ಗಮನಿಸಿ, ಏ.1ರಂದು 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶವಿಲ್ಲ: ಆರ್ ಬಿಐ

By Suvarna News  |  First Published Mar 29, 2024, 12:38 PM IST

2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಯನ್ನು ಕೇಂದ್ರೀಯ ಬ್ಯಾಂಕಿನ 19 ಶಾಖೆಗಳಲ್ಲಿ ಏಪ್ರಿಲ್ 1ರಂದು ಸ್ವೀಕರಿಸೋದಿಲ್ಲ ಎಂದು ಆರ್ ಬಿಐ ತಿಳಿಸಿದೆ. 
 


ನವದೆಹಲಿ (ಮಾ.29):  ಕೇಂದ್ರೀಯ ಬ್ಯಾಂಕಿನ 19  ಶಾಖೆಗಳಲ್ಲಿ ಏಪ್ರಿಲ್ 1ರಂದು 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿ ಸೌಲಭ್ಯ ಲಭ್ಯವಿರೋದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಿಳಿಸಿದೆ.  ಖಾತೆಗಳ ವಾರ್ಷಿಕ ಕ್ಲೋಸಿಂಗ್ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ. ಅಲ್ಲದೆ, ಏಪ್ರಿಲ್ 2ರಿಂದ ಈ ಸೌಲಭ್ಯ ಮತ್ತೆ ಪ್ರಾರಂಭವಾಗಲಿದೆ ಎಂದು ಅದು ತಿಳಿಸಿದೆ. ಬ್ಯಾಂಕುಗಳಲ್ಲಿ 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಆರ್ ಬಿಐ 2023ರ ಅಕ್ಟೋಬರ್ 7ರ ತನಕ ಅವಕಾಶ ಕಲ್ಪಿಸಿತ್ತು. ಆ ಬಳಿಕ ಬ್ಯಾಂಕುಗಳಲ್ಲಿ ಈ ಸೌಲಭ್ಯ ಸ್ಥಗಿತಗೊಳಿಸಿತ್ತು. ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ  ಆರ್ ಬಿಐ 19 ವಿತರಣಾ ಕಚೇರಿಗಳಲ್ಲಿ ಮಾತ್ರ 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶ ಕಲ್ಪಿಸಿತ್ತು. 

2000ರೂ. ಎಷ್ಟು ನೋಟುಗಳು ಹಿಂತಿರುಗಿವೆ?
2024ರ ಮಾ.1ಕ್ಕೆ ಅನ್ವಯಿಸುವಂತೆ ಚಲಾವಣೆಯಲ್ಲಿದ್ದ ಶೇ.97.62ರಷ್ಟು 2000ರೂ. ಮುಖಬೆಲೆಯ ನೋಟುಗಳು ಹಿಂತಿರುಗಿವೆ ಎಂದು ಆರ್ ಬಿಐ ಮಾಹಿತಿ ನೀಡಿದೆ. 2024ರ ಫೆ.29ಕ್ಕೆ ದೊರೆತ ಮಾಹಿತಿ ಅನ್ವಯ ಚಲಾವಣೆಯಲ್ಲಿರುವ  2000ರೂ. ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 8,470 ಕೋಟಿ ರೂ.ಗೆ ಇಳಿಕೆಯಾಗಿದೆ. ಇದು 2023ರ ಮೇ 19ರಂದು 3.56 ಲಕ್ಷ ಕೋಟಿ ರೂ. ಇತ್ತು ಎಂದು ಆರ್ ಬಿಐ ತಿಳಿಸಿದೆ. 

Tap to resize

Latest Videos

2,000ರೂ. ನೋಟು ವಿನಿಮಯಕ್ಕೆ ಅಂಚೆ ಕಚೇರಿಯನ್ನೂ ಬಳಸಿಕೊಳ್ಳಿ: ಸಾರ್ವಜನಿಕರಿಗೆ ಆರ್ ಬಿಐ ಸಲಹೆ

ದಿನಕ್ಕೆ ಎಷ್ಟು ಮೊತ್ತದ ನೋಟು ವಿನಿಮಯ ಮಾಡಬಹುದು?
2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಒಮ್ಮೆಗೆ  20,000ರೂ. ತನಕ ವಿನಿಮಯ ಮಾಡಬಹುದು. ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು  2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು. ಈ ರೀತಿಯ ವಿನಿಮಯ ಅಥವಾ ಕ್ರೆಡಿಟ್ ಆರ್ ಬಿಐ ಅಥವಾ ಸರ್ಕಾರದ ಸಂಬಂಧಪಟ್ಟ ನಿಯಮಗಳಿಗೊಳಪಡುತ್ತವೆ. ಹಾಗೆಯೇ ಈ ಸಮಯದಲ್ಲಿ ಅರ್ಹ ಗುರುತು ದಾಖಲೆಗಳನ್ನು ಒದಗಿಸೋದು ಅಗತ್ಯ.

ಯಾವಾಗ ಆರ್ ಬಿಐ 2,000ರೂ. ನೋಟುಗಳನ್ನು ಹಿಂಪಡೆದಿತ್ತು?
ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ, ಆ ಬಳಿಕ ಈ ಗಡುವನ್ನು ಅಕ್ಟೋಬರ್ 7ರ ತನಕ ವಿಸ್ತರಿಸಲಾಗಿತ್ತು. ಈ ಅಂತಿಮ ಗಡುವಿನ ಬಳಿಕ ಈ ನೋಟುಗಳನ್ನು ಆರ್ ಬಿಐಯ 19 ವಿತರಣ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 

ದೀಪಾವಳಿಗೆ ಮನೆ ಕ್ಲೀನ್‌ ಮಾಡೋ ಟೈಮ್‌ನಲ್ಲಿ ಸಿಕ್ತು 2 ಸಾವಿರ ನೋಟ್‌, ಆರ್‌ಬಿಐ ಕಚೇರಿ ಮುಂದೆ ಫುಲ್‌ ಕ್ಯೂ!

ಯಾವಾಗ 2,000ರೂ. ನೋಟುಗಳನ್ನು ಪರಿಚಯಿಸಲಾಗಿತ್ತು?
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಕೈಗೊಂಡಿರೋದಾಗಿ  ಆರ್ ಬಿಐ ತಿಳಿಸಿತ್ತು. 


 

click me!