12 ವರ್ಷದ ಹಿಂದೆ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ, ಈಗ ಆಸ್ತಿ ‘ಸೊನ್ನೆ!’

By Suvarna News  |  First Published Feb 11, 2020, 2:43 PM IST

ಕೋಟ್ಯಧಿಪತಿ ಅಂಬಾನಿ ದಿವಾಳಿಯಾಗಿದ್ದು ಹೇಗೆ? | ಅನಿಲ್‌ ಅಂಬಾನಿ ಈಗಿನ ಆಸ್ತಿ 792 ಕೋಟಿ ರು | ಅನಿಲ್‌ ಒಡೆತನದ ಕಂಪನಿಗಳ ಸಾಲ 1.7 ಲಕ್ಷ ಕೋಟಿ ರು. | ಮುಕೇಶ್‌ ಅಂಬಾನಿ ಈಗಿನ ಆಸ್ತಿ 4 ಲಕ್ಷ ಕೋಟಿ ರು.


ಒಂದು ಕಾಲದಲ್ಲಿ 500 ರು.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಕಮ್ಯುನಿಕೇಶನ್‌ ಕಂಪನಿ ಈಗ ದಿವಾಳಿಯಾಗಿದೆ. ಅದರ ಒಡೆಯ ಅನಿಲ್‌ ಅಂಬಾನಿ ಇಂಗ್ಲೆಂಡ್‌ನ ಕೋರ್ಟ್‌ ಮುಂದೆ ಸಾಲ ತೀರಿಸಲು ನನ್ನಲ್ಲಿ ನಯಾಪೈಸೆ ಹಣ ಇಲ್ಲ ಎಂದು ಹೇಳಿದ್ದಾರೆ.

ಹಿಂದೊಮ್ಮೆ ಜಗತ್ತಿನ ಟಾಪ್‌ 10 ಶ್ರೀಮಂತರ ಪಟ್ಟಿಯಲ್ಲಿದ್ದ ಉದ್ಯಮಿ ಕೇವಲ ಒಂದು ಡಜನ್‌ ವರ್ಷದಲ್ಲಿ ಪಾಪರ್‌ ಆಗಿದ್ದು ಹೇಗೆ ಎಂಬ ವಿವರ ಇಲ್ಲಿದೆ. ಅಂದಹಾಗೆ, ಇವರ ಅಣ್ಣ ಈಗಲೂ ಏಷ್ಯಾದ ನಂಬರ್‌ 1 ಶ್ರೀಮಂತ.

Tap to resize

Latest Videos

ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!

ಧೀರೂಭಾಯಿ ಅಂಬಾನಿಯ ಕಿರಿಯ ಮಗ ಅನಿಲ್‌ ಅಂಬಾನಿ

ಅನಿಲ್ ಧೀರೂಭಾಯ್ ಅಂಬಾನಿ ಅವರು ಉದ್ಯಮಿ ಧೀರೂಭಾಯಿ ಅಂಬಾನಿಯವರ ಕಿರಿಯ ಮಗ. 1959, ಜನವರಿ 4ರಂದು ಜನಸಿದ ಇವರು ಮುಂಬೈ ವಿಶ್ವವಿದ್ಯಾಲಯದ, ಕೆ.ಸಿ. ಕಾಲೇಜಿನಲ್ಲಿ ಬಿಎಸ್ಸಿ ಪದವಿ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದುಕೊಂಡರು. ಶಿಕ್ಷಣ ಪೂರ್ಣಗೊಂಡ ಬಳಿಕ ತಂದೆ ಸ್ಥಾಪಿಸಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಸಿಇಒ ಆದರು.

