ಇಂದಿನ ₹50 ಲಕ್ಷವೇ ಮೇಲೊ, 10 ವರ್ಷದ ನಂತರದ ₹1 ಕೋಟಿ ಮೇಲೊ? ನಿಮಗೆ ಗೊತ್ತಿಲ್ಲದೆ ನಿಮ್ಮ ಹಣ ಕರಗಿಸಲಿದೆ ಹಣದುಬ್ಬರ!

Published : Oct 24, 2026, 08:29 PM IST
Money

ಸಾರಾಂಶ

ಹೂಡಿಕೆ ಮತ್ತು ನಿವೃತ್ತಿ ಯೋಜನೆ ಮಾಡುವಾಗ ಕೇವಲ ಬಡ್ಡಿ ಲೆಕ್ಕ ಹಾಕಿದರೆ ಸಾಲದು, ಹಣದುಬ್ಬರವನ್ನು ಪರಿಗಣಿಸುವುದು ಅತ್ಯಗತ್ಯ. ಇಂದಿನ 1 ಕೋಟಿ ರೂಪಾಯಿಗಳ ಮೌಲ್ಯವು 10-15 ವರ್ಷಗಳ ನಂತರ ಗಣನೀಯವಾಗಿ ಕುಸಿಯಲಿದ್ದು, ನಿಮ್ಮ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ.

ಹೂಡಿಕೆ, ಅಭಿವೃದ್ಧಿ, ಉಳಿತಾಯ ಅಥವಾ ನಿವೃತ್ತಿಯ (Retirement) ಯೋಜನೆಗಳನ್ನು ರೂಪಿಸುವಾಗ ಬಹುತೇಕರು ಮಾಡುವ ದೊಡ್ಡ ತಪ್ಪೆಂದರೆ ಕೇವಲ ಬಡ್ಡಿದರ ಮತ್ತು ತೆರಿಗೆಯನ್ನು (Taxes) ಮಾತ್ರ ಲೆಕ್ಕ ಹಾಕುವುದು. ಆದರೆ, ನಮಗೆ ಅರಿವಿಲ್ಲದಂತೆಯೇ ನಾವು ಕಷ್ಟಪಟ್ಟುಗಳಿಸಿದ ಹಣದ ನೈಜ ಮೌಲ್ಯವನ್ನು ಸದ್ದಿಲ್ಲದೆ ಕರಗಿಸುವ 'ಹಣದುಬ್ಬರ'ವನ್ನು (Inflation) ನಾವು ಪರಿಗಣಿಸುವುದೇ ಇಲ್ಲ. ಮಕ್ಕಳ ಶಿಕ್ಷಣದಿಂದ ಹಿಡಿದು ದಿನಸಿ ಪದಾರ್ಥಗಳವರೆಗೆ, ವೈದ್ಯಕೀಯ ವೆಚ್ಚದಿಂದ ಹಿಡಿದು ಮನೆ ನಿರ್ಮಾಣದವರೆಗೆ ಪ್ರತಿಯೊಂದು ನಿತ್ಯಜೀವನದ ವೆಚ್ಚಗಳು ಕಾಲಕ್ರಮೇಣ ಏರಿಕೆಯಾಗುತ್ತಲೇ ಸಾಗುತ್ತವೆ. ಈ ಹಣದುಬ್ಬರವು ವೆಚ್ಚಗಳನ್ನು ಹೆಚ್ಚಿಸಿದಂತೆ, ನಿಮ್ಮ ಹಣದ 'ಖರೀದಿ ಸಾಮರ್ಥ್ಯ' (Purchasing Power) ಸತತವಾಗಿ ಕುಸಿಯುತ್ತಾ ಸಾಗುತ್ತದೆ.

ಹೀಗಾಗಿ, ನಿವೃತ್ತಿ ಅಥವಾ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಮಾಡುವಾಗ ಕೇವಲ ತೆರಿಗೆಯಷ್ಟೇ ಅಲ್ಲದೆ, ಹಣದುಬ್ಬರವನ್ನೂ ಕಡ್ಡಾಯವಾಗಿ ಲೆಕ್ಕಚಾರದಲ್ಲಿ ಸೇರಿಸಿಕೊಳ್ಳಬೇಕು. ಇಲ್ಲವಾದರೆ, ಕಾಗದದ ಮೇಲಷ್ಟೇ ನಿಮ್ಮ ಹಣ ಕೋಟಿಗಳಲ್ಲಿ ದೊಡ್ಡದಾಗಿ ಕಾಣಿಸುತ್ತದೆ, ಆದರೆ ಮಾರುಕಟ್ಟೆಯಲ್ಲಿ ಅದರ ನೈಜ ಖರೀದಿ ಸಾಮರ್ಥ್ಯ ನಿಮ್ಮನ್ನು ತೀವ್ರ ನಿರಾಶೆಗೆ ದೂಡಬಹುದು!

