Resourceful Automobile ಐಪಿಓ ಕ್ರೇಜ್‌: ಕೇವಲ 2 ಶೋರೂಮ್‌ಗಳಿಗೆ 4800 ಕೋಟಿ ರೂ. ಬಿಡ್‌!

By Santosh Naik  |  First Published Aug 28, 2024, 5:06 PM IST

Resourceful Automobile IPO: ರಿಸೋರ್ಸ್‌ಫುಲ್‌ ಆಟೋಮೊಬೈಲ್‌ ಕಂಪನಿಯು ಕೇವಲ 12 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯೊಂದಿಗೆ ಐಪಿಓ ಬಿಡುಗಡೆ ಮಾಡಿತ್ತು. ಆದರೆ, ಅಚ್ಚರಿ ಎಂಬಂತೆ 4800 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳು ಬಂದಿವೆ. ಕೇವಲ ಎರಡು ಶೋರೂಮ್‌ಗಳು ಮತ್ತು 8 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯ ಐಪಿಓ ಓವರ್‌ಸಬ್‌ಸ್ಕ್ರಿಪ್ಶನ್‌ ಅಚ್ಚರಿ ಮೂಡಿಸಿದೆ.



ಬೆಂಗಳೂರು (ಆ.28): ರಿಸೋರ್ಸ್‌ಫುಲ್‌ ಆಟೋಮೊಬೈಲ್‌ನ ಎಸ್‌ಎಂಇ ಐಪಿಓ ಬಗ್ಗೆ ಮಾರ್ಕೆಟ್‌ನಲ್ಲಿ ಅಚ್ಚರಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಕಂಪನಿಯ ಆರಂಭಿಕ ಸಾರ್ವಜನಿಕ ಹೂಡಿಕೆ ಅರ್ಥಾತ್‌ ಇನೀಶಿಯಲ್‌ ಪಬ್ಲಿಕ್‌ ಆಫರಿಂಗ್‌ (ಐಪಿಒ) ಬಂದಿರುವ ಪ್ರತಿಕ್ರಿಯೆ. ನೆನಪಿರಲಿ ಕೇವಲ 12 ಕೋಟಿ ರೂಪಾಯಿಯನ್ನು ಸಾರ್ವಜನಿಕವಾಗಿ ಪಡೆಯುವ ನಿಟ್ಟಿನಲ್ಲಿ ರಿಸೋರ್ಸ್‌ಫುಲ್‌ ಆಟೋಮೊಬೈಲ್‌ ಐಪಿಓಗೆ ಇಳಿದಿತ್ತು. ಆದರೆ, ಅಚ್ಚರಿ ಎನ್ನವಂತೆ ಕಂಪನಿ 4800 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸಂಪಾದನೆ ಮಾಡಿದೆ. ಈ ಕಂಪನಿಯ ಷೇರುಗಳು ನಾಳೆ ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಲಿದೆ. ಅಚ್ಚರಿ ಏನೆಂದರೆ, ದೆಹಲಿ ಮೂಲದ ಈ ಕಂಪನಿಯು ಯಮಹಾ ಮೋಟಾರ್‌ಬೈಕ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡುವ ಕಂಪನಿಯಾಗಿದೆ. ರಾಜಧಾನಿ ನವದೆಹಲಿಯಲ್ಲಿ ಸಾಹ್ನಿ ಆಟೋಮೊಬೈಲ್ಸ್‌ ಹೆಸರಿನಲ್ಲಿ ಕೇವಲ ಎರಡು ಶೋರೂಮ್‌ಗಳನ್ನು ಈ ಕಂಪನಿ ಹೊಂದಿದೆ. ಈ ಎರಡೂ ಶೋರೂಮ್‌ಗಳಲ್ಲಿ ಇರುವ ಉದ್ಯೋಗಿಗಳ ಸಂಖ್ಯೆ ಕೇವಲ 8!

ರಿಸೋರ್ಸ್‌ಫುಲ್‌ ಆಟೋಮೊಬೈಲ್ಸ್‌ ಕಂಪನಿಯ ಐಪಿಓ ಬಿಡ್ಡಿಂಗ್‌ನ ಮೂರನೇ ದಿನದ ಅಂತ್ಯದ ವೇಳೆ ಒಟ್ಟು 418.27 ಪಟ್ಟು ಹೆಚ್ಚು ಬಿಡ್ಡಿಂಗ್‌ ಆಗಿದೆ.  SME IPO ಮೊದಲ ದಿನದಂದು 10.35 ಬಾರಿ ಮತ್ತು 2ನೇ ದಿನದಂದು 74.13 ಬಾರಿ ಬಿಡ್‌ ಆಗಿತ್ತು. ನವದೆಹಲಿ ಮೂಲದ ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಈ ಬಿಡ್ಡಿಂಗ್‌ನ ಮರ್ಚೆಂಟ್ ಬ್ಯಾಂಕರ್ ಆಗಿದೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಉಲ್ಲೇಖಿಸಿರುವ ಬಿಎಸ್‌ಇ ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಬಿಡ್ಡಿಂಗ್‌ ವಿಂಡೋದ ಮುಕ್ತಾಯದ ವೇಳೆಗೆ ಸುಮಾರು 40.8 ಕೋಟಿ ಷೇರುಗಳನ್ನು ಒಟ್ಟುಗೂಡಿಸುವ ಬಿಡ್‌ಗಳು ಇದ್ದವು.