ಹಿಸೆಯಾದಾಗ ಟೆಲಿಕಾಂ ಕಂಪನಿ ತೆಗೆದುಕೊಂಡ ಅನಿಲ್‌

2002 ರಲ್ಲಿ ಧೀರೂಭಾಯಿ ನಿಧನರಾದಾಗ ರಿಲಯನ್ಸ್‌ ಕಂಪನಿ ಒಟ್ಟು 20 ಲಕ್ಷ ಷೇರುದಾರರನ್ನು ಹೊಂದಿತ್ತು. ಇದು ಇಡೀ ದೇಶದ ಯಾವುದೇ ಕಂಪನಿಗೆ ಹೋಲಿಸಿದರೂ ಭಾರಿ ದೊಡ್ಡ ಸಂಖ್ಯೆ. ಅನಿಲ… ಅಂಬಾನಿಯವರು ರಿಲಯನ್ಸ್‌ ಮಹಾಸಂಸ್ಥೆಯ ವಿವಿಧ ಕಂಪನಿಗಳಾದ ರಿಲಯನ್ಸ್‌ ಕ್ಯಾಪಿಟಲ್ ರಿಲಯನ್ಸ್‌  ಇನ್ಸ್‌ಸ್ಟ್ರಕ್ಚರ್‌, ರಿಲಯನ್ಸ್‌ ಪವರ್‌ ಮತ್ತು ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಲಿಮಿಟೆಡ್‌ ಇವುಗಳ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಬರಬರುತ್ತಾ ಅಣ್ಣ ಮುಕೇಶ್‌ ಅಂಬಾನಿ ಹಾಗೂ ಇವರ ನಡುವೆ ಮಾಲಿಕತ್ವದ ಸಮಸ್ಯೆ ಎದುರಾಯಿತು.

2006 ರಲ್ಲಿ ಎಲ್ಲಾ ಆಸ್ತಿ ಇಬ್ಭಾಗವಾಯಿತು. ಆಗ ಅನಿಲ್‌ ಮತ್ತು ಮುಕೇಶ್‌ 90,000 ಕೋಟಿ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರಿಯ ಎಲ್ಲ ಕಂಪನಿಗಳನ್ನೂ ವಿಭಜನೆ ಮಾಡಿಕೊಂಡಾಗ ರಿಲಯನ್ಸ್‌ ಕಮ್ಯೂನಿಕೇಶನ್ಸ್‌, ರಿಲಯನ್ಸ್‌ ಎನರ್ಜಿ, ರಿಲಯನ್ಸ್‌ ಕ್ಯಾಪಿಟಲ್‌ ಮತ್ತು ರಿಲಯನ್ಸ್‌ ನ್ಯಾಚುರಲ್‌ ರಿಸೋರ್ಸ್‌ (ಆರ್‌ಎನ್‌ಆರ್‌ಎಲ್‌) ಕಂಪನಿಗಳು ಅನಿಲ್‌ ಅಂಬಾನಿಗೆ ಬಂದವು. ತೈಲ ಉದ್ಯಮ, ರಿಲಯನ್ಸ್‌ ಮತ್ತು ಪೆಟ್ರೋಕೆಮಿಕಲ್‌ ಕಾರ್ಪೋರೇಶನ್‌ ಲಿ. ಕಂಪನಿಗಳು ಮುಕೇಶ್‌ಗೆ ಹೋದವು.

ಕುಬೇರ ಅಂಬಾನಿ ಕುಚೇಲ ಆದದ್ದು ಹೇಗೆ?: ಜಡ್ಜ್ ಪ್ರಶ್ನೆಗೆ ವಿಧಿ ಲಿಖಿತ ಎಂದ ವಕೀಲ!

