ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಿಂದ ಹಿಡಿದು ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ತನಕ ಪ್ರಮುಖ 9 ಹಣಕಾಸು ಕೆಲಸಗಳಿಗೆ ಮಾರ್ಚ್ ತಿಂಗಳಲ್ಲಿ ಅಂತಿಮ ಗಡುವಿದೆ. ನಿಗದಿತ ದಿನಾಂಕದೊಳಗೆ ಈ ಕೆಲ್ಸಗಳನ್ನು ಪೂರ್ಣಗೊಳಿಸದಿದ್ರೆ ಜೇಬಿನ ಹೊರೆ ಹೆಚ್ಚೋದು ಪಕ್ಕಾ.
ನವದೆಹಲಿ (ಮಾ.5): ನಾವು ಈ ಆರ್ಥಿಕ ಸಾಲಿನ ಕೊನೆಯ ತಿಂಗಳಲ್ಲಿದ್ದೇವೆ. ಮಾರ್ಚ್ ಆರ್ಥಿಕ ಸಾಲಿನ ಕೊನೆಯ ತಿಂಗಳಾಗಿರುವ ಕಾರಣ ಅನೇಕ ಪ್ರಮುಖ ಹಣಕಾಸು ಕೆಲಸಗಳಿಗೆ ಅಂತಿಮ ಗಡುವಾಗಿದೆ. ತೆರಿಗೆದಾರರು ಹಾಗೂ ಹೂಡಿಕೆದಾರರು ಈ ಅಂತಿಮ ಗಡುವನ್ನು ಗಮನಿಸೋದು ಅಗತ್ಯ. ಈ ದಿನಾಂಕದಂದು ಕೆಲವು ನಿಯಮಗಳಲ್ಲಿ ಕೂಡ ಬದಲಾವಣೆಯಾಗಲಿದೆ. ಹೀಗಾಗಿ ಈ ದಿನಾಂಕದೊಳಗೆ ನಿಗದಿತ ಕೆಲಸವನ್ನು ಮಾಡಿ ಮುಗಿಸಿ. ಇದರಿಂದ ದಂಡದ ಹೊರೆ ನಿಮ್ಮ ಮೇಲೆ ಬೀಳದಂತೆ ಎಚ್ಚರ ವಹಿಸಬಹುದು. ಹಾಗಾದ್ರೆ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾದ ಪ್ರಮುಖ ಕೆಲಸಗಳೇನು? ಅವುಗಳಿಗೆ ನಿಗದಿಯಾಗಿರುವ ಅಂತಿಮ ಗಡುವು ಯಾವಾಗ? ಇಲ್ಲಿದೆ ಮಾಹಿತಿ.
1.ಉಚಿತ ಆಧಾರ್ ಅಪ್ಡೇಟ್: ಆಧಾರ್ ಕಾರ್ಡ್ ಮಾಹಿತಿಗಳನ್ನು myAadhaar ವೆಬ್ ಸೈಟ್ ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು 2024ರ ಮಾರ್ಚ್ 14 ಅಂತಿಮ ಗಡುವಾಗಿದೆ. ಈ ದಿನಾಂಕದ ಬಳಿಕ ನಿಮ್ಮ ಗುರುತು ಹಾಗೂ ವಿಳಾಸ ದೃಢೀಕರಣ ದಾಖಲೆಗಳನ್ನು ಅಪ್ಡೇಟ್ ಮಾಡಲು ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ನೀವು ಇನ್ನೂ ಆಧಾರ್ ಮಾಹಿತಿಗಳನ್ನು ಅಪ್ಡೇಟ್ ಮಾಡದಿದ್ರೆ ತಕ್ಷಣ ಮಾಡಿಕೊಳ್ಳಿ. ಇದರಿಂದ ಶುಲ್ಕ ಪಾವತಿಸೋದನ್ನು ತಪ್ಪಿಸಬಹುದು.
ಅಕ್ರಮ ಹಣ ವರ್ಗಾವಣೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ದಂಡ!
