ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಬಂಪರ್ ಲಾಭ; ಮಾರ್ಚ್ 31ರವರೆಗೆ ಸಿಗೋ ಬಡ್ಡಿ ಎಷ್ಟು ಗೊತ್ತಾ?

By Suvarna NewsFirst Published Feb 12, 2024, 1:20 PM IST
Highlights

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ನಿಗದಿಪಡಿಸುತ್ತದೆ. ಹಾಗಾದ್ರೆ 2024ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್)  ಬಡ್ಡಿದರ ಎಷ್ಟಿದೆ? 

Business Desk:ಭಾರತದಲ್ಲಿ ಇಂದು ಹೂಡಿಕೆ ಅಥವಾ ಉಳಿತಾಯಕ್ಕೆ ಸಾಕಷ್ಟು ಆಯ್ಕೆಗಳಿವೆ. ಆದರೂ ಸಾಕಷ್ಟು ಜನರು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಉಳಿತಾಯಕ್ಕೆ ಅಂಚೆ ಕಚೇರಿ ಯೋಜನೆಗಳು ನೆಚ್ಚಿನ ಆಯ್ಕೆಗಳಾಗಿವೆ. ಇದಕ್ಕೆ ಕಾರಣ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಸರ್ಕಾರದ ಬೆಂಬಲ ಹೊಂದಿರುವ ಕಾರಣ ಇದರಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕೂಡ ಉತ್ತಮವಾಗಿರುವ ಕಾರಣ ರಿಟರ್ನ್ಸ್ ಕೂಡ ಚೆನ್ನಾಗಿದೆ. ಅಂಚೆ ಕಚೇರಿ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ತ್ರೈಮಾಸಿಕದ ಆಧಾರದಲ್ಲಿ ನಿರ್ಧರಿಸುತ್ತದೆ. ಅಂದರೆ ಪ್ರತಿ ಮೂರು ತಿಂಗಳಿಗೆ ಬಡ್ಡಿದರ ನಿಗದಿಪಡಿಸುತ್ತದೆ. ಅಂದರಂತೆ 2024ನೇ ಸಾಲಿನ ಜನವರಿ 1ರಿಂದ -ಮಾರ್ಚ್ 31ರ ತನಕದ ಅವಧಿಯ ಬಡ್ಡಿದರವನ್ನು ನಿಗದಿಪಡಿಸಿದೆ. ಹಾಗಾದ್ರೆ ಅಂಚೆ ಕಚೇರಿಯ ಯಾವ ಉಳಿತಾಯ ಯೋಜನೆಗೆ ಎಷ್ಟು ಬಡ್ಡಿದರವಿದೆ?

ಅಂಚೆ ಕಚೇರಿ ಉಳಿತಾಯ ಖಾತೆ: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಕನಿಷ್ಠ 500ರೂ. ಠೇವಣಿಯಿಡಬೇಕು. ಗರಿಷ್ಠ ಠೇವಣಿಗೆ ಯಾವುದೇ ಮಿತಿಯಿಲ್ಲ. 2024ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ  ವೈಯಕ್ತಿಕ ಅಥವಾ ಜಂಟಿ ಖಾತೆಯಲ್ಲಿನ ಹೂಡಿಕೆಗೆ ವಾರ್ಷಿಕ ಶೇ.4ರಷ್ಟು ಬಡ್ಡಿ ನೀಡಲಾಗುತ್ತಿದೆ.

ಅವಧಿ ಠೇವಣಿ:  ಅಂಚೆ ಕಚೇರಿ ಅವಧಿ ಠೇವಣಿ (Time Deposit) ಬ್ಯಾಂಕ್ಗಳಲ್ಲಿನ ಫಿಕ್ಸಡ್ ಡೆಫಾಸಿಟ್ಗೆ ಸರಿಸಮನಾದ ಯೋಜನೆ. ಅಂಚೆ ಕಚೇರಿಯಲ್ಲಿ 1,2, 3 ಹಾಗೂ 5 ವರ್ಷಗಳ ಅವಧಿಗೆ ಟೈಮ್ ಡೆಫಾಸಿಟ್ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು ಕೂಡ ಈ ಖಾತೆ ತೆರೆಯಬಹುದು. 5 ವರ್ಷಗಳ ಅವಧಿಯ ಟಿಡಿ ಖಾತೆಯಲ್ಲಿರುವ ಠೇವಣಿಗೆ ವಾರ್ಷಿಕ ಶೇ.7.5 ಬಡ್ಡಿದರವಿದೆ. 3 ವರ್ಷಗಳ ಅವಧಿ ಠೇವಣಿಗೆ ಶೇ.7.1 ಬಡ್ಡಿದರವಿದೆ. ಇನ್ನು ಎರಡು ವರ್ಷಗಳ ಅವಧಿ ಠೇವಣಿಗೆ ಶೇ.7ರಷ್ಟು ಬಡ್ಡಿದರವಿದೆ.ಇನ್ನು ಒಂದು ವರ್ಷ ಅವಧಿ ಠೇವಣಿಗೆ ಶೇ.6.9 ಬಡ್ಡಿದರವಿದೆ.

ಹೆಣ್ಣು ಮಕ್ಕಳ ಭದ್ರ ಭವಿಷ್ಯಕ್ಕಾಗಿ ಇಲ್ಲಿಯೇ ಹೂಡಿಕೆ ಮಾಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):60 ವರ್ಷ ತುಂಬಿದ ಅಥವಾ 55ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಪಡೆದವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 15 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಇದು 5 ವರ್ಷಗಳ ಅವಧಿಯದ್ದಾಗಿದೆ. ಈ ಖಾತೆಗೆ ವಾರ್ಷಿಕ ಶೇ. 8.2 ಬಡ್ಡಿ ನೀಡಲಾಗುತ್ತಿದೆ.

