*ಷೇರು ಮಾರುಕಟ್ಟೆ ಅಸ್ಥಿರತೆ ಹಿನ್ನೆಲೆಯಲ್ಲಿ ಈ ನಿರ್ಧಾರ
*ಮುಂದಿನ ಹಣಕಾಸು ಸಾಲಿನಲ್ಲಿ ಎಲ್ಐಸಿ ಐಪಿಒ
*ಮೇ ಮಧ್ಯಭಾಗದಲ್ಲಿ ಎಲ್ಐಸಿ ಐಪಿಒ
ನವದೆಹಲಿ (ಮಾ.15): ರಷ್ಯಾ-ಉಕ್ರೇನ್ ಯುದ್ಧ ಭಾರತದ ಷೇರು ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದ್ದು, ಕೆಲವು ದಿನಗಳಿಂದ ಅಸ್ಥಿರತೆ ಮನೆ ಮಾಡಿದೆ. ಇಂಥ ಸಮಯದಲ್ಲಿ ದೇಶದ ಅತೀದೊಡ್ಡ ಐಪಿಒ ಎಂದೇ ಪರಿಗಣಿಸಲ್ಪಟ್ಟಿರೋ ಎಲ್ಐಸಿ ಐಪಿಒ ನಡೆಸೋದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಮನೆ ಮಾಡೋ ತನಕ ಕಾದು, ಐಪಿಒ ಆಯೋಜಿಸಲು ಯೋಜಿಸಲಾಗಿದೆ. ಇದ್ರಿಂದ ಬಹುನಿರೀಕ್ಷಿತ ಎಲ್ಐಸಿ ಐಪಿಒ ಈ ಹಣಕಾಸು ಸಾಲಿನಲ್ಲಿ ನಡೆಯೋದು ಕಷ್ಟ. ಹೀಗಾಗಿ ಮಾರುಕಟ್ಟೆ ಸನ್ನಿವೇಶಗಳು ಸ್ಥಿರವಾಗಿದ್ರೆ ಮೇ ಮಧ್ಯಭಾಗದಲ್ಲಿ ಎಲ್ಐಸಿ ಐಪಿಒ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಐಸಿ ಐಪಿಒ ದೇಶದ ಅತೀದೊಡ್ಡ ಐಪಿಒ ಎಂದೇ ಬಿಂಬಿತವಾಗಿದೆ. ಭಾರತೀಯ ಜೀವ ವಿಮಾ ನಿಗಮ (LIC) ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರ ಶೇ.5ರಷ್ಟು ಅಥವಾ ಸುಮಾರು 31.6 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ಬಯಸಿದೆ. ಇದ್ರಿಂದ ಸರ್ಕಾರ ಸುಮಾರು 60,000 ಕೋಟಿ ರೂ. ಆದಾಯ ಗಳಿಸಲು ಯೋಚಿಸಿದೆ. ಮಾರ್ಚ್ ತಿಂಗಳಲ್ಲಿ ಈ ಐಪಿಒ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಎಲ್ ಐಸಿ(LIC) ಭಾರತೀಯ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಗೆ (SEBI) ಫೆಬ್ರವರಿ 13ರಂದು ಐಪಿಒ ಕರಡು ಪ್ರತಿಗಳನ್ನು ಸಲ್ಲಿಸಿದ್ದು, ಮಾರ್ಚ್ 9ರಂದು ಅನುಮತಿ ಪಡೆದಿದೆ. ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವೇ ಆಗಿದ್ದು, 2021-22ನೇ ಸಾಲಿನ ಬಂಡವಾಳ ಹಿಂತೆಗೆತದ ಗುರಿ ತಲುಪಲು ಮಾರ್ಚ್ ನಲ್ಲೇ ಈ ಐಪಿಒ ನಡೆಸಲು ಸರ್ಕಾರ ಯೋಚಿಸಿತ್ತು.
LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!
