Gita Gopinath: ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೇರಿದ ಕನ್ನಡದ ಕುವರಿ

By Suvarna NewsFirst Published Dec 3, 2021, 5:44 PM IST
Highlights

ಪ್ರಸ್ತುತ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರೋ ಕನ್ನಡತಿ ಗೀತಾ ಗೋಪಿನಾಥ್ ಅವರಿಗೆ ಬಡ್ತಿ ನೀಡಿ, ಸಂಸ್ಥೆಯ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಲಾಗಿದೆ.

ವಾಷಿಂಗ್ಟನ್ (ಡಿ.3): ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮುಖ್ಯ ಅರ್ಥಶಾಸ್ತ್ರಜ್ಞೆ ಕನ್ನಡತಿ, ಮೈಸೂರು ಮೂಲದ ಗೀತಾ ಗೋಪಿನಾಥ್ (Gita Gopinath) ಅವರಿಗೆ ಸಂಸ್ಥೆಯ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಎಂಎಫ್ ಇಂದು (ಡಿ.3) ಈ ವಿಚಾರವನ್ನು ಬಹಿರಂಗಪಡಿಸಿದ್ದು, ಗೀತಾ ಮುಂದಿನ ವರ್ಷದ ಪ್ರಾರಂಭದಲ್ಲಿ ಹುದ್ದೆ ತ್ಯಜಿಸಲು ಉದ್ದೇಶಿಸಿರೋ ಜಿಯೋಫ್ರೆ ಒಕಮೊಟೊ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಆಗಿ ಕಾರ್ಯನಿರ್ವಹಿಸುತ್ತಿರೋ ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹಾರ್ವರ್ಡ್ ವಿಶ್ವವಿದ್ಯಾಲಯದ(Harvard University) ಪ್ರೊಫೇಸರ್ ಹುದ್ದೆಗೆ ಮರಳುತ್ತಾರೆ ಎನ್ನಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರೋ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ (Managing Director) ಕ್ರಿಸ್ಟಲಿನಾ ಜಾರ್ಜೀವಾ (Kristalina Georgieva) 'ಗೀತಾ ಹಾಗೂ ಜಿಯೋಫ್ರೆ (Geoffrey) ಇಬ್ಬರೂ ಅತ್ಯುತ್ತಮ ಸಹೋದ್ಯೋಗಿಗಳಾಗಿದ್ದು, ಜಿಯೋಫ್ರೆ ಸಂಸ್ಥೆಯಿಂದ ಹೊರಹೋಗುತ್ತಿರೋದು ಬೇಸರ ಮೂಡಿಸಿದೆ. ಆದ್ರೆ ಅದೇ ಸಮಯದಲ್ಲಿ ಗೀತಾ ಐಎಂಎಫ್ ನಲ್ಲಿ ಮುಂದುವರಿಯಲು ಬಯಸಿ ಹೊಸ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಿರ್ಧರಿಸಿರೋದು ಸಂತಸ ತಂದಿದೆ' ಎಂದಿದ್ದಾರೆ. ಗೀತಾ ಐಎಂಎಫ್ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಅವರ ಕಾರ್ಯ ಸದಸ್ಯ ರಾಷ್ಟ್ರಗಳು ಹಾಗೂ ಸಂಸ್ಥೆಯ ಗೌರವ ಹಾಗೂ ಪ್ರಶಂಸೆಗೆ ಪಾತ್ರವಾಗಿವೆ ಎಂದು ಜಾರ್ಜೀವಾ ಹೇಳಿದರು. ಮಹಾ ಆರ್ಥಿಕ ಕುಸಿತದ ನಂತರ ನಾವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಅವರ ತೀಕ್ಷ್ಣ ಬುದ್ಧಿ ಮತ್ತು ಅಂತರರಾಷ್ಟ್ರೀಯ ಹಣಕಾಸು ಮತ್ತು ಸ್ಥೂಲ ಅರ್ಥಶಾಸ್ತ್ರದ ಆಳವಾದ ಜ್ಞಾನದಿಂದ ಹೆಚ್ಚು ಪ್ರಯೋಜನವಾಗಿದೆ ಎಂದು ಜಾರ್ಜೀವಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ಲೇಷಣಾತ್ಮಕವಾಗಿ ಕಠಿಣ ಕೆಲಸ ಮತ್ತು ನೀತಿ-ಸಂಬಂಧಿತ ಯೋಜನೆಗಳಿಗಾಗಿ ಹೆಚ್ಚಿನ ಪರಿಣಾಮದೊಂದಿಗೆ ಕೆಲಸ ಮಾಡಿದರು. ಕೋವಿಡ್ -19 ನಿಯಂತ್ರಣ ಹಾಗೂ ನಿರ್ನಾಮಕ್ಕೆ ಸಂಬಂಧಿಸಿದ ಅವರ ಕಾರ್ಯಗಳು ಪ್ರಶಂಸನಾರ್ಹವಾಗಿವೆ. ಅಲ್ಲದೆ, ಕೋವಿಡ್ -19 ವಿರುದ್ಧದ ಲಸಿಕೆಗಳು ಜಗತ್ತಿನ ಎಲ್ಲ ರಾಷ್ಟ್ರಗಳ ಜನರಿಗೂ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ಕೂಡ ಇವರು ಯೋಜನೆ ರೂಪಿಸಿದ್ದರು ಎಂಬ ಮಾಹಿತಿಯನ್ನು ಜಾರ್ಜೀವಾ ನೀಡಿದ್ದಾರೆ.

