ಕೊನೆಯ ಅಸ್ತ್ರ: ಹಣಕಾಸು ಕೊರತೆ ನೀಗಿಸಲು ಆರ್‌ಬಿಐನಿಂದ ನೋಟು ಮುದ್ರಣ?

By Kannadaprabha News  |  First Published May 28, 2020, 7:49 AM IST

ವಿತ್ತೀಯ ಕೊರತೆ ಭರ್ತಿಗೆ ಆರ್‌ಬಿಐನಿಂದ ನೋಟು ಮುದ್ರಣ?| ಕೊರೋನಾ ಬಿಕ್ಕಟ್ಟು ಇನ್ನಷ್ಟುವ್ಯಾಪಕವಾದರೆ ಕರೆನ್ಸಿ ನೋಟ್‌ ಪ್ರಿಂಟ್‌


ನವದೆಹಲಿ(ಮೇ.28): ದೇಶದ ಆರ್ಥಿಕತೆಗೆ ಕೊರೋನಾ ವೈರಸ್‌ ನೀಡುತ್ತಿರುವ ಹೊಡೆತ ನಿರೀಕ್ಷೆಗೂ ಮೀರಿದಲ್ಲಿ, ಭಾರತೀಯ ರಿಸವ್‌ರ್‍ ಬ್ಯಾಂಕ್‌ ನೋಟು ಮುದ್ರಣ ಮಾಡಿ ವಿತ್ತೀಯ ಕೊರತೆ ತುಂಬುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾಗಿದ್ದೇ ಆದಲ್ಲಿ ಸುಮಾರು 3 ದಶಕಗಳ ಬಳಿಕ ಅಂಥದ್ದೊಂದು ಘಟನೆಗೆ ದೇಶ ಸಾಕ್ಷಿಯಾಗಲಿದೆ.

ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ನೋಟು ಮುದ್ರಣ ಸುಲಭದ ಪರಿಹಾರವಾದರೂ, ಅದು ಹಣದುಬ್ಬರವನ್ನು ಭಾರೀ ಪ್ರಮಾಣದಲ್ಲಿ ಏರಿಸಿ, ಜನಸಾಮಾನ್ಯರ ಬದುಕನ್ನು ಮತ್ತಷ್ಟುಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಅಧಿಕ. ಹೀಗಾಗಿ ಅತ್ಯಂತ ಅನಿವಾರ್ಯ ಪರಿಸ್ಥಿತಿ ಎದುರಾದಲ್ಲಿ ಮಾತ್ರವೇ ಈ ಹಾದಿಯಲ್ಲಿ ಆರ್‌ಬಿಐ ಹೆಜ್ಜೆ ಇಡಬಹುದು ಎನ್ನಲಾಗಿದೆ.

Tap to resize

Latest Videos

undefined

ನೋಟು ಮುದ್ರಿಸಲು ಮುಂದಾಗುತ್ತಾ RBI

ಕೊರೋನಾ ದೇಶದ ಆರ್ಥಿಕತೆಗೆ ನೀಡಿರುವ ಹೊಡೆತ ನಿವಾರಿಸಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿದೆ. ಆದರೆ ತಕ್ಷಣಕ್ಕೆ ಆರ್ಥಿಕತೆ ಸರಿಹಾದಿಗೆ ಬರುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಇದರ ಜೊತೆಗೆ ಒಂದು ವೇಳೆ ಈ ಬಿಕ್ಕಟ್ಟು ಮುಂದಿನ ವರ್ಷದ ಆರಂಭದವರೆಗೂ ವಿಸ್ತರಣೆಯಾದರೆ, ಸರ್ಕಾರ ತನ್ನ ಪ್ರತಿಯೊಂದು ಹಣಕಾಸಿನ ಅಗತ್ಯಕ್ಕೂ ಪರದಾಡಬೇಕಾಗುತ್ತದೆ. ಆಗ ಆರ್‌ಬಿಐ ಇಂಥದ್ದೊಂದು ದಾರಿಯಲ್ಲಿ ಸಾಗುವ ಅವಕಾಶವನ್ನು ಆರ್‌ಬಿಐ ಮುಕ್ತವಾಗಿ ಇರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಂಡುಬರುವ ಇಂಥ ಸಮಸ್ಯೆಯನ್ನು ಮಾರುಕಟ್ಟೆಸಾಲ ಮತ್ತು ವೆಚ್ಚ ಕಡಿತದ ಮೂಲಕ ನಿಭಾಯಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ 2020ರ ಅಂತ್ಯ ಅಥವಾ 2021ರ ಆರಂಭಕ್ಕೂ ಕೊರೋನಾ ಸಮಸ್ಯೆ ವಿಸ್ತರಣೆಯಾದರೆ ಆಗ ಆರ್‌ಬಿಐ ನೋಟು ಮುದ್ರಣ ಮಾಡಿ, ಅಗತ್ಯ ಹಣ ಪೂರೈಕೆ ಮಾಡುವ ಸಾಧ್ಯತೆ ಇದೆ. ಈ ಅವಕಾಶವನ್ನು ಆರ್‌ಬಿಐ ಮುಕ್ತವಾಗಿ ಇರಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಈ ಹಿಂದೆ 1980 ಮತ್ತು 1990ರ ದಶಕದ ಅಂತ್ಯ ಭಾಗದಲ್ಲಿ ಆರ್‌ಬಿಐ ಹೀಗೆ ಹೆಚ್ಚುವರಿ ನೋಟು ಮುದ್ರಣದ ಮೂಲಕ ಸಮಸ್ಯೆ ಪರಿಹರಿಸಿತ್ತು. ನಂತರ ಕೈಗೊಂಡ ಸಾಕಷ್ಟುಆರ್ಥಿಕ ಸುಧಾರಣಾ ಕ್ರಮಗಳು, ದೇಶದಲ್ಲಿ ಮತ್ತೆ ಅಂಥ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆದಿತ್ತು.

