ಇಂದಿನಿಂದ 3 ದಿನ ಬಂಡವಾಳ ಸಮಾವೇಶ: 5 ಲಕ್ಷ ಉದ್ಯೋಗ ಸೃಷ್ಟಿ ಗುರಿ: ನಿರಾಣಿ

By Kannadaprabha NewsFirst Published Nov 2, 2022, 6:04 AM IST
Highlights

‘ಜಿಮ್‌-2022’ಕ್ಕೆ ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ, 60 ಕಂಪನಿ, 5 ಲಕ್ಷ ಕೋಟಿ ಹೂಡಿಕೆ 

ಬೆಂಗಳೂರು(ನ.02):  ರಾಜ್ಯದಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಮೂಲಕ 5 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರದಿಂದ 3 ದಿನ ಕಾಲ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ (ಜಿಮ್‌ 2022) ನಡೆಯಲಿದೆ. ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ವಿಧಾನದ ಮೂಲಕ ಸಮಾವೇಶ ಉದ್ಘಾಟಿಸಲಿದ್ದಾರೆ.

‘ಬಿಲ್ಡ್‌ ಫಾರ್‌ ದಿ ವಲ್ಡ್‌’ ಪರಿಕಲ್ಪನೆಯೊಂದಿಗೆ ನಡೆಯುವ ಸಮಾವೇಶವನ್ನು ನ.2ರಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಲಿದ್ದಾರೆ. ಈ ವೇಳೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ್‌ ಜೋಶಿ, ರಾಜೀವ್‌ ಚಂದ್ರಶೇಖರ್‌, ರಾಜ್ಯದ ಸಚಿವರು ಭಾಗಿಯಾಗಲಿದ್ದಾರೆ’ ಎಂದು ಸಮಾವೇಶದ ಉಸ್ತುವಾರಿ ಹೊತ್ತಿರುವ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

Latest Videos

Global Investors Meet: ಬಂಡವಾಳ, ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಸಚಿವ ಮುರುಗೇಶ್‌ ನಿರಾಣಿ

ಈ ನಡುವೆ, ದೇಶ-ವಿದೇಶಗಳ ನಾನಾ ಕೈಗಾರಿಕೋದ್ಯಮಿಗಳು, ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿರಾಣಿ ಅವರು ಮಂಗಳವಾರ ಅರಮನೆ ಮೈದಾನಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಚರ್ಚಿಸಿದರು.

60 ಕಂಪನಿಗಳ ಜತೆ ಒಪ್ಪಂದ: ‘ಸಮಾವೇಶದಲ್ಲಿ ಸುಮಾರು 60 ಕಂಪನಿಗಳ ಉದ್ಯಮದಾರರ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು, ಮುಖ್ಯಮಂತ್ರಿಯವರು ಉದ್ದಿಮೆದಾರರ ಜೊತೆ ಮುಖಾಮುಖಿಯಾಗಿ ಮಾತನಾಡಲಿದ್ದಾರೆ. ಇದರ ಜೊತೆ ದೇಶ-ವಿದೇಶಗಳ ತಜ್ಞರಿಂದ ವಿವಿಧ ವಲಯಗಳ ಕುರಿತು ಚರ್ಚೆಗಳು ನಡೆಯಲಿವೆ. ಇದೇ ವೇಳೆ ಕೈಗಾರಿಕೆಗೆ ಸಂಬಂಧಿಸಿದ 5 ನಿಮಿಷಗಳ ವಿಡಿಯೋ ಕೂಡಾ ಲೋಕಾರ್ಪಣೆ ಮಾಡಲಾಗುವುದು. ಸಮಾವೇಶಕ್ಕೆ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ನಿರಾಣಿ ಮಾಹಿತಿ ನೀಡಿದರು.

‘ಸಮಾವೇಶದಲ್ಲಿ ದೇಶ ವಿದೇಶಗಳ ಅನೇಕ ಕೈಗಾರಿಕೋದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್‌ ಡಿ) ಸಂಸ್ಥೆಗಳು, ಸ್ಟಾರ್ಚ್‌ಅಪ್‌ ವಲಯದ ಬಂಡವಾಳ ಹೂಡಿಕೆಯಿಂದ 5 ಲಕ್ಷ ಜನರಿಗೆ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಮಾಡಲಾಗಿದೆ. ಸಮಾವೇಶದಲ್ಲಿ ಸೋಲಾರ್‌, ಗ್ರೀನ್‌ ಹೈಡ್ರೋಜನ್‌ ಸೇರಿ ‘ಗ್ರೀನ್‌ ಎನರ್ಜಿ’ (ಹಸಿರು ಇಂಧನ) ಕ್ಷೇತ್ರದಲ್ಲೇ ಸುಮಾರು 2 ಲಕ್ಷ ಕೋಟಿ ರು. ಹೂಡಿಕೆ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ ರಾಜ್ಯದ ಜಿಂದಾಲ್‌ ಸಂಸ್ಥೆಯೇ 40 ಸಾವಿರ ಕೋಟಿ ರು. ಹೂಡಿಕೆ ಮಾಡುವ ನಿರೀಕ್ಷೆ ಇದೆ’ ಎಂದರು.

‘ನಿರೀಕ್ಷಿಸಿರುವ ಶೇ.90ರಷ್ಟು ಹೂಡಿಕೆ ಬಿಯಾಂಡ್‌ ಬೆಂಗಳೂರು (ಬೆಂಗಳೂರು ಹೊರತಾದ ರಾಜ್ಯದ ಇತರ ಭಾಗ) ಭಾಗದಲ್ಲಿಯೇ ಹೂಡಿಕೆಯಾಗಲಿದೆ. ಇದರಿಂದ ಹೊಸ ಉದ್ಯೋಗಾವಕಾಶಗಳು ಬೆಂಗಳೂರಿನಿಂದ ಹೊರಗೆ ಸೃಷ್ಟಿಯಾಗಲಿವೆ’ ಎಂದು ಹರ್ಷಿಸಿದರು.

Cylinder Price Slashed: ಕನ್ನಡ ರಾಜ್ಯೋತ್ಸವದಂದು ಗುಡ್‌ ನ್ಯೂಸ್‌: ಅಡುಗೆ ಅನಿಲದ ಬೆಲೆ 115.50 ರೂ. ಕಡಿತ

‘ನ.4ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ. ಸಮಾವೇಶದ ಕೊನೆಯ ದಿನ ಹೂಡಿಕೆ ಮತ್ತು ಒಡಂಬಡಿಕೆಗಳ ಪೂರ್ಣ ಮಾಹಿತಿ ದೊರೆಯಲಿದೆ’ ಎಂದರು.

‘ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚಿನ ಸಂಶೋಧನಾ ಮತ್ತು ಅಭಿವೃದ್ಧಿ (ಆರ್‌ ಆ್ಯಂಡ್‌ ಡಿ)ಕೇಂದ್ರಗಳು, 5 ಸಾವಿರಕ್ಕೂ ಹೆಚ್ಚಿನ ನವೋದ್ಯಮ, ನೂತನ ಕೈಗಾರಿಕಾ ನೀತಿ, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಕಾರಣಗಳಿಂದ ಕರ್ನಾಟಕವು ಹೂಡಿಕೆ ಸ್ನೇಹಿ ರಾಜ್ಯವಾಗಿ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಸ್ಥಾನವನ್ನು ಇನ್ನಷ್ಟುಭದ್ರಗೊಳಿಸಿಕೊಳ್ಳಲು ಈ ಬಾರಿಯ ಜಿಮ್‌ ಮತ್ತಷ್ಟುಸಹಕಾರಿಯಾಗಲಿದೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಕ್ಕಾಗಿ ಉತ್ಪಾದನೆ!

- ಬಂಡವಾಳ ಹೂಡಿಕೆ ಸಮಾವೇಶಕ್ಕೆ ‘ಬಿಲ್ಡ್‌ ಫಾರ್‌ ದಿ ವಲ್ಡ್‌ರ್‍’ ಪರಿಕಲ್ಪನೆ
- ದೇಸೀ ಮಾರುಕಟ್ಟೆಮಾತ್ರವಲ್ಲ, ಜಾಗತಿಕ ಬೇಡಿಕೆ ಪೂರೈಸುವ ಉದ್ದೇಶ
- ರಾಜಧಾನಿ ಬೆಂಗಳೂರಿನಿಂದಾಚೆ ಶೇ.90ರಷ್ಟು ಬಂಡವಾಳ ಹೂಡಿಕೆ ಗುರಿ
- ದೇಶ-ವಿದೇಶಿ ಕಂಪನಿಗಳು ಭಾಗಿ. ಆರ್‌-ಡಿ, ಸ್ಟಾರ್ಟಪ್‌ ಹೂಡಿಕೆ ನಿರೀಕ್ಷೆ
- ಹಸಿರು ಇಂಧನ ಕ್ಷೇತ್ರದಲ್ಲೇ 2 ಲಕ್ಷ ಕೋಟಿ ರು. ಬಂಡವಾಳದ ಸಾಧ್ಯತೆ
 

click me!