3 ತಿಂಗಳು, 17 ಪೋಸ್ಟ್, ಟಾಟಾಗೆ 10 ಲಕ್ಷ ಫಾಲೋವರ್ಸ್: ಥ್ಯಾಂಕ್ಸ್ ಹೇಳಿದ ಪರಿಯೂ ಭಿನ್ನ!| ಪೋಸ್ಟ್‌ಗೆ ಚೋಟೂ ಎಂದು ಕಮೆಂಟ್ ಕೊಟ್ಟ ಚೆಲುವೆ| ಛೋಟೂ ಎಂದಾಕೆಗೆ ರತನ್ ಟಾಟಾ ಕೊಟ್ರು ಮನಮೋಹಕ ಉತ್ತರ
ಮುಂಬೈ[ಫೆ.12]: ಟಾಟಾ ಗ್ರೂಪ್ ಮುಖ್ಯಸ್ಥ ಹಾಗೂ ದಿಗ್ಗಜ ಉದ್ಯಮಿ ಆಗಿರುವ ರತನ್ ಟಾಟಾ ತಮ್ಮ ಸರಳತೆಗಯಿಂದಲೇ ಜನರ ನಡುವೆ ಪ್ರಸಿದ್ಧರಾಗಿದ್ದಾರೆ. ಅವರು 2019ರ ಅಕ್ಟೋಬರ್ ನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದರು. ಒಟ್ಟು ನಾಲ್ಕು ತಿಂಗಳೊಳಗೆ ಅವರು 17 ಪೋಸ್ಟ್ ಹಾಕಿದ್ದು, ಈ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸಲಾರಂಭಿಸಿದ್ದಾರೆ. ಹೀಗಿರುವಾಗ ರತನ್ ಟಾಟಾ ತನ್ನ ಪಾಲೋವರ್ಸ್ ಗೆ ವಿಭಿನ್ನವಾಗಿ ಧನ್ಯವಾದ ತಿಳಿಸಿದ್ದಾರೆ.
ರತನ್ ಟಾಟಾ ಫೆಬ್ರವತರಿ 11 ರಂದು ಪೋಸ್ಟ್ ಒಂದನ್ನು ಮಾಡುತ್ತಾ ತನ್ನ ಹಿಂಬಾಲಕರಿಗೆ ಧನ್ಯವಾದ ತಿಳಿಸಿದ್ದಾರೆ. ಇಲ್ಲಿ ಅವರು ತಮ್ಮದೊಂದು ಫೋಟೋ ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನೆಲದ ಮೇಲೆ ಕುಳಿತಿರುವ ರತನ್ ಟಾಟಾ ನಗುತ್ತಿರುವುದನ್ನು ನೋಡಬಹುದಾಗಿದೆ. ಅವರ ಈ ಹೃದಯಸ್ಪರ್ಶಿ ಪೋಟೋಗೆ ನೆಟ್ಟಿಗರು ಫಿದಾ ಆಗಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಫೋಟೋ ಜೊತೆ 'ಈ ಖಾತೆಯ ಹಿಂಬಾಲಕರ ಸಂಖ್ಯೆ 10 ಲಕ್ಷ ದಾಟಿದೆ ಎಂಬುವುದನ್ನು ನಾನು ಈಗಷ್ಟೇ ಗಮನಿಸಿದೆ. ನಾನು ಇನ್ಸ್ಟಾಗ್ರಾಂಗೆ ಸೇರ್ಪಡೆಯಾದಾಗ ಇಂತಹ ಅದ್ಭುತ ಆನ್ ಲೈನ್ ಕುಟುಂಬದ ಬಗ್ಗೆ ಕಲ್ಪನೆಯನ್ನೂ ಮಾಡಿರಲಿಲ್ಲ. ನಿಮ್ಮ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಆದರೆ ಇಂಟರ್ನೆಟ್ ಯುಗದಲ್ಲಿ ನಮ್ಮ ನಡುವುನ ಸಂಬಂದ ಅದು ಈ ಸಂಖ್ಯೆಗಿಂತಲೂ ಅದ್ಭುತ ಎಂಬುವುದು ನನ್ನ ಅಭಿಪ್ರಾಯ. ಈ ಸಮುದಾಯದ ಸದಸ್ಯನಾಗಿ, ನಿಮ್ಮಿಂದ ಕಲಿತುಕೊಂಡಿದ್ದು, ನನಗೆ ಖುಷಿ ಕೊಡುವುದರೊಂದಿಗೆ, ನನ್ನನ್ನು ರೋಮಾಂಚನಗೊಳಿಸುತ್ತದೆ. ನಮ್ಮ ಈ ಪಯಣ ಹೀಗೆ ಮುಂದುವರೆಯುತ್ತದೆ ಎಂಬ ಆಶಯ ನನ್ನದು' ಎಂದು ಬರೆದಿದ್ದಾರೆ.
