Karnataka Bank ಗೆ ₹412 ಕೋಟಿ ನಿವ್ವಳ ಲಾಭ!

By Kannadaprabha NewsFirst Published Nov 2, 2022, 3:37 AM IST
Highlights
  • ಕರ್ಣಾಟಕ ಬ್ಯಾಂಕ್‌ಗೆ ಸಾರ್ವಕಾಲಿಕ ಲಾಭ
  • -2ನೇ ತ್ರೈಮಾಸಿಕದಲ್ಲಿ 411.47 ಕೋಟಿ ರು. ಗಳಿಕೆ
  • 228% ಪ್ರಗತಿ; ಎನ್‌ಪಿಎ ಇಳಿಕೆ

ಮಂಗಳೂರು (ನ.2) :ಕರ್ಣಾಟಕ ಬ್ಯಾಂಕಿನ ನಿವ್ವಳ ಲಾಭ ಪ್ರಸಕ್ತ ತ್ರೈಮಾಸಿಕ ಅಂತ್ಯಕ್ಕೆ (ಸೆಪ್ಟೆಂಬರ್‌ 2022) ಶೇ.228.00 ದರದಲ್ಲಿ ವೃದ್ಧಿ ಕಂಡಿದ್ದು, ಸಾರ್ವಕಾಲಿಕ ದಾಖಲೆಯ .411.47 ಕೋಟಿಗೆ ಏರಿದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ .125.45 ಕೋಟಿಗಳಾಗಿತ್ತು.

ಸರ್ಕಾರದ ಖಜಾನೆ ವ್ಯವಸ್ಥೆಗೆ Karnataka Bank ಸೇರ್ಪಡೆ

ಮಂಗಳೂರಿನಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕದ(30-09-2022) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಅರ್ಧ ವಾರ್ಷಿಕ(ಸೆಪ್ಟೆಂಬರ್‌ 2022)ದಲ್ಲಿ .525.52 ಕೋಟಿ ನಿವ್ವಳ ಲಾಭ ಕೂಡ ಹೊಸ ದಾಖಲೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ (ಸೆಪ್ಟೆಂಬರ್‌ 2021) .231.36 ಕೋಟಿಗಳಾಗಿತ್ತು.

ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು(ಎನ್‌ಐಐ) ಸೆಪ್ಟೆಂಬರ್‌ 2022ರ ತ್ರೈಮಾಸಿಕ ಅಂತ್ಯಕ್ಕೆ ಶೇ.26.00ರ ದರದಲ್ಲಿ ಹೆಚ್ಚಳಗೊಂಡು .802.73 ಕೋಟಿಗಳಿಗೆ ತಲುಪಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ .637.10 ಕೋಟಿಗಳಾಗಿತ್ತು.

ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿವೆ. ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು (ಜಿಎನ್‌ಪಿಎ) ಶೇ.3.36ಕ್ಕೆ ಇಳಿಕೆಯಾಗಿದ್ದು, ಅವು ಈ ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜೂನ್‌ 2022ರ ವೇಳೆಗೆ ಶೇ.4.03 ಆಗಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು (ಎನ್‌ಎನ್‌ಪಿಎ)ಕೂಡ ಪ್ರಗತಿ ಸಾಧಿಸಿ, ಶೇ.1.72ಕ್ಕೆ ಇಳಿಕೆಯಾಗಿದ್ದು, ಅವು ಈ ಮುಂಚೆ (30.06.2022) ಶೇ. 2.16 ಆಗಿದ್ದವು. ಹಿಂದಿನ ವರ್ಷದ ಇದೇ ಅವಧಿಯಲ್ಲಿ (30.09.2021) ಸ್ಥೂಲ ಅನುತ್ಪಾದಕ ಸ್ವತ್ತುಗಳು ಶೇ.4.52 ಹಾಗೂ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ.2.85 ಆಗಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರ 30.09.2022ರ ಅಂತ್ಯಕ್ಕೆ .1,41,505.87 ಕೋಟಿ ತಲುಪಿದೆ. ಬ್ಯಾಂಕಿನ ಠೇವಣಿಗಳ ಮೊತ್ತ .76,921.53 ಕೋಟಿಗಳಿಂದ .81,633.40 ಕೋಟಿಗೆ ಹಾಗೂ ಮುಂಗಡ .54,341.57 ಕೋಟಿಗಳಿಂದ .59,872.47 ಕೋಟಿಗೆ ತಲುಪಿದೆ. ಬ್ಯಾಂಕಿನ ಮುಂಗಡ ಮತ್ತು ಠೇವಣಿಗಳ ಅನುಪಾತ ಶೇ. 73.34 ರಷ್ಟಿದೆ.

