ಇಎಫ್‌ಪಿಒ ಸೇವೆಗಳು ವಾರಗಳ ಕಾಲ ವಿಳಂಬವಾಗುವುದಕ್ಕೆ ಕೊನೆಗೂ ಸಿಕ್ಕಿತು ಉತ್ತರ: ಹೊರಬಿತ್ತು ಅಸಲಿ ಕಾರಣ!

Published : Aug 05, 2026, 02:44 PM IST
EPFO New Rules 2026

ಸಾರಾಂಶ

ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ತೀವ್ರ ಸಿಬ್ಬಂದಿ ಕೊರತೆ, ವಿಶೇಷವಾಗಿ ಐಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದಿರುವುದು ಆನ್‌ಲೈನ್ ಸೇವೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ನವದೆಹಲಿ (ಆ.5): ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಆನ್‌ಲೈನ್ ಕ್ಲೈಮ್‌ಗಳು ಹಾಗೂ ಇತರ ಸೇವೆಗಳು ವಾರಗಳು ಅಥವಾ ತಿಂಗಳುಗಳ ಕಾಲ ವಿಳಂಬವಾಗುವುದು ಏಕೆ ಎಂಬ ಸಾರ್ವಜನಿಕರ ದೀರ್ಘಕಾಲದ ಪ್ರಶ್ನೆಗೆ ಕೊನೆಗೂ ಪ್ರಮುಖ ಕಾರಣ ಹೊರಬಿದ್ದಿದೆ. ವ್ಯವಸ್ಥೆಯಲ್ಲಿನ ಈ ದೊಡ್ಡ ಲೋಪವನ್ನು ಸರಿಪಡಿಸಲು ಅಧಿಕಾರಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. EPFO ಸೇವೆಯನ್ನು ಸುಧಾರಿಸಲು ಇಪಿಎಫ್ ಆಫೀಸರ್ಸ್ ಅಸೋಸಿಯೇಷನ್ (EPF Officers Association) ಶ್ರಮ ಮತ್ತು ಉದ್ಯೋಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸಂಸ್ಥೆಯಲ್ಲಿ ತಕ್ಷಣವೇ ಐಟಿ ತಜ್ಞರು (IT Experts) ಮತ್ತು ವೃತ್ತಿಪರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದೆ. ಪ್ರಸ್ತುತ ಸಂಸ್ಥೆಯಲ್ಲಿ ತೀವ್ರ ಸಿಬ್ಬಂದಿ ಕೊರತೆಯಿದ್ದು, ಇದರಿಂದಾಗಿ ಡಿಜಿಟಲ್ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತಲುಪುವ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ, EPFO ನಂತಹ ಬೃಹತ್ ಮತ್ತು ಆಧುನಿಕ ಸಂಸ್ಥೆಯನ್ನು ಬಲವಾದ ಐಟಿ ತಂಡವಿಲ್ಲದೆ ನಡೆಸುವುದು ಅತ್ಯಂತ ಕಷ್ಟಕರ ಎಂದು ಅಧಿಕಾರಿಗಳ ಸಂಘ ಆತಂಕ ವ್ಯಕ್ತಪಡಿಸಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ EPFOನ ಮಾಹಿತಿ ಸೇವೆಗಳ ವಿಭಾಗದಲ್ಲಿ (Information Services Division - ISD) ಕಳೆದ ಹಲವು ವರ್ಷಗಳಿಂದ ಯಾವುದೇ ಹೊಸ ನೇಮಕಾತಿ ನಡೆದಿಲ್ಲ. ಈ ವಿಭಾಗದಲ್ಲಿ ಕೊನೆಯ ಬಾರಿಗೆ ನೇರ ನೇಮಕಾತಿ ನಡೆದಿದ್ದು 2004 ರಲ್ಲಿ ಎಂಬುದು ಗಮನಾರ್ಹ.

ಐಟಿ ವಿಭಾಗದಲ್ಲಿ ಅತ್ಯಂತ ಸೀಮಿತ ಸಂಪನ್ಮೂಲ

ಐಎಸ್‌ಡಿ ವಿಭಾಗದ ಅನೇಕ ಜಂಟಿ ನಿರ್ದೇಶಕರು (Joint Directors) ಮತ್ತು ಉಪ ನಿರ್ದೇಶಕರು (Deputy Directors) ಒಂದೋ ನಿವೃತ್ತರಾಗಿದ್ದಾರೆ ಅಥವಾ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಜಾಗಕ್ಕೆ ಹೊಸ ಅಧಿಕಾರಿಗಳನ್ನು ನೇಮಕ ಮಾಡಲಾಗಿಲ್ಲ. ಇಷ್ಟೇ ಅಲ್ಲದೆ, ಕಳೆದ ಮೂರು ವರ್ಷಗಳಿಂದ EPFO ಸಂಸ್ಥೆಗೆ ಪೂರ್ಣಾವಧಿಯ ಮುಖ್ಯ ತಂತ್ರಜ್ಞಾನ ಅಧಿಕಾರಿಯನ್ನು (Chief Technology Officer - CTO) ಕೂಡ ನೇಮಿಸಲು ಸಾಧ್ಯವಾಗಿಲ್ಲ.

