ನಿಮ್ಮ ಬಳಿಯಿರುವ ಚಿನ್ನ ಮಾರಲು ಯೋಚಿಸಿದ್ದೀರಾ? ಹಾಗಾದ್ರೆ ಈ ಸಂಗತಿಗಳನ್ನು ತಿಳಿಯೋದು ಅಗತ್ಯ

By Suvarna NewsFirst Published Jun 30, 2023, 6:29 PM IST
Highlights

ಹಣದ ತುರ್ತು ಅಗತ್ಯ ಎದುರಾದಾಗ, ಬೇರೆ ಯಾವುದೇ ಆಯ್ಕೆಗಳು ಇಲ್ಲದ ಸಂದರ್ಭದಲ್ಲಿ ಚಿನ್ನ ಮಾರಾಟ ಮಾಡೋದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಚಿನ್ನ ಮಾರಾಟ ಮಾಡುವ ಮುನ್ನ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ಇಲ್ಲವಾದರೆ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆ ಸಿಗದೇ ಹೋಗಬಹುದು ಅಥವಾ ನಿಮಗೆ ಮೋಸವಾಗಬಹುದು. 

Business Desk:ಚಿನ್ನದ ಮೇಲಿನ ಹೂಡಿಕೆ ಎಂದಿಗೂ ನಷ್ಟವಾಗುವುದಿಲ್ಲ. ಅದು ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ ಎಂಬ ನಂಬಿಕೆಯನ್ನು ಭಾರತೀಯರು ಅನಾದಿ ಕಾಲದಿಂದಲೂ ಬೆಳೆಸಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕೆ ಹೂಡಿಕೆ ವಿಚಾರ ಬಂದಾಗ ಭಾರತೀಯರಿಗೆ ಇಂದಿಗೂ ಚಿನ್ನ ಅಚ್ಚುಮೆಚ್ಚು. ಇನ್ನು ಭಾರತೀಯರಿಗೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಮದುವೆ, ಮುಂಜಿ, ಹಬ್ಬ ಹೀಗೆ ಎಲ್ಲ ಶುಭ ಕಾರ್ಯಕ್ರಮಕ್ಕೂ ಚಿನ್ನ ಬೇಕೇಬೇಕು. ಭಾರತೀಯ ಮಹಿಳೆಯರು ಚಿನ್ನಾಭರಣ ಪ್ರಿಯರಾದರೂ ಕುಟುಂಬದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇವು ನೆರವಿಗೆ ಬರುತ್ತವೆ ಎಂಬ ಹಣಕಾಸಿನ ಜ್ಞಾನವನ್ನು ಹೊಂದಿದ್ದರು. ಇಂದು ಬ್ಯಾಂಕ್ ಗಳಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ಆದರೆ, ಇದಕ್ಕೆ ಬಡ್ಡಿ ಪಾವತಿಸಬೇಕಿರುತ್ತದೆ. ಅಲ್ಲದೆ, ಸಾಲ ನೀಡುವ ಪ್ರಕ್ರಿಯೆಗೆ ಸ್ವಲ್ಪ ಸಮಯ ಕೂಡ ಹಿಡಿಯುತ್ತದೆ. ಹೀಗಾಗಿ ತಕ್ಷಣಕ್ಕೆ ಹಣದ ಅಗತ್ಯವಿರೋರು ಕೆಲವೊಮ್ಮೆ ತಮ್ಮ ಬಳಿಯಿರುವ ಚಿನ್ನವನ್ನು ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಚಿನ್ನವನ್ನು ಮಾರಾಟ ಮಾಡುವ ಮುನ್ನ ಕೆಲವೊಂದು ವಿಚಾರಗಳ ಮೇಲೆ ಗಮನ ಹರಿಸೋದು ಅಗತ್ಯ. ಹಾಗಾದ್ರೆ ಚಿನ್ನವನ್ನು ಮಾರಾಟ ಮಾಡುವ ಮುನ್ನ ಯಾವೆಲ್ಲ ವಿಷಯಗಳನ್ನು ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

1.ಚಿನ್ನದ ಪ್ರಸಕ್ತ ಮಾರುಕಟ್ಟೆ ಮೌಲ್ಯ ಪರಿಶೀಲಿಸಿ
ನಿಮ್ಮ ಬಳಿಯಿರುವ ಚಿನ್ನವನ್ನು ಮಾರಾಟ ಮಾಡುವ ಮುನ್ನ ಆ ದಿನದ ಚಿನ್ನದ ಮಾರುಕಟ್ಟೆ ದರವನ್ನು ಪರಿಶೀಲಿಸಲು ಮರೆಯಬೇಡಿ. ಏಕೆಂದರೆ ನಿಮ್ಮ ಚಿನ್ನಕ್ಕೆ ಸೂಕ್ತವಾದ ಬೆಲೆ ಪಡೆಯಲು ಇದನ್ನು ತಿಳಿದುಕೊಳ್ಳುವುದು ಅಗತ್ಯ. ಅಲ್ಲದೆ, ನಿಮಗೆ ಬೆಲೆ ತಿಳಿದಿದ್ದರೆ ಚಿನ್ನ ಖರೀದಿಸುವ ವ್ಯಕ್ತಿ ಬೆಲೆಯಲ್ಲಿ ಮೋಸ ಮಾಡಲು ಸಾಧ್ಯವಿಲ್ಲ.

