ಜೇಬಲ್ಲಿ ಇದ್ರೆ ಒಂದಿಷ್ಟು ಕಾಸು: ಸ್ವಂತ ಉದ್ಯಮಕ್ಕೆ ನೀವೇ ಬಾಸು!

By Web DeskFirst Published 10, Sep 2018, 11:17 AM IST
Highlights

ಸ್ವಂತ ಉದ್ಯಮ ಹೊಂದುವ ಕನಸು ನಿಮ್ಮದಾ?! ಸ್ವಂತ ಉದ್ಯಮಕ್ಕೆ ಅಗತ್ಯ ಬಂಡವಾಳ ಎಲ್ಲಿಂದ?! ಕಡಿಮೆ ವೆಚ್ಚದಲ್ಲಿ ಪ್ರಾರಂಭಿಸಬಹುದಾದ ಉದ್ಯಮಗಳು! ಉತ್ಪಾದನಾ ಯಂತ್ರಗಳ ವೆಚ್ಚ ಕೂಡ ಅತ್ಯಂತ ಕಡಿಮೆ

ಬೆಂಗಳೂರು(ಸೆ.10): ಸ್ವಂತ ಉದ್ಯಮ ಹೊಂದುವುದು ಹಲವರ ಕನಸು. ಸ್ವಂತ ಉದ್ಯಮ, ನೆಮ್ಮದಿಯ ಜೀವನ ಅನ್ನೋದು ಬಹುತೇಕರ ಅಂಬೋಣ. ಇದೇ ಕಾರಣಕ್ಕೆ ಇಂದು ಅನೇಕ ಜನರು ಸ್ವಂತ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.

ಆದರೆ ಸ್ವಂತ ಉದ್ಯಮ ಸ್ಥಾಪಿಸುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಸ್ವಂತ ಉದ್ಯಮ ಸ್ಥಾಪನೆಗೆ ಸಾಕಷ್ಟು ಬಂಡವಾಳದ ಅವಶ್ಯಕತೆ ಇರುತ್ತದೆ. ಈ ಬಂಡವಾಳ ಹೊಂದಾಣಿಕೆಯೇ ಉದ್ಯಮ ಸ್ಥಾಪನೆಗೆ ತೊಡಕಾಗಬಹುದಾದ ಸಾಧ್ಯತೆಯೂ ಇಲ್ಲದಿಲ್ಲ. ಅದರಂತೆ ಸರ್ಕಾರಗಳೂ ಕೂಡ ಸ್ವಂತ ಉದ್ಯಮ ಸ್ಥಾಪನೆ ಮಾಡಲು ಬಯಸುವವರಿಗೆ ಆರ್ಥಿಕ ಸಹಾಯ ಒದಗಿಸುತ್ತವೆ.

ಆದರೆ ಎಲ್ಲಾ ಉದ್ಯಮಗಳೂ ಭಾರೀ ಬಂಡವಾಳವನ್ನು ಬಯಸುವುದಿಲ್ಲ. ಕೆಲವು ಉದ್ಯಮಗಳನ್ನು ಕಡಿಮೆ ಬಂಡಾವಾಳದಲ್ಲಿ ಸ್ಥಾಪನೆ ಮಾಡಬಹುದಾಗಿದೆ. ಸಣ್ಣ ಕೈಗಾರಿಕಾ ಉದ್ಯಮವನ್ನು ಮನೆ ಅಥವಾ ಪುಟ್ಟ ಬಾಡಿಗೆ ಸ್ಥಳದಲ್ಲಿ ಕೂಡ ಪ್ರಾರಂಭಿಸಬಹುದು. ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಉಪಕರಣ ಅಥವಾ ಉತ್ಪಾದನಾ ಯಂತ್ರಗಳ ವೆಚ್ಚ ಕೂಡ ತುಂಬಾ ಕಡಿಮೆ ಇರುತ್ತದೆ.

 

ಅದರಂತೆ ಕಡಿಮೆ ಬಂಡವಾಳದಲ್ಲಿ ಸ್ಥಾಪನೆ ಮಾಡಬಹುದಾದ ೧೦ ಉದ್ಯಮಗಳ ಬಗ್ಗೆ ಇಲ್ಲಿದೆ ಮಾಹಿತಿ..

