SmartecIndia 2021: ಉದ್ದಿಮೆಗೆ ಪೂರಕ ವಾತಾವರಣ ಸೃಷ್ಟಿಗೆ ಸಿದ್ಧ: ಡಾ.ಅಶ್ವತ್ಥ

By Kannadaprabha NewsFirst Published Dec 4, 2021, 7:42 AM IST
Highlights

*  1 ವರ್ಷದಲ್ಲಿ ಅಸೋಚಮ್‌ ಜತೆ 10 ಕಾರ್ಯಕ್ರಮ
*  ಸ್ಮಾರ್ಟ್‌ಟೆಕ್‌ ಇಂಡಿಯಾ ಸಮಾವೇಶದಲ್ಲಿ ಐಟಿ ಸಚಿವರ ಘೋಷಣೆ
*  ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಜಾಗತಿಕ ಮಟ್ಟದಲ್ಲಿ ಕರ್ನಾಟಕ ಪ್ರಶಸ್ತ ತಾಣ
 

ಬೆಂಗಳೂರು(ಡಿ.04):  ಕೈಗಾರಿಕಾ ವಲಯದ(Industrial Sector) ಬೆಳವಣಿಗೆಗೆ ಪೂರಕವಾದ ಯಾವುದೇ ಬದಲಾವಣೆಯನ್ನು ಕ್ಷಿಪ್ರಗತಿಯಲ್ಲಿ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್‌ನಾರಾಯಣ(CN Ashwathnarayan) ಹೇಳಿದರು.

ಶುಕ್ರವಾರ ನಗರದಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ASSOCHAM) ಹಮ್ಮಿಕೊಂಡಿದ್ದ ‘ಸ್ಮಾರ್ಟ್‌ಟೆಕ್‌ ಇಂಡಿಯಾ-2021’ (SmartecIndia 2021) ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಜಾಗತಿಕ ಮಟ್ಟದಲ್ಲಿ ಕರ್ನಾಟಕ(Karnataka) ಅತ್ಯಂತ ಪ್ರಶಸ್ತ ತಾಣವಾಗಿದೆ. ಇಲ್ಲಿ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ಹಲವಾರು ನೀತಿಗಳು ಮತ್ತು ಪರಿಸರ ಇದೆ. ರಾಜ್ಯದ ಕೈಗಾರಿಕಾ ಪ್ರಗತಿಗೆ ಮುಂದಿನ ಒಂದು ವರ್ಷದಲ್ಲಿ ಅಸೋಚಮ್‌ನೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ’ ಎಂದು ತಿಳಿಸಿದರು.

Bengaluru Tech Summit| ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ

ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕೌಶಲ್ಯ ಪೂರ್ಣ ಮಾನವ ಸಂಪನ್ಮೂಲಕ್ಕೆ ಕರ್ನಾಟಕ ಹೆಸರಾಗಿದೆ. ಇಡೀ ದೇಶ ಈ ವಿಚಾರದಲ್ಲಿ ನಮ್ಮನ್ನು ಅನುಸರಿಸುತ್ತದೆ. ಉದ್ಯಮ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಒಗ್ಗೂಡಿದರೆ ಎಂತಹ ಪರಿವರ್ತನೆಯನ್ನಾದರೂ ತರಬಹುದು. ಆ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯನ್ನು ಉದ್ಯೋಗ ಮತ್ತು ಕೌಶಲಕೇಂದ್ರಿತವನ್ನಾಗಿ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳೊಂದಿಗೆ ಉದ್ದಿಮೆಗಳನ್ನು ಬೆಸೆಯಲಾಗುತ್ತಿದೆ. ಇವು ಕೇವಲ ಕ್ಯಾಂಪಸ್‌ ಸಂದರ್ಶನಕ್ಕೆ ಮಾತ್ರ ಸೀಮಿತವಾಗದೇ ಉದ್ದಿಮೆಗಳು ಇಡೀ ಶೈಕ್ಷಣಿಕ ವರ್ಷದುದ್ದಕ್ಕೂ ವಿದ್ಯಾಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿವೆ ಎಂದರು.

ದೇಶದ ಉದ್ಯಮ ವಲಯಕ್ಕೆ ಅಗಾಧ ಪ್ರಮಾಣದಲ್ಲಿ ಕೌಶಲ್ಯಪೂರ್ಣ ಅಭ್ಯರ್ಥಿಗಳು ಬೇಕಾಗಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ, ಸ್ವಾತಂತ್ರ್ಯ ಕೊಡಲಾಗುತ್ತಿದ್ದು, ವಿಕೇಂದ್ರೀಕರಣಗೊಳಿಸಲಾಗುತ್ತಿದೆ. ಶಿಕ್ಷಣದ ವಿಚಾರದಲ್ಲಿ ಸರ್ಕಾರ ಉದಾರವಾಗಿ ನಡೆದುಕೊಳ್ಳುತ್ತಿದೆ. ಶಿಕ್ಷಣ ಮತ್ತು ಉದ್ದಿಮೆಗಳ ಬೆಳವಣಿಗೆಯಿಂದ ರಾಜ್ಯ ಮತ್ತು ದೇಶ ಜಾಗತಿಕವಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಇದರೊಂದಿಗೆ ಉದ್ಯೋಗಗಳ(Jobs) ಸೃಷ್ಟಿಯಿಂದ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದರು.