ಮೇ 12ರ ತನಕ ಕಾಲಾವಕಾಶ
ಮಾರುಕಟ್ಟೆ ನಿಯಂತ್ರಕ ಸೆಬಿ ಈಗಾಗಲೇ ಎಲ್ಐಸಿ ಐಪಿಒಗೆ ಅನುಮತಿ ನೀಡಿದೆ. ಹೀಗಾಗಿ ಈ ಅನುಮತಿ ಅವಧಿ ಮೇ 12ರ ತನಕ ಇರಲಿದೆ. ಹೀಗಾಗಿ ಮೇ 12ರೊಳಗೆ ಐಪಿಒ ನಡೆಸಲು ಎಲ್ಐಸಿ ಸೆಬಿಗೆ ಹೊಸದಾಗಿ ಕಾಗದ ಪತ್ರಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ. ಎಲ್ಐಸಿ ಸೆಬಿಗೆ ಐಪಿಒ ಕರಡು ಪ್ರತಿಗಳನ್ನು ಸಲ್ಲಿಸಿ ಕೇವಲ 22 ದಿನಗಳೊಳಗೇ ಅನುಮತಿ ಪಡೆಯೋ ಮೂಲಕ ದಾಖಲೆ ನಿರ್ಮಿಸಿತ್ತು. ಆದ್ರೆ ರಷ್ಯಾ-ಉಕ್ರೇನ್ ಯುದ್ದ ಸರ್ಕಾರದ ಯೋಜನೆಗಳನ್ನು ಬುಡಮೇಲು ಮಾಡಿದೆ. ಪ್ರಸಕ್ತ ಸನ್ನಿವೇಶದಲ್ಲಿ ಐಪಿಒ ನಡೆಸಿದ್ರೆ ವಿದೇಶಿ ಹೂಡಿಕೆದಾರರು ಹಾಗೂ ಚಿಲ್ಲರೆ ಹೂಡಿಕೆದಾರರು ಐಪಿಒನಿಂದ ದೂರ ಉಳಿಯೋ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಸರ್ಕಾರ ಎಲ್ಐಸಿ ಐಪಿಒ ಪ್ರಸ್ತಾವನೆಯನ್ನು ಮತ್ತೊಮ್ಮೆ ಮರುಪರಿಶೀಲಿಸಲು ಯೋಚಿಸಿದೆ.
ಎಂಬೆಡೆಡ್ ಮೌಲ್ಯ (Embedded value)
ಎಲ್ಐಸಿ ಎಂಬೆಡೆಡ್ ಮೌಲ್ಯ 2021ರ ಸೆಪ್ಟೆಂಬರ್ 30ಕ್ಕೆ ಅನ್ವಯವಾಗುವಂತೆ 5,39,686 ಕೋಟಿ ರೂ. ಆಗಿದೆ. ಎಂಬೆಡೆಡ್ ಮೌಲ್ಯ ಕಂಪನಿಯ ಮೌಲ್ಯಮಾಪಕವಾಗಿದೆ. ಮೇ ಮಧ್ಯಭಾಗದ ತನಕ ಇದೇ ಎಂಬೆಡೆಡ್ ಮೌಲ್ಯ ಇರಲಿದೆ. ಒಂದು ವೇಳೆ ಮೇ ಮಧ್ಯಭಾಗದ ಬಳಿಕ ಎಲ್ಐಸಿ ಐಪಿಒ ನಡೆಯೋದಾದದ್ರೆ ಎಂಬೆಡೆಡ್ ಮೌಲ್ಯವನ್ನು ಮತ್ತೆ ಲೆಕ್ಕಾಚಾರ ಮಾಡಬೇಕಾಗುತ್ತದೆ.
ಎಷ್ಟು ಮೀಸಲಿಡಲಾಗಿದೆ?
ಎಲ್ಐಸಿ ಶೇ.50ರಷ್ಟನ್ನು ಅರ್ಹತೆಯುಳ್ಳ ಸಾಂಸ್ಥಿಕ ಖರೀದಿದಾರರಿಗೆ ಅಥವಾ QIBs ಮೀಸಲಿಟ್ಟಿದ್ದಾರೆ. ಶೇ.15ರಷ್ಟನ್ನು ಸಾಂಸ್ಥಿಕವಲ್ಲದ ಹರಾಜುದಾರರಿಗೆ ಮೀಸಲಿಟ್ಟಿದ್ದಾರೆ. ಶೇ.35 ಚಿಲ್ಲರೆ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು QIBs ಭಾಗವೇ ಆಗಿದ್ದಾರೆ.