1. ಪೀಠೋಪಕರಣ:

ಪೀಠೋಪಕರಣಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿವೆ. ಕಚೇರಿ, ಮನೆ, ಶಾಲೆ ಅಥವಾ ಯಾವುದೇ ಉದ್ಯಮಕ್ಕೆ ಪೀಠೋಪಕರಣಗಳ ಅಗತ್ಯವಿರುತ್ತದೆ. ನೀವು ದೊಡ್ಡ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸಲು ಬಯಸುವವರಾದರೆ, ಪೀಠೋಪಕರಣಗಳ ತಯಾರಿಕಾ ವ್ಯಾಪಾರವು ನಿಮಗೆ ಹೇಳಿ ಮಾಡಿಸಿದ್ದು. ಈ ವ್ಯಾಪಾರವನ್ನು ಆರಂಭಿಸಲು ಕುಶಲ ಕೆಲಸಗಾರರು ಬೇಕಾಗುತ್ತಾರೆ.

2. ಮೋಂಬತ್ತಿ ಉತ್ಪಾದನೆ:

ಮೋಂಬತ್ತಿ ತಯಾರಿಕಾ ಉದ್ಯಮವನ್ನು ಸಣ್ಣ ಪ್ರಮಾಣದ ಅರೆಕಾಲಿಕ ವ್ಯಾಪಾರವಾಗಿ ಪ್ರಾರಂಭಿಸಬಹುದು. ಮೋಂಬತ್ತಿಗಳನ್ನು ಧಾರ್ಮಿಕ ಉದ್ದೇಶ ಮತ್ತು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಪರಿಮಳ ಭರಿತ ಮೋಂಬತ್ತಿ ಹೆಚ್ಚು ಮಾರಾಟವಾಗುತ್ತಿರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ಮೋಂಬತ್ತಿ ತಯಾರಿಕೆಯು ಲಾಭದಾಯಕ ಸಣ್ಣ ಪ್ರಮಾಣದ ಉದ್ಯಮವಾಗಿದೆ.

3. ಬೆಲ್ಟ್ ಉತ್ಪಾದನೆ:

ಮನೆಯಿಂದ ಪ್ರಾರಂಭ ಮಾಡಬಹುದಾದ ಮತ್ತೊಂದು ಸಣ್ಣ ಪ್ರಮಾಣದ ಉತ್ಪಾದನಾ ಉದ್ಯಮವಾಗಿದೆ. ನೀವು ಚರ್ಮ ಸಂಬಂಧಿತ ಉತ್ಪಾದನೆಗಳ ಸಮೂಹ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಅದನ್ನು ಗ್ರಾಹಕ ಅಥವಾ ಸಗಟು ವ್ಯಾಪಾರಿಗಳಿಗೆ ಮಾರಬಹುದು.

4. ಬಿಸ್ಕತ್ತು ತಯಾರಿಕೆ:

ಬಿಸ್ಕತ್ತು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಬಿಸ್ಕತ್ತನ್ನು ಇಷ್ಟಪಡುತ್ತಾರೆ. ಹೀಗಾಗಿ ಇದು ಲಾಭದಾಯಕ ಉದ್ಯಮವಾಗಿದೆ. ನೀವು ನಿಮ್ಮ ಸ್ವಂತ ಸಣ್ಣ ಗೃಹಾಧಾರಿತ ಬಿಸ್ಕತ್ತು ತಯಾರಿಕಾ ಉದ್ಯಮ ಅಥವಾ ಸ್ವಯಂಚಾಲಿತ ಬಿಸ್ಕತ್ತು ತಯಾರಿಕಾ ಕಾರ್ಖಾನೆಯನ್ನೂ ಕೂಡ ಸ್ಥಾಪಿಸಬಹುದು.

5. ಜೇನು ಸಂಸ್ಕರಣೆ:

ಜೇನು ಸಂಸ್ಕರಣೆ ಮತ್ತೊಂದು ಉತ್ಪಾದನಾ ಉದ್ಯಮವಾಗಿದೆ. ಎರಡು ವಿಧಗಳಲ್ಲಿ ಜೇನು ಸಂಸ್ಕರಣೆಯನ್ನು ಮಾಡಬಹುದು. ಒಂದು ಸ್ವಯಂಚಾಲಿತ ಪಧ್ಧತಿ ಇನ್ನೊಂದು ಕೈಯಿಂದ ಸಂಸ್ಕರಿಸುವುದು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಮನೆಯಲ್ಲೇ ಈ ಉದ್ಯಮವನ್ನು ಪ್ರಾರಂಭಿಸಬಹುದು.

