ನವದೆಹಲಿ (ಜೂ. 22): ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ ( ಎಂಪಿಸಿ) ಸಭೆಯ ವೇಳಾಪಟ್ಟಿಯನ್ನು ಮರು ಹೊಂದಿಸಲಾಗಿದೆ. ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಆರ್ ಬಿಐ, ಆಡಳಿತಾತ್ಮಕ ತುರ್ತು ಹಿನ್ನೆಲೆಯಲ್ಲಿ ಆಗಸ್ಟ್ 2ರಿಂದ 4ರ ತನಕ ನಡೆಯಬೇಕಿದ್ದ ಸಭೆಯನ್ನು ಆಗಸ್ಟ್ 3ರಿಂದ 5ರ ತನಕ ನಿಗದಿಪಡಿಸಲಾಗಿದೆ. ಇದು ಬಡ್ಡಿ ದರ ಪರಿಶೀಲನೆಗೆ ನಡೆಯುತ್ತಿರುವ ಹಣಕಾಸು ನೀತಿ ಸಮಿತಿಯ ಈ ವರ್ಷದ ನಾಲ್ಕನೇ ಸಭೆಯಾಗಿದೆ. ಎಂಪಿಸಿ ದೈಮಾಸಿಕ ಸಭೆ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ಆದ್ರೆ ಈ ಬಾರಿ ಮೇನಲ್ಲಿ ಕೂಡ ಎಂಪಿಸಿ ತುರ್ತುಸಭೆ ನಡೆಸಿ, ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. 2022-23ನೇ ಆರ್ಥಿಕ ಸಾಲಿನಲ್ಲಿ ಆರ್ ಬಿಐ ಹಣಕಾಸು ನೀತಿ ಸಮಿತಿಯ 6 ದೈಮಾಸಿಕ ಸಭೆಗಳ ವೇಳಾಪಟ್ಟಿ ನಿಗದಿಪಡಿಸಿತ್ತು. ಆದರೆ, ದೇಶದಲ್ಲಿ ಹಣದುಬ್ಬರ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ರೆಪೋ ದರ ಹೆಚ್ಚಳ ಮಾಡಲು ಮೇನಲ್ಲಿ ತುರ್ತು ಸಭೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಆಗಸ್ಟ್ ಸಭೆಯ ಬಳಿಕ ಆರ್ ಬಿಐ (RBI) ಹಣಕಾಸು ನೀತಿ ಸಮಿತಿ (MPC) ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮತ್ತೆ ಮೂರು ಬಾರಿ ಸಭೆಗಳನ್ನು ನಡೆಸಲಿದೆ. ಸೆಪ್ಟೆಂಬರ್ 28-30; ಡಿಸೆಂಬರ್ 5-7 ಹಾಗೂ 2023ರ ಫೆಬ್ರವರಿಯಲ್ಲಿ 6-8ರ ತನಕ ಸಭೆ ಸೇರಲಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಎಂಪಿಸಿ ಸಮಿತಿ ಪ್ರಸಕ್ತ ದೇಶೀಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿದ ಬಳಿಕ ದೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸುತ್ತದೆ. ಆರ್ ಬಿಐ ಚಿಲ್ಲರೆ ಹಣದುಬ್ಬರಕ್ಕೆ (Retail Inflation) ಶೇ.4ರ ಸಹನ ಮಿತಿ ನಿಗದಿಪಡಿಸಿದ್ದು, ಶೇ.2ರಷ್ಟು ಏರಿಕೆ ಅಥವಾ ಇಳಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಚಿಲ್ಲರೆ ಹಣದುಬ್ಬರದ ಗರಿಷ್ಠ ಸಹನ ಮಿತಿ ಶೇ. 6. ಆದ್ರೆ, ಸತತ ಆರು ತಿಂಗಳಿಂದ ಭಾರತದ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಿತಿ ಶೇ.6 ಮೀರಿದೆ.
