OpenAI ಸಿಇಒ ಸ್ಥಾನಕ್ಕೆ ಮರಳಿದ ಸ್ಯಾಮ್ ಆಲ್ಟ್ ಮನ್; ಸುಖಾಂತ್ಯ ಕಂಡ ಚಾಟ್ ಜಿಪಿಟಿ ಮಾತೃಸಂಸ್ಥೆ ಬಿಕ್ಕಟ್ಟು

By Suvarna NewsFirst Published Nov 22, 2023, 3:58 PM IST
Highlights

ಕಳೆದ ನಾಲ್ಕೈದು ದಿನಗಳಿಂದ ಓಪನ್‌ಎಐ ಸಂಸ್ಥೆಯಲ್ಲಿ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳಿಗೆ ಇಂದು ತೆರೆ ಬಿದ್ದಿದೆ. ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್ ಮನ್ ಅವರನ್ನು ಓಪನ್ ಎಐ ಸಿಇಒ ಹುದ್ದೆಗೆ ಮರಳಿ ಕರೆತರಲಾಗಿದೆ. 

ನವದೆಹಲಿ (ನ.22): ಚಾಟ್ ಜಿಪಿಟಿ ಮೂಲಕ ಜನಪ್ರಿಯತೆ ಗಳಿಸಿದ ಕೃತಕ ಬುದ್ಧಿಮತ್ತೆ ಸಂಸ್ಥೆ  ಓಪನ್‌ಎಐ ವಜಾಗೊಳಿಸಿದ್ದ ಸಿಇಒ ಸ್ಯಾಮ್ ಆಲ್ಟ್ ಮನ್ ಅವರನ್ನು ಬುಧವಾರ ಮರಳಿ ಕರೆತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಓಪನ್ ಎಐ, ಹೊಸ ಒಪ್ಪಂದವೊಂದರ ಮೂಲಕ ಸ್ಯಾಮ್ ಆಲ್ಟಮನ್ ಅವರನ್ನು ಮರಳಿ ಸಿಇಒ ಹುದ್ದೆಗೆ ನೇಮಕ ಮಾಡಿರೋದಾಗಿ ತಿಳಿಸಿದೆ.  ಬ್ರೆಟ್ ಟೈಲರ್, ಲಾರ್ರೆ ಸಮ್ಮರ್ಸ್ ಹಾಗೂ ಆಡಂ ಡಿ ಏಂಜೆಲೊ ಅವರನ್ನೊಳಗೊಂಡ ಹೊಸ ಮಂಡಳಿ ರಚಿಸಿದ ಬಳಿಕ ಈ ಬದಲಾವಣೆ ಮಾಡಲಾಗಿದೆ. ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಶುಕ್ರವಾರ ತಡರಾತ್ರಿ ಇದ್ದಕ್ಕಿದ್ದಂತೆ ಹುದ್ದೆಯಿಂದ ವಜಾ ಮಾಡಲಾಗಿತ್ತು. ಈ ನಡುವೆ ಸೋಮವಾರವಷ್ಟೇ ಆಲ್ಟ್ ಮನ್ ಮೈಕ್ರೋಸಾಫ್ಟ್ ಸೇರಿದ್ದರು. ಈ ಬಗ್ಗೆ  ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಎಕ್ಸ್ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದರು. ಅಲ್ಲದೆ, ಅವರು ಹೊಸ ಮುಂದುವರಿದ ಎಐ ಸಂಶೋಧನಾ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ನಾಡೆಲ್ಲ ನೀಡಿದ್ದರು. 

' ಸ್ಯಾಮ್ ಆಲ್ಟ್‌ಮನ್ ಒಪನ್ ಎಐಗೆ ಸಿಇಒ ಆಗಿ ಹಿಂತಿರುಗಲು ನಾವು ಹೊಸ ಒಪ್ಪಂದ ಮಾಡಿಕೊಂಡಿದ್ದೇವೆ. ಇದರ ಭಾಗವಾಗಿ ಬ್ರೆಟ್ ಟೈಲರ್, ಲ್ಯಾರೆ ಸಮ್ಮರ್ಸ್ ಹಾಗೂ ಆಡಂ ಡಿ ಆಂಜಿಲೋ ಅವರನ್ನೊಳಗೊಂಡ ಹೊಸ ಮಂಡಳಿಯನ್ನು ರಚಿಸಲಾಗಿದೆ'ಎಂದು ಎಕ್ಸ್ ಪೋಸ್ಟ್ ನಲ್ಲಿ ಒಪನ್ ಎಐ ಮಾಹಿತಿ ನೀಡಿದೆ. ಇನ್ನು ಸ್ಯಾಮ್ ಆಲ್ಟ್‌ಮನ್ ಕೂಡ ಒಪನ್ ಎಐಗೆ ಹಿಂತಿರುಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ಒಪನ್ ಎಐಗೆ ಹಿಂತಿರುಗಲು ನಾವು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

Twitch ಮಾಜಿ ಸಿಇಒ ಎಮ್ಮೆಟ್ ಶಿಯರ್ ಒಪನ್ ಎಐ ನೂತನ ಸಾರಥಿ; ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್‌ಮನ್

