Rice Price Hike: ಆಮದು ಸುಂಕ ಕಡಿತಗೊಳಿಸಿದ ಬಾಂಗ್ಲಾದೇಶ; ಭಾರತದಲ್ಲಿ ಶೇ.10ರಷ್ಟು ಅಕ್ಕಿ ಬೆಲೆ ಏರಿಕೆ

By Suvarna News  |  First Published Jun 27, 2022, 1:33 PM IST

ಗೋಧಿಯಂತೆ ಅಕ್ಕಿ ರಫ್ತಿನ ಮೇಲೂ ಭಾರತ ನಿರ್ಬಂಧ ವಿಧಿಸಬಹುದು ಎಂಬ ಭೀತಿಯಿಂದ ಬಾಂಗ್ಲಾದೇಶ ನಿಗದಿತ ಅವಧಿಗಿಂತ ಮೊದಲೇ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಜೂ.22ರಂದು ಅಧಿಸೂಚನೆ ಹೊರಡಿಸಿರುವ ಬಾಂಗ್ಲಾ ಸರ್ಕಾರ ಅಕ್ಟೋಬರ್ 31ರ ತನಕ ಬಾಸ್ಮತಿಯೇತರ ಅಕ್ಕಿ ಆಮದಿಗೆ ಅವಕಾಶ ನೀಡಿದೆ. ಅಲ್ಲದೆ, ಅಕ್ಕಿ ಮೇಲಿನ ಆಮದು ಸುಂಕ ಕೂಡ ಕಡಿತಗೊಳಿಸಿದೆ. ಪರಿಣಾಮ ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 


ನವದೆಹಲಿ (ಜೂ.26): ಹಣದುಬ್ಬರ (Inflation) ಹೆಚ್ಚಳ ಹಾಗೂ ಗೋಧಿ (Wheat) ಬೆಲೆಯೇರಿಕೆ ನಡುವೆ ಅನೇಕ ಭಾರತೀಯರ (Indians) ಪ್ರಧಾನ ಆಹಾರವಾಗಿರುವ ಅಕ್ಕಿ (Rice) ಬೆಲೆಯಲ್ಲಿ (Price) ಕಳೆದ ಕೆಲವು ದಿನಗಳಿಂದ ಏರಿಕೆ ಕಂಡುಬರುತ್ತಿದೆ. ಕಳೆದ 5 ದಿನಗಳಲ್ಲಿ ಅಂತಾರಾಷ್ಟ್ರೀಯ (International) ಹಾಗೂ ದೇಶೀಯ (Domestic) ಮಾರುಕಟ್ಟೆ ಎರಡೂ ಕಡೆಗಳಲ್ಲಿ ಅಕ್ಕಿ (Rice) ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ.  

ನೆರೆಯ ಬಾಂಗ್ಲಾದೇಶ  (Bangladesh) ಅಕ್ಕಿಯ (Rice) ಮೇಲಿನ ಆಮದು ಸುಂಕವನ್ನು (Import duty) ಶೇ.62.5ರಿಂದ ಶೇ.25ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲಿ (India) ಅಕ್ಕಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಬಾಂಗ್ಲಾದೇಶ ಆಮದು ಸುಂಕ (Import duty) ಇಳಿಕೆ ಮಾಡಿದ ಕಾರಣಕ್ಕೆ ಭಾರತದ ವ್ಯಾಪಾರಿಗಳು ಆ ದೇಶದೊಂದಿಗೆ ರಫ್ತಿನ (Export) ಒಪ್ಪಂದಕ್ಕೆ ಮುಂದಾಗಿದ್ದಾರೆ.

Tap to resize

Latest Videos

ರಾಜ್ಯಗಳಿಗೆ ಪರಿಹಾರ ಕೊಡಲು ಮಾಡಿದ್ದ ಸಾಲ ತೀರಿಸಲೆಂದು ಸೆಸ್‌ 4 ವರ್ಷ ವಿಸ್ತರಣೆ!

'ಕಳೆದ 5 ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ (India) ಬಾಸ್ಮತಿಯೇತರ ಅಕ್ಕಿ ಬೆಲೆಯಲ್ಲಿ ಟನ್ ಗೆ 360 ಡಾಲರ್ ಏರಿಕೆಯಾಗಿದೆ. ಈ ಹಿಂದೆ ಟನ್ ಗೆ 350 ಡಾಲರ್ ಇತ್ತು. ಬಾಂಗ್ಲಾದೇಶ ಅಕ್ಕಿ ಆಮದಿನ ಮೇಲಿನ ಸುಂಕ ಕಡಿತಗೊಳಿಸಿತು ಎಂಬ ಸುದ್ದಿ ಹೊರಬಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ' ಎಂದು ಅಕ್ಕಿ ರಫ್ತುಗಾರರ (Rice Exports) ಸಂಘಟನೆ ಅಧ್ಯಕ್ಷ ಬಿ.ವಿ. ಕೃಷ್ಣ ರಾವ್ ತಿಳಿಸಿದ್ದಾರೆ. 