6. ಏರ್ ಫ್ರೆಶನರ್ ತಯಾರಿಕೆ:

ಏರ್ ಫ್ರೆಶನರ್ ಸಮೂಹ ಉತ್ಪಾದನೆಯ ಇನ್ನೊಂದು ಉದ್ಯಮ. ಏರ್ ಫ್ರೆಶನರ್ ಗೆ ದೊಡ್ಡ ಮಾರುಕಟ್ಟೆಯಿದ್ದು, ಅದನ್ನು ದ್ರವ,ಅನಿಲ ಮತ್ತು ಘನ ಸ್ವರೂಪಗಳಲ್ಲಿ ಉತ್ಪಾದಿಸಬಹುದು. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವ ಜನ ಮನೆಯ ಅಂದ ಹೆಚ್ಚಿಸಲು ಏರ್ ಫ್ರೆಶನರ್ ಹೆಚ್ಚಾಗಿ ಉಪಯೋಗಿಸುವುದರಿಂದ, ಇದು ಹೆಚ್ಚು ಲಾಭ ತರಬಲ್ಲ ಉದ್ಯಮ ಎಂಬುದರಲ್ಲಿ ಸಂದೇಹವಿಲ್ಲ.

7. ಕಾಗದ ತಯಾರಿಕೆ:

ಕಾಗದಗಳು ಮತ್ತು ಸ್ಟೇಷನರಿ ವಸ್ತುಗಳು ಶಿಕ್ಷಣ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಯಾವಾಗಲೂ ಬೇಡಿಕೆಯಲ್ಲಿರುತ್ತದೆ. ಕಾಗದ ತಯಾರಿಕಾ ಉದ್ಯಮವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ.

8. ಪೆನ್ಸಿಲ್ ರಬ್ಬರ್ ತಯಾರಿಕೆ:

ಪೆನ್ಸಿಲ್ ಮತ್ತು ರಬ್ಬರ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಳಸುವ ಅತ್ಯಗತ್ಯ ವಸ್ತುಗಳಾಗಿವೆ. ಪೆನ್ಸಿಲ್ ಮತ್ತು ರಬ್ಬರ್ ಗೆ ದೊಡ್ಡ ಮಾರುಕಟ್ಟೆ ಇದೆ. ನೀವು ಈ ವಸ್ತುಗಳಿಗೆ ಸಂಬಂಧಿಸಿದ ವ್ಯಾಪಾರವನ್ನು ಆರಂಭಿಸಬಹುದು.

9. ಕ್ಯಾಂಡಿ ತಯಾರಿಕೆ :

ನಿಮಗೆ ಕ್ಯಾಂಡಿ ಅಥವಾ ಚಾಕೋಲೇಟ್ ತಯಾರಿಸುವ ಆಸಕ್ತಿ ಇದ್ದರೆ ನೀವು ನಿಮ್ಮ ಸ್ವಂತ ಕ್ಯಾಂಡಿ ಅಥವಾ ಚಾಕೋಲೇಟ್ ಮಾಡಬಹುದು ಮತ್ತು ಅದನ್ನು ಮಾರಾಟ ಮಾಡಲು ಪ್ಯಾಕ್ ಮಾಡಬಹುದು.

10. ಕಾರ್ಪೆಟ್ ತಯಾರಿಕೆ:

ರಬ್ಬರ್ ಕಾರ್ಪೆಟ್ ಗಳಿಗೆ ದೊಡ್ಡ ಮಾರುಕಟ್ಟೆಯಿದೆ.ಈ ರೀತಿಯ ವ್ಯಾಪಾರಕ್ಕಾಗಿ ನೀವು ಉತ್ಪಾದನಾ ಕಾರ್ಖಾನೆಯನ್ನು ತೆರೆದರೆ, ಖಂಡಿತವಾಗಿಯೂ ಅಲ್ಪಾವಧಿಯಲ್ಲಿಯೇ ಯಶಸ್ವಿಯಾಗಬಹುದು.

Last Updated 19, Sep 2018, 9:17 AM IST