'ನಾನು ಒಪನ್ ಎಐಯನ್ನು ಪ್ರೀತಿಸುತ್ತೇನೆ. ಈ ತಂಡ ಹಾಗೂ ಅದರ ಕಾರ್ಯಗಳನ್ನು ಒಟ್ಟಿಗಿಡಲು ನಾನು ಕಳೆದ ಕೆಲವು ದಿನಗಳಿಂದ ಪ್ರಯತ್ನಿಸಿದ್ದೇನೆ. ಇನ್ನು ಭಾನುವಾರ ನಾನು ಮೈಕ್ರೋಸಾಫ್ಟ್ ಸೇರಲು ತೆಗೆದುಕೊಂಡ ನಿರ್ಧಾರ ನನಗೆ ಹಾಗೂ ನನ್ನ ತಂಡಕ್ಕೆ ಉತ್ತಮ ದಾರಿಯಾಗಿತ್ತು. ಹೊಸ ಮಂಡಳಿ ಹಾಗೂ ಸತ್ಯ (ನಾಡೆಲ್ಲ) ಬೆಂಬಲದೊಂದಿಗೆ ನಾನು ಮರಳಿಒಪನ್ ಎಐಗೆ ಹಿಂತಿರುಗಲು ಎದುರು ನೋಡುತ್ತಿದ್ದೇನೆ' ಎಂದು ಆಲ್ಟ್ ಮನ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 

ಒಪನ್ ಎಐ ಸಂಸ್ಥೆ ಶುಕ್ರವಾರದಿಂದ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಸ್ಯಾಮ್ ಆಲ್ಟ್ ಮನ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಮೀರಾ ಮುರತಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿತ್ತು. ಆದರೆ, ಸೋಮವಾರ ಟ್ವಿಚ್ ಸಂಸ್ಥೆ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಆದರೆ, ಈಗ ಮತ್ತೆ ಸ್ಯಾಮ್ ಆಲ್ಟ್ ಮನ್ ಅವರನ್ನು ಮರಳಿ ಕರೆತರಲು ನಿರ್ಧರಿಸಲಾಗಿದೆ. ಮಂಡಳಿಗೆ ಆಲ್ಟ್ ಮನ್ ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ ಎಂಬ ಕಾರಣ ನೀಡಿ ಅವರನ್ನು ಒಪನ್ ಎಐ ಸಿಇಒ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಟ್ವಿಚ್ ನಲ್ಲಿ 210,000 ಡಾಲರ್ ಆದಾಯ ಗಳಿಸುತ್ತಿದ್ದ ಎಮ್ಮೆಟ್ ಶಿಯರ್;ಒಪನ್ಎಐ ಸಿಇಒ ಒಟ್ಟು ಸಂಪತ್ತು ಎಷ್ಟು ಗೊತ್ತಾ?

ಇನ್ನು ಸ್ಯಾಮ್ ಆಲ್ಟ್‌ಮನ್ ಅವರ ಎಕ್ಸ್ ಪೋಸ್ಟ್ ಗೆ  ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಪ್ರತಿಕ್ರಿಯಿಸಿದ್ದು, ಸುಭದ್ರ ಹಾಗೂ ಪರಿಣಾಮಕಾರಿ ಆಡಳಿತಕ್ಕೆ ಇದು ಮೊದಲ ಅಗತ್ಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. 'ಒಪನ್ ಎಐ ಮಂಡಳಿಯಲ್ಲಿನ ಬದಲಾವಣೆಗಳಿಂದ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ. ಹೆಚ್ಚಿನ ಸುಭದ್ರ, ಮಾಹಿತಿ ಹೊಂದಿರುವ ಹಾಗೂ ಪರಿಣಾಮಕಾರಿ ಆಡಳಿತದ ಹಾದಿಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ನಾವು ಭಾವಿಸುತ್ತೇವೆ. ಸ್ಯಾಮ್, ಗ್ರೆಗ್ ಹಾಗೂ ನಾನು ಈ ಬಗ್ಗೆ ಚರ್ಚಿಸಿದ್ದೇವೆ ಹಾಗೂ ಅವರು ಒಪನ್ ಎಐ ನಾಯಕತ್ವದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಆ ಮೂಲಕ ಅವರಿಬ್ಬರು ಒಪನ್ ಎಐ ಸಂಸ್ಥೆ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮುಂದುವರಿಸಲಿದ್ದಾರೆ. ನಮ್ಮ ಪ್ರಬಲವಾದ ಸಹಭಾಗಿತ್ವವನ್ನು ಒಪನ್ ಎಐಯೊಂದಿಗೆ ಸ್ಥಾಪಿಸಲು ನಾವು ಎದುರು ನೋಡುತ್ತಿದ್ದೇವೆ. ಹಾಗೆಯೇ ನಮ್ಮ ಗ್ರಾಹಕರಿಗೆ ಹಾಗೂ ಪಾಲುದಾರರಿಗೆ ಮುಂದಿನ ಜನರೇಷನ್ ಎಐ ತಂತ್ರಜ್ಞಾನವನ್ನು ಒದಗಿಸೋದರ ಅಗತ್ಯ ಮನಗಂಡಿದ್ದೇವೆ' ಎಂದು ಎಕ್ಸ್ ಪೋಸ್ಟ್ ನಲ್ಲಿ ಅವರು ತಿಳಿಸಿದ್ದಾರೆ. 

click me!