ರಸ್ತೆಯಲ್ಲಿ ದುಡ್ಡು ಬಿದ್ದಿದ್ದರೂ ಮುಟ್ಟೋಲ ಜನ

ಆದರೆ ಕೊರೋನಾ ಬಿಕ್ಕಟ್ಟು ಕಳೆದ 4 ತಿಂಗಳ ಅವಧಿಯಲ್ಲೇ ದೇಶದ ಆರ್ಥಿಕತೆಗೆ 30 ಲಕ್ಷ ಕೋಟಿ ರು. ನಷ್ಟಉಂಟುಮಾಡಿದೆ. ಹೀಗಾಗಿ ಸರ್ಕಾರ ಈಗಾಗಲೇ ತಾನು ವಾರ್ಷಿಕವಾಗಿ ಮಾಡಲು ಉದ್ದೇಶಿಸಿದ್ದ ಸಾಲದ ಪ್ರಮಾಣವನ್ನು ಶೇ.50ರಷ್ಟುಹೆಚ್ಚಿಸಿದೆ. ಇದು ವಿತ್ತೀಯ ಕೊರತೆ ಪ್ರಮಾಣವನ್ನು ಶೇ.3.5ರಿಂದ ಶೇ.5.5ಕ್ಕೆ ಹೆಚ್ಚಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಇಷ್ಟು ದೊಡ್ಡ ಹೊಡೆತ ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ. ಹೀಗಿರುವಾಗ ಮುಂದಿನ 6-7 ತಿಂಗಳಲ್ಲಿ ಮತ್ತೆ 50 ಲಕ್ಷ ಕೋಟಿ ರು.ಗಿಂತ ಹೆಚ್ಚಿನ ಹೊಡೆತ ಬಿದ್ದರೆ ಆಗ ಆರ್‌ಬಿಐ ನೋಟು ಮುದ್ರಣ ಮಾಡುವುದು ಅನಿವಾರ್ಯವಾಗಲಿದೆ ಎನ್ನಲಾಗಿದೆ.

ನೋಟು ಮುದ್ರಣ ಏಕೆ?

ಆರ್ಥಿಕತೆಗೆ ನಷ್ಟ ಹೆಚ್ಚಾದಲ್ಲಿ ಸರ್ಕಾರದ ಬೊಕ್ಕಸ ಖಾಲಿ

ವೇತನ, ಅತ್ಯಗತ್ಯ ಯೋಜನೆಗೆ ಭಾರೀ ಹಣದ ಕೊರತೆ

ಇಂಥ ವೇಳೆ ಅಗತ್ಯ ಪೂರೈಸಲು ನೋಟು ಮುದ್ರಣ

ನೋಟು ಮುದ್ರಣದ ಅಪಾಯಗಳೇನು?

- ಅಗತ್ಯವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ

- ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆ

- ಬಡವರ ಜೀವನದ ಮೇಲೆ ಪರಿಣಾಮ

- ಉಳಿತಾಯದ ಹಣದ ಮೌಲ್ಯದಲ್ಲಿ ಇಳಿಕೆ

click me!