ಕಳೆದ ವರ್ಷದ ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ.14.48ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್‌ ಅಡೆಕ್ವೆಸಿ ರೇಶ್ಯೋ) ಈ ತ್ರೈಮಾಸಿಕ ಅಂತ್ಯಕ್ಕೆ(30-09-2022) ಉತ್ತಮಗೊಂಡು ಶೇ.15.28ರಷ್ಟಾಗಿದೆ. ನೆಟ್‌ ಇಂಟರೆಸ್ಟ್‌ ಮಾರ್ಜಿನ್‌ ಕೂಡಾ ಶೇ. 3.15ರಿಂದ (30.09.2021) ಶೇ. 3.56ಕ್ಕೇರಿವೆ.

ಇದು ಕೆಬಿಎಲ್‌ ವಿಕಾಸ್‌ ಅಭಿಯಾನದ ಫಲ: ಎಂಡಿ

ದ್ವಿತೀಯ ತ್ರೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌, ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದ ಫಲಿತಾಂಶ ಅತ್ಯಂತ ಆಶಾದಾಯಕವಾಗಿದ್ದು, ಬ್ಯಾಂಕಿನ ಹೊಸ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ ಎಂದಿದ್ದಾರೆ.

ಉತ್ತಮ ಗಳಿಕೆಗಳು, ಸುಧಾರಿತ ಆಸ್ತಿ ಗುಣಮಟ್ಟ, ಮುಂಗಡಗಳ ಆರೋಗ್ಯಕರ ಬೆಳವಣಿಗೆ, ವೆಚ್ಚಗಳಲ್ಲಿ ನಿಯಂತ್ರಣ ಇತ್ಯಾದಿಗಳು ನಿವ್ವಳ ಲಾಭದಲ್ಲಿ ಗಮನಾರ್ಹವಾಗಿ ಏರಿಕೆಯಾಗಲು ಕಾರಣವಾಗಿವೆ. ‘ಕೆಬಿಎಲ್‌ ವಿಕಾಸ್‌’ ಎನ್ನುವ ಪರಿವರ್ತನಾ ಜೈತ್ರಯಾತ್ರೆಯ ಫಲಶ್ರುತಿಯಾಗಿ ಎನ್‌ಐಎಂ, ಪಿಸಿಆರ್‌, ಆರ್‌ಒಐ, ಕಾಸಾ ಅನುಪಾತ ಇತ್ಯಾದಿ ಮೂಲಭೂತ ಅಂಶಗಳಲ್ಲಿಯೂ ಸಹ ಗಮನಾರ್ಹವಾಗಿ ಏರಿಕೆ ಕಂಡು ಬ್ಯಾಂಕ್‌ ಮತ್ತಷ್ಟುಬಲಿಷ್ಠವಾಗಿ ಮೂಡಿ ಬಂದಿದೆ ಎಂದರು.

Karnataka Bank:ಯುಪಿಐ ಗುರಿಮೀರಿದ ಸಾಧನೆ, ಕರ್ಣಾಟಕ ಬ್ಯಾಂಕಿಗೆ ಕೇಂದ್ರದ 2 ಪ್ರತಿಷ್ಠಿತ ಪ್ರಶಸ್ತಿ

ನಿರಂತರವಾಗಿ ಹೆಚ್ಚುತ್ತಿರುವ ತನ್ನ ಗ್ರಾಹಕ ಸಮುದಾಯಕ್ಕೆ ಬ್ಯಾಂಕ್‌ ಹಲವಾರು ಗ್ರಾಹಕ ಸ್ನೇಹಿ ಡಿಜಿಟಲ್‌ ಉತ್ಪನ್ನಗಳನ್ನು ಪರಿಚಯಿಸಿದೆ. ಎಲ್ಲ ಉದ್ಯೋಗಿಗಳು ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಬದ್ಧತೆಯೊಂದಿಗೆ ಸತತವಾಗಿ ಹೊಸ ಮೈಲುಗಲ್ಲು ದಾಖಲಿಸಲು ಸನ್ನದ್ಧರಾಗಿದ್ದಾರೆ. ಶತಮಾನೋತ್ಸವದ ಸಂಭ್ರಮಕ್ಕೆ ಮುನ್ನುಡಿಯಾಗಿ ಈ ರೀತಿಯ ಉತ್ತಮ ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಷಯ.

-ಮಹಾಬಲೇಶ್ವರ ಎಂ.ಎಸ್‌. ಎಂ.ಡಿ. ಕರ್ಣಾಟಕ ಬ್ಯಾಂಕ್‌

click me!