Retail Inflation:ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ಕ್ಕೆ ಇಳಿಕೆ; ಆದ್ರೂ ತಗ್ಗದ ಆತಂಕ

By Suvarna News  |  First Published Jun 14, 2022, 11:00 AM IST

*ಬೆಲೆಯೇರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೊಂಚ ನಿರಾಳತೆ
*ಏಪ್ರಿಲ್ ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79ಕ್ಕೆ ಏರಿಕೆಯಾಗಿದ್ದ ಚಿಲ್ಲರೆ ಹಣದುಬ್ಬರ
*ಮೇನಲ್ಲಿ ಚಿಲ್ಲರೆ ಹಣದುಬ್ಬರ ತಗ್ಗಲು ರೆಪೋ ದರ ಹೆಚ್ಚಳ, ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ ಕಾರಣ


ನವದೆಹಲಿ (ಮೇ 14): ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಕೊಂಚ ಇಳಿಕೆಯಾದ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರ (Retail inflation) ಮೇನಲ್ಲಿ ಕುಸಿತ ಕಂಡಿದೆ. ಏಪ್ರಿಲ್ ನಲ್ಲಿ ಶೇ.7.79ರಷ್ಟಿದ್ದ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ.7.04ಕ್ಕೆ ಇಳಿಕೆಯಾಗಿದೆ. ಈ ಮೂಲಕ ಬೆಲೆಯೇರಿಕೆ ಬಿಸಿಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ಮಟ್ಟಿನ ನಿರಾಳತೆ ಸಿಕ್ಕಿದ್ದರು ಕೂಡ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟಕ್ಕಿಂತ ಚಿಲ್ಲರೆ ಹಣದುಬ್ಬರ ಹೆಚ್ಚಿದೆ.

ಏಪ್ರಿಲ್ ನಲ್ಲಿ ಶೇ.8.38ರಷ್ಟಿದ್ದ ಆಹಾರ ಹಣದುಬ್ಬರ (Food inflation) ಮೇನಲ್ಲಿ  ಶೇ.7.97ಕ್ಕೆ ಇಳಿಕೆಯಾಗಿದೆ. ನಗರ  ಹಣದುಬ್ಬರ ಮೇನಲ್ಲಿ ಶೇ.7. 1ರಷ್ಟಿದ್ದರೆ, ಗ್ರಾಮೀಣ ಹಣದುಬ್ಬರ ಶೇ. 7ರಷ್ಟಿದೆ. ಏಪ್ರಿಲ್ ತಿಂಗಳಲ್ಲಿ ನಗರ  ಹಣದುಬ್ಬರ ಶೇ. 7.09ರಷ್ಟು ಹಾಗೂ ಗ್ರಾಮೀಣ ಹಣದುಬ್ಬರ ಶೇ.8.38ರಷ್ಟಿತ್ತು. ಅಂದ್ರೆ ಈ ಎರಡೂ ಹಣದುಬ್ಬರ ಮೇನಲ್ಲಿ ಇಳಿಕೆ ಕಂಡಿವೆ. 

Tap to resize

Latest Videos

ಸ್ವಿಗ್ಗಿ, ಝೋಮ್ಯಾಟೊಗೆ 15 ದಿನ ಗಡುವು!

ಏಪ್ರಿಲ್ ನಲ್ಲಿ ಚಿಲ್ಲರೆ (Retail) ಹಣದುಬ್ಬರ (Inflation) 8 ವರ್ಷಗಳ ಗರಿಷ್ಠ ಮಟ್ಟ ಶೇ.7.79 ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ (RBI) ಮೇ ಪ್ರಾರಂಭದಲ್ಲಿ ರೆಪೋ ದರವನ್ನು ಶೇ.0.40ರಷ್ಟು ಹೆಚ್ಚಳ ಮಾಡಿತ್ತು. ಇನ್ನು ಕೇಂದ್ರ ಸರ್ಕಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಿತ್ತು. ಈ ಎರಡೂ ಕ್ರಮಗಳು ಮೇನಲ್ಲಿ ಚಿಲ್ಲರೆ ಹಣದುಬ್ಬರ (Retail inflation) ದರ ತುಸು ಕಡಿಮೆಯಾಗಲು ನೆರವಾಗಿವೆ. ಆದರೂ ಕೂಡ ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರುತ್ತಿರೋದು ಇದು ಸತತ ಐದನೇ ಬಾರಿಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. 

ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6. ಆದ್ರೆ ಸತತ 5 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಆಗಸ್ಟ್ ನಲ್ಲಿ ಕೂಡ ಆರ್ ಬಿಐ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಆರ್ ಬಿಐ ಹಣದುಬ್ಬರ ದರ ಶೇ.5.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದ್ರೆ ಈಗ ಅದನ್ನು ಶೇ.6.7ಕ್ಕೆ ಹೆಚ್ಚಿಸಿದೆ.

ಆರ್ಥಿಕ ಜಗತ್ತು ತಲ್ಲಣ, ಅಮೆರಿಕ ಹಣದುಬ್ಬರ 40 ವರ್ಷಗಳ ಗರಿಷ್ಠಕ್ಕೆ!

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯೇರಿಕೆ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಪರಿಣಾಮಗಳು ದೀರ್ಘಕಾಲಿಕವಲ್ಲ ಎಂದು ಹೇಳಲಾಗುತ್ತಿದೆ. ಆದರೂ ಕೂಡ ಹೆಚ್ಚುತ್ತಿರುವ ತರಕಾರಿ ಬೆಲೆ ಕಳವಳಕ್ಕೆ ಕಾರಣವಾಗಿದೆ. ಕಳೆದ ಸಾಲಿನ ಮೇಗೆ ಹೋಲಿಸಿದರೆ ಈ ಬಾರಿ ತರಕಾರಿ ಬೆಲೆಯಲ್ಲಿ ಶೇ.18.26ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನು ಇಂಧನ ಹಣದುಬ್ಬರ ಕಳೆದ ಸಾಲಿನ ಮೇಗೆ ಹೋಲಿಸಿದ್ರೆ ಈ ಬಾರಿ ಶೇ.9.54ರಷ್ಟು ಹೆಚ್ಚಳ ಕಂಡಿದೆ. ಆದರೂ ಏಪ್ರಿಲ್ ಗೆ ಹೋಲಿಸಿದ್ರೆ ಮೇನಲ್ಲಿ ಇಂಧನ ಹಣದುಬ್ಬರ ಶೇ.1.4ರಷ್ಟು ಇಳಿಕೆಯಾಗಿದೆ. 

ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ಕಳೆದ ವಾರ ರೆಪೋ ದರವನ್ನು ( repo rate) 50 ಮೂಲ ಅಂಕಗಳಷ್ಟು (50 basis points) ಹೆಚ್ಚಿಸಿದೆ. ಇದ್ರಿಂದ ರೆಪೋ ದರ  ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರೋದಾಗಿ ಆರ್ ಬಿಐ ತಿಳಿಸಿತ್ತು. 

click me!