ಇಂದಿನ ₹50 ಲಕ್ಷ vs 10 ವರ್ಷಗಳ ನಂತರದ ₹1 ಕೋಟಿ

ಇಂದಿನ ಕಾಲಘಟ್ಟದಲ್ಲಿ ₹50 ಲಕ್ಷ ಎಂಬುದು ಅತ್ಯಂತ ದೊಡ್ಡ ಮೊತ್ತ. ಬಹುತೇಕ ಮಧ್ಯಮ ವರ್ಗದ ಜನರಿಗೆ ₹50 ಲಕ್ಷದಿಂದ ₹1 ಕೋಟಿಯಷ್ಟು ಹಣ ಉಳಿಸುವುದು ಜೀವನದ ಪ್ರಮುಖ ಆರ್ಥಿಕ ಗುರಿಯಾಗಿರುತ್ತದೆ. ಆದರೆ, ಈ ಆರ್ಥಿಕ ಗುರಿಗಳು ಕಾಲಾನಂತರದಲ್ಲಿ ಹಣದುಬ್ಬರದ ಹೊಡೆತಕ್ಕೆ ಸಿಲುಕಿ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ.

ಉದಾಹರಣೆಗೆ, ಇಂದು ₹1 ಕೋಟಿ ನೀಡಿ ನೀವು ಏನೆಲ್ಲಾ ವಸ್ತುಗಳನ್ನು ಅಥವಾ ಆಸ್ತಿಯನ್ನು ಖರೀದಿಸಬಹುದೋ, ಇನ್ನು 10 ವರ್ಷಗಳ ನಂತರ ಅದೇ ₹1 ಕೋಟಿಯಿಂದ ಅಷ್ಟೇ ಮೌಲ್ಯದ ವಸ್ತುಗಳನ್ನು ಕೊಳ್ಳಲು ಖಂಡಿತ ಸಾಧ್ಯವಾಗುವುದಿಲ್ಲ.

ಆನ್‌ಲೈನ್ ಇನ್ಫ್ಲೇಷನ್ ಕ್ಯಾಲ್ಕುಲೇಟರ್‌ಗಳ (Inflation Calculators) ಆಧಾರದ ಮೇಲಿನ ಲೆಕ್ಕಾಚಾರ ಇಲ್ಲಿದೆ:

  • ಇಂದಿನ ಮೌಲ್ಯ: ₹1 ಕೋಟಿ
  • ಸಮಯ: 10 ವರ್ಷಗಳು
  • ಸರಾಸರಿ ಹಣದುಬ್ಬರ ದರ: ಶೇಕಡಾ 6%
  • 10 ವರ್ಷದ ನಂತರ ಅದೇ ವಸ್ತುಗಳ ಭವಿಷ್ಯದ ಬೆಲೆ: ₹1.79 ಕೋಟಿ
  • 10 ವರ್ಷದ ನಂತರ ಸಿಗುವ ₹1 ಕೋಟಿಯ ಇಂದಿನ ನೈಜ ಮೌಲ್ಯ: ₹55.84 ಲಕ್ಷ

ಇದರರ್ಥವೇನೆಂದರೆ, ಇಂದಿನ ಮಾರುಕಟ್ಟೆಯಲ್ಲಿ ₹55.84 ಲಕ್ಷ ಕೊಟ್ಟು ನೀವು ಏನೆಲ್ಲಾ ವಸ್ತುಗಳನ್ನು ಖರೀದಿಸಬಹುದೋ, ಇನ್ನು 10 ವರ್ಷಗಳ ನಂತರ ಬರೋಬ್ಬರಿ ₹1 ಕೋಟಿ ನೀಡಿದರೆ ಮಾತ್ರ ಅಷ್ಟೇ ವಸ್ತುಗಳು ಸಿಗುತ್ತವೆ! ಈ ಮೌಲ್ಯವು ₹50 ಲಕ್ಷಕ್ಕಿಂತ ತುಸು ಹೆಚ್ಚಾಗಿದ್ದರೂ ಸಹ, ಹಣದುಬ್ಬರವು ಹೇಗೆ ನಿಧಾನವಾಗಿ ನಿಮ್ಮ ಹಣದ ಶಕ್ತಿಯನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

15 ವರ್ಷಗಳ ನಂತರ ₹1 ಕೋಟಿಯ ಸ್ಥಿತಿ ಏನು?