ಜಾಗತಿಕ ಮನರಂಜಾ ಉದ್ದಿಮೆಯಲ್ಲಿ ದೊಡ್ಡ ಹೆಸರು

2005ರಲ್ಲಿ ಅನಿಲ್‌ ಅಂಬಾನಿ ಜಾಗತಿಕ ಮಟ್ಟದಲ್ಲಿ ಮನರಂಜನಾ ಉದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದರು. ಚಿತ್ರ ಸಂಸ್ಕರಣೆ, ನಿರ್ಮಾಣ, ಪ್ರದರ್ಶನ ಮತ್ತು ಡಿಜಿಟಲ… ಸಿನಿಮಾ ಹಿತಾಸಕ್ತಿಗಳನ್ನು ಹೊಂದಿರುವ ಆಡ್ಲ್ಯಾಬ್ಸ್‌ ಫಿಲ್ಮ್‌ನ ಬಹುತೇಕ ಷೇರುಗಳನ್ನು ಖರೀದಿಸಿ ಮನರಂಜನಾ ಉದ್ಯಮಕ್ಕೆ ಕಾಲಿಟ್ಟರು. 2009ರಲ್ಲಿ ಆಡ್ಲ್ಯಾಬ್ಸ್‌ ಕಂಪನಿಯನ್ನು ರಿಲಯನ್ಸ್‌ ಮೀಡಿಯಾ ವರ್ಕ್ಸ್‌ ಎಂದು ಮರುನಾಮಕರಣ ಮಾಡಲಾಯಿತು.

2008 ರಲ್ಲಿ ಸ್ಟೀವನ್‌ ಸ್ಪೀಲ್ಬರ್ಗ್‌ ನಿರ್ಮಾಣ ಕಂಪನಿಯೊಂದಿಗಿನ ಒಪ್ಪಂದವು ಅಂಬಾನಿಯವರ ಮನರಂಜನಾ ಉದ್ಯಮಕ್ಕೆ ಜಾಗತಿಕ ವೇದಿಕೆ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿತು. 2012ರಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದ ಲಿಂಕನ್‌ ಚಲನಚಿತ್ರ ಮತ್ತು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ವಾರ್‌ ಹಾರ್ಸ್‌, ದಿ ಹೆಲ್ಪ್‌ ಮುಂತಾದ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದು ಅನಿಲ್‌ ಅಂಬಾನಿಯವರ ಕಂಪನಿಯೇ.

ಆಸ್ತಿ ಹಂಚಿಕೆಯಾದಾಗಿನಿಂದಲೂ ಅನಿಲ್‌ ಅಂಬಾನಿಗೆ ಬರೀ ನಷ್ಟ

ಧೀರೂಭಾಯಿ ಅಂಬಾನಿಯವರ ಸ್ವತ್ತನ್ನು ಇಬ್ಬರು ಮಕ್ಕಳು ಹಂಚಿಕೊಂಡಂದಿನಿಂದಲೇ ಅನಿಲ್‌ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ ಕುಸಿಯುತ್ತಾ ಸಾಗಿತು. ಅನಿಲ್‌ ಅಂಬಾನಿಯ ಬಹುತೇಕ ಅಂದರೆ ಶೇ.66ರಷ್ಟುಸ್ವತ್ತು ರಿಲಯನ್ಸ್‌ ಕಮ್ಯೂನಿಕೇಶನ್ಸ್‌ನಲ್ಲಿ ಇತ್ತು.

2007 ರಲ್ಲಿ ಅನಿಲ್‌ ಬಳಿ ಇದ್ದ ಒಟ್ಟು ಸ್ವತ್ತಿನ ಮೌಲ್ಯ 3.2 ಲಕ್ಷ ಕೋಟಿ ರುಪಾಯಿ. ಆಗ ಅಣ್ಣ ಮುಕೇಶ್‌ ಬಳಿ ಇದ್ದ ಆಸ್ತಿ 3.5 ಲಕ್ಷ ಕೋಟಿ ರುಪಾಯಿ. ಆದರೆ 2019ರ ವೇಳೆಗೆ ಅನಿಲ್‌ ಆಸ್ತಿ 792 ಕೋಟಿ ರು.ಗಿಳಿಯಿತು. ಮುಕೇಶ್‌ ಸ್ವತ್ತು 4 ಲಕ್ಷ ಕೋಟಿ ರು.ಗೆ ಏರಿಕೆಯಾಯಿತು.

50 ಸಾವಿರ ಕೋಟಿ ಮೊತ್ತದ ಭಾರತೀಯ ಸಾಲ ವಸೂಲಿಗೆ ದುಬೈ ಬ್ಯಾಂಕ್‌ ಸಜ್ಜು!.

ಅನಿಲ್‌ ಸೋಲಿಗೆ ಅಣ್ಣನ ಕಂಪನಿ ಜಿಯೋ ಕಾರಣ?

