
ಬೆಂಗಳೂರು, (ಏ.03): 'ರಾಜಧಾನಿಯಲ್ಲಿ ಮೂಲಸೌಕರ್ಯ ವಿಚಾರದಲ್ಲಿ ಚಿಕ್ಕಪುಟ್ಟ ನ್ಯೂನತೆ ಇರಬಹುದು. ಇದನ್ನು ಉದ್ಯಮಿಗಳು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಬಾರದು' ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Dr CN Ashwath Narayan ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸ್ಟಾರ್ಟಪ್ ಸೇರಿದಂತೆ ಯಾವುದೇ ಉದ್ದಿಮೆಗಳಿಗೆ ಬೆಂಗಳೂರಿನಲ್ಲಿ ಇರುವಂತಹ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಜಾಗತಿಕ ಮಟ್ಟದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿಯೇ ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎನಿಸಿ ಕೊಂಡಿದೆ' ಎಂದರು.
ಕರ್ನಾಟಕದಲ್ಲಿ ಎಕ್ಸೈಡ್ ಇಂಡಸ್ಟ್ರೀಸ್ 6000 ಕೋಟಿ ಹೂಡಿಕೆ, ಉದ್ಯೋಗಾವಕಾಶ ಸೃಷ್ಟಿ
ನವೋದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಹೀಗೆಂದಿದ್ದಾರೆ. ಉದ್ಯಮಿಗಳಿಗೆ ಸರಕಾರವು ಯಥೇಚ್ಛ ಅನುಕೂಲಗಳನ್ನು ಒದಗಿಸುತ್ತಿದೆ. ಉದ್ಯಮಿಗಳಿಗೆ ಕೂಡ ಮೊದಲು ನಾವು ಭಾರತೀಯರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು, 'ಕೆಂಪಣ್ಣನವರು ಎಷ್ಟು ವರ್ಷಗಳಿಂದ ಗುತ್ತಿಗೆದಾರರಾಗಿದ್ದಾರೆ ಎನ್ನುವುದು ನನಗೆ ಗೊತ್ತು. ಇಷ್ಟು ವರ್ಷ ಸುಮ್ಮನಿದ್ದ ಅವರು ಈಗಷ್ಟೇ ಮಾತನಾಡುತ್ತಿದ್ದಾರೆ ಅಂದರೆ ಏನರ್ಥ? ಇವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಯಾರಬೇಕಾದರೂ ಊಹಿಸಬಹುದು' ಎಂದರು.
'ಸಮಾಜದಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎನ್ನಲಾರೆ. ಆದರೆ ಇದು 70 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿದ ರೋಗಗ್ರಸ್ತ ಸಂಸ್ಕೃತಿ. ಇದು ಹೆಮ್ಮರವಾಗಿ ಬೆಳೆದಿದೆ. ಇದನ್ನು ಕಿತ್ತು ಹಾಕಲೆಂದೇ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲಾಗುತ್ತಿದೆ' ಎಂದು ಅವರು ನುಡಿದರು.
ಭ್ರಷ್ಟಾಚಾರವನ್ನು ಹತ್ತಿಕ್ಕಲೆಂದೇ ಡಿಜಿಟಲ್ ವ್ಯವಹಾರ ವ್ಯವಸ್ಥೆ ತರಲಾಗುತ್ತಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕನಿಷ್ಠ ನೈತಿಕತೆಯೂ ಇಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಮೂಲೆಗೆ ತಳ್ಳಿದ್ದಾರೆ ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.
ಎಕ್ಸೈಡ್ ಇಂಡಸ್ಟ್ರೀಸ್ 6000 ಕೋಟಿ ಹೂಡಿಕೆ, ಉದ್ಯೋಗಾವಕಾಶ ಸೃಷ್ಟಿ
ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನಾಗಿಗಾ 6,000 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ.
ಈ ಸಂಬಂಧ ಇಂದು (ಗುರುವಾರ) ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ ಮತ್ತು ಸಿಇಒ ಸುಬೀರ್ ಚಕ್ರವರ್ತಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಕ್ಸೈಡ್ ಇಂಡಸ್ಟ್ರೀಸ್ ಬಂಡವಾಳ ಹೂಡಿಕೆ ಮಾಡುತ್ತಿರುವ ಪರಿಣಾಮ ರಾಜ್ಯದಲ್ಲಿ ಒಟ್ಟು 1200 -1400 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಸುಧಾರಿತ ಕೋಶ ರಸಾಯನಶಾಸ್ತ್ರ ತಂತ್ರಜ್ಞಾನಕ್ಕಾಗಿ ಭಾರತದ ಅತಿದೊಡ್ಡ ಗಿಗಾ ಕಾರ್ಖಾನೆಗಳಲ್ಲಿ ಒಂದಾಗಿದೆ ಎಂದು ಚಕ್ರವರ್ತಿ ಹೇಳಿದರು.
ಎಕ್ಸೈಡ್ ಇಂಡಸ್ಟ್ರೀಸ್ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯವಿಮಾನ ನಿಲ್ದಾಣದ ಬಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ 80 ಎಕರೆ ಭೂಮಿಯನ್ನು ಕೋರಿದೆ.
ಕಂಪನಿಗೆ ಎಲ್ಲಾ ರೀತಿಯ ಸರಕಾರ ಸಹಕಾರ ನೀಡುವುದಾಗಿ ಹೇಳಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ನಿರಾಣಿ ಅವರು ಈ ಯೋಜನೆಯು ಶೀಘ್ರ ಕಾರ್ಯಗತಗೊಳ್ಳಲಿ ಎಂದು ಹಾರೈಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸಕ್ರಿಯವಾಗಿದ್ದು, ಕರ್ನಾಟಕದಲ್ಲಿ ಇರುವಂತಹ ಹೂಡಿಕೆದಾರ ಸ್ನೇಹಿ ವಾತಾವರಣ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಕಳೆದ ಮೂರು ತ್ರೈಮಾಸಿಕಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ )ಆಕರ್ಷಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಚಿವರು ಸುಬೀರ್ ಚಕ್ರವರ್ತಿ ಅವರಿಗೆ ತಿಳಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.