
ನವದೆಹಲಿ (ಮಾ. 15): ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡದಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳು ಸೂಚನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ತೈಲ ಮಾತ್ರವಲ್ಲದೆ ಉಕ್ರೇನ್ ಯುದ್ಧದ ಪರಿಣಾಮ ಗಗನಕ್ಕೇರಿರುವ ಲೋಹ ಮತ್ತು ರಸಗೊಬ್ಬರ ಬೆಲೆ ಏರಿಕೆ ನಿಯಂತ್ರಣದ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಪಂಚರಾಜ್ಯ ಚುನಾವಣೆ ಬಳಿಕ ಪೆಟ್ರೋಲ್ ಬೆಲೆ 15 ರು.ನಷ್ಟುಏರಬಹುದು ಎಂದು ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಈ ಸುದ್ದಿ ಹೊರಬಂದಿದೆ.‘ಕೇಂದ್ರ ಸರ್ಕಾರ ಇಂಧನ ಬೆಲೆ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಿದೆ. ಇಷ್ಟೇ ಗಮನವನ್ನು ನೀಡಬೇಕಾದ ಇತರ ಕ್ಷೇತ್ರಗಳೂ ಇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
‘ತೈಲ ಬೆಲೆ ಏರಿಕೆಯು ಮನೆ, ಉದ್ಯಮ, ಸೇವಾ ಕ್ಷೇತ್ರಗಳ ವೆಚ್ಚವನ್ನೂ ಹೆಚ್ಚಿಸಲಿದೆ. ರಷ್ಯಾ ಯುದ್ಧದ ಕಾರಣ ಲೋಹ ಮತ್ತು ಇತರ ಸರಕುಗಳ ಬೆಲೆಗಳ ಏರಿಕೆಯು ಪೂರೈಕೆ ಕೊರತೆಯನ್ನು ಸೃಷ್ಟಿಸುವುದರ ಜೊತೆಗೆ ಹಣದುಬ್ಬರವನ್ನು ಹೆಚ್ಚಿಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ, ಅಲ್ಯೂಮಿನಿಯಂ ಮತ್ತಿತರ ಲೋಹಗಳ ಬೆಲೆ ಏರಿಕೆಯು ಆಟೋಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಸೂರ್ಯಕಾಂತಿ ಎಣ್ಣೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಬದಲಿ ಮಾರುಕಟ್ಟೆಮೂಲಗಳ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: EPF Interest Rate 2021-22: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರ ಶೇ. 8.1ಕ್ಕೆ ಇಳಿಕೆ!
ರಾಹುಲ್ ಹೇಳಿಕೆಯಿಂದ ಪೆಟ್ರೋಲ್ ದಾಸ್ತಾನು ಶೇ.20ರಷ್ಟುಹೆಚ್ಚಳ: ಕೇಂದ್ರ:ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆಯಾಗಲಿದೆ. ಹಾಗಾಗಿ ಕೂಡಲೇ ಸಂಗ್ರಹಿಸಿಕೊಳ್ಳಿ’ ಎಂದು ಕರೆ ನೀಡಿದ ಪರಿಣಾಮ ಶೇ.20ರಷ್ಟುತೈಲ ಖರೀದಿ ಹಾಗೂ ದಾಸ್ತಾನು ಹೆಚ್ಚಿದೆ ಎಂದು ತೈಲ ಸಚಿವ ಹರ್‌ದೀಪ್ ಸಿಂಗ್ ಪುರಿ ಆರೋಪಿಸಿದ್ದಾರೆ.
ಸೋಮವಾರ ಸಂಸತ್ ಅಧಿವೇಶನದಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ ದರ ನಿಯಂತ್ರಣಕ್ಕೆ ಸಾಕಷ್ಟುಯತ್ನ ನಡೆಸಿದೆ. ಆದರೆ, ರಾಹುಲ್ ಗಾಂಧಿ ಹೇಳಿಕೆ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಶೇ.20ರಷ್ಟುಹೆಚ್ಚಾಗಿದೆ. ಒಂದು ಹೇಳಿಕೆಯಿಂದ ಶೇ.20ರಷ್ಟುತೈಲ ದಾಸ್ತಾನಾಗಿರುವುದು ನಾಚಿಕೆಗೇಡಿನ ವಿಷಯ’ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Russia Ukraine War ಅಮೆರಿಕ ನಡೆಯಿಂದ ಕಚ್ಚಾ ತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ 130 ದಾಟಿದರೂ ಆಶ್ಚರ್ಯವಿಲ್ಲ!
‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 130 ದಿನಗಳಿಂದ ತೈಲ ದರ ಸ್ಥಿರವಾಗಿದೆ. ಹೀಗಾಗಿ ಚುನಾವಣೆ ಮುಗಿದ ನಂತರದಲ್ಲಿ ತೈಲ ದರ 12 ರು. ವರೆಗೂ ಏರಿಕೆಯಾಗುವ ಸಂಭವ ಇದೆ’ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಾ.5ರಂದು ‘ಚುನಾವಣೆ ಮುಗಿದ ನಂತರದಲ್ಲಿ ತೈಲ ದರ ಭಾರೀ ಏರಿಕೆಯಾಗಲಿದೆ. ಈಗಲೇ ಸಾಧ್ಯವಾದಷ್ಟುಸಂಗ್ರಹಿಸಿಕೊಳ್ಳಿ’ ಎಂದು ಜನರಿಗೆ ಕರೆ ನೀಡಿದ್ದರು.
ಪಾಕಿಸ್ತಾನದಲ್ಲಿ ಕೇವಲ 5 ದಿನಕ್ಕಾಗುವಷ್ಟುಡೀಸೆಲ್ ದಾಸ್ತಾನು: ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಪಾಕಿಸ್ತಾನದಲ್ಲಿ ಇಂಧನ ಕೊರತೆ ಉಂಟಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಕೇವಲ 5 ದಿನಕ್ಕಾಗುವಷ್ಟುಮಾತ್ರ ಡೀಸೆಲ್ ದಾಸ್ತಾನಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಯುದ್ಧದಿಂದಾಗಿ ವಿಶ್ವಾದ್ಯಂತ ಇಂಧನ ಕೊರತೆ ಎದುರಾಗಿದೆ. ಹಾಗಾಗಿ ಈ ಕುರಿತು ತೈಲ ಕಂಪನಿಗಳ ಸಲಹಾತ್ಮಕ ಮಂಡಳಿ(ಒಸಿಎಸಿ) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲದೇ ತೈಲ ಕಂಪನಿಗಳನ್ನು ಹೆಚ್ಚು ಅಪಾಯಕಾರಿ ವರ್ಗಕ್ಕೆ ಸೇರಿಸಿ ಪಾಕಿಸ್ತಾನ ಬ್ಯಾಂಕ್‌ಗಳು ಸಾಲ ನೀಡಲು ಸಹ ನಿರಾಕರಿಸಿವೆ ಎಂದು ವರದಿ ಹೇಳಿದೆ.
ಅಮೆರಿಕದಲ್ಲಿ ಶೇ.21ರಷ್ಟುಇಂಧನ ಕೊರತೆ ಎದುರಾಗಿದ್ದು, ಇದು ಕೋವಿಡ್ ಪೂರ್ವದ 5 ವರ್ಷಗಳ ಸರಾಸರಿಗಿಂತಲೂ ಕಡಿಮೆಯಾಗಿದೆ. ಯುರೋಪ್‌ನಲ್ಲೂ ಸಹ ಶೇ.8ರಷ್ಟುಇಂಧನ ಕೊರತೆ ಎದುರಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.