ಇದೇ ಲೆಕ್ಕಾಚಾರವನ್ನು 15 ವರ್ಷಗಳಿಗೆ ವಿಸ್ತರಿಸಿದರೆ, 15 ವರ್ಷಗಳ ನಂತರ ನಿಮ್ಮ ಕೈಗೆ ಸಿಗುವ ₹1 ಕೋಟಿ ಹಣದ ನೈಜ ಮೌಲ್ಯ ಇಂದಿನ ಕೇವಲ ₹42 ಲಕ್ಷಕ್ಕೆ ಸಮನಾಗಿರುತ್ತದೆ!

ನೀವೇನಾದರೂ ನಿವೃತ್ತಿ ಜೀವನಕ್ಕಾಗಿ (Retirement Planning) ಯೋಜಿಸುತ್ತಿದ್ದರೆ, ನಿವೇಷ್ಟೇ ಹಣ ಉಳಿಸಬೇಕು ಎಂಬುದನ್ನು ಅಂದಾಜಿಸಲು ಹಣದುಬ್ಬರ, ನಿಮ್ಮ ಜೀವನಶೈಲಿಯ ವೆಚ್ಚಗಳು, ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ಹಾಗೂ ನಿಮ್ಮ ಹೂಡಿಕೆಯಿಂದ ಸಿಗುವ ನಿರೀಕ್ಷಿತ ಆದಾಯವನ್ನು (Investment Returns) ಕಡ್ಡಾಯವಾಗಿ ಲೆಕ್ಕ ಹಾಕಬೇಕು.\

ಒಂದು ವೇಳೆ ಇಂದು ₹1 ಕೋಟಿ ವೆಚ್ಚದಲ್ಲಿ ಸಿಗುವ ಜೀವನಶೈಲಿಯನ್ನು ಇನ್ನು 15 ವರ್ಷಗಳ ನಂತರದ ನಿವೃತ್ತಿ ಜೀವನದಲ್ಲೂ ಪಡೆಯಲು ನೀವು ಬಯಸುವುದಾದರೆ ನಿಮಗೆ ವಾಸ್ತವವಾಗಿ ಬೇಕಾಗುವ ಹಣ ಎಷ್ಟು ಗೊತ್ತಾ?

  • ಇಂದಿನ ಮೌಲ್ಯ: ₹1 ಕೋಟಿ
  • ಸರಾಸರಿ ಹಣದುಬ್ಬರ: ಶೇಕಡಾ 6%
  • ಸಮಯ: 15 ವರ್ಷಗಳು
  • ಅಷ್ಟೇ ವಸ್ತುಗಳನ್ನು ಕೊಳ್ಳಲು 15 ವರ್ಷಗಳ ನಂತರ ಬೇಕಾಗುವ ಮೊತ್ತ: ₹2.40 ಕೋಟಿ

ಅಂದರೆ, ಇಂದಿನ ₹1 ಕೋಟಿಯ ಜೀವನಶೈಲಿಯನ್ನು 15 ವರ್ಷಗಳ ನಂತರ ಕಾಪಾಡಿಕೊಳ್ಳಲು ನಿಮಗೆ ಬರೋಬ್ಬರಿ ₹2.40 ಕೋಟಿ ನಿಧಿ (Corpus) ಅಗತ್ಯವಿರುತ್ತದೆ. ಹೀಗಾಗಿ, ಕೇವಲ ಬ್ಯಾಂಕ್ ಡೆಪಾಸಿಟ್ ಅಥವಾ ಸಾಂಪ್ರದಾಯಿಕ ಉಳಿತಾಯ ಯೋಜನೆಗಳಲ್ಲಿ ಹಣವಿಡುವ ಬದಲು, ಹಣದುಬ್ಬರವನ್ನು ಮೀರಿಸಿ (Beat Inflation) ಉತ್ತಮ ರಿಟರ್ನ್ಸ್ ನೀಡುವ ಈಕ್ವಿಟಿ, ಮ್ಯೂಚುಯಲ್ ಫಂಡ್ ಹಾಗೂ ಇತರ ಆಸ್ತಿಗಳಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಹುಬ್ಬಳ್ಳಿ ಸೇರಿದಂತೆ ದೇಶದ 11 ಏರ್‌ಪೋರ್ಟ್‌ ಮುಂದಿನ 50 ವರ್ಷ ಖಾಸಗಿ ತೆಕ್ಕೆಗೆ, ಡಿಸೆಂಬರ್‌ನಲ್ಲಿ ಬಿಡ್ಡಿಂಗ್‌ ಕರೆಯಲು ನಿರ್ಧರಿಸಿದ ಕೇಂದ್ರ ಸರ್ಕಾರ!
ರೈತರೇ ಗಮನಿಸಿ, ಹೊಸ ಅಡಿಕೆ ತೋಟ ಮಾಡುವ ಮುನ್ನ ಎಚ್ಚರ.. ಹೆಸರು ನೋಡಿ ಸಸಿ ತಂದರೆ ನಷ್ಟ ಗ್ಯಾರಂಟಿ