ಭಾರತದ ಉತ್ಪಾದನೆ ಕಡಿಮೆಗೆ ಕಾರಣ ಪತ್ತೆ ಹಚ್ಚಿದ ಐಎಂಎಫ್ ಸಲಹೆಗಾರ್ತಿ

ಹೊಸ ಹುದ್ದೆಗೆ ನೇಮಕಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರೋ ಗೀತಾ ಗೋಪಿನಾಥನ್ 'ಕೊರೋನಾ ಪೆಂಡಾಮಿಕ್ ಜಗತ್ತನ್ನುಇನ್ನೂ ತನ್ನ ಹತೋಟಿಯಲ್ಲಿಟ್ಟುಕೊಂಡಿದೆ. ಇಂಥ ಸಂದರ್ಭದಲ್ಲಿ ಐಎಂಎಫ್ ಕೆಲಸಗಳು ಇನ್ನಷ್ಟು ಕಠಿಣವಾಗಿರೋ ಜೊತೆ ಅಂತರರಾಷ್ಟ್ರೀಯ ಸಹಕಾರ ಹಿಂದಿಗಿಂತ ಹೆಚ್ಚು ಮುಖ್ಯವಾಗಿದೆ. ನನಗೆ ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಕ್ರಿಸ್ಟಲಿನಾ ಹಾಗೂ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಜೊತೆಗೆ ಐಎಂಎಫ್ನಲ್ಲಿರೋ ಎಲ್ಲ ಅಪ್ರತಿಮ ಪ್ರತಿಭೆಗಳು ಹಾಗೂ ಬದ್ಧತೆ ಹೊಂದಿರೋ ಸಹೋದ್ಯೋಗಿಗಳ ಜೊತೆ ಇನ್ನಷ್ಟು ಆಪ್ತವಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಅವರೊಂದಿಗೆ ಕಾರ್ಯನಿರ್ವಹಿಸೋದು ನನಗೆ ಹೆಮ್ಮೆಯ ಸಂಗತಿ' ಎಂದಿದ್ದಾರೆ.

2020 ರಲ್ಲಿ ಭಾರತದ ಆರ್ಥಿಕತೆ ಸುಧಾರಿಸುತ್ತಾ?

ಗೀತಾ ಹಿರಿಮೆ
1971 ರ ಡಿಸೆಂಬರ್ ನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಿಸಿದ ಗೀತಾ, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಲ್ಕತ್ತಾದಲ್ಲಿಪೂರೈಸಿದರು. ದೆಹಲಿ ಲೇಡಿ ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿದರು. ಆ ಬಳಿಕ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 2001ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ ಪಡೆದರು. ಆ ಬಳಿಕ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲವು ವರ್ಷ ಸೇವೆ ಸಲ್ಲಿಸಿದರು. ಬಳಿಕ ಹಾರ್ವರ್ಡ್ ವಿವಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿವರ್ಹಿಸಿದರು. ಹಾರ್ವರ್ಡ್ ವಿವಿಯಲ್ಲಿ ಪ್ರೊಫೆಸರ್ ಹುದ್ದೆಗೆ ಏರಿದ ವಿಶ್ವದ ಮೂರನೇ ಮಹಿಳೆ ಮತ್ತು ನೊಬೆಲ್ ಪುರಸ್ಕೃತ ಭಾರತೀಯ ಅಮರ್ಥ್ಯ ಸೇನ್ ಬಳಿಕ ಇಂಥ ಹಿರಿಮೆ ಪಡೆದ ಏಕೈಕ ಭಾರತೀಯ ಸಂಜಾತೆ ಎಂಬ ಗೌರವಕ್ಕೆ ಗೀತಾ ಪಾತ್ರರಾಗಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಆರ್ಥಿಕ ಸಲಹೆಗಾರ್ತಿಯಾಗಿ ಸೇವೆ ನೀಡಿದ್ದಾರೆ. ಗೀತಾ ಅವರ ತಂದೆ ಗೋಪಿನಾಥ್ ಮೈಸೂರಿನಲ್ಲೇ ನೆಲೆಸಿದ್ದಾರೆ.

click me!