ಮುಂದಿನ ವರ್ಷಕ್ಕೆ ತೆರಿಗೆ ಉಳಿತಾಯಕ್ಕೆ ಪ್ಲ್ಯಾನ್ ಮಾಡುತ್ತಿರೋರಿಗೆ ಒಬ್ಬ ವ್ಯಕ್ತಿ ಎರಡು ಪಿಪಿಎಫ್ ಖಾತೆಗಳನ್ನು ಹೊಂದಬಹುದಾ? ಆ ಮೂಲಕ ವಾರ್ಷಿಕ 1.5ಲಕ್ಷ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಲು ಅವಕಾಶವಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಇಲ್ಲಿದೆ ಉತ್ತರ.
Business Desk:ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಮಾಡೋರು ಸಾರ್ವಜನಿಕ ಭವಿಷ್ಯ ನಿಧಿಯನ್ನು (ಪಿಪಿಎಫ್) ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಪಿಪಿಎಫ್ ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದ್ದು, ಉತ್ತಮ ರಿಟರ್ನ್ ಕೂಡ ನೀಡುತ್ತದೆ. ಪಿಪಿಎಫ್ ಖಾತೆಗೆ ತೆರಿಗೆದಾರರು ನೀಡುವ ಕೊಡುಗೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಲಭಿಸುತ್ತದೆ. ಇನ್ನು ಪಿಪಿಎಫ್ ಖಾತೆಯಲ್ಲಿರುವ ಹಣಕ್ಕೆ ನೀಡುವ ಬಡ್ಡಿಗೆ ಕೂಡ ತೆರಿಗೆ ರಿಯಾಯ್ತಿ ಇದೆ. ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ಈ ಖಾತೆಯಿಂದ ವಿತ್ ಡ್ರಾ ಮಾಡುವ ಹಣದ ಮೇಲೆ ಕೂಡ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹೀಗಾಗಿ ಪಿಪಿಎಫ್ ತೆರಿಗೆಗಳಿಂದ ಮುಕ್ತವಾಗಿದೆ. ಇದೇ ಕಾರಣಕ್ಕೆ ಹೂಡಿಕೆದಾರರಿಗೆ ಹೂಡಿಕೆಗೆ ಅಚ್ಚುಮೆಚ್ಚಿನ ಆಯ್ಕೆ ಕೂಡ ಆಗಿದೆ. ಆದರೆ, ಪಿಪಿಎಫ್ ನಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500ರೂ. ಹಾಗೂ ಗರಿಷ್ಠ 1,50,000ರೂ. ಹೂಡಿಕೆ ಮಾಡಲು ಮಾತ್ರ ಅವಕಾಶವಿದೆ. ಹೀಗಿರುವಾಗ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ತೆರೆದು ಆ ಮೂಲಕ ಹೆಚ್ಚಿನ ಹೂಡಿಕೆ ಮಾಡಬಹುದಾ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಆದರೆ, ಇಂಥ ಹೂಡಿಕೆಯನ್ನು ಸರ್ಕಾರ ನಿರ್ಬಂಧಿಸಿದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ 2019 ರ ಅನ್ವಯ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದುವಂತಿಲ್ಲ. ಹಾಗೆಯೇ ಒಂದಕ್ಕಿಂತ ಹೆಚ್ಚಿನ ಪಿಪಿಎಫ್ ಖಾತೆಗಳಿದ್ದರೆ ವಿಲೀನಗೊಳಿಸುವಂತಿಲ್ಲ.
ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದುವಂತಿಲ್ಲ
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಿಪಿಎಫ್ (PPF) ಖಾತೆ ಹೊಂದಿದ್ದರೆ ಅಂಥ ಖಾತೆಗಳನ್ನು ಬಡ್ಡಿ (Interest) ನೀಡದೆ ಮುಚ್ಚಬೇಕು ಎಂದು ಸರ್ಕಾರ 2022ರಲ್ಲಿ ಸ್ಪಷ್ಟನೆ ನೀಡಿದೆ ಕೂಡ. ಹಾಗೆಯೇ ಇಂಥ ಖಾತೆಗಳ ವಿಲೀನ ಪ್ರಸ್ತಾಪ ಕೂಡ ಮಾಡಬಾರದು ಎಂದು ತಿಳಿಸಿದೆ.
ಎಸ್ ಬಿಐ ಖಾತೆ ಯೂಸರ್ ನೇಮ್, ಪಾಸ್ ವರ್ಡ್ ಮರೆತು ಹೋಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ
ಅವಧಿ ವಿಸ್ತರಣೆಗೆ ಅವಕಾಶ
ಪಿಪಿಎಫ್ ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಯೋಜನೆಗಳ ನಿಯಮಗಳು 2019ರ ಅನ್ವಯ ಪಿಪಿಎಫ್ ಖಾತೆ 15 ವರ್ಷಗಳ ಬಳಿಕ ಮೆಚ್ಯೂರ್ (Mature) ಆದಾಗ ಮೂರು ಆಯ್ಕೆಗಳಿರುತ್ತವೆ. ಒಂದು ಖಾತೆ ಮುಚ್ಚುವುದು ಹಾಗೂ ಎಲ್ಲ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು. ಇನ್ನೊಂದು ಹೊಸ ಹೂಡಿಕೆಯಿಲ್ಲದೆ 5 ವರ್ಷಗಳಿಗೆ ಖಾತೆ ಅವಧಿ ವಿಸ್ತರಣೆ ಮಾಡುವುದು. ಹಾಗೆಯೇ ಮತ್ತೊಂದು ಹೊಸ ಹೂಡಿಕೆ ಸಮೇತ ಖಾತೆ ಅವಧಿ ವಿಸ್ತರಣೆ ಮಾಡುವುದು. ಹೀಗಾಗಿ 15 ವರ್ಷಗಳ ಬಳಿಕ ಪಿಪಿಎಫ್ ಖಾತೆದಾರ ಆತನ ಖಾತೆಯನ್ನು ಮುಚ್ಚಬಹುದು.
ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದು ಹೇಗೆ? ಇದ್ರಿಂದ ಏನ್ ಲಾಭ?
ಹೂಡಿಕೆ ಮಿತಿ ಹೆಚ್ಚಳಕ್ಕೆ ಬೇಡಿಕೆ
2022-23ನೇ ಸಾಲಿನ ಬಜೆಟ್ ನಲ್ಲಿ ಪಿಪಿಎಫ್ ಹೂಡಿಕೆ ಮಿತಿ ಹೆಚ್ಚಳ ಮಾಡುವಂತೆ ವಿವಿಧ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ ಕೂಡ. ಪಿಪಿಎಫ್ ನಲ್ಲಿ ಹೂಡಿಕೆ ಮಿತಿ 1.5ಲಕ್ಷ ರೂ.ನಿಂದ 3ಲಕ್ಷ ರೂ.ಗೆ ಹೆಚ್ಚಳ ಮಾಡುವಂತೆ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಈ ಹಿಂದೆ ಪಿಪಿಎಫ್ ಹೂಡಿಕೆ ಮಿತಿ 1ಲಕ್ಷ ರೂ. ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ಈ ಮಿತಿಯನ್ನು 1.5ಲಕ್ಷ ರೂ.ಗೆ ಏರಿಕೆ ಮಾಡಿತ್ತು. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಕೂಡ ಕೇಂದ್ರ ಸರ್ಕಾರ ಪಿಪಿಎಫ್ ಹೂಡಿಕೆ ಮಿತಿ ಹೆಚ್ಚಳ ಮಾಡುವ ನಿರೀಕ್ಷೆಯಿದೆ.