
ನವದೆಹಲಿ (ಆ.05) ಭಾರತದ ಕರೆನ್ಸಿ ನೋಟುಗಳು ಬದಲಾಗುತ್ತಿದೆ. ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದೀಗ ದೇಶದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ನೋಟುಗಳ ಬಳಕೆಗೆ ಆರ್‌ಬಿಐ ಮುಂದಾಗಿದೆ. ಈಗಾಗಲೇ ಈ ಕುರಿತು ಘೋಷಣೆ ಮಾಡಿದೆ. ಇದೀಗ ಪ್ಲಾಸ್ಟಿಕ್ ನೋಟು ಬಿಡುಗಡೆ ಕುರಿತು ಕಾಲಮಿತಿಯನ್ನು ಆರ್‌ಬಿಐ ಹೇಳಿದೆ. ಮುಂದಿನ ಹಣಕಾಸು ವರ್ಷದ ವೇಳೆ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಗೆ ಬರಲಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಹೇಳಿದ್ದಾರೆ.
2027ರ ಆರಂಭಿಕ ಹಂತದಲ್ಲಿ ಪ್ಲಾಸ್ಟಿಕ್ ನೋಟುಗಳು ಭಾರತದಲ್ಲಿ ಚಲಾವಣೆಗೆ ಬರಲಿದೆ. ಈ ನೋಟುಗಳು ಬಂದಾಗ ಕೈಯಲ್ಲಿರುವ ಸದ್ಯದ ನೋಟುಗಳು ಬದಲಾಯಿಸಲು ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕಾ ಅನ್ನೋ ಪ್ರಶ್ನೆಗಳು ಎದ್ದಿದೆ. ಈ ಅನುಮಾನಗಳಿಗೆ ಸಂಜಯ್ ಮಲ್ಹೋತ್ರ ಸ್ಪಷ್ಟನೆ ನೀಡಿದ್ದಾರೆ. ಪ್ಲಾಸ್ಟಿಕ್ ನೋಟುಗಳು ಚಲಾವಣೆ ಆರಂಭಿಸಿದಾಗ ಕಾಗದ ನೋಟುಗಳನ್ನು ರದ್ದು ಮಾಡುವುದಿಲ್ಲ. ಎರಡೂ ನೋಟುಗಳು ಚಲಾವಣೆಯಲ್ಲಿ ಇರುತ್ತದೆ. ಹಂತ ಹಂತವಾಗಿ ಕಾಗದ ನೋಟುಗಳನ್ನು ಹಿಂಪದೆಯಲಾಗುತ್ತದೆ. ಬಳಿಕ ಪಾಲಿಮರ್ ನೋಟುಗಳು ಮಾತ್ರ ಚಲಾವಣೆಯಲ್ಲಿರುವಂತೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಪ್ರತಿ ನಿತ್ಯ ಬಳಕೆಯಾಗುವ ಕಡಿಮೆ ಮೌಲ್ಯದ ನೋಟುಗಳನ್ನು ಪ್ಲಾಸ್ಟಿಕ್ ರೂಪದಲ್ಲಿ ಚಲಾವಣೆಗೆ ತರಲು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ 10 ರೂಪಾಯಿ, 20 ರೂಪಾಯಿ ನೋಟುಗಳು ಪಾಲಿಮರ್ ರೂಪದಲ್ಲಿ ಚಲಾವಣೆಗೆ ಬರಲಿದೆ. ಬರೋಬ್ಬರಿ 100 ಕೋಟಿ ಮೌಲ್ಯದ 10 ಹಾಗೂ 20 ರೂಪಾಯಿ ನೋಟುಗಳ ಪ್ರಾಯೋಗಿಕ ಪರೀಕ್ಷೆಗೆ ಆರ್‌ಬಿಐ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ 10 ರೂಪಾಯಿ 20 ರೂಪಾಯಿ ನೋಟುಗಳು ಬಳಿಕ 50 ರೂಪಾಯಿ, 100 ರೂಪಾಯಿ, 200 ರೂಪಾಯಿ, 500 ರೂಪಾಯಿ ನೋಟುಗಳು ಚಲಾವಣೆಗ ಬರಲಿದೆ.
ಭಾರತದಲ್ಲಿ ಸದ್ಯ ಕಾಗದ ನೋಟುಗಳು ಬಳಕೆಯಲ್ಲಿದೆ. ಹೊಸದಾಗಿ ಬರಲಿರುವ ಪ್ಲಾಸ್ಟಿಕ್ ನೋಟುಗಳು ಬೇಗ ಹಾಳಾಗುವುದಿಲ್ಲ. ಕೊಳೆಯಾಗುವುದಿಲ್ಲ, ಮಡಚಿದರೂ ಸಮಸ್ಯೆ ಇಲ್ಲ. ನಕಲಿ ನೋಟುಗಳನ್ನು ತಡೆಯಲು ಸಾಧ್ಯವಾಗುತ್ತದೆ. ಇದರ ಜೊತೆ ಕೆಲ ಸುರಕ್ಷತೆ ಹಾಗೂ ಭದ್ರತಾ ಪೀಚರ್ಸ್ ಸೇರಿಸಲಾಗುತ್ತದೆ. ಕಾಗದ ನೋಟುಗಳು ಹರಿದಾಗ ಮರು ಪ್ರಿಂಟ್ ಮಾಡಬೇಕಾಗುತ್ತದೆ. ಇದರಿಂದ ವೆಚ್ಚ ಹೆಚ್ಚಾಗುತ್ತದೆ.ಪ್ಲಾಸ್ಟಿಕ್ ನೋಟುಗಳು ಮರು ಪ್ರಿಂಟ್ ಮಾಡುವ ಅವಶ್ಯಕತೆ ಇಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.