ನಾವೀನ್ಯತೆ: ಸತತ 3ನೇ ವರ್ಷ ಕರ್ನಾಟಕ ದೇಶಕ್ಕೇ ನಂಬರ್ 1
ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರ ಜೂನ್ ನಲ್ಲಿ ಶೇ.7.01ರಷ್ಟಿತ್ತು. ಆದರೆ, ಕಳೆದ ತಿಂಗಳುಗಳಿಗೆ ಹೋಲಿಸಿದ್ರೆ ಈ ಬಾರಿ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಏಪ್ರಿಲ್ ನಲ್ಲಿ ಹಣದುಬ್ಬರ ಶೇ.7.79ರಷ್ಟಿದ್ದು, ಮೇನಲ್ಲಿ ಶೇ.7.04ರಷ್ಟಿತ್ತು. ಜೂನ್ ನಲ್ಲಿ ಆಹಾರ ಹಣದುಬ್ಬರ ಶೇ.7.75ರಷ್ಟಿದ್ದು, ಮೇಗೆ ಹೋಲಿಸಿದ್ರೆ ಇಳಿಕೆಯಾಗಿದೆ. ಮೇನಲ್ಲಿ ಇದು ಶೇ.7.97ರಷ್ಟಿತ್ತು.
ಮೇ ಹಾಗೂ ಜೂನ್ ನಲ್ಲಿ ನಡೆದ ಆರ್ ಬಿಐ ಎಂಪಿಸಿ ಸಭೆಗಳಲ್ಲಿ ರೆಪೋ ದರವನ್ನು ಒಟ್ಟು 90 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿದೆ. ಅಂದರೆ ಮೇನಲ್ಲಿ 40 ಬೇಸಿಸ್ ಪಾಯಿಂಟ್ಸ್ ಹಾಗೂ ಜೂನ್ ನಲ್ಲಿ 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿದೆ.
ಹಣದುಬ್ಬರ ಇನ್ನಷ್ಟು ಹೆಚ್ಚಳವಾಗೋ ಸೂಚನೆ ನೀಡಿದ ಆರ್ ಬಿಐ; ಆಗಸ್ಟ್ ನಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ?
ಇನ್ನು 2022ನೇ ಜುಲೈ ಬುಲೆಟಿನ್ ನಲ್ಲಿ ಹಣದುಬ್ಬರ ಗರಿಷ್ಠ ಮಿತಿ ತಲುಪುವ ಸೂಚನೆಗಳಿವೆ ಎಂದು ಆರ್ ಬಿಐ ಹೇಳಿದೆ. 'ಜಗತ್ತಿನ ಬೇರೆಲ್ಲ ರಾಷ್ಟ್ರಗಳಿಗಿಂತ ಭಾರತದಲ್ಲಿ ಅಗತ್ಯ ಹಣಕಾಸು ನೀತಿ ಕ್ರಮಗಳು ಹೆಚ್ಚು ಮಧ್ಯಮ ಸ್ಥಿತಿಯಲ್ಲಿದ್ದು, ಎರಡು ವರ್ಷಗಳ ಸಮಯಾವಧಿಯಲ್ಲಿ ಹಣದುಬ್ಬರವನ್ನು ಮರಳಿ ಗುರಿಗೆ ತರುವ ಭರವಸೆಯನ್ನು ನಾವು ಹೊಂದಿದ್ದೇವೆ' ಎಂದು ಆರ್ ಬಿಐ (RBI) ಹೇಳಿದೆ. ತಜ್ಞರ ಪ್ರಕಾರ ಆಗಸ್ಟ್ ಎಂಪಿಸಿ ಸಭೆಯಲ್ಲಿ ಕೂಡ ಆರ್ ಬಿಐ ರೆಪೋ ದರ ಏರಿಕೆ ಮಾಡೋದು ಪಕ್ಕಾ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ರೆಪೋ ದರದಲ್ಲಿ 35-50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡುವ ಸಾಧ್ಯತೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.