ಅವರ ಈ ಸಾಲುಗಳು ಹಿಂಬಾಲಕರ ಮನ ಗೆದ್ದಿವೆ. ನೀವು ಪ್ರಪಂಚದ ಅದ್ಭುತ ವ್ಯಕ್ತಿ, ನಿಮ್ಮಷ್ಟು ಸರಳ ವ್ಯಕ್ತಿ ಮತ್ತೊಬ್ಬರಿಲ್ಲ ಎಂಬಿತ್ಯಾದಿ ಕಮೆಂಟ್ ಕೂಡಾ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಚೆಲುವೆಯೊಬ್ಬಳು ರತನ್ ಟಾಟಾರನ್ನು ಚೋಟು ಎಂದು ಸಂಬೋದಿಸಿ ಕಮೆಂಟ್ ಮಾಡಿದ್ದು, ಇದಕ್ಕೆ ಟಾಟಾ ಪ್ರತಿಕ್ರಿಯಿಸಿರುವ ಪರಿ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ.
ಹೌದು ರತನ್ ಟಾಟಾರ ಈ ಪೋಸ್ಟ್‌ಗೆ ರಿಯಾ ಜೈನ್ ಎಂಬಾಕೆ 'Congratulations Chhotu' ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರತನ್ ಟಾಟಾ 'ನಮ್ಮೆಲ್ಲರೊಳಗೂ ಒಂದು ಮಗುವಿನ ಮನಸ್ಸಿದೆ. ದಯವಿಟ್ಟು ಈ ಹರೆಯದ ಹುಡುಗಿಯನ್ನು ಎಲ್ಲರೂ ಗೌರವಿಸಿ' ಎಂದಿದ್ದಾರೆ.
ವಾಸ್ತವವಾಗಿ ಆ ಯುವತಿ ರತನ್ ಟಾಟಾರನ್ನು ಛೋಟೂ ಎಂದು ಸಂಬೋಧಿಸಿ ಕಮೆಂಟ್ ಮಾಡಿದ ಬಳಿಕ ಹಲವಾರು ಮಂದಿ ಆಕೆಗೆ ಕೆಟ್ಟ ಪದಗಳಿಂದ ಕ್ಷಮಿಸಿದ್ದರು. ಈ ಸಂಬಂಧ ಸ್ಟೇಟಸ್ ಹಾಕಿಕೊಂಡಿರುವ ರತನ್ ಟಾಟಾ 'ಓರ್ವ ಮುಗ್ಧ ಯುವತಿ ತನ್ನ ಭಾವನೆಗಳನ್ನು ಹೊರಹಾಕಿ ನನ್ನನ್ನು ಮಗು ಎಂದು ಬಣ್ಣಿಸಿ ಕಮೆಂಟ್ ಹಾಕಿದಳು. ಆದರೆ ಆಕೆ ಈ ಕಮೆಂಟ್ ಮಾಡಿದ ಬಳಿಕ ಅನೇಕರು ಆಕೆಯನ್ನು ನಿಂದಿಸಲಾರಂಭಿಸಿದ್ದು, ಬೇರೆ ವಿಧಿ ಇಲ್ಲದೇ ಆಕೆ ತನ್ನ ಕಮೆಂಟ್ ಡಿಲೀಟ್ ಮಾಡಬೇಕಾಯ್ತು. ಆದರೆ ಆಕೆ ಮಾಡಿದ ಆ ಮುಗ್ಧ ಹಾಗೂ ಹೃದಯಸ್ಪರ್ಶಿ ಕಮೆಂಟ್‌ನ್ನು ನಾನು ಮೆಚ್ಚಿಕೊಂಡಿದ್ದೇನೆ. ಆಕೆ ಕಮೆಂಟ್ ಹಾಕುವುದಕ್ಕೆ ಹಿಂಜರಿಯಬಾರದೆಂಬುವುದು ನನ್ನ ಆಶಯ' ಎಂದಿದ್ದಾರೆ.
ಜನರ ಮನಕದ್ದ ರತನ್ ಟಾಟಾ ಹರೆಯದ ಫೋಟೋ
82 ವರ್ಷದ ಟಾಟಾ ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ ಹರೆಯದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ನೀವು ಹಾಲಿವುಡ್ ಹೀರೋನಂತಿದ್ದೀರಿ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು.