2023ರಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ್ದ ಆರ್‌ಬಿಐ, ಈಗಾಗಲೇ ಶೇ.98.04ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ತಿಳಿಸಿದೆ. ಆದರೆ, ಇನ್ನೂ ₹6,970 ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ.
ಮುಂಬೈ: 2023ರಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯತೊಡಗಿದ್ದ ಆರ್‌ಬಿಐ, ಈಗಾಗಲೇ ಶೇ.98.04ರಷ್ಟು ನೋಟುಗಳು ತನಗೆ ವಾಪಸ್ ಬಂದಿವೆ ಎಂದು ಸೋಮವಾರ ಮಾಹಿತಿ ನೀಡಿದೆ. ಆದರೆ ಇನ್ನೂ 6,970 ಕೋಟಿ ರು. ಜನರ ಬಳಿಯೇ ಇದೆ ಎಂದು ಹೇಳಿದೆ. 2023ರ ಮೇ 19ರಂದು ₹2000ದ 3.56 ಲಕ್ಷ ಕೋಟಿ ಬೆಲೆಯ ನೋಟುಗಳು ಚಲಾವಣೆಯಲ್ಲಿದ್ದು, ಇದರ ಮೊತ್ತ 2024ರ ಅ.31ರ ವೇಳೆಗೆ 6,970 ಕೋಟಿಗೆ ಇಳಿದಿದೆ. 2023ರ ಅ.7ರ ವರೆಗೆ ₹2000 ನೋಟುಗಳ ಜಮೆ ಅಥವಾ ಬದಲಾವಣೆಗೆ ಎಲ್ಲಾ ಬ್ಯಾಂಕುಗಳಲ್ಲಿ ಅವಕಾಶ ನೀಡಲಾಗಿತ್ತು.
ಕೇರಳ ಸೇರಿ 3 ರಾಜ್ಯ ಅಸೆಂಬ್ಲಿ ಉಪಸಮರ ಮುಂದೂಡಿಕೆ
ನವದೆಹಲಿ: ಹಬ್ಬಗಳ ರಜೆ ಕಾರಣ ಉತ್ತರ ಪ್ರದೇಶ, ಪಂಜಾಬ್ ಮತ್ತು ಕೇರಳದ ವಿಧಾನಸಭೆ ಉಪಚುನಾವಣೆಯ ದಿನಾಂಕವನ್ನು ನ.13ರ ಬದಲು ನ.20ಕ್ಕೆ ಮುಂದೂಡಿ ಚುನಾವಣಾ ಆಯೋಗ ಹೊರಡಿಸಿದೆ.
ನ.10ರ ಬಳಿಕ ಮೂರು ರಾಜ್ಯಗಳಲ್ಲಿ ವಿವಿಧ ಹಬ್ಬಗಳು ಇವೆ. ಇದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಮತ್ತು ಆರ್‌ಜೆಡಿ ಸೇರಿ ಇತರ ಪಕ್ಷಗಳು ಚುನಾವಣಾ ವೇಳಪಟ್ಟಿ ಮರು ನಿಗದಿ ಮಾಡುವಂತೆ ಆಯೋಗವನ್ನು ಒತ್ತಾಯಿಸಿದ್ದವು. ಇದಕ್ಕೆ ಆಯೋಗ ಓಗೊಟ್ಟಿದೆ. ಉತ್ತರ ಪ್ರದೇಶದಲ್ಲಿ 9, ಪಂಜಾಬ್ 4 ಮತ್ತು ಕೇರಳದಲ್ಲಿ 1 (ಪಾಲಕ್ಕಾಡ್) ವಿಧಾನಸಭೆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಚುನಾವಣೆ ನಡೆವ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ನ.13 ರಿಂದ 15 ರವರೆಗೆ ಕಲ್ಪತಿ ರಥೋತ್ಸವ ಇದೆ. ಉತ್ತರ ಪ್ರದೇಶದಲ್ಲಿ 15ರಂದು ಕಾರ್ತಿಕ ಪೂರ್ಣಿಮೆ ಇದೆ. ಪಂಜಾಬಲ್ಲಿ ನ.15ರಂದು ಗುರುನಾನಕ್ ದೇವ್‌ರ ಪ್ರಕಾಶಪರ್ವ ಆಚರಣೆ ಇದೆ. ಹೀಗಾಗಿ ಮುಂದೂಡಿಕೆ ಮಾಡಲಾಗಿದೆ.