2002ರಲ್ಲಿ ರಿಲಯನ್ಸ್‌ ಕಮ್ಯುನಿಕೇಶನ್‌ ಆರಂಭವಾದಾಗ ಅದು 2ಜಿ ಮತ್ತು 3ಜಿ ಸೇವೆಗೆ ಮಾತ್ರ ಸೀಮಿತವಾಗಿತ್ತು. 2010ರ ವೇಳೆಗೆ ಆರ್‌ಕಾಮ್‌ ಕಂಪನಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ದೈತ್ಯ ಸಂಸ್ಥೆಯಾಗಿತ್ತು. ಆಗ ಇಡೀ ಮಾರುಕಟ್ಟೆಯಲ್ಲಿ ಶೇ.17ರಷ್ಟುಪಾಲನ್ನು ಆರ್‌ಕಾಮ್‌ ಹೊಂದಿತ್ತು. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ಷೇರುಗಳ ಪೈಕಿ ಎರಡನೇ ದುಬಾರಿ ಷೇರು ಆಗಿತ್ತು. ಆದರೆ ತಂತ್ರಜ್ಞಾನ ಬದಲಾಗುತ್ತಾ ಟೆಲಿಕಾಂ ಮಾರುಕಟ್ಟೆಗೆ 4ಜಿ ಕಾಲಿಟ್ಟಿತು. ಬಳಿಕ ರಿಲಯನ್ಸ್‌ ಕಮ್ಯುನಿಕೇಶನ್‌ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಾ ಬಂತು. 2016ರಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುಕೇಶನ್‌ ಕಂಪನಿಯನ್ನು ಏರ್‌ಸೆಲ್‌ ಖರೀದಿ ಮಾಡಿತು. ಆದರೂ ಜಿಯೋ ವಿರುದ್ಧ ನಿಲ್ಲುವಲ್ಲಿ ಉಭಯ ಟೆಲಿಕಾಂ ಕಂಪನಿಗಳು ಸೋತವು.

ಹೀಗಾಗಿ ಅನಿಲ್‌ ಅಂಬಾನಿ ಸಾಲದ ಪ್ರಮಾಣ ಏರುತ್ತಲೇ ಹೋಯಿತು. ರಿಲಯನ್ಸ್‌ ಕಮ್ಯುನಿಕೇಶನ್‌ ದಿವಾಳಿ ಹಂತಕ್ಕೆ ತಲುಪಿತು. ಸಾಲದ ಸುಳಿಗೆ ಸಿಲುಕಿದ್ದ ರಿಲಯನ್ಸ್‌ ಕಮ್ಯುನಿಕೇಷನ್‌ (ಆರ್‌ಕಾಮ್‌) ಕಂಪನಿಯನ್ನು ತಮ್ಮ ಸಹೋದರ ಮುಕೇಶ್‌ ಅಂಬಾನಿ ಅವರಿಗೆ ಅನಿಲ್‌ ಅಂಬಾನಿ ಮಾರಾಟ ಮಾಡಿದರು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ 2019ರಲ್ಲಿ ಅನಿಲ್‌ ಅಂಬಾನಿ ರಿಲಯನ್ಸ್‌ ಕಮ್ಯುನಿಕೇಶನ್‌ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದರು.

