ಶೀಘ್ರ ಪೆಟ್ರೋಲ್ 100, ಗ್ಯಾಸ್ ಬೆಲೆ 1000ಕ್ಕೆ?| ತೈಲ ಪೂರೈಕೆ ಕಡಿತ ಮುಂದುವರಿಕೆಗೆ ಒಪೆಕ್ ನಿರ್ಧಾರ| ಪೂರೈಕೆ ಸಹಜಕ್ಕೆ ಭಾರತ ಇಟ್ಟಿದ್ದ ಬೇಡಿಕೆಗೆ ನಕಾರ| ಇದರ ಬೆನ್ನಲ್ಲೇ ಕಚ್ಚಾತೈಲ ಬೆಲೆ 4 ಡಾಲರ್ ಜಿಗಿತ
ಫ್ರಾಂಕ್‌ಫರ್ಟ್/ನವದೆಹಲಿ(ಮಾ.06): ತೈಲ ಉತ್ಪಾದನೆ ಹೆಚ್ಚಿಸುವ ಜತೆಗೆ ಅವಲಂಬಿತ ದೇಶಗಳಿಗೆ ಪೂರೈಕೆ ಹೆಚ್ಚಿಸಬೇಕು ಎಂದು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಮಾಡಿದ ಮನವಿಗೆ ತೈಲ ಉತ್ಪಾದಕ ದೇಶಗಳ ಒಕ್ಕೂಟವಾದ ‘ಒಪೆಕ್’ ನಿರಾಕರಿಸಿದೆ. ಇದರಿಂದಾಗಿ ಪೂರೈಕೆ ಕುಂಠಿತಗೊಳ್ಳುವುದು ಮುಂದುವರಿಯಲಿದ್ದು, ಕಚ್ಚಾತೈಲ ಬೆಲೆ ಒಂದೇ ದಿನ 4 ಡಾಲರ್‌ನಷ್ಟುನೆಗೆದಿದೆ. ಪರಿಣಾಮ ಶೀಘ್ರವೇ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರು. ಹಾಗೂ ಎಲ್‌ಪಿಜಿ ಸಿಲಿಂಡರ್ ಬೆಲೆ 1000 ರು. ತಲುಪುವ ಆತಂಕ ಎದುರಾಗಿದೆ.
ಗುರುವಾರ ಸೌದಿ ಅರೇಬಿಯಾ ನೇತೃತ್ವದ ಒಪೆಕ್ ದೇಶಗಳು ಆನ್‌ಲೈನ್‌ನಲ್ಲಿ ಸಭೆ ನಡೆಸಿದ್ದವು. ಈ ಸಭೆಯಲ್ಲಿ ತೈಲ ಉತ್ಪಾದನೆ ಹಾಗೂ ಪೂರೈಕೆಯನ್ನು ಹೆಚ್ಚಿಸುವ ನಿರ್ಧಾರ ನಿರೀಕ್ಷಿಸಲಾಗಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದರು.
ಆದರೆ ಇದಕ್ಕೆ ವ್ಯತಿರಿಕ್ತ ನಿರ್ಧಾರ ಕೈಗೊಂಡಿರುವ ಒಪೆಕ್ ದೇಶಗಳು, ‘ಕೊರೋನಾ ವೈರಸ್ ನಿಯಂತ್ರಿಸಲು ಹೇರಲಾದ ನಿರ್ಬಂಧಗಳು ಇನ್ನೂ ವಿಶ್ವದ ಹಲವು ಭಾಗಗಳಲ್ಲಿ ಹಾಗೆಯೇ ಇವೆ. ಈ ನಿರ್ಬಂಧದಿಂದ ಬೇಡಿಕೆ ಇನ್ನಷ್ಟುಕುಂಠಿತವಾಗಬಹುದು. ಹೀಗಾಗಿ ಸದ್ಯದ ಮಟ್ಟಿಗೆ ಪೂರೈಕೆ ಹೆಚ್ಚಿಸದೇ ಇರುವುದೇ ಉತ್ತಮ’ ಎಂದು ನಿರ್ಧಾರ ಕೈಗೊಂಡಿವೆ.
ಇದರ ಬೆನ್ನಲ್ಲೇ, ಕಚ್ಚಾತೈಲ ಬೆಲೆ ಶೇ.1.26ರಷ್ಟುಏರಿದೆ. ಗುರುವಾರ 64.73 ಡಾಲರ್ ಇದ್ದ 1 ಬ್ಯಾರೆಲ್ ತೈಲ ಬೆಲೆ, ಶುಕ್ರವಾರ 68.11 ಡಾಲರ್‌ಗೆ ಹೆಚ್ಚಿದೆ. ಹೀಗಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರು., ಡೀಸೆಲ್ ಬೆಲೆ 90 ರು. ಹಾಗೂ ಎಲ್‌ಪಿಜಿ ಬೆಲೆ 1000 ರು. ಗಡಿ ದಾಟುವುದು ಖಚಿತ ಎಂದು ಹೇಳಲಾಗುತ್ತಿದೆ.
ಪ್ರಧಾನ್ ಮನವಿಗಿಲ್ಲ ಬೆಲೆ:
ಭಾರತದಲ್ಲಿ ತೈಲ ಬೆಲೆ ದಿನೇ ದಿನೇ ಏರುತ್ತಿರುವುದನ್ನು ಇತ್ತೀಚೆಗೆ ಪ್ರಸ್ತಾಪಿಸಿದ್ದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ‘ದೇಶದಲ್ಲಿ ತೈಲ ಬೆಲೆ ಹೆಚ್ಚುತ್ತಿರುವ ಕಾರಣ ಜನರು ಹಾಗೂ ಆರ್ಥಿಕತೆ ಮೇಲೆ ಹೊರೆ ಉಂಟಾಗುತ್ತಿದೆ. ಹಾಗಾಗಿ ತೈಲ ಉತ್ಪಾದಕ ದೇಶಗಳು ಪೂರೈಕೆ ಮೇಲಿನ ನಿರ್ಬಂಧ ಸಡಿಲಿಸಬೇಕು. ಇದರಿಂದ ದೇಶದಲ್ಲಿನ ತೈಲ ಬೆಲೆ ಹತೋಟಿಗೆ ಬರಲಿದೆ’ ಎಂದಿದ್ದರು