2.ಎಸ್ ಬಿಐ ಅಮೃತ್ ಕಲಶ್ ವಿಶೇಷ ಎಫ್ ಡಿ: ಈ ವಿಶೇಷ ಎಫ್ ಡಿ ಯೋಜನೆ 400 ದಿನಗಳ ಅವಧಿಯದ್ದಾಗಿದೆ. ಈ ಎಫ್ ಡಿಯಲ್ಲಿನ ಹೂಡಿಕೆಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ. ಈ ಎಫ್ ಡಿಯನ್ನು 2023ರ ಏಪ್ರಿಲ್ 12ರಂದು ಪ್ರಾರಂಭಿಸಲಾಗಿದೆ. ಇನ್ನು ಹಿರಿಯ ನಾಗರಿಕರು ಈ ಎಫ್ ಡಿಗೆ ಶೇ.7.60 ಬಡ್ಡಿ ಪಡೆಯುತ್ತಾರೆ. ಎಸ್ ಬಿಐ ವೆಬ್ ಸೈಟ್ ನಲ್ಲಿರುವ ಮಾಹಿತಿ ಅನ್ವಯ ಈ ಯೋಜನೆ 2024ರ ಮಾರ್ಚ್ 31ರ ತನಕ ಜಾರಿಯಲ್ಲಿರಲಿದೆ.
3.ಎಸ್ ಬಿಐ ವಿ ಕೇರ್ ಹಿರಿಯ ನಾಗರಿಕರ ಎಫ್ ಡಿ: ಎಸ್ ಬಿಐ ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ಶೇ.7.50ರಷ್ಟು ಬಡ್ಡಿ ನೀಡುತ್ತಿದ್ದು, ಮಾ.31ಕ್ಕೆ ಕೊನೆಯಾಗಲಿದೆ.
4.ಎಸ್ ಬಿಐ ಗೃಹಸಾಲ ಬಡ್ಡಿದರ ರಿಯಾಯ್ತಿ: ಎಸ್ ಬಿಐ ಗೃಹಸಾಲದ ಮೇಲಿನ ವಿಶೇಷ ರಿಯಾಯ್ತಿ ಕಾರ್ಯಕ್ರಮ ಮಾ.31ಕ್ಕೆ ಅಂತ್ಯವಾಗಲಿದೆ. ಈ ರಿಯಾಯ್ತಿ ಎನ್ ಆರ್ ಐ, ವೇತನರಹಿತರು ಸೇರಿದಂತೆ ಎಲ್ಲ ವಿಧದ ಗೃಹಸಾಲಗಳಿಗೂ ಅನ್ವಯಿಸುತ್ತದೆ. ಸಾಲ ಕೊಳ್ಳುವವರ ಸಿಬಿಲ್ ಸ್ಕೋರ್ (CIBIL score) ಆಧಾರದಲ್ಲಿ ಈ ಸಾಲಗಳ ಮೇಲಿನ ಬಡ್ಡಿದರ ಬದಲಾಗುತ್ತದೆ. 750 ಹಾಗೂ 800ರ ನಡುವೆ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಶೇ.9.15ರಷ್ಟು ಬಡ್ಡಿದರ ಇರಲಿದೆ. ಆಫರ್ ಅವಧಿಯಲ್ಲಿ ಈ ದರ ಶೇ.8.60ಕ್ಕೆ ಇಳಿಕೆಯಾಗುತ್ತದೆ. ಅಂದರೆ 55 ಬೇಸಿಸ್ ಪಾಯಿಂಟ್ ರಿಯಾಯ್ತಿ ಸಿಗುತ್ತದೆ. ಇನ್ನು 700 ಹಾಗೂ 749 ನಡುವೆ ಸಿಬಿಲ್ ಸ್ಕೋರ್ ಹೊಂದಿರುವ ಸಾಲಗಾರರಿಗೆ ಸಾಮಾನ್ಯವಾಗಿ ಶೇ.9.35 ಬಡ್ಡಿದರ ವಿಧಿಸಲಾಗುತ್ತದೆ. ಆದರೆ, ಅವರಿಗೆ ಶೇ.8.70ರಷ್ಟು ಕಡಿಮೆ ಬಡ್ಡಿದರದಲ್ಲಿ ಅಂದರೆ 65 ಬಿಪಿಎಸ್ ರಿಯಾಯ್ತಿ ಬಡ್ಡಿದರದಲ್ಲಿ ಸಾಲ ಸಿಗಲಿದೆ.