Latest Videos

ಜುಲೈ 1ರಿಂದ ಈ ನಾಲ್ಕು ನಿಯಮಗಳಲ್ಲಿ ಬದಲಾವಣೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!

2.ಚಿನ್ನದ ಪರಿಶುದ್ಧತೆ ಪರೀಕ್ಷಿಸಿ
ಚಿನ್ನವನ್ನು ಮಾರಾಟ ಮಾಡುವ ಮುನ್ನ ಅದರ ಕ್ಯಾರಟ್ ಎಷ್ಟೆಂದು ತಿಳಿಯೋದು ಅಗತ್ಯ. ಕ್ಯಾರಟ್ ಆಧಾರದಲ್ಲಿ ಚಿನ್ನದ ಬೆಲೆ ಕೂಡ ವ್ಯತ್ಯಾಸವಾಗುತ್ತದೆ. ಅಲ್ಲದೆ, ನಿಮ್ಮ ಚಿನ್ನದ ಪರಿಶುದ್ಧತೆಯನ್ನು ಕ್ಯಾರಟ್ ತಿಳಿಸುತ್ತದೆ ಕೂಡ. ಪ್ರಸ್ತುತ ಚಿನ್ನದ ಹಾಲ್ ಮಾರ್ಕ್ ಕಡ್ಡಾಯಗೊಳಿಸಿರುವ ಕಾರಣ ಪರಿಶುದ್ಧತೆಯ ಬಗ್ಗೆ ಸುಲಭವಾಗಿ ತಿಳಿಯಬಹುದು. ನಿಮ್ಮ ಚಿನ್ನದ ಪರಿಶುದ್ಧತೆ ಬಗ್ಗೆ ನಿಮಗೆ ಸ್ಪಷ್ಟತೆಯಿದ್ದಾಗ ಯಾರು ಕೂಡ ಮೋಸ ಮಾಡಲು ಸಾಧ್ಯವಿಲ್ಲ.

3. ನಂಬಿಕಾರ್ಹ ಖರೀದಿದಾರರನ್ನು ಹುಡುಕಿ
ನಿಮ್ಮ ಬಳಿಯಿರುವ ಚಿನ್ನಕ್ಕೆ ಉತ್ತಮ ಬೆಲೆ ಪಡೆಯಲು ನಂಬಿಕಾರ್ಹ ಚಿನ್ನ ಖರೀದಿದಾರರನ್ನು ಹುಡುಕೋದು ಕೂಡ ಅಗತ್ಯ. ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿರುವ ಚಿನ್ನ ಖರೀದಿದಾರರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಕುರಿತ ಗ್ರಾಹಕರ ಅಭಿಪ್ರಾಯಗಳನ್ನು ಪರಿಶೀಲಿಸಿ. ಹಾಗೆಯೇ ಅವರು ಮಾನ್ಯತೆ  ಹಾಗೂ ಲೈಸೆನ್ಸ್ ಹೊಂದಿರುವ ಚಿನ್ನದ ಖರೀದಿದಾರರೇ ಎಂಬುದನ್ನು ಪತ್ತೆ ಮಾಡಿ.

4.ಶುಲ್ಕ ಪರಿಶೀಲಿಸಿ
ಕೆಲವು ಚಿನ್ನ ಖರೀದಿದಾರರು ನಿಮ್ಮ ಚಿನ್ನದ ಮೌಲ್ಯದಿಂದ ನಿರ್ದಿಷ್ಟ ಪ್ರಮಾಣವನ್ನು ಹೆಚ್ಚುವರಿ ಶುಲ್ಕವಾಗಿ ವಿಧಿಸುತ್ತಾರೆ. ಹೀಗಾಗಿ ಅವರ ಬಳಿ ಮಾರಾಟ ಮಾಡುವ ಮುನ್ನ ಹೆಚ್ಚುವರಿ ಶುಲ್ಕಗಳ ಬಗ್ಗೆ ವಿಚಾರಿಸೋದು ಅಗತ್ಯ.

ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ಇಲ್ಲ; ಹೊಸ ದರ ಜು.1ರ ಬದಲು ಅ.1ರಿಂದ ಜಾರಿ

5.ಮಾರಾಟ ಪ್ರಕ್ರಿಯೆಗಳ ಬಗ್ಗೆ ತಿಳಿಯಿರಿ
ಪ್ರಾರಂಭದಿಂದ ಅಂತ್ಯದ ತನಕ ಸಂಪೂರ್ಣ ಮಾರಾಟ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಿಮ್ಮ ಚಿನ್ನದ ಮೌಲ್ಯಮಾಪನ ಹೇಗೆ ಮಾಡುತ್ತಾರೆ? ಪಾವತಿ ಹೇಗೆ ಮಾಡುತ್ತಾರೆ? ಹಾಗೆಯೇ ಯಾವುದೇ ಕಾಗದವ್ಯವಹಾರ ಇದೆಯಾ ಎಂಬ ಬಗ್ಗೆ ತಿಳಿಯಿರಿ. 

ಚಿನ್ನವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ಕಡಿತ ಅಥವಾ ಮೇಕಿಂಗ್ ಶುಲಕ ಇತ್ಯಾದಿಗಳನ್ನು ವಿಧಿಸುವಂತಿಲ್ಲ. ಹೀಗಾಗಿ ಮಾರಾಟ ಮಾಡುವ ಸಮಯದಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸೋದು ಅವಶ್ಯ. ಇಲ್ಲವಾದರೆ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆ ದೊರಕದೆ ಹೋಗಬಹುದು. 


 

click me!