ಒಂದು ಲೀಟರ್ ಪೆಟ್ರೋಲ್ ಬೆಲೆ ಕರ್ನಾಟಕದಲ್ಲಿ ಗರಿಷ್ಠ 104 ರೂಪಾಯಿ ಇದೆ. ಆದರೆ ಇದೇ ಪೆಟ್ರೋಲ್ ಇನ್ನುಮುಂದೆ 15 ರೂಪಾಯಿಗೆ ಲಭ್ಯವಾಗಲಿದೆ. ಈ ದಿನ ಹೆಚ್ಚು ದೂರವಿಲ್ಲ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಸುಳಿವು ನೀಡಿದ್ದಾರೆ.
ನವದೆಹಲಿ(ಜು.05) ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ. ಹಲವು ರಾಜ್ಯಗಳು ತೆರಿಗೆ ಕಡಿತಗೊಳಿಸಿದರೂ 100 ರೂಪಾಯಿಗಿಂತ ಕಡಿಮೆ ಪೆಟ್ರೋಲ್ ಸಿಗುತ್ತಿಲ್ಲ. ಇದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಪೆಟ್ರೋಲ್‌ಗೆ ಪರ್ಯಾವಾಗಿ ಭಾರತದಲ್ಲಿ ಎಥೆನಾಲ್ ಉತ್ಪಾದನೆ ವೇಗ ಹೆಚ್ಚಿಸಲಾಗಿದೆ. ಇತ್ತ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಎಥೆನಾಲ್ ಮಿಶ್ರಣವನ್ನೂ ಮಾಡುತ್ತಿದೆ. ಈಗಾಗಲೇ ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳು ಬಿಡುಗಡೆಯಾಗುತ್ತಿದೆ. ಕೇಂದ್ರ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಇನ್ನು ಮುಂದೆ ಪ್ರತಿ ಲೀಟರ್ ಪೆಟ್ರೋಲ್‌ಗೆ 15 ರೂಪಾಯಿ ನೀಡುವ ದಿನ ದೂರವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಶೇಕಡಾ 60 ರಷ್ಟು ಎಥೆನಾಲ್ ವಾಹನ ಹಾಗೂ ಶೇಕಡಾ 40 ರಷ್ಟು ಎಲೆಕ್ಟ್ರಿಕ್ ವಾಹನಗಳು ಬಳಕೆಯತ್ತ ಭಾರತ ಸಾಗುತ್ತಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಶೇಕಡಾ 20 ರಷ್ಟಾಗಿದೆ. ಇದೀಗ ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳು ಬಿಡುಗಡೆಯಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಭಾರತ ಎಥೆನಾಲ್‌ನಲ್ಲಿ ಅಧಿಪತ್ಯ ಸಾಧಿಸಲಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಕೇಂದ್ರ ಉತ್ತೇಜನ ನೀಡುತ್ತಿದೆ. ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯವಾಗಲಿದೆ. ಇದರ ಪರಿಣಾಮ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 15 ರೂಪಾಯಿ ಆಗಲಿದೆ. ಈ ದಿನಗಳು ಬಹಳ ದೂರವಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ರೈತರು ಇದೀಗ ಎಥೆನಾಲ್ ಉತ್ಪಾದನೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ರೈತರ ಆದಾಯ ಕೂಡ ಹೆಚ್ಚಾಗಲಿದೆ. ಭಾರತ ಮಾಲಿನ್ಯದಿಂದ ಮುಕ್ತವಾಗಲಿದೆ. ಎಥೆನಾಲ್ ಲೀಟರ್‌ಗೆ ಸರಿಸುಮಾರು 60 ರುಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇತ್ತ ಪೆಟ್ರೋಲ್ ಬೆಲೆಯೂ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಕರ್ನಾಟಕದ ಗರಿಷ್ಠ ಎಥೆನಾಲ್ ಉತ್ಪಾದನೆಯತ್ತ ಸಾಗುತ್ತಿದೆ. ಇಲ್ಲಿನ ರೈತರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಇತ್ತ ದೇಶದ ಹಲವು ಭಾಗದಲ್ಲಿ ಎಥೆನಾಳ್ ಉತ್ಪಾದನೆಯಾಗುತ್ತಿದೆ. ಭಾರತದ ಎಥೆನಾಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಹೀಗಾಗಿ ಹಂತ ಹಂತವಾಗಿ ಎಥೆನಾಲ್ ಚಾಲಿತ ವಾಹನಗಳ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇತ್ತೀಚೆಗೆ ನಿತಿನ್ ಗಡ್ಕರಿ ಸಂಪೂರ್ಣ ಎಥೆನಾಲ್ ಚಾಲಿತ ವಾಹನ ಬಿಡುಗಡೆ ಕುರಿತು ಮಾತನಾಡಿದ್ದರು. ಸಂಪೂರ್ಣ ಎಥೆನಾಲ್‌ನಿಂದ ಚಾಲನೆ ಮಾಡುವ ವಾಹನಗಳನ್ನು ಶೀಘ್ರ ಪರಿಚಯಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಮುಂಬರುವ ದಿನಗಳಲ್ಲಿ ಕೇವಲ ಎಥೆನಾಲ್‌ನಿಂದಲೇ ಸಂಚರಿಸುವ ವಾಹನಗಳನ್ನು ಬಜಾಜ್, ಟಿವಿಎಸ್, ಹೀರೋ ಸ್ಕೂಟರ್‌ಗಳು ಬಿಡುಗಡೆ ಮಾಡಲಿವೆ. ಜೊತೆಗೆ ಮುಂದಿನ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರು ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸಲಿದೆ. ಜೊತೆಗೆ ಈ ಕಾರು ವಿದ್ಯುತ್ ಅನ್ನೂ ಉತ್ಪಾದಿಸಲಿದೆ ಎಂದು ಗಡ್ಕರಿ ಹೇಳಿದರು.