ಹಂತ ಹಂತವಾಗಿ ಎಲ್ಲಾ ಉದ್ಯಮದಲ್ಲೂ ನಷ್ಟ

2016ರ ಸುಮಾರಿಗೆ ರಿಲಯನ್ಸ್‌-ಅನಿಲ್‌ ಧೀರೂಭಾಯಿ ಅಂಬಾನಿ ಕಂಪನಿಯು ಮನರಂಜನಾ ಉದ್ಯಮದಲ್ಲೂ ನಷ್ಟಅನುಭವಿಸತೊಡಗಿತು. ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯ ಸಾಲ ತೀರಿಸಲು ಟೀವಿ ಬ್ಯುಸಿನೆಸ್‌ನ ಕೆಲ ಭಾಗವನ್ನು ಝೀ ಎಂಟರ್‌ಟೇನ್‌ಮೆಂಟ್‌ಗೆ 1,872 ಕೋಟಿ ರು.ಗೆ ಮಾರಾಟ ಮಾಡಿದರು. ಎಫ್‌ಎಂ ರೇಡಿಯೋದ 49% ಷೇರನ್ನು ಝೀ ಮೀಡಿಯಾಗೆ ಮಾರಾಟ ಮಾಡಿದರು. ಹಾಗೆಯೇ ಉಳಿದ ಟೀವಿ ಉದ್ಯಮಗಳನ್ನೂ ಮಾರಾಟ ಮಾಡಿದರು.

2016ರಲ್ಲಿ ಅನಿಲ್‌ ಅಂಬಾನಿ ರಕ್ಷಣಾ ಕ್ಷೇತ್ರಕ್ಕೂ ಕಾಲಿಟ್ಟರು. ಗುಜರಾತ್‌ ಮೂಲದ ಪಿಪಾಪಾವ್‌ ಮರೈನ್‌ ಆ್ಯಂಡ್‌ ಆಫ್‌ಶೋರ್‌ ಎಂಜಿನಿಯರಿಂಗ್‌ ಷೇರು ಖರೀದಿಸಿ ಅದನ್ನು ರಿಲಯನ್ಸ್‌ ನೇವಲ್‌ ಆ್ಯಂಡ್‌ ಎಂಜಿನಿಯರಿಂಗ್‌ ಎಂದು ಮರುನಾಮಕರಣ ಮಾಡಿದರು. ಆದರೆ ಇದರಲ್ಲೂ ಲಾಭ ಇಲ್ಲದೆ, ನಷ್ಟಅನುಭವಿಸಿದರು. ರಿಲಯನ್ಸ್‌ ನೇವಲ್‌ 2015ರಲ್ಲಿ 7,240 ಕೋಟಿ ರು. ಮಾರುಕಟ್ಟೆಬಂಡವಾಳ ಹೊಂದಿದ್ದರೆ, 2019ರಲ್ಲಿ ಬರೀ 757 ಕೋಟಿ ರು.ಗೆ ಇಳಿಯಿತು. ಸಾಲದ ಹೊರೆ ಹೆಚ್ಚಾಗುತ್ತಿದ್ದಂತೆಯೇ ರಿಲಯನ್ಸ್‌ ಪವರ್‌ ಆಸ್ತಿಯನ್ನೂ ಮಾರಾಟ ಮಾಡಲು ಅನಿಲ್‌ ನಿರ್ಧರಿಸಿದ್ದರು.

ಹೈಡ್ರೋಜನ್ ವಿಹಾರ ನೌಕೆ ಖರೀದಿಸಿದ ವಿಶ್ವ ಕುಬೇರ ಬಿಲ್ ಗೇಟ್ಸ್!

ರಫೇಲ್‌ ಹಗರಣದಲ್ಲಿ ಆರೋಪ

2018 ರಲ್ಲಿ ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರ ರಫೇಲ್‌ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೇಂದ್ರ ಸರ್ಕಾರ ರಫೇಲ್‌ಗೆ ದುಬಾರಿ ಹಣ ಕೊಡುವುದು ಮಾತ್ರವಲ್ಲದೆ, ರಫೇಲ್‌ ಯುದ್ಧ ವಿಮಾನಗಳನ್ನು ಭಾರತದಲ್ಲಿ ತಯಾರಿಸುವ ಟೆಂಡರನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಸಿಗದಂತೆ ಮಾಡಿ ಅನಿಲ್‌ ಅಂಬಾನಿಯವರ ಕಂಪನಿಗೆ ಕೊಡಿಸಿದ್ದಾರೆ ಎಂದೂ ಆರೋಪಿಸಿದ್ದರು.

ಜೈಲು ಶಿಕ್ಷೆಯಿಂದ ಕೊನೇ ಕ್ಷಣದಲ್ಲಿ ಪಾರಾಗಿದ್ದರು!

