ಸೆನ್ಸೆಕ್ಸ್'ನ್ನೂ ಪಾತಾಳಕ್ಕೆ ಎಳೆದೊಯ್ದ ರೂಪಾಯಿ ಮೌಲ್ಯ ಕುಸಿತ!

By Web DeskFirst Published 10, Sep 2018, 1:03 PM IST
Highlights

ಮತ್ತೆ ದಾಖಲೆಯ ಕುಸಿತ ಕಂಡ ರೂಪಾಯಿ ಮೌಲ್ಯ! ಸೆನ್ಸೆಕ್ಸ್ ಮೇಲೆ ದುಷ್ಪರಿಣಾಮ ಬೀರಿದ ರೂಪಾಯಿ ಮೌಲ್ಯ ಕುಸಿತ! ರೂಪಾಯಿ ಮೌಲ್ಯ ಪ್ರತೀ ಡಾಲರ್ ಗೆ 72.18 ರೂ. ಏರಿಕೆ! ಕಚ್ಛಾ ತೈಲದರಲ್ಲಿ ಭಾರೀ ಏರಿಕೆಯೇ ಮೌಲ್ಯ ಕುಸಿತಕ್ಕೆ ಕಾರಣ! ಜಾಗತಿಕ ವಾಣಿಜ್ಯ ಯುದ್ದ ನಿಲ್ಲೋದು ಯಾವಾಗ?

ಮುಂಬೈ(ಸೆ.10): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದ್ದು, ಈ ಹಿಂದೆಂದಿಗಿಂತಲೂ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ.

ಇಂದು ವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಬರೊಬ್ಬರಿ 45 ಪೈಸೆಗಳಷ್ಟು ಕುಸಿತ ಕಂಡಿದೆ. ಆ ಮೂಲಕ ರೂಪಾಯಿ ಮೌಲ್ಯ ಪ್ರತೀ ಡಾಲರ್ ಗೆ 72.18 ರೂಗಳಿಗೇರಿದೆ.

ತೈಲ ದರ ಏರಿಕೆ, ತೈಲೋತ್ಪನ್ನಗಳ ದರ ಏರಿಕೆ ಖಂಡಿಸಿ ನಡೆಯುತ್ತಿರುವ ಭಾರತ್ ಬಂದ್ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಗೆ ಸೃಷ್ಟಿಯಾದ ಅತಿಯಾದ ಬೇಡಿಕೆಯಿಂದಾಗಿ ರೂಪಾಯಿ ಮೌಲ್ಯ ಕುಸಿತಗೊಂಡಿದೆ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿ ರೂಪಾಯಿ ಮೌಲ್ಯ ಕುಸಿತ ಸರಣಿ ಆರಂಭಕ್ಕೆ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ವಾಣಿಜ್ಯ ಸಮರವೇ ಕಾರಣ ಎನ್ನಲಾಗುತ್ತಿದ್ದು, ಇದಲ್ಲದೇ ಅಮೆರಿಕ ಇರಾನ್ ಮೇಲೆ ಹೂಡಿರುವ ಆರ್ಥಿಕ ನಿರ್ಬಂಧ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲೂ ಡಾಲರ್ ಗೆ ಬೇಡಿಕೆ ಹೆಚ್ಚಾಗಿದ್ದು, ಕಚ್ಛಾ ತೈಲ ದರ ಕಡಿತವಾಗಿದ್ದರೂ, ಡಾಲರ್ ಬೇಡಿಕೆ ಹೆಚ್ಚಾಗಿರುವುದರಿಂದ ಅದರ ಮೌಲ್ಯ ಹೆಚ್ಚಾಗಿದೆ ಎನ್ನಲಾಗಿದೆ. ಪ್ರಸ್ತುತ ರೂಪಾಯಿ ಮೌಲ್ಯ ಪದೇ ಪದೇ ಕುಸಿತ ಕಾಣುತ್ತಿರುವುದರಿಂದ ಆರ್ ಬಿಐ ಮಧ್ಯ ಪ್ರವೇಶ ಮಾಡಿದ್ದು, ಮೌಲ್ಯ ಕಡಿತ ತಡೆಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸೆನ್ಸೆಕ್ಸ್ ಅಂಕ ಕುಸಿತ:

ಇನ್ನು ಸೋಮವಾರ ಪೇಟೆ ಆರಂಭದಲ್ಲೇ ಬಿಎಸ್ ಇ ಸೆನ್ಸೆಕ್ಸ್ 246 ಅಂಕಗಳನ್ನು ಕಳೆದುಕೊಂಡಿದ್ದು, ಭಾರತ್ ಬಂದ್, ತೈಲ ದರ ಏರಿಕೆ ಪರಿಣಾಮ ಹೂಡಿಕೆದಾರರು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸೆನ್ಸೆಕ್ಸ್ 246 ಅಂಕಗಳಷ್ಟು ಕುಸಿತ ಕಂಡಿದೆ.

ಸೆನ್ಸೆಕ್ಸ್ ಒಟ್ಟು 276 ಅಂಕಗಳನ್ನು ಕಳೆದುಕೊಂಡು 38,111.60 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ ನಿಫ್ಟಿ ಕೂಡ 93.05 ಅಂಕಗಳ ಕಡಿತದೊಂದಿಗೆ 11,496 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

Last Updated 19, Sep 2018, 9:18 AM IST