
ನವದೆಹಲಿ (ಡಿ.17): ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ 2022-23ನೇ ಸಾಲಿನ ಮೂರನೇ ಸರಣಿಯ ಚಂದಾದಾರಿಕೆಯನ್ನು ಡಿಸೆಂಬರ್ 19ರಿಂದ ಡಿಸೆಂಬರ್ 23 ರ ತನಕ ಐದು ದಿನಗಳ ಕಾಲ ನಡೆಸಲಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,409 ರೂ. ನಿಗದಿಪಡಿಸಲಾಗಿದೆ. ಈ ಬಗ್ಗೆ ಶುಕ್ರವಾರ ಮಾಧ್ಯಮ ಪ್ರಕಟಣೆ ಮೂಲಕ ಆರ್ ಬಿಐ ಮಾಹಿತಿ ನೀಡಿದೆ. ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗೆ ಅರ್ಜಿ ಸಲ್ಲಿಸಿದ್ರೆ ಹಾಗೂ ಡಿಜಿಟಲ್ ಪಾವತಿ ಮಾಡಿದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ. 022-23ನೇ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಎರಡನೇ ಸರಣಿಯ ಚಂದಾದಾರಿಕೆ ಆಗಸ್ಟ್ 22ರಿಂದ 26ರ ತನಕ ನಡೆದಿತ್ತು. ಇನ್ನು ಮೊದಲನೇ ಸರಣೆ ಚಂದಾದಾರಿಕೆ ಜೂನ್ 20-24ರ ತನಕ ನಡೆದಿತ್ತು.ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನವಾದ್ರೂ ಖರೀದಿಸಬೇಕು. ಅದಕ್ಕೆ ಕಡಿಮೆ ಚಿನ್ನ ಖರೀದಿಸಲು ಅವಕಾಶವಿಲ್ಲ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂದ್ರೇನು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest)ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾಂಡ್ ಗಳನ್ನು ವಿತರಿಸುತ್ತದೆ.
ಎಫ್ಎಂಸಿಜೆ ಕ್ಷೇತ್ರಕ್ಕೆ ರಿಲಯನ್ಸ್ ಎಂಟ್ರಿ; ಇಂಡಿಪೆಂಡೆನ್ಸ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಬಿಡುಗಡೆ
ಎಲ್ಲಿ ಸಿಗುತ್ತೆ?
ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SHCIL), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL),ಅಂಚೆ ಕಚೇರಿಗಳು ಹಾಗೂ ಸ್ಟಾಕ್ ಎಕ್ಸ್ ಚೇಂಜ್ ಗಳು, ಎನ್ ಎಸ್ ಇ ಹಾಗೂ ಬಿಎಸ್ ಇ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತಿದೆ.
ಬಡ್ಡಿ ಎಷ್ಟು?
ಈ ಯೋಜನೆಯಲ್ಲಿ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ. 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains)ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.
ಖರೀದಿ ಹೇಗೆ?
ಎಸ್ ಬಿಐ ಬ್ಯಾಂಕ್ ಮೂಲಕ ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಈ ಹಂತಗಳನ್ನು ಅನುಸರಿಸಿ.
ಹಂತ 1: ಮೊದಲಿಗೆ ಎಸ್ ಬಿಐ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಆಗಿ.
ಹಂತ 2: ಮುಖ್ಯ ಮೆನುವಿನಿಂದ ‘e-Service’ಮೇಲೆ ಕ್ಲಿಕ್ ಮಾಡಿ.
ಹಂತ 3: ‘Sovereign Gold Bond Scheme’ ಮೇಲೆ ಕ್ಲಿಕ್ ಮಾಡಿ.
ಹಂತ 4:'Purchase'ಆಯ್ಕೆ ಮಾಡಿ.
ಹಂತ 5: ‘Terms and Conditions’ಆಯ್ಕೆ ಮಾಡಿ.‘Proceed’ಮೇಲೆ ಕ್ಲಿಕ್ ಮಾಡಿ.
ಹಂತ 6: 'ಚಂದಾದಾರಿಕೆ ಪ್ರಮಾಣ ಹಾಗೂ ನಾಮಿನಿ ಮಾಹಿತಿಗಳನ್ನು ನಮೂದಿಸಿ.
ಹಂತ 7: ‘Submit’ಮೇಲೆ ಕ್ಲಿಕ್ ಮಾಡಿ.
ಟೆಕ್ಕಿಗಳಿಗೆ ಎಲ್ಐಸಿಯ ಹೊಸ ಪಾಲಿಸಿ; ವರ್ಷಕ್ಕೆ 4000ರೂ. ಪ್ರೀಮಿಯಂ ಪಾವತಿಸಿದ್ರೆ 50ಲಕ್ಷ ರೂ. ಕವರೇಜ್!
ಹಂತ 8: ಒಟಿಪಿ ನಮೂದಿಸಿ ‘Confirm’ಮೇಲೆ ಕ್ಲಿಕ್ ಮಾಡಿ.
ಹೊಸ ಪುಟದಲ್ಲಿ ನಿಮ್ಮ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆಯ ಸಂಪೂರ್ಣ ಮಾಹಿತಿ ಲಭಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.