5.ಪೇಟಿಎಂ ಪೇಮೆಂಟ್ಸ್ ಬ್ಯಾಂಕ್: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದೆ. ಅಲ್ಲದೆ, ಮಾ.15ರ ಬಳಿಕ ಹೊಸ ಠೇವಣಿ ಸ್ವೀಕರಿಸೋದು, ಹಣ ವರ್ಗಾವಣೆ ಸೇರಿದಂತೆ ವಿವಿಧ ಸೇವೆಗಳನ್ನು ನೀಡದಂತೆ ನಿರ್ಬಂಧ ವಿಧಿಸಿದೆ. ಆದರೆ, ಈ ಅಂತಿಮ ಗಡುವಿನ ಬಳಿಕ ಗ್ರಾಹಕರು ಕ್ಯಾಶ ಬ್ಯಾಕ್ ಹಾಗೂ ರೀಫಂಡ್ ಪಡೆಯಲು ಯಾವುದೇ ನಿರ್ಬಂಧವಿಲ್ಲ.
6.ಐಡಿಬಿಐ ಬ್ಯಾಂಕ್ ವಿಶೇಷ ಎಫ್ ಡಿ: ಈ ವಿಶೇಷ ಎಫ್ ಡಿ ಯೋಜನೆ ಮಾ.31ಕ್ಕೆ ಅಂತ್ಯವಾಗಲಿದೆ. ಐಡಿಬಿಐ ಬ್ಯಾಂಕಿನ ಈ ವಿಶೇಷ ಎಫ್ ಡಿ 300, 375 ಹಾಗೂ 444 ದಿನಗಳ ಅವಧಿಯನ್ನು ಹೊಂದಿದ್ದು. ಈ ಅವಧಿಗೆ ಕ್ರಮವಾಗಿ ಶೇ. 7.05, ಶೇ.7.10 ಹಾಗೂ ಶೇ.7.25 ಬಡ್ಡಿ ನೀಡಲಾಗುತ್ತಿದೆ.
ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 25ರೂ. ಏರಿಕೆ
7.ತೆರಿಗೆ ಉಳಿತಾಯ: 2023–2024ನೇ ಹಣಕಾಸು ಸಾಲಿನ ತೆರಿಗೆ ಉಳಿತಾಯದ ಹೂಡಿಕೆಗಳನ್ನು ಮಾಡಲು ಮಾ.31 ಅಂತಿಮ ಗಡುವಾಗಿದೆ. ಹೀಗಾಗಿ ನೀವು ಈ ತನಕ ವಿಮಾ ಪಾಲಿಸಿಯ ಪ್ರೀಮಿಯಂ ಸೇರಿದಂತೆ ವಿವಿಧ ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಹಣ ಪಾವತಿಸಿದ್ದರೆ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ.
8.ಎಸ್ ಬಿಐ ಕ್ರೆಡಿಟ್ ಕಾರ್ಡ್ ಕನಿಷ್ಠ ಮೊತ್ತ ಲೆಕ್ಕಾಚಾರ ನಿಯಮ: ಹೊಸ ಎಸ್ ಬಿಐ ಕ್ರೆಡಿಟ್ ಕಾರ್ಡ್ ಕನಿಷ್ಠ ಮೊತ್ತ ಲೆಕ್ಕಾಚಾರದ ನಿಯಮ ಮಾ.15ರಿಂದ ಬದಲಾಗಲಿದೆ. ಈ ಬಗ್ಗೆ ಬ್ಯಾಂಕ್ ಈಗಾಗಲೇ ತನ್ನ ಎಲ್ಲ ಗ್ರಾಹಕರಿಗೂ ಇ-ಮೇಲ್ ಮುಖಾಂತರ ಮಾಹಿತಿ ನೀಡಿದೆ.
9.ಮುಂಗಡ ತೆರಿಗೆ ಪಾವತಿ 4ನೇ ಕಂತು: ಒಂದು ಆರ್ಥಿಕ ಸಾಲಿನಲ್ಲಿ ಒಬ್ಬ ವ್ಯಕ್ತಿ ಮೇಲಿನ ನಿವ್ವಳ ಆದಾಯ ತೆರಿಗೆ 10,000ರೂ. ಮೀರಿದ್ದರೆ ಆಗ ಆತ ಅಡ್ವಾನ್ಸ್ ತೆರಿಗೆ ಪಾವತಿಸಬೇಕು. ನಿವ್ವಳ ತೆರಿಗೆ ಜವಾಬ್ದಾರಿ ಅಂದಾಜು ತೆರಿಗೆ ಜವಾಬ್ದಾರಿಯಿಂದ ಯಾವುದೇ ಟಿಡಿಎಸ್ ಕಡಿತಗೊಳಿಸಿದ್ರೆ ಸಿಗುತ್ತದೆ.