ಹೂಡಿಕೆ ಸಮಾವೇಶಕ್ಕೆ ನಾಳೆ ಮೋದಿ ಚಾಲನೆ: ಬೆಂಗಳೂರಲ್ಲಿ 3 ದಿನ ಮೇಳ

Published : Nov 01, 2022, 07:30 AM IST
ಹೂಡಿಕೆ ಸಮಾವೇಶಕ್ಕೆ ನಾಳೆ ಮೋದಿ ಚಾಲನೆ: ಬೆಂಗಳೂರಲ್ಲಿ 3 ದಿನ ಮೇಳ

ಸಾರಾಂಶ

5 ಲಕ್ಷ ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ, 2 ಲಕ್ಷ ಕೋಟಿ: ಹಸಿರು ಇಂಧನ ವಲಯದಲ್ಲಿ ಹೂಡಿಕೆ ನಿರೀಕ್ಷೆ: ಸಚಿವ ನಿರಾಣಿ

ಬೆಂಗಳೂರು(ನ.01):  5 ಲಕ್ಷ ಕೋಟಿ ರು. ಬೃಹತ್‌ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿರುವ 2022ನೇ ಸಾಲಿನ ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್‌ 2022) ನ.2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿದ್ಯುಕ್ತ ಚಾಲನೆ ದೊರೆಯಲಿದೆ. ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ವಿಧಾನದ ಮೂಲಕ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಸೋಮವಾರ ‘ಜಿಮ್‌’ ನಡೆಯುವ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಅರಮನೆ ಮೈದಾನದಲ್ಲಿ ನ.2ರಿಂದ 4ರವರೆಗೆ ಮೂರು ದಿನಗಳ ಕಾಲ ಈ ಬಾರಿಯ ಜಿಮ್‌ ನಡೆಯಲಿದೆ. ‘ಬಿಲ್ಡ್‌ ಫಾರ್‌ ದಿ ವಲ್ಡ್‌ರ್‍’ ಪರಿಕಲ್ಪನೆಯೊಂದಿಗೆ ನಡೆಯುವ ಸಮಾವೇಶಕ್ಕೆ ನ.2ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ಸಿಗಲಿದೆ. 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶ ಉದ್ದೇಶಿಸಿ ವರ್ಚುಯಲ್‌ ವೇದಿಕೆಯಲ್ಲಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್‌, ರಾಜೀವ್‌ ಚಂದ್ರಶೇಖರ್‌, ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ಸಂಪುಟ ಸಚಿವರು, ಉದ್ದಿಮೆದಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಂದಾಲ್‌ನಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸೇವೆ ಆರಂಭ!

5 ಲಕ್ಷ ಕೋಟಿ ರು. ಬಂಡವಾಳ ನಿರೀಕ್ಷೆ:

ಸಮಾವೇಶದಲ್ಲಿ ದೇಶ-ವಿದೇಶಗಳ ಅನೇಕ ಕೈಗಾರಿಕೋದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್‌ ಡಿ) ಸಂಸ್ಥೆಗಳು, ಸ್ಟಾರ್ಚ್‌ಅಪ್‌ಗಳು ಸೇರಿ ಎಲ್ಲ ಕಡೆಯಿಂದ ಒಟ್ಟಾರೆ 5 ಲಕ್ಷ ಕೋಟಿ ರು.ಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಜೊತೆಗೆ 5 ಲಕ್ಷ ಜನರಿಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಮಾಡಲಾಗಿದೆ. ಸಮಾವೇಶದಲ್ಲಿ ಸೋಲಾರ್‌, ಗ್ರೀನ್‌ ಹೈಡ್ರೋಜನ್‌ ಸೇರಿ ‘ಗ್ರೀನ್‌ ಎನರ್ಜಿ’ (ಹಸಿರು ಇಂಧನ) ಕ್ಷೇತ್ರದಲ್ಲೇ ಸುಮಾರು 2 ಲಕ್ಷ ಕೋಟಿ ರು. ಹೂಡಿಕೆ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಜಿಂದಾಲ್‌ ಸಂಸ್ಥೆಯೇ 40 ಸಾವಿರ ಕೋಟಿ ರು. ಹೂಡಿಕೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಇನ್ನು, ನಿರೀಕ್ಷಿಸಿರುವ ಶೇ.90ರಷ್ಟುಹೂಡಿಕೆ ಬಿಯಾಂಡ್‌ ಬೆಂಗಳೂರು ಭಾಗದಲ್ಲಿಯೇ ಹೂಡಿಕೆಯಾಗಲಿದೆ. ಇದರಿಂದ ಹೊಸ ಉದ್ಯೋಗಾವಕಾಶಗಳು ಉದ್ಯಾನ ನಗರಿಯ ಹೊರಗೆ ಸೃಷ್ಟಿಯಾಗಲಿವೆ. ನ.4ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ. ಸಮಾವೇಶದ ಕೊನೆಯ ದಿನ ಹೂಡಿಕೆ ಮತ್ತು ಒಡಂಬಡಿಕೆಗಳ ಪೂರ್ಣ ಮಾಹಿತಿ ದೊರೆಯಲಿದೆ ಎಂದರು.

ನಿರುದ್ಯೋಗ ಸಮಸ್ಯೆಗೆ ಪಿಪಿಪಿ ಸೂತ್ರವೇ ಮದ್ದು

ಸಮಾವೇಶಕ್ಕೆ ಕಳೆದ ಮೂರು ತಿಂಗಳಿನಿಂದ ಸಿದ್ಧತೆ ನಡೆಸಿದ್ದು, ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ಜರುಗಿದ ವಿಶ್ವ ಆರ್ಥಿಕ ಸಮಾವೇಶ ಫ್ರಾನ್ಸ್‌, ನೆದರ್‌ಲ್ಯಾಂಡ್‌, ಜಪಾನ್‌, ಜರ್ಮನಿ, ದಕ್ಷಿಣ ಕೊರಿಯಾ ಸೇರಿ ಹಲವು ರಾಷ್ಟ್ರಗಳ ಕೈಗಾರಿಕೆಗಳಿಗೆ ಆಹ್ವಾನ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಾವೇಶದಲ್ಲಿ ಹೂಡಿಕೆ ಬಂದರೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ 20 ಸಾವಿರ ಮತ್ತು ಇತರೆ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಪ್ರದೇಶ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮತ್ತು ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚಿನ ಸಂಶೋಧನಾ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್‌ ಡಿ) ಕೇಂದ್ರಗಳು, 5 ಸಾವಿರಕ್ಕೂ ಹೆಚ್ಚಿನ ನವೋದ್ಯಮ, ನೂತನ ಕೈಗಾರಿಕಾ ನೀತಿ, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಕಾರಣಗಳಿಂದ ಕರ್ನಾಟಕವು ಹೂಡಿಕೆ ಸ್ನೇಹಿ ರಾಜ್ಯವಾಗಿ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಸ್ಥಾನವನ್ನು ಇನ್ನಷ್ಟುಭದ್ರಗೊಳಿಸಿಕೊಳ್ಳಲು ಈ ಬಾರಿಯ ಜಿಮ್‌ ಮತ್ತಷ್ಟುಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