ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಥವಾ ಅಮೆಜಾನ್ ಪೇ ಬಳಸುತ್ತಿದ್ದರೆ ಒಂದು ದಿನದಲ್ಲಿ ಎಷ್ಟು ಮೊತ್ತದ ಯುಪಿಐ ಪಾವತಿ ಮಾಡ್ಬಹುದು ಎಂಬುದು ತಿಳಿದಿದೆಯಾ? ಪ್ರಮುಖ ಯುಪಿಐ ಆಪ್ ಗಳ ದಿನದ ವಹಿವಾಟಿನ ಮಿತಿ ಮಾಹಿತಿ ಇಲ್ಲಿದೆ.
Business Desk: ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಇಂದು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಮಾಲ್ ತನಕ ಎಲ್ಲೆಡೆ ಯುಪಿಐ ಬಳಕೆಯಾಗುತ್ತಿದೆ. ಎನ್ ಸಿಪಿಐ ಹಾಗೂ ಬ್ಯಾಂಕುಗಳು ಕೂಡ ಯುಪಿಐ ಬಳಕೆ ಮಾಡುವಂತೆ ಗ್ರಾಹಕರನ್ನು ಹುರಿದುಂಬಿಸುತ್ತಿರುವ ಕಾರಣ ಹಾಗೂ ನಗದಿನ ಅಗತ್ಯವಿಲ್ಲದೆ ಚಿಕ್ಕ ಮೊತ್ತಗಳನ್ನು ಕೂಡ ಪಾವತಿ ಮಾಡಲು ಈ ವ್ಯವಸ್ಥೆ ಅನುವು ಮಾಡಿಕೊಟ್ಟಿದೆ. ಇದರಿಂದ ಗ್ರಾಹಕರು ಹಾಗೂ ವ್ಯಾಪಾರಿಗಳು ಇಬ್ಬರಿಗೂ ಅನುಕೂಲ ಕೂಡ ಆಗಿದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಮೇಲಿನ ಜನರ ಅವಲಂಬನೆಯನ್ನು ಹೆಚ್ಚಿಸಿವೆ. ಇನ್ನು ಜನರು ಇಡೀ ದಿನ ಎಲ್ಲ ಪಾವತಿಗಳಿಗೂ ಯುಪಿಐ ಬಳಸುತ್ತಾರೆ. ಹೀಗಿರುವಾಗ ಯುಪಿಐ ಪಾವತಿಗೂ ದೈನಂದಿನ ಮಿತಿ ಇರಬೇಕಲ್ಲವೆ? ಹಾಗಾದ್ರೆ ಒಂದು ದಿನದಲ್ಲಿ ಯುಪಿಐ ಮೂಲಕ ಎಷ್ಟು ಮೊತ್ತದ ವಹಿವಾಟು ನಡೆಸಬಹುದು?
ಒಂದು ದಿನಕ್ಕೆ 1 ಲಕ್ಷ ರೂ. ಮಿತಿ
ಒಂದು ದಿನಕ್ಕೆ ಸಾಮಾನ್ಯ ಯುಪಿಐ ವಹಿವಾಟಿನ ಮಿತಿ 1ಲಕ್ಷ ರೂ. 24 ಗಂಟೆಯೊಳಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳಿಗೆ ಯಾವ ಬ್ಯಾಂಕ್ ಕೂಡ ಅವಕಾಶ ನೀಡುವುದಿಲ್ಲ. ಇದರ ಹೊರತಾಗಿ ನೀವು ಯುಪಿಐ ಮೂಲಕ ಒಂದು ದಿನದಲ್ಲಿ ವರ್ಗಾವಣೆ ಮಾಡುವ ಮೊತ್ತ ಕೂಡ ನೀವು ಬಳಸುವ ಅಪ್ಲಿಕೇಷನ್ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನೀವು ಯಾವ ಆಪ್ ಬಳಸುತ್ತೀರಿ ಎಂಬುದರ ಮೇಲೆ ವಹಿವಾಟಿನ ಮಿತಿಯನ್ನು ಹೇಳಬಹುದು. ಹಾಗಾದ್ರೆ ಭಾರತದ ಜನಪ್ರಿಯ ಅಪ್ಲಿಕೇಷನ್ ಗಳಾದ ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ ಹಾಗೂ ಪೇಟಿಎಂ ಆಪ್ ಗಳ ಮೂಲಕ ದಿನದಲ್ಲಿ ಎಷ್ಟು ಪಾವತಿ ಮಾಡಬಹುದು? ನೋಡೋಣ.
ಯುಪಿಐ ಬಳಕೆದಾರರೇ ಎಚ್ಚರ: ನೀವು ಇದನ್ನು ಮಾಡದಿದ್ದರೆ ನಿಮ್ಮ ಯುಪಿಐ ಐಡಿ ಶೀಘ್ರದಲ್ಲೇ ಬಂದ್ ಆಗುತ್ತೆ!
ಪೇಟಿಎಂ
ಎನ್ ಪಿಸಿಐ ಮಾಹಿತಿ ಅನ್ವಯ ಪೇಟಿಎಂ ಒಂದು ದಿನದಲ್ಲಿ ಒಂದು ಲಕ್ಷ ರೂ. ತನಕ ಪಾವತಿಸಲು ಅವಕಾಶ ನೀಡುತ್ತದೆ. ಇದರ ಹೊರತಾಗಿ ಯುಪಿಐ ಪಾವತಿಗೆ ಸಂಬಂಧಿಸಿ ಪೇಟಿಎಂ ಯಾವುದೇ ನಿರ್ಬಂಧಗಳನ್ನು ಹೊಂದಿಲ್ಲ.
ಗೂಗಲ್ ಪೇ
ಗೂಗಲ್ ಪೇ ಅಥವಾ ಜಿಪೇ ಬಳಕೆದಾರರು ಒಂದು ದಿನದಲ್ಲಿ ಯುಪಿಐ ಮೂಲಕ ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣವನ್ನು ಕಳುಹಿಸುವಂತಿಲ್ಲ. ಇದರ ಹೊರತಾಗಿ ಈ ಆಪ್ ಒಂದು ದಿನದಲ್ಲಿ 10ಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸುವುದಿಲ್ಲ ಕೂಡ. ಇದರರ್ಥ ನೀವು ಒಂದು ದಿನದಲ್ಲಿ ಒಂದು ಲಕ್ಷ ರೂ. ತನಕದ ಒಂದೇ ವಹಿವಾಟು ನಡೆಸಬಹುದು ಅಥವಾ ವಿವಿಧ ಮೊತ್ತಗಳ 10 ವಹಿವಾಟುಗಳನ್ನು ನಡೆಸಬಹುದು.
ಯುಪಿಐ ಜೊತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಅಗತ್ಯವೇ? ಇದ್ರಿಂದ ಲಾಭವೇನು, ನಷ್ಟವೇನು?
ಅಮೆಜಾನ್ ಪೇ
ಇನ್ನು ಅಮೆಜಾನ್ ಪೇ ಯುಪಿಐ ಮೂಲಕ ಒಂದು ಲಕ್ಷ ರೂ. ತನಕ ಪಾವತಿ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಆಪ್ ಒಂದು ದಿನದಲ್ಲಿ 20 ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಹೊಸ ಬಳಕೆದಾರರು ಮೊದಲ 24 ಗಂಟೆಗಳಲ್ಲಿ 5,000ರೂ. ತನಕ ಮಾತ್ರ ವಹಿವಾಟು ನಡೆಸಬಹುದು.
ಫೋನ್ ಪೇ
ಫೋನ್ ಪೇ ಕೂಡ ಗೂಗಲ್ ಪೇ ಮಾದರಿಯಲ್ಲೇ ಒಂದು ದಿನಕ್ಕೆ ಒಂದು ಲಕ್ಷ ರೂ. ತನಕ ಪಾವತಿ ಮಿತಿ ಹೊಂದಿದೆ. ಆದರೆ, ಈ ಆಪ್ ಒಂದು ದಿನದಲ್ಲಿ 10 ವಹಿವಾಟುಗಳ ಮಿತಿ ಹೊಂದಿಲ್ಲ. ಹಾಗೆಯೇ ಇದು ಯಾವುದೇ ಗಂಟೆಯ ಮಿತಿ ಕೂಡ ಹೊಂದಿಲ್ಲ.