ಚೀನಾ ಮನವಿಗೆ ಡೋಂಟ್‌ ಕೇರ್‌; ಭಾರತಕ್ಕೆ ಹೆಚ್ಚು ತೈಲ ಪೂರೈಕೆ ಮಾಡುತ್ತಿರುವ ರಷ್ಯಾ: ಕಾರಣ ಹೀಗಿದೆ..

By Suvarna News  |  First Published Mar 1, 2023, 2:54 PM IST

ಚೀನಾ ಪ್ರಸ್ತುತ ತನ್ನ ಕೋವಿಡ್ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಕೈಬಿಟ್ಟಿರುವುದರಿಂದ, ಅದು ರಷ್ಯಾ ರಫ್ತು ಮಾಡುತ್ತಿರುವ ಸಂಪೂರ್ಣ ಕಚ್ಚಾ ತೈಲವನ್ನು ಖರೀದಿಸಲು ಶಕ್ತವಾಗಿದೆ. ಆದರೆ, ರಷ್ಯಾ ಇನ್ನೂ ಭಾರತೀಯ ಮಾರುಕಟ್ಟೆಗೆ ತೈಲ ಮಾರಾಟ ಮುಂದುವರಿಸಲು ಯೋಚಿಸುತ್ತಿದ್ದು, ಅದು ರಷ್ಯಾಗೆ ಹೆಚ್ಚು ಲಾಭದಾಯಕವೂ, ಅದರ ಕಚ್ಚಾ ತೈಲ ಮಾರಾಟಗಾರರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ವಿಧಾನವೂ ಆಗಿದೆ.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಹೊಸದೆಹಲಿ (ಮಾರ್ಚ್‌ 1, 2023): ರಷ್ಯಾ ಫೆಬ್ರವರಿ ತಿಂಗಳಲ್ಲಿ ಪ್ರತಿದಿನವೂ 1.85 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಭಾರತಕ್ಕೆ ರಫ್ತು ಮಾಡಿದೆ. ಬಂದರು ಆಧಾರದಲ್ಲಿ ರಷ್ಯಾ ಭಾರತಕ್ಕೆ ತೈಲ ಪೂರೈಕೆ ನಡೆಸಿದೆ. ಬ್ಲೂಮ್‌ಬರ್ಗ್ ಮಾಹಿತಿಯ ಪ್ರಕಾರ, ಚೀನಾದಿಂದ ತೈಲ ಆಮದಿಗೆ ಬೇಡಿಕೆ ಹೆಚ್ಚಾಗಿದ್ದರೂ, ರಷ್ಯಾ ತನ್ನಿಂದ ಸಾಧ್ಯವಾದಷ್ಟೂ ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸಲಿದೆ. 

Tap to resize

Latest Videos

ಒಂದು ವರ್ಷದ ಹಿಂದೆ, ಭಾರತ ರಷ್ಯಾದಿಂದ ಬಹುತೇಕ ಸ್ವಲ್ಪವೂ ತೈಲ ಖರೀದಿ ಮಾಡುತ್ತಿರಲಿಲ್ಲ. ಆದರೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ರಷ್ಯಾದ ಮೇಲೆ ನಿರ್ಬಂಧ ಹೇರಿದ ಮೇಲೆ, ಭಾರತ ರಷ್ಯಾಗೆ ಪ್ರಮುಖ ತೈಲ ಮಾರುಕಟ್ಟೆಯಾಗಿ ಬದಲಾಯಿತು. ಫೆಬ್ರವರಿ ಒಂದು ತಿಂಗಳಲ್ಲೇ ಭಾರತ ರಷ್ಯಾದಿಂದ ಪ್ರತಿದಿನವೂ 1.85 ಮಿಲಿಯನ್ ಬ್ಯಾರಲ್ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಭಾರತದ ದೈನಂದಿನ ಗರಿಷ್ಠ ಖರೀದಿ ಸಾಮರ್ಥ್ಯವಾದ ದಿನಕ್ಕೆ 2 ಮಿಲಿಯನ್ ಬ್ಯಾರಲ್ ತೈಲಕ್ಕೆ ಹತ್ತಿರವಾಗಿತ್ತು ಎಂದು ತೈಲ ವಿಶ್ಲೇಷಕರು ಹೇಳುತ್ತಾರೆ.

