ಅಕ್ಟೋಬರ್ 2024ರಲ್ಲಿ ಜಾರಿಗೊಳಿಸಿರುವ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಯೋಜನೆ ಮುಗಿದಿರುವ ಎಲ್ಲಾ ಯೋಜನೆಗೆ ಈ ಆದೇಶದಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಈಗ ಆರಂಭವಾಗಿರುವ ಯೋಜನೆಗಳಿಗೆ ಸರ್ಕಾರದ ಆದೇಶ ವಿಘ್ನವಾಗಿದ್ದು, ಕೋಟ್ಯಂತರ ಬಂಡವಾಳ ಹಾಕಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಿದ್ಯಾಕಾಂತರಾಜ್
ಸಕಲೇಶಪುರ(ಡಿ.21): ಐದು ಎಕರೆಗಿಂತ ಕಡಿಮೆ ಭೂಮಿಯನ್ನು ಮನ ಬಂದಂತೆ ವಿಭಜಿಸುವಂತಿಲ್ಲ ಎಂಬ ಸರ್ಕಾರದ ಆದೇಶ ತಾಲೂಕಿನ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ. ಸಕಲೇಶಪುರ ತಾಲೂಕಿನಲ್ಲಿ ಭೂಮಿ ಖರೀದಿಸುವವರ ಸಂಖ್ಯೆ ವಿಪರೀತಗೊಂಡಿದ್ದು ಸಣ್ಣ, ಅತಿ ಸಣ್ಣ ಜಮೀನಿಗೆ ಬೇಡಿಕೆ ಹೆಚ್ಚಿದೆ. ಆದರೆ, ತಾಲೂಕಿ ನಲ್ಲಿ ತುಂಡು ಭೂಮಿಯ ಕೊರತೆ ಕಾಡುತ್ತಿದೆ. ಇದನ್ನು ಗಮನಿಸಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಬೃಹತ್ ಗಾತ್ರದ ಜಮೀನು ಖರೀದಿಸಿ ಜಮೀನನ್ನು ಸಣ್ಣದಾಗಿ ವಿಭಜಿಸಿ ಮಾರಾಟ ಮಾಡುವ ಯೋಜನೆ ಕಳೆದ ಅರ್ಧ ದಶಕದಿಂದ ತಾಲೂಕಿನಲ್ಲಿ ಗರಿಗೆದರಿದ್ದು ಇಂತಹ ಸಾಕಷ್ಟು ಯೋಜನೆಗಳು ತಾಲೂಕಿನಲ್ಲಿ ಕಾರ್ಯಗತಗೊಳ್ಳುತ್ತಿವೆ.
undefined
ವಿಲ್ಲಾ ಯೋಜನೆ:
ದೊಡ್ಡ ದೊಡ್ಡ ಕಾಫಿತೋಟ ಖರೀದಿಸಿ ತೋಟಗಳನ್ನು ಐದು ಗುಂಟೆಗಳಂತೆ ವಿಭಜಿಸಿ ಮಾರಾಟ ಮಾಡುವ ಯೋಜನೆ ವಿಲ್ಲಾ ಯೋಜನೆ ಎಂದು ಕರೆಸಿಕೊಳ್ಳುತ್ತಿದ್ದು, ಬೆಂಗಳೂರಿನ ಜನರಿಗೆ ಈ ತರಹದ ಜಮೀನು ಖರೀದಿ ತೀರ ಅಪ್ಯಾಯಮಾನವಾಗಿದೆ.
ಹೊಸ ಬಡಾವಣೆ ಅಭಿವೃದ್ಧಿಗೆ ಇ-ಖಾತಾ ಹೊಡೆತ, ಸೈಟ್ ನೋಂದಣಿ ಆಗ್ತಿಲ್ಲ: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಪೆಟ್ಟು
ಇದುವರೆಗೆ ಇದ್ದ ಮಾನದಂಡ:
ಇದುವರೆಗೆ 5 ಗುಂಟೆಯಂತೆ ಜಮೀನು ವಿಭಜಿಸಿ ಮಾರಾಟ ಮಾಡಲು ಅವಕಾಶವಿದ್ದ ಕಾರಣ ವಿಲ್ಲಾ ಯೋಜನೆಯಡಿ ರಿಯಲ್ ಎಸ್ಟೇಟ್ ಉದ್ಯಮಿಗಳು 5 ಗುಂಟೆಗಿಂತ ಹೆಚ್ಚಿನ ಭೂಮಿಯನ್ನು ವಿಭಜಿಸಿ ಮಾರಾಟ ಮಾಡುತ್ತಿದ್ದರು. ತಾಲೂಕಿನಲ್ಲಿ ಇಂತಹ 30ಕ್ಕೂ ಅಧಿಕ ಯೋಜನೆಗಳು ತಾಲೂಕಿನಲ್ಲಿ ನಡೆಯುತ್ತಿದ್ದರೆ, ಈಗಾಗಲೇ 11ಕ್ಕೂ ಅಧಿಕ ಯೋಜನೆಗಳು ಮುಗಿದಿದ್ದು ತುಂಡು ಜಮೀನುಗಳನ್ನು ಹೆಚ್ಚಾಗಿ ಚಿತ್ರ ರಂಗದ ವ್ಯಕ್ತಿಗಳೇ ಖರೀದಿಸುತ್ತಿರುವುದು ವಿಶೇಷ ವಾಗಿದೆ. ತಾಲೂಕಿನಲ್ಲಿ ಭೂಮಿ ಖರೀದಿಸಿರುವ ಹಲವರು ಇಲ್ಲಿಯೇ ನೆಲೆ ನಿಲ್ಲಲಾರಂಭಿಸಿದ್ದರೆ ಕೆಲವರು ವಾರಂತ್ಯದಲ್ಲಿ ಬಂದು ವಿಶ್ರಾಂತಿ ಪಡೆಯಲಷ್ಟೇ ಇಂತಹ ಭೂಮಿಗಳನ್ನು ಉಪಯೋಗಿಸುತ್ತಿದ್ದಾರೆ.