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿ ಎರಿಕ್ಸನ್‌ ಕಂಪನಿಯಿಂದ ಸಾಕಷ್ಟುಸೇವೆ ಪಡೆದುಕೊಂಡಿತ್ತು. ಅದಕ್ಕಾಗಿ 550 ಕೋಟಿ ರು. ಪಾವತಿ ಮಾಡುವುದು ಬಾಕಿಯಿತ್ತು. ಆದರೆ, ಅನಿಲ್‌ ಅಂಬಾನಿ ಆ ಹಣ ಪಾವತಿಸಲು ಸಾಧ್ಯವಾಗದೆ ಕಳೆದ ವರ್ಷದ ಫೆಬ್ರವರಿಯಲ್ಲಿ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಗಡುವು ಮುಗಿಯಲು ಇನ್ನೇನು ಒಂದು ದಿನ ಇರುವಾಗ ಮುಕೇಶ್‌ ಅಂಬಾನಿ ಸಹಾಯದಿಂದ ಅನಿಲ… ಅಂಬಾನಿ 550 ಕೋಟಿ ರು.ಗಳನ್ನು ಎರಿಕ್ಸನ್‌ ಸಂಸ್ಥೆಗೆ ಪಾವತಿಸುವ ಮೂಲಕ ಜೈಲು ಶಿಕ್ಷೆ ತಪ್ಪಿಸಿಕೊಂಡರು.

ಇದೀಗ 2012ರಲ್ಲಿ ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್‌ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್‌, ಚೀನಾ ರಫ್ತು-ಆಮದು ಬ್ಯಾಂಕ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ಗೆ ನೀಡಿದ್ದ ಸುಮಾರು 66 ಸಾವಿರ ಕೋಟಿ ರು. ಸಾಲ ಮರುಪಾವತಿಯಾಗದ ಕಾರಣ ಅನಿಲ್‌ ಅಂಬಾನಿ ವಿರುದ್ಧ ಕೇಸು ದಾಖಲಿಸಿವೆ. ಲಂಡನ್‌ ಹೈಕೋರ್ಟ್‌ನ ವಾಣಿಜ್ಯ ವಿಭಾಗ ಈ ಸಂಬಂಧ ವಿಚಾರಣೆ ನಡೆಸುತ್ತಿದೆ. ಈ ವೇಳೆ ಅನಿಲ್‌ ಅಂಬಾನಿ ತನ್ನ ಆಸ್ತಿ ಮಾರಿದರೂ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಿಜಕ್ಕೂ ಈಗ ಅನಿಲ್‌ ಆಸ್ತಿ ಸೊನ್ನೆಯೇ?

ಇಲ್ಲ. ಅನಿಲ್‌ ಅಂಬಾನಿ ಬಳಿ ವೈಯಕ್ತಿಕ ಆಸ್ತಿ ಈಗಲೂ ಸುಮಾರು 790 ಕೋಟಿ ರು. ಇದೆ. ಅವರ ಬಳಿ ದೊಡ್ಡ ದೊಡ್ಡ ಬಂಗಲೆಗಳು, ಖಾಸಗಿ ಹಡಗು, ಹತ್ತಾರು ದುಬಾರಿ ಕಾರುಗಳಿವೆ. ಆದರೆ, ಅವರ ಕಂಪನಿಗಳು ದಿವಾಳಿಯಾಗಿವೆ.

ಕಂಪನಿಗೆ ಪಡೆದ ಸಾಲವನ್ನು ವೈಯಕ್ತಿಕ ಆಸ್ತಿಯಿಂದ ಸಾಮಾನ್ಯವಾಗಿ ಯಾವ ಉದ್ಯಮಿಯೂ ತೀರಿಸುವುದಿಲ್ಲ. ಹೀಗಾಗಿ ಕೋರ್ಟ್‌ನ ವಿಚಾರಣೆ ವೇಳೆ ಸಾಲ ತೀರಿಸಲು ತಮ್ಮಲ್ಲಿ ಏನೂ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಫೆಬ್ರವರಿ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!