Raichuru: ಆಹಾರ ಉತ್ಪನ್ನಗಳಲ್ಲಿ 'ಸಮೃದ್ಧಿ' ಗೆಲವಿನ ಹಾದಿ ಹಿಡಿದ ಸ್ಟಾರ್ಟಪ್

By Kannadaprabha News  |  First Published Aug 7, 2023, 11:52 AM IST

ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ತಂದರೆ, ರೈತರಿಗೂ ಅನುಕೂಲ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವವರಿಗೆ ನೆರವಾಗುತ್ತದೆ ಎಂಬ ಉದ್ದೇಶದಿಂದ ಆರಂಭವಾದ ಸ್ಟಾರ್ಟ್ ಅಪ್ ಸಮೃದ್ಧಿ. ಇದು ಬೆಳೆಯುತ್ತಿರುವುದು ಹೇಗೆ?


ರಾಯಚೂರು: ಮನುಷ್ಯನನ್ನು ಆರೋಗ್ಯವಾಗಿಡಬೇಕಾದ ಆಹಾರ ಉತ್ಪನ್ನಗಳೇ ವಿಷವಾಗುತ್ತಿರುವ ಜಮಾನದಲ್ಲಿ ಅದೇ ಆಹಾರ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಂಡು, ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಸಮೃದ್ಧಿ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. 

ಕೃಷಿ ಪದವಿ ಪಡೆದ ಯುವಕ ಮೋಹನ ಕುಮಾರ ಬಿ. ವರ್ಷದ ಹಿಂದೆ ಆರಂಭಿಸಿದ ಸಮೃದ್ಧಿ ಆಹಾರ ಉತ್ಪನ್ನಗಳ ಉದ್ಯಮ ಜಾಲವು ಎಲ್ಲೆಡೆ ವಿಸ್ತರಿಸುತ್ತಿದ್ದು, ಒಂದೆಡೆ ರೈತರಿಗೆ ಮತ್ತೊಂದೆಡೆ ಗ್ರಾಹಕರಿಗೆ ಉಪಯೋಗವಾಗುವಂತಹ ಕಾರ್ಯವು ವೇಗವಾಗಿ ಸಾಗುತ್ತಿದೆ. ಸ್ಥಳೀಯ ನಿವಾಸಿಯಾಗಿರುವ ಮೋಹನ ಕುಮಾರ ಬಿ.ಇಲ್ಲಿಯೇ ಹುಟ್ಟಿ-ಬೆಳೆದು,ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೃಷಿ ಹಾಗೂ ಎಂಎಸ್ಸಿ (ಕೃಷಿಯಲ್ಲಿ ಅರ್ಥಶಾಸ್ತ್ರ) ಪದವಿಗಳನ್ನು ಪಡೆದುಕೊಂಡು, ಅದೇ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಸಮೃದ್ಧಿ ಆಹಾರ ಉತ್ಪನ್ನಗಳ ಕಂಪನಿಯನ್ನು ಕಟ್ಟಿ ಯಶಸ್ಸಿನ ಹಾದಿಯನ್ನು ಕಂಡುಕೊಂಡಿದ್ದಾರೆ. 

Tap to resize

Latest Videos

ಒಂದು ವರ್ಷದ ಹಿಂದೆ ಒಂದೆರಡು ಲಕ್ಷಗಳಲ್ಲಿ ಆರಂಭಿಸಿದ ಸಮೃದ್ಧಿ ಬ್ರಾಂಡಿನ ಕಂಪನಿಯಲ್ಲಿ ಗುಣಮಟ್ಟದ ವಿವಿಧ ಆಹಾರ ಧಾನ್ಯಗಳ ಉತ್ಪಾದನೆ ಅದರಲ್ಲಿಯೂ ಸಿರಿಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜವೆ ಗೋಧಿಹಿಟ್ಟು, ರವೆ, ಇಡ್ಲಿ ರವೆ, ನವಣೆ ರವೆ, ನವಣೆ ಹಿಟ್ಟು, ರಾಗಿ ಹಿಟ್ಟು ಸೇರಿ ಇತರೆ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಿ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿರುವ ಆಹಾರ ಸಂಸ್ಕರಣಾ ಘಟಕದಲ್ಲಿ ಅವನ್ನು ಸಂಸ್ಕರಿಸುತ್ತಿದ್ದಾರೆ. ತಮ್ಮದೇ ಬ್ರಾಂಡಿನ ಪೊಟ್ಟಣಗಳಿಗೆ ಸಮೃದ್ಧಿ ಉತ್ಪನ್ನಗಳಿಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೊತೆಗೆ ಸರ್ಕಾರದ ಆಹಾರ ಉತ್ಪನ್ನದ ಪ್ರಮಾಣಿಕೃತಗೊಳಿಸಿದ್ದು, ಸಮೃದ್ಧಿ ಕಂಪನಿ ಆರಂಭದಲ್ಲಿ ಕೆಲ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ಮೀರಿ ಇಂದು ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಸಂಸ್ಥೆ ಮಾಡಿ ಹೆಸರು ಗಳಿಸಿದೆ.