ಮರ್ಮಾಘಾತ:
ಅಕ್ಟೋಬರ್ 2024ರಲ್ಲಿ ಜಾರಿಗೊಳಿಸಿರುವ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಯೋಜನೆ ಮುಗಿದಿರುವ ಎಲ್ಲಾ ಯೋಜನೆಗೆ ಈ ಆದೇಶದಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಈಗ ಆರಂಭವಾಗಿರುವ ಯೋಜನೆಗಳಿಗೆ ಸರ್ಕಾರದ ಆದೇಶ ವಿಘ್ನವಾಗಿದ್ದು, ಕೋಟ್ಯಂತರ ಬಂಡವಾಳ ಹಾಕಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸರ್ಕಾರದ ಆದೇಶದಲ್ಲಿ ಏನಿದೆ:
ಪ್ಲಾಂಟೇಷನ್ ಭೂಮಿಯನ್ನು ಮನಬಂದಂತೆ ಹರಿದು ಹಂಚುತ್ತಿ ರುವುದನ್ನು ಮನಗಂಡಿರುವ ಸರ್ಕಾರ ಪ್ಲಾಂಟೇಷನ್ ಭೂಮಿಯನ್ನು ಭವಿಷ್ಯದಲ್ಲಿ ಅದರ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಭೂ ಮಾಫಿಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 108 ಅನ್ವಯ ಪ್ಲಾಟೇಷನ್ ಭೂಮಿಗೆ ಕನಿಷ್ಠ ವಿಸ್ತೀರ್ಣ ನಿಗದಿಪಡಿಸಲು ನಿಶ್ಚಯಿಸಿದ್ದು, ಇದರಂತೆ ಬೇಸಾಯದ ಉದ್ದೇಶಗಳಿಗೆ ಮಾತ್ರ ಉಪಯೋಗಿಸಲಾಗುವ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರತಕ್ಕದ್ದಲ್ಲ. ಕಂದಾಯ ಇಲಾಖೆ ನಿರ್ಣಯಿಸಿದೆ. ಅದರಂತೆ ಪ್ಲಾಂಟೇಷನ್ ಜಮೀನುಗಳಿಗೆ ಮತ್ತು ಪಶ್ಚಿಮಘಟ್ಟದಲ್ಲಿನ ಸಾರ್ವಜನಿಕರ ಹಾಗೂ ಪರಿಸರ ಸಂಪನ್ಮೂಲದ ಭವಿಷ್ಯದ ಹಿತದೃಷ್ಟಿಯಿಂದ ಪಶ್ಚಿಮಘಟ್ಟದಲ್ಲಿನ ಖಾಸಗಿ ಜಮೀನು ಭೂ ಉಪಯೋಗದ ಕುರಿತು ನಿಯಮ ರೂಪಿಸುವುದು ಮತ್ತು ಕ್ರಯದ ಕನಿಷ್ಠ ವಿಸ್ತೀರ್ಣವನ್ನು ನಿಗದಿಪಡಿಸಲು ಉದ್ದೇಶಿಸಿದೆ.