ಮಾಸಿಕ ಆದಾಯ ಯೋಜನೆ (MIS): ಈ ಯೋಜನೆ ಹೂಡಿಕೆದಾರರಿಗೆ (Investors) ನಿಗದಿತ ರಿಟರ್ನ್ ನೀಡುತ್ತದೆ.  ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ.  ಈ ಖಾತೆ ತೆರೆಯಲು ಕನಿಷ್ಠ 1000 ರೂ. ಹೂಡಿಕೆ ಮಾಡೋದು ಅಗತ್ಯ. ಆ ಬಳಿಕ ಖಾತೆದಾರರು ಒಂದು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು. ಈ ಖಾತೆ ಬಡ್ಡಿದರ ಶೇ.7.4ರಷ್ಟಿದೆ. 

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): 5 ವರ್ಷಗಳ ಕಿರು ಅವಧಿಗೆ ಹೂಡಿಕೆ ಮಾಡಲು ಬಯಸೋರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ತೆರಿಗೆ ಪ್ರಯೋಜನಗಳು ಕೂಡ ಸಿಗುತ್ತವೆ.   ಸಣ್ಣ ಹಾಗೂ ಮಧ್ಯಮ ಆದಾಯದ ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ಕಡಿಮೆ ಅಪಾಯದ ಹೂಡಿಕೆಗೆ ಎನ್ ಎಸ್ ಸಿ  ಅತ್ಯುತ್ತಮ ಆಯ್ಕೆ. ಎನ್ ಎಸ್ ಸಿ ಬಡ್ಡಿದರ ಶೇ.7.7ರಷ್ಟಿದೆ.

ಸಾರ್ವಜನಿಕ ಭವಿಷ್ಯ ನಿಧಿ ಖಾತೆ (PPF): ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಇದು 15 ವರ್ಷಗಳ ಅವಧಿಯದ್ದಾಗಿದೆ.  5 ವರ್ಷಗಳ ಬಳಿಕ ಈ ಯೋಜನೆಯಿಂದ ಹೊರಬರಲು ಅವಕಾಶವಿದೆ. ಇನ್ನು 4ನೇ ವರ್ಷ ಪಿಪಿಎಫ್ ಖಾತೆಯಲ್ಲಿರೋ ಹಣದ ಆಧಾರದಲ್ಲಿ ಸಾಲ ಪಡೆಯಲು ಅವಕಾಶವಿದೆ. 7 ವರ್ಷಗಳ ಬಳಿಕ ಈ ಖಾತೆಯಿಂದ ಸ್ವಲ್ಪ ಹಣ ಹಿಂಪಡೆಯಬಹುದು. ಈ ಖಾತೆಯನ್ನು ಸಕ್ರಿಯವಾಗಿಡಲು ಪ್ರತಿ ಹಣಕಾಸು ಸಾಲಿನಲ್ಲಿ ಕನಿಷ್ಠ 500 ರೂ. ಠೇವಣಿ ಇಡೋದು ಕಡ್ಡಾಯ. ಹಾಗೆಯೇ ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಗರಿಷ್ಠ 1,50,000 ರೂ. ಠೇವಣಿ ಇಡಬಹುದು . ಪ್ರಸ್ತುತ ಪಿಪಿಎಫ್ ಖಾತೆಯಲ್ಲಿರೋ ಮೊತ್ತಕ್ಕೆ ವಾರ್ಷಿಕ ಶೇ.7.1 ಬಡ್ಡಿದರವಿದೆ.

ಕಿಸಾನ್ ವಿಕಾಸ್ ಪತ್ರ: ಈ ಯೋಜನೆಯಲ್ಲಿನ ನಿಮ್ಮ ಹೂಡಿಕೆಯು 123 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಪ್ರಸ್ತುತ ಇದಕ್ಕೆ ಶೇ.7.5ಷ್ಟು ಬಡ್ಡಿದರವಿದೆ.

2,000ರೂ. ನೋಟು ವಿನಿಮಯಕ್ಕೆ ಅಂಚೆ ಕಚೇರಿಯನ್ನೂ ಬಳಸಿಕೊಳ್ಳಿ: ಸಾರ್ವಜನಿಕರಿಗೆ ಆರ್ ಬಿಐ ಸಲಹೆ

ಸುಕನ್ಯಾ ಸಮೃದ್ಧಿ ಖಾತೆ: ಇದು ಹೆಣ್ಣುಮಗುವಿಗಾಗಿಯೇ ರೂಪಿಸಲ್ಪಟ್ಟಿರುವ ಉಳಿತಾಯ ಯೋಜನೆ. 10 ವರ್ಷ ವಯಸ್ಸಿನೊಳಗಿನ ಯಾವುದೇ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆಯಬಹುದು. ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಲ್ಲಿ ಪ್ರತ್ಯೇಕ ಖಾತೆ ತೆರೆಯಲು ಅವಕಾಶವಿದೆ. ಖಾತೆ ತೆರೆದ 15 ವರ್ಷಗಳ ತನಕ ಈ ಖಾತೆಗೆ ಹಣ ಜಮಾ ಮಾಡಿದರೆ ಸಾಕು. ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000ರೂ. ತನಕ ಈ ಖಾತೆಯಲ್ಲಿ ಜಮಾ ಮಾಡಬಹುದು. ಪ್ರಸ್ತುತ ಈ ಖಾತೆಯಲ್ಲಿರೋ ಹಣಕ್ಕೆ ವಾರ್ಷಿಕ ಶೇ. 8.2 ಬಡ್ಡಿ ನೀಡಲಾಗುತ್ತಿದೆ. 


 

click me!