ಸಿಮ್ ಆಯ್ತು, ಬರಲಿವೆ 5 ಸಾವಿರಕ್ಕೂ ಅಧಿಕ ಜಿಯೋ ಪೆಟ್ರೋಲ್‌ ಬಂಕ್‌!

By Suvarna News  |  First Published Dec 23, 2019, 8:36 AM IST

ಸಿಮ್‌ ಆಯ್ತು, ಬರಲಿವೆ ಜಿಯೋ ಪೆಟ್ರೋಲ್‌ ಬಂಕ್‌!| ಪೆಟ್ರೋಲಿಯಂ ಕ್ಷೇತ್ರದಲ್ಲಿ ದರ ಸಮರ?| 4400 ಬಂಕ್‌ ತೆರೆಯಲು ರಿಲಯನ್ಸ್‌ ಸಿದ್ಧತೆ


ನವದೆಹಲಿ[ಡಿ.23]: ಉಚಿತ ಕರೆ, ಅಗ್ಗದ ಬೆಲೆಗೆ ಇಂಟರ್ನೆಟ್‌ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಕಂಪನಿ ಇದೀಗ ಜಿಯೋ ಬ್ರ್ಯಾಂಡ್‌ನಲ್ಲಿ ಇಂಧನ ಕ್ಷೇತ್ರಕ್ಕೆ ಕಾಲಿಡಲು ಭರ್ಜರಿ ಸಿದ್ಧತೆ ನಡೆಸಿದೆ. ಬ್ರಿಟನ್‌ ಮೂಲದ ಬಿಪಿ ಸಂಸ್ಥೆ ಜತೆಗೂಡಿ ‘ಜಿಯೋ-ಬಿಪಿ ಹೆಸರಿನ’ ಪೆಟ್ರೋಲ್‌ ಪಂಪ್‌ಗಳ ಸ್ಥಾಪನೆಗೆ ಯೋಜನೆ ರೂಪಿಸುತ್ತಿದೆ.

ದೇಶಾದ್ಯಂತ ಜಿಯೋ ಸೇವೆ ಆರಂಭವಾದ ಬಳಿಕ ಮೊಬೈಲ್‌ ನೆಟ್‌ವರ್ಕ್ ಹಾಗೂ ಇಂಟರ್ನೆಟ್‌ ಕ್ಷೇತ್ರಗಳಲ್ಲಿ ಉದ್ಭವವಾಗಿದ್ದ ದರ ಸಮರವು ಇಂಧನ ಕ್ಷೇತ್ರಕ್ಕೂ ವ್ಯಾಪಿಸುವ ಸಾಧ್ಯತೆಯಿದೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ ಪಂಪ್‌ಗಳಾದ ಬಿಪಿಸಿಎಲ್‌, ಎಚ್‌ಪಿಸಿಎಲ್‌, ಐಒಸಿ ಸೇರಿ ಇನ್ನಿತರ ಸಂಸ್ಥೆಗಳ ಮೇಲೆ ಹೊಡೆತ ಬೀಳುವ ಭೀತಿ ಎದುರಾಗಿದೆ.

Latest Videos

ಭಾರತದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಬ್ರಿಟನ್‌ ಮೂಲದ ಬಿಪಿ ಸಂಸ್ಥೆಗಳು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 4000ಕ್ಕೂ ಹೆಚ್ಚು ಪೆಟ್ರೋಲ್‌ ಪಂಪ್‌ಗಳ ಸ್ಥಾಪನೆಗೆ ಮುಂದಾಗಿವೆ ಎಂದು ವರದಿಯೊಂದು ತಿಳಿಸಿದೆ.

ಈ ಮೂಲಕ ಈಗಾಗಲೇ 1400 ಇರುವ ರಿಲಯನ್ಸ್‌ ಪಂಪ್‌ಗಳ ಸಂಖ್ಯೆ 5500ಕ್ಕಿಂತ ಹೆಚ್ಚಾಗುವ ಸಂಭವವಿದೆ. ಜಿಯೋ-ಬಿಪಿ ಪೆಟ್ರೋಲ್‌ ಪಂಪ್‌ಗಳು ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವ ಮಹಾ ಉದ್ದೇಶವನ್ನು ಹೊಂದಿದ್ದು, ಇದರಿಂದ ಹೆದ್ದಾರಿಗಳಲ್ಲಿ ಅತಿಹೆಚ್ಚು ಪೆಟ್ರೋಲ್‌ ಪಂಪ್‌ ಹೊಂದಿರುವ ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್‌ ಹಾಗೂ ನಗರ ಪ್ರದೇಶದ ವ್ಯಾಪ್ತಿಗಳಲ್ಲಿರುವ ಎಚ್‌ಪಿಸಿಎಲ್‌ಗೆ ಅತಿಹೆಚ್ಚು ಹೊಡೆತ ನೀಡುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

click me!