
ನವದೆಹಲಿ(ಮಾ.06): ದಿನೇ ದಿನೇ ಏರುತ್ತಿರುವ ತೈಲ ಬೆಲೆಯನ್ನು ಹತೋಟಿಗೆ ತರಲು ತೈಲ ಪೂರೈಕೆ ಮೇಲಿನ ನಿರ್ಬಂಧ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿರುವ ಭಾರತಕ್ಕೆ ಸೌದಿ ಅರೇಬಿಯಾ ಗುರುವಾರ ತಿರುಗೇಟು ನೀಡಿದೆ. ನಮ್ಮಿಂದ ಬ್ಯಾರೆಲ್‌ಗೆ ಕೇವಲ 19 ಡಾಲರ್ ಕೊಟ್ಟು ಖರೀದಿಸಿ ಸಂಗ್ರಹಿಸಿ ಇಟ್ಟಿರುವ ತೈಲ ಬಳಸಿ ಎಂದು ಭಾರತಕ್ಕೆ ತಿವಿದಿದೆ.
‘ತೈಲ ಬೆಲೆ ಏರಿಕೆ ಜನರು ಹಾಗೂ ಆರ್ಥಿಕತೆಗೆ ಹೊರೆ ಆಗುತ್ತಿದೆ. ಹೀಗಾಗಿ ಪೂರೈಕೆಯ ನಿರ್ಬಂಧವನ್ನು ತೈಲ ಉತ್ಪಾದಕ ದೇಶಗಳು ಸಡಿಲಿಸಬೇಕು’ ಎಂದು ಇತ್ತೀಚೆಗೆ ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತೈಲ ಉತ್ಪಾದಕ ದೇಶಗಳ ‘ಒಪೆಕ್’ ಒಕ್ಕೂಟಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಸೌದಿ ಅರೇಬಿಯಾ ಇಂಧನ ಸಚಿವ ಅಬ್ದುಲ್ ಅಜೀಜ್ ಸಲ್ಮಾನ್, ‘ಕಳೆದ ವರ್ಷ ಭಾರತವು ಅತಿ ಅಗ್ಗದ ದರಕ್ಕೆ ತೈಲ ಖರೀದಿಸಿ, ಸಂಗ್ರಹಿಸಿ ಇಟ್ಟಿದೆ. ಅದನ್ನು ಈಗ ಬಳಕೆ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಭಾರತವು 2020ರ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ 16.71 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿತ್ತು. ಇವುಗಳನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ, ಕರ್ನಾಟಕದ ಮಂಗಳೂರು ಹಾಗೂ ಪಾದೂರು ತೈಲ ಸಂಗ್ರಹಾಗಾರಗಳಲ್ಲಿ ಸೇಖರಿಸಿ ಇಟ್ಟಿದೆ. ಇವನ್ನು ಕೇವಲ 19 ಡಾಲರ್‌ಗೆ (ಪ್ರತಿ ಬ್ಯಾರೆಲ್‌ಗೆ) ಭಾರತ ಖರೀದಿಸಿತ್ತು ಎಂದು 2020ರ ಸೆಪ್ಟೆಂಬರ್ 21ರಂದು ರಾಜ್ಯಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಹೇಳಿದ್ದರು.
ಆದರೆ ಈಗ ಬ್ಯಾರಲ್ ತೈಲ ಬೆಲೆ 68 ಡಾಲರ್ ತಲುಪಿದೆ. ಅಂದರೆ 7 ತಿಂಗಳಲ್ಲಿ 49 ಡಾಲರ್‌ನಷ್ಟು ಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.