ಎಂಜಿನಿಯರ್ ವೃತ್ತಿ ಬಿಟ್ಟು ಲಕ್ಷ ಲಕ್ಷ ದುಡಿಯೋ ಈತನ ಬ್ಯಸಿನೆಸ್ ಯಾವ್ದು?
 
ಸಮೃದ್ಧಿ ಉತ್ಪನ್ನಗಳು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿ ನಿಲಯಗಳಿಗೆ, ರಿಮ್ಸ್ ಬೋಧಕ ಆಸ್ಪತ್ರೆ ಸೇರಿ ರಾಯಚೂರಿನ ಪ್ರಮುಖ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ನವಣೆ, ರಾಗಿ ಮತ್ತು ಜವೆ ಗೋಧಿ ಉತ್ಪನ್ನ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಧಾರವಾಡ, ಬೆಂಗಳೂರಿಗೂ ಸಮೃದ್ಧಿ ಪೂರೈಸಲಾಗುತ್ತಿದೆ. ಇಷ್ಟೇ ಅಲ್ಲದೇ ಗ್ರಾಹಕರೇ ನೇರವಾಗಿ ಉತ್ಪನ್ನಗಳನ್ನು ಪಡೆಯುವುದರ ಜೊತೆಗೆ ಅಂಗಡಿ, ಮಾಲ್‌ಗಳಲ್ಲಿಯೂ ಸಹ ಉತ್ಪನ್ನ ದೊರೆಯುವಂತೆ ಮಾಡಲಾಗುತ್ತಿದೆ.

ರೈತರಿಂದ ಖರೀದಿಸಿದ ಧಾನ್ಯಗಳನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಯೇ ನಿಗದಿತ ದರವನ್ನು ಕಟ್ಟಿ ಸಂಸ್ಕರಿಸಿ, ಪ್ಯಾಕೇಟ್‌ಗಳ ಮುಖಾಂತರ ಸರಬರಾಜು ಮಾಡುತ್ತಿದ್ದು, ಒಂದೇ ವರ್ಷದಲ್ಲಿ 36 ಲಕ್ಷ ವ್ಯಹವಾರವನ್ನು ಸಮೃದ್ಧಿ ಕಂಪನಿ ಮಾಡುವುದರ ಮುಖಾಂತರ ಹೊಸ ಭರವಸೆ ಮೂಡಿಸಿದೆ.

ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಿರಿಧಾನ್ಯಗಳ ಮಹತ್ವ ಎಲ್ಲೆಡೆ ಪಸರಿಸುತ್ತಿರುವುದನ್ನು ಗಮನಿಸಿದ ಮೋಹನ ಕುಮಾರ ಬಿ. ಸಮೃದ್ಧಿ ಉತ್ಪನ್ನಗಳ ಉದ್ಯಮದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿದ್ದು, ಸಿರಿಧಾನ್ಯಗಳು, ಜವೆ ಗೋಧಿಯನ್ನು ರೈತರಿಂದ ನೇರವಾಗಿ ಖರೀದಿಸುವುದರಿಂದ ಅವರಿಗೂ ಲಾಭ, ಅದನ್ನು ಸಂಸ್ಕರಿಸಿ ಗುಣಮಟ್ಟದ ರವೆ, ಹಿಟ್ಟನ್ನು ಜನರಿಗೊದಗಿಸಿ ಅವರ ಆರೋಗ್ಯದ ಜೀವನಕ್ಕೂ ಅನುವು ಮಾಡಿಕೊಡುವ ಕಾರ್ಯವನ್ನು ಮಾಡುತ್ತಿರುವುದು ತೃಪ್ತಿದಾಯಕ ಎಂದು ಮೋಹನ ಕುಮಾರ ಬಿ. ಹೇಳುತ್ತಾರೆ.

Bengaluru: AI ಬಂತು.. ಈ ಸ್ಟಾರ್ಟಪ್‌ನ ಶೇ. 90 ಜನರ ಕೆಲಸ ಹೋಯ್ತು: ನಿಮ್ಮ ಉದ್ಯೋಗಕ್ಕೂ ಕುತ್ತು ಬರ್ಬೋದು ಹುಷಾರ್!

ಮುಂದಿನ ದಿನಗಳಲ್ಲಿ ಸಮೃದ್ಧಿ ಉತ್ಪನ್ನಗಳ ವ್ಯಾಪಾರವನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಿದ್ದು ಅದರಡಿಯಲ್ಲಿಯೇ ಫ್ಲಿಪ್ ಕಾರ್ಟ್. ಅಮೇಜಾನ್‌ನಲ್ಲಿ ಸಮೃದ್ಧಿ ಉತ್ಪನ್ನಗಳ ಮಾರಾಟ ಮಾಡುವುದಕ್ಕಾಗಿ ಈಗಾಗಲೇ ಕಂಪನಿಗಳೊಂದಿಗೆ ಚರ್ಚಿಸಿದ್ದಾರೆ. 

click me!