ಈ ಪ್ರಕಾರ 11ಇ ನಕ್ಷೆ ವಿತರಿಸುವ ವೇಳೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಜಂಟಿಯಾಗಿ ಖರೀದಿ ಮಾಡುತ್ತಿರುವ ಪ್ರಕರಣಗಳಲ್ಲಿ ತಲಾ 5 ಎಕರೆ ವಿಸ್ತೀರ್ಣಕ್ಕೆ ಕಡಿಮೆ ಇರುವಂತೆ 11ಇ ನಕ್ಷೆಗಳನ್ನು ಸಿದ್ಧಪಡಿಸುವಂತಿಲ್ಲ ಹಾಗೂ ವಿತರಿಸುವಂತಿಲ್ಲ ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಗೊಂದಲ:
ತಾಲೂಕಿನಲ್ಲಿ ಬಡಮಧ್ಯಮವರ್ಗದ ಸಂಖ್ಯೆ ಹೆಚ್ಚಿದ್ದು, ಐದು ಅದಕ್ಕಿಂತ ಕಡಿಮೆ ಪ್ಲಾಂಟೇಷನ್ ಹೊಂದಿರುವವರ ಸಂಖ್ಯೆ ಅಧಿಕವಾಗಿದೆ. ಆದರೆ, ಸರ್ಕಾರದ ಈ ಆದೇಶ ಈ ವರ್ಗದ ಜನರಿಗೆ ಹೊಸ ಸಂಕಷ್ಟ ತಂದಿಟ್ಟಿದ್ದು, ಸಹೋದರರ ಮಧ್ಯೆ ಭೂಮಿ ಹಂಚಿಕೆ ಈ ಆದೇಶದಿಂದ ಅಸಾಧ್ಯವಾಗಿದೆ. ಸೈಟ್‌ಗಿಂತ ಗುಂಟೆ ಲೆಕ್ಕವೇ ಉತ್ತಮ: ಪಟ್ಟಣದಲ್ಲಿ ನಿವೇಶನ ಖರೀದಿಸುವುದಕ್ಕಿಂತ ಗುಂಟೆ ಲೆಕ್ಕದಲ್ಲಿ ಜಮೀನು ಖರೀದಿ ಸಾಕಷ್ಟು ಅನುಕೂಲಕರವಾಗಿದ್ದು, ಕನಿಷ್ಠ ನಿವೇಶನಕ್ಕೆ ಲಕ್ಷಾಂತರ ರು. ತೆರುವ ಬದಲು ಅಷ್ಟೇ ಪ್ರಮಾಣದ ಹಣದಲ್ಲಿ ಅಧಿಕ ಭೂಮಿ ಪಟ್ಟಣ ಹೊರವಲಯದಲ್ಲಿ ದೊರಕುವುದರಿಂದ ನಿವೇಶನ ಖರೀದಿಗಿಂತ ಗುಂಟೆ ಲೆಕ್ಕದಲ್ಲಿ ಜಮೀನು ಖರೀದಿ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿದೆ.
ಮನೆ ಮಾರಾಟ ಮಾಡ್ತಿದ್ದೀರಾ? ಬೆಲೆಯನ್ನು ಡಬಲ್ ಮಾಡಲು ಮೊದಲು ಈ ಕೆಲಸಗಳನ್ನು ಮಾಡಿ
ತಾಲೂಕಿನಲ್ಲೇ ಹೆಚ್ಚೇಕೆ:
ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ತಾಲೂಕಿನಲ್ಲಿ ಅತ್ಯಂತ ಹೆಚ್ಚಿನ ಪ್ರವಾಸಿತಾಣಗಳಿದ್ದರೆ, ಕನಿಷ್ಠ 15 ಸೆಲ್ಸಿಯಸ್‌ನಿಂದ ಗರಿಷ್ಠ 35 ಸೆಲ್ಸಿಯಸ್ ನಡುವಿನ ತಾಪಮಾನವಿದ್ದು, ತಾಲೂಕಿನ ಈ ವಾತಾವರಣ ಅನ್ಯ ಪ್ರದೇಶದ ಜನರಿಗೆ ಅಪ್ಯಾಯಮಾನವಾಗಿದ್ದರೆ, ನೈಸರ್ಗಿಕ ಜಲಧಾರೆ ಹಾಗೂ ಶುದ್ಧಗಾಳಿ ಹೆಚ್ಚಿನ ಜನರ ಆಕರ್ಷಣೆಯಾಗಿದ್ದು ಆರೋಗ್ಯ ಬಯಸಿ ತಾಲೂಕಿಗೆ ಆಗಮಿಸಿ ಜಮೀನು ಖರೀದಿಸುವವರ ಸಂಖ್ಯೆ ಹೆಚ್ಚಿದೆ.
ವಿಲ್ಲಾ ಯೋಜನೆಗೆ ತಾಲೂಕಿನ ಉತ್ತಮ ಪರಿಸರ ಸೂಕ್ತವಾಗಿದೆ. ಆದ್ದರಿಂದ ಬೇರೆಲ್ಲಾ ತಾಲೂಕು ಗಳಿಗಿಂತ ಸಕಲೇಶಪುರ ತಾಲೂಕಿನಲ್ಲಿ ಈ ಯೋಜನೆ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದೆ. ಸರ್ಕಾರದ ಈ ಹೊಸ ನಿಯಮ ರಿಯಲ್ ಎಸ್ಟೇಟ್ ಉದ್ಯಮಿಗಳಿಗಲ್ಲದೆ ಸಾಮಾನ್ಯ ಜನರಿಗೂ ಸಂಕಷ್ಟ ತಂದೊಡ್ಡಿದ್ದು, ಶೀಘ್ರವೇ ನಿಯಮ ಪರಿಷ್ಕರಣೆಯಾಗಬೇಕಿದೆ ಎಂದು ರಿಯಲ್ ಎಸ್ಟೇಟ್ ಏಜೆಂಟ್ ಹಂಜಾ ತಿಳಿಸಿದ್ದಾರೆ.