿತಾಯ ಖಾತೆಯಲ್ಲಿ 1ಲಕ್ಷ ರೂ.ಗಿಂತ ಹೆಚ್ಚಿನ ಹಣ ನಿರ್ವಹಣೆ ಮಾಡಿದರೆ ಅತನಿಗೆ ತಿಂಗಳಿಗೆ ಅನಿಯಮಿತ ಎಟಿಎಂ ವಹಿವಾಟುಗಳಿಗೆ ಅವಕಾಶ ನೀಡಲಾಗುತ್ತಿದೆ.
ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಮತ್ತೆ ಜಿಗಿದ ಹಣದುಬ್ಬರ; ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ
ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ (HDFC) ಬ್ಯಾಂಕ್ ಕೂಡ ಪ್ರದೇಶದ ಆಧಾರದಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಣೆ ಮಾಡುತ್ತದೆ. ಮೆಟ್ರೋ ಹಾಗೂ ನಗರಗಳಲ್ಲಿ ಮಾಸಿಕ ಸರಾಸರಿ ಕನಿಷ್ಠ ಬ್ಯಾಲೆನ್ಸ್ 10,000ರೂ., ಅರೆನಗರ ಪ್ರದೇಶದಲ್ಲಿ 5,000ರೂ. ಆಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಗ್ರಾಹಕರು ತ್ರೈಮಾಸಿಕದಲ್ಲಿ ಸರಾಸರಿ 2,500ರೂ. ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ (ICICI Bank) 2022ರ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ವಿವಿಧ ಉಳಿತಾಯ ಖಾತೆಗಳಲ್ಲಿ ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಣೆಗೆ ವಿಧಿಸುವ ಶುಲ್ಕಗಳನ್ನು ಪರಿಷ್ಕರಿಸಿದೆ. ಮೆಟ್ರೋ ಹಾಗೂ ನಗರಗಳಲ್ಲಿ ಮಾಸಿಕ ಸರಾಸರಿ ಕನಿಷ್ಠ ಬ್ಯಾಲೆನ್ಸ್ 10,000ರೂ., ಅರೆನಗರ ಪ್ರದೇಶದಲ್ಲಿ 5,000ರೂ. ಆಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ 2,000ರೂ.
Personal Finance : ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೆ ಇಷ್ಟೆಲ್ಲಾ ಕಷ್ಟ, ನಷ್ಟನಾ?
ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ (Axis Bank) ಉಳಿತಾಯ ಖಾತೆಯಲ್ಲಿ ಮೆಟ್ರೋ ನಗರಗಳಲ್ಲಿ 12,000ರೂ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಅರೆನಗರ ಪ್ರದೇಶದಲ್ಲಿ 5,000ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 2,500ರೂ. ನಿರ್ವಹಣೆ ಮಾಡಬೇಕು.