Tap to resize

Latest Videos

undefined

ಕಂಪನಿಯ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (RHP) ಪ್ರಕಾರ, Resourceful Automobile IPO ಆದಾಯವನ್ನು ದೆಹಲಿ-NCR ಪ್ರದೇಶದಲ್ಲಿ ಎರಡು ಹೊಸ ಶೋರೂಮ್‌ಗಳನ್ನು ತೆರೆಯುವುದು, ಸಾಲ ಮರುಪಾವತಿ ಮತ್ತು ಕಾರ್ಯನಿರತ ಬಂಡವಾಳದ ಅಗತ್ಯಗಳನ್ನು ಒಳಗೊಂಡಂತೆ ತನ್ನ ಕಾರ್ಯಾಚರಣೆಗಳ ವಿಸ್ತರಣೆಗೆ ಹಣವನ್ನು ಬಳಸಲು ಯೋಜಿಸಿದೆ. ಷೇರುಗಳ ಅಲಾಟ್‌ಮೆಂಟ್‌ಅನ್ನು ಆಗಸ್ಟ್ 27 ರಂದು ಕ್ಯಾಮಿಯೊ ಕಾರ್ಪೊರೇಟ್ ಸರ್ವಿಸಸ್ ಪ್ರಕಟಿಸಿದೆ.

2023ರ ಆಗಸ್ಟ್‌ 31ರಂದು ಕೊನೆಗೊಂಡ ಅವಧಿಗೆ  ರಿಸೋರ್ಸ್‌ಫುಲ್ ಆಟೋಮೊಬೈಲ್ ತನ್ನ ಕಾರ್ಯಾಚರಣೆಯ ಚಟುವಟಿಕೆಗಳಿಂದ ರೂ 19.33 ಲಕ್ಷದ ಋಣಾತ್ಮಕ ನಗದು ಹರಿವನ್ನು ವರದಿ ಮಾಡಿದೆ. ಹಾಗಿದ್ದರೂ, ಈ ಕಂಪನಿಗೆ ಹರಿದುಬರುತ್ತಿರುವ ಲಿಕ್ವಿಡಿಟಿ ಹಾಗೂ ಓವರ್‌ಸಬ್‌ಸ್ಕ್ರಿಪ್ಶನ್‌ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಿಸೋರ್ಸ್‌ಫುಲ್ ಆಟೋಮೊಬೈಲ್ಸ್‌ ಐಪಿಓ ಕ್ರೇಜ್‌ಗೆ ಸಂಬಂಧಪಟ್ಟಂತೆ ಹಲವು ಟ್ವೀಟ್‌ ಮಾಡಿದ್ದು, ಹೆಚ್ಚಿನವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ಭಾರತೀಯ ಮಾರುಕಟ್ಟೆಯಲ್ಲ ಫೀವರ್‌ ಪಿಚ್‌ ಹಿಟ್‌ ಆಗಿದೆ. ನೆಗೆಟಿವ್‌ ಕ್ಯಾಶ್‌ ಫ್ಲೋ ಇದ್ದರೂ Resourceful Automobile IPO 200 ಪಟ್ಟು ಓವರ್‌ಸಬ್‌ಸ್ಕ್ರೈಬ್‌ ಆಗಿರುವುದು ಅಚ್ಚರಿ ಮೂಡಿಸಿದೆ. ಕಂಪನಿ ಕೇವಲ 12 ಕೋಟಿ ರೂಪಾಯಿಅನ್ನು ಸಂಗ್ರಹ ಮಾಡುವ ನಿರೀಕ್ಷೆಯಲ್ಲಿತ್ತು. ಆದರೆ, ಬಿಡ್ಡಿಂಗ್‌ನಲ್ಲಿ ಈವರೆಗೂ 2400 ಕೋಟಿ ಬಂದಿದೆ. ಎರಡು ವರ್ಷಗಳ ಕಾಲ ಕಂಪನಿಯ ಕ್ಯಾಶ್‌ ಫ್ಲೋ ನೆಗೆಟಿವ್‌ ಆಗಿದೆ. ಇನ್ನು ಗ್ರೇ ಮಾರ್ಕೆಟ್‌ ಪ್ರೀಮಿಯಂ ಬಗ್ಗೆ ಶೇ. 70ರಷ್ಟು ಏರಿಕೆ ಕಂಡಿದೆ.

ರೈಲ್ವೇಸ್‌ನ ಈ ಒಂದು ಕಂಪನಿಯಿಂದಲೇ 1700 ಕೋಟಿ ಲಾಭಾಂಶ ಪಡೆದ ಕೇಂದ್ರ ಸರ್ಕಾರ

ನಾನು ರಿಸೋರ್ಸ್‌ಫುಲ್‌ ಆಟೋಮೊಬೈಲ್‌ ಐಪಿಓಅನ್ನು ಅವಾಯ್ಡ್‌ ಮಾಡುತ್ತಿದ್ದೇನೆ. 2 ಶೋರೂಮ್‌ಗಳಿರುವ ಕಂಪನಿ ಯಮಹಾ ಬೈಕ್‌ಗಳನ್ನು ಸಾಹ್ನಿ ಆಟೋಮೊಬೈಲ್ಸ್ ಹೆಸರಿನ ಡೀಲರ್‌ಶಿಪ್‌ನಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯಲ್ಲಿ ಕೇವಲ 8 ಮಂದಿ ಉದ್ಯೋಗಿಗಳಿದ್ದು, ಅನುಮಾನ ಬರುವಂತಿದೆ' ಎಂದಿದ್ದಾರೆ.

 

Top IPOs in 2023: ಈ ವರ್ಷ ಹೂಡಿಕೆದಾರರಿಗೆ ಅದೃಷ್ಟದ ಬಾಗಿಲು ತೆರೆದ ಐಪಿಒ ಯಾವುದು ಗೊತ್ತಾ?

click me!