ಪ್ರಶಸ್ತಿ ಪ್ರದಾನ:

ಇದೇ ಸಂದರ್ಭದಲ್ಲಿ ಡಾ. ಅಶ್ವತ್ಥ ಅವರು ಉದ್ಯಮರಂಗದ ವಿವಿ ವಲಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಎಲ್‌ ಆ್ಯಂಡ್‌ ಟಿ ಟೆಕ್ನಾಲಜೀಸ್‌, ಬ್ಲೂಕಕೂನ್‌ ಡಿಜಿಟಲ್‌, ಇನ್ಸೊಲ್ಯೂಷನ್ಸ್‌ ಗ್ಲೋಬಲ್‌ ಲಿಮಿಟೆಡ್‌, ತಿರುಪತಿ ಗ್ರೂಪ್‌, ಎಸ್‌-ಮೆಂಟರ್‌ ಸೊಲ್ಯೂಷನ್ಸ್‌ ಮತ್ತು ಅಪಿರಿಯ್ರೋನ್‌ ಟೆಕ್ನೋ ವೆಂಚ​ರ್ಸ್‌ ಕಂಪನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಕರ್ನಾಟಕ ಡಿಜಿಟಲ್‌ ಎಕಾನಮಿ ಮುಖ್ಯಸ್ಥ ಬಿ.ವಿ.ನಾಯ್ಡು, ಇಸ್ರೇಲ್‌ ಪ್ರತಿನಿಧಿ ಜೋಸೆಫ್‌ ಅಬ್ರಹಾಂ, ಜಪಾನಿನ ಪ್ರತಿನಿಧಿ ತಕಾಶಿ ಸುಜುಕಿ, ಉದ್ಯಮಿಗಳಾದ ರಜತ್‌ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬೆಂಗ್ಳೂರಲ್ಲಿ ದೇಶದ ಮೊದಲ 'ಡಾಟಾ ಸಮುದ್ರ' ಆರಂಭ

ಸ್ಟಾರ್ಟಪ್‌ ಉತ್ತೇಜನಕ್ಕೆ ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌

ಬೆಂಗಳೂರಿನಾಚೆಗೂ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ‘ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌’ ಸ್ಥಾಪಿಸಲಾಗುತ್ತದೆ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್‌ನಾರಾಯಣ ಪ್ರಕಟಿಸಿದ್ದರು. 

ಬಿಟಿಎಸ್‌-2021ನ(BTS-2021) ನಲ್ಲಿ ಮಾತನಾಡಿದ್ದ ಸಚಿವರು, ಹುಬ್ಬಳ್ಳಿ(Hubballi), ಮೈಸೂರು(Mysuru), ಮಂಗಳೂರು ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗಿದ್ದು, ಅದಕ್ಕೆ ಅಗತ್ಯವಿರುವ ಪೋ›ತ್ಸಾಹಧನ, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಆದ್ಯತೆಯೂ ಇದೇ ಆಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕಂಪನಿಗಳು ಬೆಂಗಳೂರಿನಾಚೆಗೂ ಉದ್ಯಮ ಸ್ಥಾಪನೆಗೆ ಒಲವು ತೋರಿವೆ. ಮಹಿಳಾ ಉದ್ಯಮಶೀಲತೆಗೂ ಒತ್ತು ನೀಡಲಾಗಿದೆ ಎಂದರು.

ಎಚ್‌ಸಿಎಲ್‌, ಅಪ್ಲಯ್ಡ್‌ ಮೆಟೀರಿಯಲ್‌, ರಾಕಾನ್‌ ಮುಂತಾದ ಕಂಪೆನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ(Investment) ಹೂಡಲು ಮುಂದೆ ಬಂದಿವೆ. ಈ ಹೂಡಿಕೆಯಿಂದಾಗಿ ಸೆಮಿಕಂಡಕ್ಟರ್‌, ಇಲೆಕ್ಟ್ರಾನಿಕ್‌, ಸೌರ ಕೋಶಗಳು, ವಾಶಿಂಗ್‌ ಮಶೀನ್‌ ಮತ್ತು ಹವಾ ನಿಯಂತ್ರಕಗಳಿಗೆ ಅಳವಡಿಸುವ ಮೋಟಾರುಗಳ ಉತ್ಪಾದನೆ ಸಾಧ್ಯವಾಗಲಿದೆ. ರಾಜ್ಯದಲ್ಲಿ ನೇರವಾಗಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಆಗಲಿದೆ ಎಂದು ಹೇಳಿದರು.
 

click me!