
ನವದೆಹಲಿ (ಮೇ.16): ದಿನಗಳು ಕಳೆದ ಹಾಗೆ ಅಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ಸುಳ್ಳುಗಳು ಬಯಲಾಗುತ್ತಿವೆ. ಪಾಕಿಸ್ತಾನ ರಫೇಲ್ ಜೆಟ್‌ಅನ್ನು ಉರುಳಿಸಿದ್ದೇ ಸುಳ್ಳು ಎನ್ನುವಂತೆ, ರಫೇಲ್ ಯುದ್ಧವಿಮಾನವನ್ನು ನಿರ್ಮಾಣ ಮಾಡುವ ಕಂಪನಿಯಾದ ಡಸಾಲ್ಟ್ ಏವಿಯೇಷನ್ ಷೇರುಗಳು ಶುಕ್ರವಾರ ಸತತ ಮೂರನೇ ವಹಿವಾಟಿನಲ್ಲಿಯೂ ಏರಿಕೆ ಕಂಡಿದ್ದು, ಸುಮಾರು ಶೇ. 2.4 ರಷ್ಟು ಏರಿಕೆ ಕಂಡಿವೆ.
ಪ್ಯಾರಿಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಡಸಾಲ್ಟ್ ಏವಿಯೇಷನ್ ದಿನದ ಮಧ್ಯದಲ್ಲಿ €309.40 ತಲುಪಿತು, ಅದರ ದಾಖಲೆಯ ಗರಿಷ್ಠ €332.20 ರ ಸಮೀಪಕ್ಕೆ ಬಂದಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ ಕೇವಲ 10% ಕಡಿಮೆ.
ಸೋಮವಾರ ಶೇ.7 ರಷ್ಟು ಕುಸಿತ ಕಂಡಿದ್ದ ಡಸಾಲ್ಟ್ ಕಂಪನಿಯ ಷೇರುಗಳು, ಮಂಗಳವಾರ ಶೇ.3 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಲೈವ್ ಮಿಂಟ್ ವರದಿಯ ಪ್ರಕಾರ, ಮಾಸಿಕ ಚಾರ್ಟ್‌ನಲ್ಲಿ ಬುಲಿಶ್ ಹ್ಯಾಮರ್ ಕ್ಯಾಂಡಲ್‌ಸ್ಟಿಕ್ ಮಾದರಿಯ ಹೊರಹೊಮ್ಮುವಿಕೆಯನ್ನು ವಿಶ್ಲೇಷಕರು ಗಮನಿಸಿದ್ದಾರೆ, ಇದು ಸಾಮಾನ್ಯವಾಗಿ ಹೆಚ್ಚಿನ ಲಾಭದ ಸಾಧ್ಯತೆಯನ್ನು ಸೂಚಿಸುತ್ತದೆ.
ಈ ಏರಿಕೆಯ ಪ್ರವೃತ್ತಿ ಖರೀದಿದಾರರಿಗೆ ಶುಭ ಸೂಚನೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ ಮತ್ತು ಅಲ್ಪಾವಧಿಯಲ್ಲಿ ಷೇರುಗಳು ಹಿಂದಿನ ದಾಖಲೆಯ ಗರಿಷ್ಠ ಮಟ್ಟಕ್ಕೆ ಹತ್ತಿರವಾಗಬಹುದು ಎಂದು ಊಹಿಸಿದ್ದಾರೆ.
ಇತ್ತೀಚಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳೇ ಈ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೇ 7 ರಂದು ಭಾರತದ ಆಪರೇಷನ್ ಸಿಂದೂರ್ ನಂತರ, ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಯುದ್ಧವಿಮಾನಕ್ಕೆ SCALP ಮತ್ತು ಹ್ಯಾಮರ್ ಕ್ಷಿಪಣಿಗಳನ್ನು ಜೋಡಿಸಿಕೊಂಡು ಪಾಕಿಸ್ತಾನದೊಳಗಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡವು, ಡಸಾಲ್ಟ್ ಏವಿಯೇಷನ್ ಸುತ್ತಲಿನ ಹೂಡಿಕೆದಾರರ ಭಾವನೆ ಬಲವಾಗಲು ಇದೇ ಕಾರಣವಾಗಿದೆ.
