Investment in Cryptocurrency : ವಾರೆನ್ ಬಫೆಟ್ ಗೆ ಬಿಟ್ ಕಾಯಿನ್ ಅಂದ್ರೆ ಅಲರ್ಜಿ, ಯಾಕ್ ಗೊತ್ತಾ?

By Suvarna NewsFirst Published Dec 6, 2021, 3:05 PM IST
Highlights

ಜಗತ್ತಿನಾದ್ಯಂತ ಹೂಡಿಕೆದಾರರು ಇತ್ತೀಚಿನ ದಿನಗಳಲ್ಲಿ ಬಿಟ್ ಕಾಯಿನ್ ಹಾಗೂ ಕ್ರಿಪ್ಟೋಕರೆನ್ಸಿ ಕಡೆ ಆಸಕ್ತಿ ತೋರುತ್ತಿದ್ರೆ, ವಿಶ್ವದ ಅಗ್ರಗಣ್ಯ ಹೂಡಿಕೆದಾರ ವಾರೆನ್  ಬಫೆಟ್ ಮಾತ್ರ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಅವರ ಈ ನಡೆಗೆ ಪ್ರಬಲವಾದ ಕಾರಣಗಳೂ ಇವೆ.

ಬಿಟ್ ಕಾಯಿನ್ (Bitcoin) ಹಾಗೂ ಕ್ರಿಪ್ಟೋ ಕರೆನ್ಸಿ (cryptocurrency )ಈ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಜನರು ಇವೆರಡರ ಬಗ್ಗೆ ಇತ್ತೀಚೆಗೆ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಹೂಡಿಕೆದಾರ(Investor) ಕೂಡ ಬಿಟ್ ಕಾಯಿನ್ ಹಾಗೂ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ (Investment) ಮಾಡಲು ಯೋಚಿಸುತ್ತಿರೋದು ಇವೆರಡರ ಮೇಲೂ ಭವಿಷ್ಯದಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಮೂಡಿಸಿದೆ. ಮಾರ್ಚ್ ನಲ್ಲಿ ಶೇ.100 ಕ್ರಿಪ್ಟೋ ಕರೆನ್ಸಿ ಆಧರಿತ ವೀಸಾ ಕಾರ್ಡ್(VISA card) ಪ್ರಥಮ ವಹಿವಾಟು ನಡೆಸಿ ಯುಎಸ್ ಡಿ ಕಾಯಿನ್ (USD coin) ಎಂಬ ಕ್ರಿಪ್ಟೋಕರೆನ್ಸಿಯನ್ನು ಅಮೆರಿಕನ್ ಡಾಲರ್ ಗೆ ಪರಿವರ್ತಿಸಲಾಗಿತ್ತು ಕೂಡ.  ಇದು ಜನರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸಾಂಪ್ರದಾಯಿಕ ಕರೆನ್ಸಿಗೆ ಪರಿರ್ವತಿಸಬಹುದೆಂಬ ಭರವಸೆ ಮೂಡಿಸಿತ್ತು. ಇನ್ನು ಏಪ್ರಿಲ್ ನಲ್ಲಿ ಬಿಟ್ ಕಾಯಿನ್ ಬೆಲೆ ಅತ್ಯಧಿಕ 63,000 ಡಾಲರ್ ಗೆ ಏರಿಕೆ ಕಂಡಿರೋದು ವಿಶ್ವಾದ್ಯಂತ ಹೂಡಿಕೆದಾರರು ಇದರತ್ತ ತಿರುಗಿ ನೋಡುವಂತೆ ಮಾಡಿತ್ತು. ಆದ್ರೆ ವಿಶ್ವದ ಅಗ್ರಗಣ್ಯ ಹೂಡಿಕೆದಾರ ವಾರೆನ್ ಬಫೆಟ್ (Warren Buffett ) ಮಾತ್ರ ಬಿಟ್ ಕಾಯಿನ್ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಅಷ್ಟೇ ಅಲ್ಲ, ಬಿಟ್ ಕಾಯಿನ್ ಹೈಪ್ರೋಫೈಲ್ ಟೀಕಾಕಾರಲ್ಲಿ ಅವರೂ ಒಬ್ಬರು. 2018ರಲ್ಲಿ ಬಿಟ್ ಕಾಯಿನ್ ಅನ್ನು ಟೀಕಿಸಿದ್ದ ಬಫೆಟ್ ಅದನ್ನು 'ಅತ್ಯಂತ ಅಪಾಯಕಾರಿ ವಿಷ' ಎಂದೂ ಕರೆದಿದ್ದರು.

ಬಫೆಟ್ ಬಿಟ್ ಕಾಯಿನ್ ವಿರೋಧಿಸಲು ಕಾರಣವೇನು?
ಬಫೆಟ್ ಬಿಟ್ ಕಾಯಿನ್ ವಿರೋಧಿಸಲು 3 ಬಲವಾದ ಕಾರಣಗಳಿವೆ. ಅವು ಯಾವುವು ಗೊತ್ತಾ?
1.ವಾಸ್ತವಿಕ ಮೌಲ್ಯವಿಲ್ಲ
ಆಂತರಿಕ ಮೌಲ್ಯವನ್ನು ವರ್ಧಿಸಿಕೊಳ್ಳೋ ಕಂಪನಿಗಳು ಹಾಗೂ ಆಸ್ತಿಗಳೆಂದ್ರೆ ವಾರೆನ್ ಬಫೆಟ್ ಅವರಿಗೆ ಅಚ್ಚುಮೆಚ್ಚು. ಉದಾಹರಣೆಗೆ ನೀವು ಒಂದು ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತೀರಿ, ಆ ಸಂಸ್ಥೆ ಪ್ರತಿವರ್ಷ ಎಷ್ಟು ಉತ್ಪಾದನೆ ಮಾಡುತ್ತದೋ ಅದಕ್ಕೆ ಮೌಲ್ಯವಿದೆ. ಅದರ ಷೇರು ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳದಿದ್ರೂ ಆ ಸಂಸ್ಥೆಯ ಉತ್ಪಾದಿಸೋ ಸರಕುಗಳಿಗಂತೂ ಮೌಲ್ಯ ಇದ್ದೇಇರುತ್ತದೆ. ಅದೇ ನೀವು ಬಿಟ್ ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿ ಖರೀದಿಸಿದ್ರೆ, ಅದ್ರಿಂದ ಉತ್ಪಾದನೆ ಏನೂ ಇಲ್ಲ ಅನ್ನೋದು ಬಫೆಟ್ ಅಭಿಪ್ರಾಯ. ಯಾಹೂ ಫೈನಾನ್ಸ್ ಗೆ ನೀಡಿದ್ದ ಹೇಳಿಕೆಯೊಂದರಲ್ಲಿ ಬಿಟ್ ಕಾಯಿನ್ ಕುರಿತ ತನ್ನ ಸ್ಪಷ್ಟ ಪರಿಲ್ಪನೆಯನ್ನು ಬಫೆಟ್ ಹೀಗೆ ವಿವರಿಸಿದ್ದರು-'ಬಿಟ್ ಕಾಯಿನ್ ಅಥವಾ ಕ್ರಿಪ್ಟೋಕರೆನ್ಸಿ ಪರಿಕಲ್ಪನೆ ಬರೀ ಆಶಾವಾದದ ಮೇಲೆ ನಿಂತಿದೆ. ನೀವು ಇನ್ನೊಬ್ಬ ವ್ಯಕ್ತಿ ಮುಂದೆ ಈಗಿರೋದಕ್ಕಿಂತ ಹೆಚ್ಚು ಬೆಲೆ ನೀಡುತ್ತಾನೆ ಎಂಬ ವಿಶ್ವಾಸದಲ್ಲಿರುತ್ತೀರಿ. ಅದೇ ರೀತಿ ಆ ಇನ್ನೊಬ್ಬ ವ್ಯಕ್ತಿ ಮತ್ತೊಬ್ಬ ಹೆಚ್ಚಿನ ಬೆಲೆ ನೀಡುತ್ತಾನೆ ಎಂಬ ನಂಬಿಕೆಯಲ್ಲಿರುತ್ತಾನೆ.' ಬಫೆಟ್ ಚಿನ್ನದ ಮೇಲಿನ ಹೂಡಿಕೆಯನ್ನು ಕೂಡ ಇದೇ ಕಾರಣಕ್ಕೆ ಇಷ್ಟಪಡೋದಿಲ್ಲವಂತೆ.

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

2.ಅರ್ಥವಾಗೋ ಕ್ಷೇತ್ರದಲ್ಲಿ ಮಾತ್ರ ಹೂಡಿಕೆ
ಕ್ರಿಪ್ಟೋ ಕರೆನ್ಸಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸಮರ್ಪಕ ಮಾಹಿತಿ ಹೊಂದಿರದೆ ಅನೇಕರು ಇದ್ರಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಕ್ರಿಪ್ಟೋಕರೆನ್ಸಿಗಳಿವೆ. ಇದ್ರಲ್ಲಿ ಬಹುತೇಕ ಕಾಯಿನ್ ಗಳು ವೈಫಲ್ಯ ಹೊಂದೋ ಸಾಧ್ಯತೆಯಿದೆ. ಒಬ್ಬ ಹೂಡಿಕೆದಾರ ಒಂದು ಕ್ಷೇತ್ರದಲ್ಲಿ ಹೂಡಿಕೆ ಮಾಡೋ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರೋದು ಅಗತ್ಯ. ತನಗೆ ಅರ್ಥವಾಗದ ಕ್ಷೇತ್ರದಲ್ಲಿ ಹೂಡಿಕೆ ಮಾಡೋದು ಅಪಾಯಕಾರಿ ಎಂಬುದು ಬಫೆಟ್ ಅಭಿಪ್ರಾಯ. 'ನನಗೆ ಸ್ವಲ್ಪ ಏನೋ ತಿಳಿದಿದೆ ಎಂಬ ವಿಷಯದಲ್ಲಿ ಸಾಕಷ್ಟು ಅಪಾಯ ಎದುರಿಸಲು ನಾನು ಸಿದ್ಧನಿದ್ದೇನೆ. ಆದ್ರೆ ಏನೂ ಅರ್ಥವಾಗದ ಕ್ಷೇತ್ರಕ್ಕೆ ಪ್ರವೇಶಿಸಲು ನಾನು ಇಷ್ಟಪಡೋದಿಲ್ಲ' ಎಂದು ಬಫೆಟ್ ಸಿಎನ್ ಬಿಸಿಗೆ 2018ರಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದೇ ಕಾರಣಕ್ಕೆ ಬಫೆಟ್ ಮೈಕ್ರೋಸಾಫ್ಟ್ , ಫೇಸ್ಬುಕ್ ಮೊದಲಾದ ಟೆಕ್ ಸ್ಟಾಕ್ಗಳಲ್ಲಿ ಪ್ರಾರಂಭದಲ್ಲಿ ಹೂಡಿಕೆ ಮಾಡಿರಲಿಲ್ಲ. ಹಾಗಂತ ಈ ಕಂಪನಿಗಳಲ್ಲಿ ಹೂಡಿಕೆ ಮಾಡೋದು ಅಪಾಯಕಾರಿ ಎಂದೇನಲ್ಲ. ಆದ್ರೆ ಬಫೆಟ್ ಸ್ವಲ್ಪ ಸಮಯ ಕಾದು ನೋಡಿ ಆ ಕ್ಷೇತ್ರದ ಬೆಳವಣಿಗೆಯನ್ನು ಗಮನಿಸಿ ಆ ಬಳಿಕ ಹೂಡಿಕೆ ಮಾಡೋ ತಂತ್ರ ಅನುಸರಿಸುತ್ತಾರೆ.

ಕ್ರಿಪ್ಟೋಗೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ಕಾಯ್ದೆ ತಿದ್ದುಪಡಿ

3.ಕರೆನ್ಸಿಯಂತೆ ಕಾರ್ಯನಿರ್ವಹಿಸೋದಿಲ್ಲ
2009ರಲ್ಲಿ ಮೊದಲ ಬಾರಿಗೆ ಬಿಟ್ ಕಾಯಿನ್ ಬಿಡುಗಡೆಯಾದಾಗ ಇದು ವಿಶ್ವದ ಮೊದಲ ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿ ಬೆಳೆಯೋ ವಿಶ್ವಾಸ ಮೂಡಿಸಿತ್ತು. ನೀವು ಇನ್ನೊಬ್ಬ ವ್ಯಕ್ತಿಗೆ ಬ್ಯಾಂಕ್ ಅಥವಾ ಸರ್ಕಾರದ ಬೆಂಬಲವಿಲ್ಲದೆ ಹಣ ವರ್ಗಾಯಿಸಲು ಇದು ಅವಕಾಶ ಮಾಡಿಕೊಟ್ಟಿತ್ತು. ಆದ್ರೆ ಬಫೆಟ್ ಪ್ರಕಾರ ಬಿಟ್ ಕಾಯಿನ್ ಅಥವಾ ಇತರ ಯಾವುದೇ ಡಿಜಿಟಲ್ ಕರೆನ್ಸಿ ದೀರ್ಘಾವಧಿ ವಿನಿಮಯದ ಮಾಧ್ಯಮವಾಗಲಾರದು. ಇವುಗಳಿಗೆ ಯಾವುದೇ ಮೌಲ್ಯವಿಲ್ಲ. ಹೀಗಾಗಿ ಇದು ಕರೆನ್ಸಿಯಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. 


 

click me!