ಇದನ್ನು ಓದಿ: ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?

ಚೀನಾ ಪ್ರಸ್ತುತ ತನ್ನ ಕೋವಿಡ್ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಕೈಬಿಟ್ಟಿರುವುದರಿಂದ, ಅದು ರಷ್ಯಾ ರಫ್ತು ಮಾಡುತ್ತಿರುವ ಸಂಪೂರ್ಣ ಕಚ್ಚಾ ತೈಲವನ್ನು ಖರೀದಿಸಲು ಶಕ್ತವಾಗಿದೆ. ಆದರೆ, ರಷ್ಯಾ ಇನ್ನೂ ಭಾರತೀಯ ಮಾರುಕಟ್ಟೆಗೆ ತೈಲ ಮಾರಾಟ ಮುಂದುವರಿಸಲು ಯೋಚಿಸುತ್ತಿದ್ದು, ಅದು ರಷ್ಯಾಗೆ ಹೆಚ್ಚು ಲಾಭದಾಯಕವೂ, ಅದರ ಕಚ್ಚಾ ತೈಲ ಮಾರಾಟಗಾರರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ವಿಧಾನವೂ ಆಗಿದೆ.

ಕಳೆದ ತಿಂಗಳು ರಷ್ಯಾ ಚೀನಾಗೆ ಪ್ರತಿದಿನವೂ 2.3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ರಫ್ತು ಮಾಡಿರುವುದಾಗಿ ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ ವರದಿ ಮಾಡಿದೆ. ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಹೇರಿರುವ ಪ್ರವಾಸ ನಿರ್ಬಂಧಗಳು ಕೊನೆಗೊಂಡ ಬಳಿಕ, ಚೀನಾದ ಕಚ್ಚಾ ತೈಲ ಬೇಡಿಕೆ ದಿನಕ್ಕೆ 9,00,000 ಬ್ಯಾರಲ್‌ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಐಇಎ ಅಂದಾಜಿಸಿದೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಚೀನಾದ ತೈಲ ಸಂಸ್ಕರಣಾಗಾರಗಳು ಈ ವರ್ಷ ರಷ್ಯಾದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲು ಬಯಸಬಹುದು. ಆದರೆ ಚೀನಾದ ಬಳಿ ಅದನ್ನು ಸಾಗಾಟ ನಡೆಸುವ ಸಾಮರ್ಥ್ಯವೂ ಇದೆ. ಇದರಿಂದಾಗಿ ರಷ್ಯಾಗೆ "ಪ್ಯಾರಲಲ್ ಗ್ರೇ ಫ್ಲೀಟ್" (ಖಾಸಗಿ ಸಂಸ್ಥೆಗಳಿಂದ ನಡೆಸುವ ವಸ್ತುಗಳ ಪೂರೈಕೆ) ಮೂಲಕ ಬರುವ ಲಾಭಾಂಶ ಕಡಿಮೆಯಾಗುತ್ತದೆ. ರಷ್ಯಾ ಈ ಟ್ಯಾಂಕರ್ ವ್ಯವಸ್ಥೆಯ ಮೂಲಕವೇ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುತ್ತಿದೆ.

ರಷ್ಯಾದ ಅತಿದೊಡ್ಡ ತೈಲ ಉತ್ಪಾದಕ ಸಂಸ್ಥೆಯಾದ ರೋಸ್‌ನೆಫ್ಟ್ ಪಿಜೆಎಸ್‌ಸಿ (ಆರ್‌ಓಎಸ್ಎನ್) ಸಂಸ್ಥೆಯು ಗುಜರಾತಿನ ವದಿನಾರ್‌ನಲ್ಲಿರುವ ವದಿನಾರ್ ತೈಲಾಗಾರದ ಮಾಲಿಕತ್ವ ಹೊಂದಿರುವ ನಯಾರಾ ಎನರ್ಜಿ ಲಿಮಿಟೆಡ್ ಸಂಸ್ಥೆಯಲ್ಲಿ 49.13% ಪಾಲುದಾರಿಕೆ ಹೊಂದಿದೆ. ವದಿನಾರ್ ಘಟಕವು ಭಾರತದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಘಟಕವಾಗಿದೆ. ವದಿನಾರ್ ಘಟಕ ಈಗಾಗಲೇ ಈ ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂದು ನಮನ

click me!