ಜೀವನದ ಭಾಗವಾದ ರಿಲಯನ್ಸ್: ಲಾಭದಲ್ಲಿ ಇದನ್ನು ಮೀರಿಸುವುದು ನೋ ಚಾನ್ಸ್!

By Suvarna NewsFirst Published Jan 18, 2020, 3:08 PM IST
Highlights

ದೇಶದ ವ್ಯಾಪಾರ ಕ್ಷೇತ್ರದ ಅಧಿಪತಿ ಮುಖೇಶ್ ಅಂಬಾನಿ| ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಮುಟ್ಟಿದ್ದೆಲ್ಲಾ ಚಿನ್ನ| ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ ಶೇ.13.5 ರಷ್ಟು ಏರಿಕೆ| ನಿವ್ವಳ ಲಾಭದ ಒಟ್ಟು ಮೌಲ್ಯ 11,640 ಕೋಟಿ ರೂ.| ಒಟ್ಟು 13,968 ಕೋಟಿ ರೂ. ಆದಾಯ ಗಳಿಸಿದ ರಿಲಯನ್ಸ್ ಜಿಯೋ| 3ನೇ ತ್ರೈ ಮಾಸಿಕದ ನಿವ್ವಳ ಲಾಭದಲ್ಲಿ ಶೇ 36.4 ರಷ್ಟು ಏರಿಕೆ| ಭಾರತದ ಅತಿದೊಡ್ಡ ಚಿಲ್ಲರೆ ಕಂಪನಿಯಾಗಿ ಹೊರ ಹೊಮ್ಮಿದ ರಿಲಯನ್ಸ್ ರಿಟೇಲ್| ಪ್ರಸಕ್ತ ತ್ರೈಮಾಸಿಕದಲ್ಲಿ ರಿಲಯನ್ಸ್ ರಿಟೇಲ್ 45,327 ಕೋಟಿ ರೂ. ವಹಿವಾಟು|

ಮುಂಬೈ(ಜ.18): ದೇಶದ ವ್ಯಾಪಾರ ಕ್ಷೇತ್ರದ ಅಧಿಪತಿ, ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಮುಟ್ಟಿದ್ದೆಲ್ಲಾ ಚಿನ್ನ. ಅಂದುಕೊಂಡಿದ್ದೆಲ್ಲವನ್ನೂ ಸಾಧಿಸುವ ಮುಖೇಶ್ ಅಂಬಾನಿ, ವ್ಯಾಪಾರ ಕ್ಷೇತ್ರದ ಉತ್ತುಂಗವನ್ನು ತಲುಪಿದ್ದರೂ ಇನ್ನೂ ಸಾಧಿಸುವ ಛಲ ಬಿಟ್ಟಂತಿಲ್ಲ.

ಇದಕ್ಕೆ ಪುಷ್ಠಿ ಎಂಬಂತೆ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಲಾಭದ ಒಟ್ಟು ಮೌಲ್ಯ 11,640 ಕೋಟಿ ರೂ. ಆಗಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್ ರೂ.10,251 ಕೋಟಿ ರೂ.ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ ರೂ.1.68 ಲಕ್ಷ ಕೋಟಿ ಗಳಷ್ಟಿದ್ದರೆ, ಪ್ರಸಕ್ತ ಸಾಲಿನಲ್ಲಿ 1.71 ಲಕ್ಷ ಕೋಟಿ ರೂ. ಆದಾಯ ಗಳಿಕೆಯಾಗಿದೆ.

ಇನ್ನು ರಿಲಯನ್ಸ್ ಸಮೂಹದ ಅಂಗ ಸಂಸ್ಥೆ ರಿಲಯನ್ಸ್ ಜಿಯೋ ಇನ್ಫೋಕಾಮ್, ಈ ಬಾರಿಯ ತ್ರೈ ಮಾಸಿಕದಲ್ಲಿ, ಪ್ರತಿ ಬಳಕೆದಾರರ ಸರಾಸರಿ 128.4 ರೂ.ಗಳಾಗಿದ್ದು, ಒಟ್ಟು 13,968 ಕೋಟಿ ರೂ. ಆದಾಯ ಗಳಿಸಿದೆ. ಅಲ್ಲದೇ ರಿಲಯನ್ಸ್ ಜಿಯೋ 3ನೇ ತ್ರೈ ಮಾಸಿಕದ ನಿವ್ವಳ ಲಾಭದಲ್ಲಿ ಶೇ 36.4 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 1,350 ಕೋಟಿ ರೂ. ಆಗಿದೆ.

ಸಂಭ್ರಮ ಡಬಲ್: ವರ್ಷದ ಕೊನೆಯ ದಿನ ಜಬರ್ದಸ್ತ್ ಗಿಫ್ಟ್ ಕೊಟ್ಟ ಜಿಯೋ!

ಇಷ್ಟೇ ಅಲ್ಲದೇ ಭಾರತದ ಅತಿದೊಡ್ಡ ಚಿಲ್ಲರೆ ಕಂಪನಿಯಾಗಿ ರಿಲಯನ್ಸ್ ರಿಟೇಲ್ ಖ್ಯಾತಿ ಗಳಿಸಿದ್ದು, ಪ್ರಸಕ್ತ ತ್ರೈಮಾಸಿಕದಲ್ಲಿ 176 ದಶ ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಅವಧಿಯಲ್ಲಿ ಶೇ. 42.6ರಷ್ಟು ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ರಿಲಯನ್ಸ್ ರಿಟೇಲ್ 45,327 ಕೋಟಿ ರೂ. ವಹಿವಾಟು ನಡೆಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 27.4ರಷ್ಟು ಏರಿಕೆಯಾಗಿದೆ.

ಜನವರಿ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!