ಹೀಗಾಗಿ ಇಡೀ ಐಟಿ ವಿಭಾಗವು ಅತ್ಯಂತ ಸೀಮಿತ ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ತಂತ್ರಾಂಶಗಳನ್ನು (Software) ರೂಪಿಸಲು ಹೊರಗಿನ ಏಜೆನ್ಸಿಗಳ ನೆರವು ಪಡೆಯುವುದು ಸೂಕ್ತವೇ ಆದರೂ, EPFO ಒಳಗಡೆ ಸೂಕ್ತ ತಾಂತ್ರಿಕ ತಜ್ಞರಿಲ್ಲದಿದ್ದರೆ ಸಾಫ್ಟ್‌ವೇರ್ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆನ್‌ಲೈನ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗುತ್ತಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಫೀಲ್ಡ್ ಆಫೀಸ್‌ಗಳ ಮೇಲಿನ ಒತ್ತಡ ಹೆಚ್ಚಳ

ಕ್ಲೈಮ್‌ಗಳು ಆನ್‌ಲೈನ್‌ನಲ್ಲಿ ಆಗದೇ ಇದ್ದಾಗ ಕ್ಷೇತ್ರ ಕಚೇರಿಗಳಲ್ಲಿ (Field Offices) ಕಾರ್ಯನಿರ್ವಹಿಸುವ ಸಿಬ್ಬಂದಿಯ ಮೇಲೆ ದೂರುಗಳ ಭಾರಿ ಒತ್ತಡ ಬೀಳುತ್ತಿದೆ. ಆನ್‌ಲೈನ್ ದೂರು ಪೋರ್ಟಲ್, ಸೋಶಿಯಲ್ ಮೀಡಿಯಾ ಹಾಗೂ ಕಚೇರಿಗೆ ನೇರವಾಗಿ ಬರುವ ಸಾರ್ವಜನಿಕರ ದೂರುಗಳನ್ನು ನಿರ್ವಹಿಸುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಇದರಿಂದಾಗಿ ಕೆಲಸದ ಹೊರೆ ನಿರಂತರವಾಗಿ ಹೆಚ್ಚುತ್ತಿದೆ.

ಇದರ ಜೊತೆಗೆ, EPFO ಸಂಸ್ಥೆಯಲ್ಲಿ ಅಗತ್ಯಕ್ಕೆ ತಕ್ಕಂತೆ ನೌಕರರ ಸಂಖ್ಯೆಯನ್ನು ಹೆಚ್ಚಿಸಲು ಗಮನ ಹರಿಸಲಾಗಿಲ್ಲ. ಕೊನೆಯ ಬಾರಿಗೆ 2016-17ರಲ್ಲಿ ಕೆಲಸದ ಹೊರೆಯನ್ನು ಮೌಲ್ಯಮಾಪನ ಮಾಡಲಾಗಿತ್ತು. ಆದರೆ ಇಂದಿಗೂ ಹಲವು ಕಚೇರಿಗಳು 2008ರಲ್ಲಿ ನಿಗದಿಯಾಗಿದ್ದ ಸಿಬ್ಬಂದಿ ಬಲದ ಆಧಾರದಲ್ಲೇ ನಡೆಯುತ್ತಿವೆ. ಮುಂಬೈ, ದೆಹಲಿ, ಬೆಂಗಳೂರು ಮತ್ತು ಗುರುಗ್ರಾಮದಂತಹ ಮಹಾನಗರಗಳ EPFO ಕಚೇರಿಗಳು ಅತ್ಯಂತ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿವೆ.

ಸಮಯಕ್ಕೆ ಸರಿಯಾಗಿ ತಾಂತ್ರಿಕ ತಜ್ಞರ ನೇಮಕಾತಿ ನಡೆಯದಿದ್ದರೆ, ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸದಿದ್ದರೆ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸದಿದ್ದರೆ ಮುಂಬರುವ ದಿನಗಳಲ್ಲಿ EPFO ಸೇವೆಗಳ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರಬಹುದು ಎಂದು ಅಸೋಸಿಯೇಷನ್ ಎಚ್ಚರಿಸಿದೆ. ಹೀಗಾಗಿ ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2 ಸಾವಿರ ರೂ.ಗಿಂತ ಹೆಚ್ಚು UPI ವಹಿವಾಟಿಗೆ ಇನ್ಮುಂದೆ ಶುಲ್ಕ? ಯಾರಿಗೆಲ್ಲಾ ಅನ್ವಯ? ಇಲ್ಲಿದೆ ಡಿಟೇಲ್ಸ್​
ಬಟ್ಟೆ ಹೊಲೆಯುತ್ತಿದ್ದ ಕೈಗಳಿಂದ ಬೃಹತ್ ಸಾಮ್ರಾಜ್ಯದ ಪ್ರೆಸ್ಟೀಜ್ ಕಟ್ಟಿದ ಇರ್ಫಾನ್ ರಜಾಕ್