ಇದರೊಂದಿಗೆ ಕಂಪನಿಯ ಬಲವಾದ ಹಣಕಾಸು ಪರಿಸ್ಥಿತಿಯೂ ಸಹ ಈ ಏರಿಕೆಗೆ ಬೆಂಬಲ ನೀಡಿದೆ. ಡಸಾಲ್ಟ್ ಏವಿಯೇಷನ್ €6.24 ಬಿಲಿಯನ್ ಆದಾಯ ಮತ್ತು €924 ಮಿಲಿಯನ್ ನಿವ್ವಳ ಲಾಭ ಗಳಿಸಿದೆ. ಆದರೆ ವಿಶಾಲವಾದ ಫ್ರೆಂಚ್ ಏರೋಸ್ಪೇಸ್ ಮತ್ತು ರಕ್ಷಣಾ ವಲಯವು ಕಳೆದ ವರ್ಷದಲ್ಲಿ 17.7% ರಷ್ಟು ಬೆಳೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆದಂಪುರ ವಾಯುನೆಲೆಗೆ ಭೇಟಿ ನೀಡಿದಾಗ, S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಬೆಂಬಲದೊಂದಿಗೆ, ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ನೀಡಿದ ಸಂದರ್ಭದಲ್ಲೇ ಷೇರುಗಳ ಚೇತರಿಕೆಯೂ ಸಂಭವಿಸಿತು. ಇತ್ತೀಚಿನ ಏರಿಕೆಯ ಹೊರತಾಗಿಯೂ, ಷೇರುಗಳು ಏರಿಳಿತವನ್ನು ಕಂಡಿವೆ. ಸೋಮವಾರ, ಇದು ದಿನದ ವಹಿವಾಟಿನಲ್ಲಿ ಸುಮಾರು 7% ರಷ್ಟು ಕುಸಿದು €292 ಕ್ಕೆ ತಲುಪಿತು, ಅವಧಿಯಾದ್ಯಂತ €291 ಮತ್ತು €295 ರ ನಡುವೆ ಏರಿಳಿತವಾಗಿತ್ತು.
ಆಪರೇಷನ್ ಸಿಂದೂರವನ್ನು ಭಾರತ ಘೋಷಣೆ ಮಾಡಿದ ಬೆನ್ನಲ್ಲಿಯೇ ಪಾಕಿಸ್ತಾನ ಭಾರತದ ಮೇಲೆ ಸುಳ್ಳಿನ ಸರಮಾಲೆಯನ್ನೇ ಆರಂಭಿಸಿತ್ತು. ನಾವು 4 ರಫೇಲ್ ಸೇರಿ ಭಾರತದ 6 ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಆರಂಭದಲ್ಲಿ ರಫೇಲ್ ನಿರ್ಮಾಣ ಮಾಡುವ ಡಸಾಲ್ಟ್ ಏವಿಯೇಷನ್ ಕಂಪನಿಯ ಷೇರುಗಳು ಕುಸಿದಿದ್ದರೆ, ಪಾಕಿಸ್ತಾನ ಬಳಸಿಕೊಂಡ ಚೀನಾ ಕಂಪನಿಯ ಜೆಎಫ್-17 ಜೆಟ್ ನಿರ್ಮಾಣ ಮಾಡುವ ಕಂಪನಿಯ ಷೇರುಗಳಲ್ಲಿ ಏರಿಕೆ ಕಂಡಿದ್ದವು.
ಆದರೆ, ದಿನಗಳು ಕಳೆದ ಹಾಗೆ ಪಾಕಿಸ್ತಾನ ರಫೇಲ್‌ಅನ್ನು ಹೊಡೆದುರುಳಿಸಿದ್ದಕ್ಕೆ ಯಾವುದೇ ಸಾಕ್ಷ್ಯ ನೀಡಿಲ್ಲ. ಇನ್ನೊಂದೆಡೆ ಭಾರತೀಯ ವಾಯುಪಡೆ, 'ನೋ ಮ್ಯಾನ್ & ಮಶಿನ್ ಲಾಸ್ಟ್' ಎಂದು ಹೇಳಿರುವುದು ಪಾಕಿಸ್ತಾನಕ್ಕೆ ಈಟಿ ಚುಚ್ಚಿದಂತಾಗಿದೆ. ಅದಲ್ಲದೆ, ಸರ್ಕಾರ ಕೂಡ ತನ್ನ ಅಧಿಕೃತ ಪ್ರಕಟಣೆಯಲ್ಲಿ ಭಾರತೀಯ ಸೇನೆಯ ಯಾವುದೇ ಆಸ್ತಿಗೆ ಹಾನಿಗಳಾಗಿಲ್ಲ ಎಂದು ಹೇಳಿರುವುದು ರಫೇಲ್, ಎಸ್-400 ಸೇರಿದಂತೆ ಯುದ್ಧದ ವೇಳೆ ಭಾರತ ಬಳಸಿಕೊಂಡ ಪ್ರಮುಖ ಆಯುಧಗಳು ಬಳಕೆಯಲ್ಲಿದೆ ಎಂದು ಸೂಚಿಸಿದೆ.
ಈಗ ಅದರ ಪರಿಣಾಮವಾಗಿಯೇ ರಫೇಲ್ ನಿರ್ಮಾಣ ಮಾಡುವ ಡಸಾಲ್ಟ್ ಏವಿಯೇಷನ್ ಕಂಪನಿಯ ಷೇರುಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಇನ್ನೊಂದೆಡೆ, ಚೀನಾದ ಯುದ್ದೋಪಕರಣ ತಯಾರಿ ಮಾಡುವ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.