ಬಾಂಗ್ಲಾದೇಶ ಆಮದು ಸುಂಕ ಕಡಿತಗೊಳಿಸಲು ಕಾರಣವೇನು?
ಬಾಸ್ಮತಿಯೇತರ ಅಕ್ಕಿಗಳನ್ನು ಅಕ್ಟೋಬರ್ 31ರ ತನಕ ಆಮದು (Import) ಮಾಡಿಕೊಳ್ಳಲು ಅವಕಾಶ ನೀಡಿ ಬಾಂಗ್ಲಾದೇಶ (Bangladesh) ಜೂನ್  22ರಂದು ಅಧಿಸೂಚನೆ ಹೊರಡಿಸಿತ್ತು. ಅಕ್ಕಿ ರಫ್ತಿನ ಮೇಲೆ ಭಾರತ (India) ನಿರ್ಬಂಧ ವಿಧಿಸಬಹುದು ಎಂಬ ಭಯದಿಂದ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಇಷ್ಟು ಬೇಗ ಅಕ್ಕಿ (Rice) ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಬಾಂಗ್ಲಾದೇಶ ಸಾಮಾನ್ಯವಾಗಿ ಸೆಪ್ಟೆಂಬರ್ -ಅಕ್ಟೋಬರ್ ಅವಧಿಯಲ್ಲಿ ಅಕ್ಕಿ ಆಮದು ಮಾಡಿಕೊಳ್ಳಲು ಪ್ರಾರಂಭಿಸುತ್ತದೆ.

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಪ್ರಮುಖ ಆಹಾರ ಧಾನ್ಯಗಳ ಕೊರತೆ ಎದುರಿಸುತ್ತಿದೆ. ಅಲ್ಲದೆ, ಗೋಧಿ ರಫ್ತಿನ ಮೇಲೆ ಭಾರತದ ನಿರ್ಬಂಧದ ಕಾರಣಕ್ಕೆ ಬಾಂಗ್ಲಾದೇಶದ ಗೋಧಿ ಆಮದಿನಲ್ಲಿ ಕೂಡ ಇಳಿಕೆಯಾಗಿದೆ. ಇನ್ನು ಪ್ರವಾಹದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಭತ್ತದ ವ್ಯವಸಾಯಕ್ಕೆ ಕೂಡ ಹೊಡೆತ ಬಿದ್ದಿದೆ. 

ಮೂರು ರಾಜ್ಯಗಳಲ್ಲಿ ಅಕ್ಕಿ ಬೆಲೆಯೇರಿಕೆ
'ಅಕ್ಕಿ ಬೆಲೆ ಈಗಾಗಲೇ ಶೇ.10ರಷ್ಟು ಹೆಚ್ಚಾಗಿದ್ದು, ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ. ಬಾಂಗ್ಲಾದೇಶವು ಸಾಮಾನ್ಯವಾಗಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಅಕ್ಕಿಯನ್ನು ಖರೀದಿಸುತ್ತದೆ. ಈ ಮೂರು ರಾಜ್ಯಗಳಲ್ಲಿ ಅಕ್ಕಿ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಈ ಮೂರು ರಾಜ್ಯಗಳಲ್ಲಿ ಅಕ್ಕಿಯ ಬೆಲೆ ಏರಿಕೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಿದ್ದು, ಶೇ.10ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ' ಎನ್ನುತ್ತಾರೆ ತಿರುಪತಿ ಅಗ್ರಿ ಟ್ರೇಡ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸೂರಜ್ ಅಗರ್ ವಾಲ್.

ಆನ್‌ಲೈನ್‌ ಕೆಲಸ ಮಾಡುತ್ತಾ ಕೋಟ್ಯಾಧಿಪತಿಯಾದ ಹಳ್ಳಿಯ ಬಡ ಯುವಕ!

ಬಾಂಗ್ಲಾದೇಶ 2021ನೇ ಹಣಕಾಸು ಸಾಲಿನಲ್ಲಿ  13.59 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ಚೀನಾದ ಬಳಿಕ ಭಾರತ ಜಗತ್ತಿನ ಅತೀದೊಡ್ಡ ಅಕ್ಕಿ ಬಳಕೆ ಮಾಡುವ ರಾಷ್ಟ್ರವಾಗಿದೆ. 2021-22 ನೇ ಆರ್ಥಿಕ ಸಾಲಿನಲ್ಲಿ ಭಾರತ 6.11 ಬಿಲಿಯನ್ ಡಾಲರ್ ಮೌಲ್ಯದ ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡಿದೆ. 2021ನೇ ಆರ್ಥಿಕ ಸಾಲಿನಲ್ಲಿ ಭಾರತ 4.8 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಿದೆ. 

click me!